ಬೀದರ್: ಭಾಲ್ಕಿ ಬಳಿ ನಡೆದ ಭೀಕರ ಅಪಘಾತವೊಂದರಲ್ಲಿ (Road Accident) ನಾಲ್ವರು ಸ್ಥಳದಲ್ಲೇ ಮೃತಪಟ್ಟು, ಐದು ಜನರಿಗೆ ಗಾಯಗಳಾಗಿವೆ. ಬೆಳಗ್ಗೆ 4:30ರ ಸುಮಾರಿಗೆ ಟ್ರಕ್ ಹಾಗೂ ಟಾಟಾ ಎಸಿ (truck- Tata Ace hit) ನಡುವೆ ಮುಖಾಮುಖಿ ಡಿಕ್ಕಿಯಾಗಿದೆ.
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಸೇವಾನಗರ ತಾಂಡಾ ಬಳಿ ರಸ್ತೆ ಅಪಘಾತ ಸಂಭವಿಸಿದೆ. ಮೃತರು ಮಹಾರಾಷ್ಟ್ರದ ಉಗ್ಗಿರ್ ಮೂಲದವರು ಎಂದು ಗೊತ್ತಾಗಿದೆ. ಐದು- ಆರು ಜನ ಕೆಪಾಸಿಟಿಯ ಟಾಟಾ ಏಸ್ ವಾಹನದಲ್ಲಿ 14 ಜನರನ್ನು ಕೂರಿಸಿಕೊಂಡಿದ್ದ ಏಸ್ ಚಾಲಕ ಉಗ್ಗಿರ್‌ನಿಂದ ಹೈದ್ರಾಬಾದ್ ಹೋಗುತ್ತಿದ್ದ. ಇದಕ್ಕೆ ಟ್ರಕ್ ಮುಖಾಮುಖಿ ಡಿಕ್ಕಿಯಾಗಿದೆ.
ಏಸ್‌ನಲ್ಲಿ 6 ಜನ ಮಹಿಳೆಯರು, 5 ಜನ ಪುರುಷರು, 3 ಮಕ್ಕಳು ಪ್ರಯಾಣಿಸುತ್ತಿದ್ದರು. ದಸ್ತಗಿರ್ ದಾವಲಸಾಬ್ (36), ರಸೀದಾ ಸೈಕ್ (41), ಟಾಟಾ ಏಸ್ ಚಾಲಕ ವಲಿ (31), ಅಮಾಮ್ ಸೇಕ್ (51) ಮೃತರು. ಬೀದರ್‌ನ ಬ್ರೀಮ್ಸ್ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಧನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪರೀಕ್ಷೆ ಮುಗಿಸಿ ಖುಷಿಯಿಂದ ಈಜಲು ಹೋದ ನಾಲ್ಕು ಮಕ್ಕಳ ಶವ ಪತ್ತೆ
ಮಂಗಳೂರು: ಪರೀಕ್ಷೆ ಮುಗಿಸಿ ಖುಷಿಯಿಂದ ಈಜಲೆಂದು ನದಿಗೆ ಹೋಗಿ ನಾಪತ್ತೆಯಾಗಿದ್ದ ನಾಲ್ಕು ಮಕ್ಕಳ ಶವಗಳು ಪತ್ತೆಯಾಗಿವೆ. ಈ ಮಕ್ಕಳು ಮಂಗಳೂರಿನ ಸುರತ್ಕಲ್‌ನ ವಿದ್ಯಾದಾಯಿನಿ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳಾಗಿದ್ದು, ಮಕ್ಕಳ ಪೋಷಕರ ರೋದನ ಮುಗಿಲು ಮುಟ್ಟಿದೆ.
ನದಿಯಲ್ಲಿ ಈಜಾಡಲು ತೆರಳಿ ದಾರುಣವಾಗಿ ಸಾವಿಗೀಡಾಗಿದ್ದಾರೆ ಎಂದು ಶಂಕಿಸಲಾಗಿದೆ. ನಿನ್ನೆ ಶಾಲೆಯಲ್ಲಿ ಪರೀಕ್ಷೆ ಬರೆದು ಮುಗಿಸಿದ್ದ ವಿದ್ಯಾರ್ಥಿಗಳು ಮನೆಗೆ ತೆರಳದೇ ನಾಪತ್ತೆಯಾಗಿದ್ದರು. ಮಕ್ಕಳ ಪೋಷಕರು ಮತ್ತು ಪೊಲೀಸರು ಮಕ್ಕಳಿಗಾಗಿ ಹುಡುಕಾಟ ನಡೆಸಿದ್ದರು.
ಹಳೆಯಂಗಡಿ ರೈಲ್ವೇ ಸೇತುವೆ ಕೆಳಭಾಗದಲ್ಲಿ ವಿದ್ಯಾರ್ಥಿಗಳ ಶಾಲಾ ಬ್ಯಾಗ್‌ಗಳು ಹಾಗೂ ಸಮವಸ್ತ್ರ ಪತ್ತೆಯಾಗಿದ್ದವು. ನದಿಯಲ್ಲಿ ಹುಡುಕಾಟ ನಡೆಸಿದಾಗ ನಾಲ್ವರು ವಿದ್ಯಾರ್ಥಿಗಳ ಶವ ಪತ್ತೆಯಾಗಿವೆ. ಸುರತ್ಕಲ್ ಅಗರಮೇಲ್ ನಿವಾಸಿ ಚಂದ್ರಕಾಂತ ಅವರ ಮಗ ಯಶ್ವಿತ್ (15), ಹಳೆಯಂಗಡಿ ತೋಕೂರು ನಿವಾಸಿ ವಸಂತ ಅವರ ಪುತ್ರ ರಾಘವೇಂದ್ರ (15), ಸುರತ್ಕಲ್ ಗೊಡ್ಡೆಕೊಪ್ಲ ನಿವಾಸಿ ವಿಶ್ವನಾಥ ಅವರ ಮಗ ನಿರೂಪ(15), ಚಿತ್ರಾಪುರ ನಿವಾಸಿ ದೇವದಾಸ ಅವರ ಪುತ್ರ ಅನ್ವಿತ್ (15) ಸಾವಿಗೀಡಾದ ಮಕ್ಕಳು.
ಮಕ್ಕಳು ನೇರವಾಗಿ ಶಾಲೆಯಿಂದ ಹಳೆಯಂಗಡಿ ನದಿಗೆ ಈಜಾಡಲು ಬಂದಿರುವ ಶಂಕೆ ಇದೆ. ಒಬ್ಬ ಮುಳುಗತೊಡಗಿದಾಗ ರಕ್ಷಿಸಲು ಹೋದ ಉಳಿದವರು ಮುಳುಗಿ ಸತ್ತಿರಬಹುದು ಎಂದು ಶಂಕಿಸಲಾಗಿದೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮೂವರು ಮಹಿಳೆಯರ ಸಾವು ಪ್ರಕರಣ; ಪಾವಗಡ ಆಸ್ಪತ್ರೆ ಆಡಳಿತಾಧಿಕಾರಿ ಸೇರಿ 7 ಸಿಬ್ಬಂದಿ ತಲೆದಂಡ