ಬೀದರ್: ಕರ್ನಾಟಕದ 28 ಲೋಕಸಭೆ ಕ್ಷೇತ್ರಗಳಲ್ಲಿ ಬಿಜೆಪಿಗೆ ಭದ್ರಕೋಟೆ ಎನಿಸಿರುವ ಕ್ಷೇತ್ರಗಳಲ್ಲಿ ಬೀದರ್ ಲೋಕಸಭೆ ಕ್ಷೇತ್ರವೂ ಒಂದಾಗಿದೆ. ಪ್ರಸಕ್ತ ಸಾರ್ವತ್ರಿಕ ಚುನಾವಣೆಯಲ್ಲಿ (Lok Sabha Election) ಬಿಜೆಪಿ ಪರ ಅಲೆ ಇದ್ದರೂ, ಭಗವಂತ್ ಖೂಬಾ (Bhagwanth Khuba) ವಿರುದ್ಧ ಕಾಂಗ್ರೆಸ್‌ನ ಯುವ ನಾಯಕ, ಸಚಿವ ಈಶ್ವರ್ ಖಂಡ್ರೆ ಪುತ್ರ ಸಾಗರ್ ಖಂಡ್ರೆ (Sagar Khandre) ಅವರು ಚುನಾವಣೆ ಅಖಾಡಕ್ಕಿಳಿದಿರುವುದು ಸ್ಪರ್ಧೆಯ ಪೈಪೋಟಿಯನ್ನು ಹೆಚ್ಚಿಸಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ನೇರ ಪೈಪೋಟಿ ಇರುವ ಕ್ಷೇತ್ರದಲ್ಲಿ (Bidar Lok Sabha Constituency) ಯಾರಿಗೆ ಜಯದ ಮಾಲೆ ಸಿಗಲಿದೆ ಎಂಬುದು ಕುತೂಹಲ ಕೆರಳಿಸಿದೆ.
ಭಗವಂತ ಖೂಬಾ ಅವರು ಕಳೆದ ಎರಡು ಚುನಾವಣೆಗಳಲ್ಲಿ ಸತತ ಗೆಲುವು ಸಾಧಿಸಿದ್ದಾರೆ. ಎರಡನೇ ಅವಧಿಯಲ್ಲಿ ಕೇಂದ್ರ ಸಚಿವರೂ ಆಗಿದ್ದಾರೆ. ಅವರ ಅಭಿವೃದ್ಧಿ ಕೆಲಸಗಳ ಕುರಿತು ಜನರಲ್ಲಿ ಸಕಾರಾತ್ಮಕ ಮನೋಭಾವವೂ ಇದೆ. ಇನ್ನು, ಬಹುತೇಕ ಕ್ಷೇತ್ರಗಳಂತೆ ಇಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ಇದೆ. ಭಗವಂತ ಖೂಬಾ ಅವರು ಲಿಂಗಾಯತರ ಮತಗಳನ್ನು ಹಿಡಿದಿಟ್ಟುಕೊಂಡಿದ್ದಾರೆ. ಹಾಗಾಗಿ, ಅವರಿಗೆ ಗೆಲುವಿನ ವಿಶ್ವಾಸ ಇದೆ.
ಬಿದರಿ ಕಲೆಗೆ ಹೆಸರುವಾಸಿಯಾಗಿರುವ ಬೀದರ್ ಲೋಕಸಭೆ ಕ್ಷೇತ್ರದಲ್ಲಿ 26 ವರ್ಷದ ಸಾಗರ್ ಖಂಡ್ರೆ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದು, ಮಗನನ್ನು ಗೆಲ್ಲಿಸಿಕೊಂಡು ಬರುವ ಹೊಣೆ ಈಶ್ವರ್ ಖಂಡ್ರೆ ಅವರದ್ದಾಗಿದೆ. ಭಗವಂತ ಖೂಬಾ ಅವರ ಅನುಭವದ ಮುಂದೆ ಸಾಗರ್ ಖಂಡ್ರೆ ವರ್ಚಸ್ಸು ಕಡಿಮೆ ಇದ್ದರೂ, ಅಪ್ಪನ ಬೆಂಬಲ, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು, ಲಿಂಗಾಯತರ ಜತೆಗೆ ಮುಸ್ಲಿಮರು ಹಾಗೂ ದಲಿತರ ಮತಗಳು ಇವರಿಗೆ ವರದಾನವಾಗಲಿವೆ.
ಬಿಜೆಪಿ ಭದ್ರಕೋಟೆ
1991ರವರೆಗೂ ಬೀದರ್ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಆದರೆ, 1991ರ ಬಳಿಕ ಕ್ಷೇತ್ರವು ಬಿಜೆಪಿ ವಶವಾಯಿತು. 2004ರಲ್ಲಿ ನರಸಿಂಗರಾವ್ ಸೂರ್ಯವಂಶಿ ಹಾಗೂ 2009ರಲ್ಲಿ ಧರಂ ಸಿಂಗ್ ಅವರು ಬಿಟ್ಟರೆ 1991ರ ಬಳಿಕ ನಡೆದ ಎಲ್ಲ ಚುನಾವಣೆಗಳಲ್ಲೂ ಬಿಜೆಪಿ ಅಭ್ಯರ್ಥಿಗಳೇ ಗೆಲುವು ಸಾಧಿಸಿದ್ದಾರೆ. ಹಾಗಾಗಿ, ಬೀದರ್ ಲೋಕಸಭೆ ಕ್ಷೇತ್ರವು ಬಿಜೆಪಿಯ ಭದ್ರಕೋಟೆ ಎನಿಸಿದೆ. ಬೀದರ್ ಲೋಕಸಭೆ ಕ್ಷೇತ್ರದ ವ್ಯಾಪ್ತಿಯ 8 ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಐವರು ಹಾಗೂ ಕಾಂಗ್ರೆಸ್ ಮೂವರು ಶಾಸಕರನ್ನು ಹೊಂದಿದೆ.
ಮತದಾರರ ಸಂಖ್ಯೆ
ಪುರುಷರು | 8.89 ಲಕ್ಷ |
ಮಹಿಳೆಯರು | 8.17 ಲಕ್ಷ |
ಲಿಂಗತ್ವ ಅಲ್ಪಸಂಖ್ಯಾತರು | 50 |
ಒಟ್ಟು | 17.08 ಲಕ್ಷ |
2014, 2019ರಲ್ಲಿ ಏನಾಗಿತ್ತು?
ಕಳೆದ ಎರಡು ಚುನಾವಣೆಗಳಲ್ಲಿಯೂ ಭಗವಂತ್ ಖೂಬಾ ಅವರೇ ಗೆಲುವು ಸಾಧಿಸಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಭಗವಂತ್ ಖೂಬಾ ಅವರು ಕಾಂಗ್ರೆಸ್‌ನ ಈಶ್ವರ್ ಖಂಡ್ರೆ ಅವರ ವಿರುದ್ಧ 1 ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದರು. ಇನ್ನು 2014ರಲ್ಲಿ ಭಗವಂತ್ ಖೂಬಾ ಅವರು ಮೋದಿ ಅಲೆಯ ಪರಿಣಾಮವಾಗಿ ಕಾಂಗ್ರೆಸ್‌ನ ಹಿರಿಯ ನಾಯಕ ಧರಂ ಸಿಂಗ್ ಅವರನ್ನು 92 ಸಾವಿರ ಮತಗಳ ಅಂತರದಿಂದ ಸೋಲಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದರು.
ಇದನ್ನೂ ಓದಿ: Lok Sabha Election: ಕಲಬುರಗಿ ಲೋಕಸಭೆ ಕ್ಷೇತ್ರ: ಖರ್ಗೆ ಅಳಿಯ Vs ಜಾಧವ್; ಯಾರಿಗೆ ಗೆಲುವಿನ ಸಿಹಿ?