ಬೀದರ್: ಬಿಜೆಪಿ ಪಕ್ಷದಲ್ಲಿ ತಮಗೆ ಅವಮಾನ ಮಾಡಲಾಗಿದೆ ಎಂಬ ಚರ್ಚೆಯ ಕುರಿತು ಮತ್ತೊಮ್ಮೆ ಸ್ಪಷ್ಟನೆ ನೀಡಿರುವ ಬಿ.ಎಸ್. ಯಡಿಯೂರಪ್ಪ, ವೀರಶೈವ ಲಿಂಗಾಯತ ಬಂಧುಗಳು ಕಾಂಗ್ರೆಸ್‌ನ ಅಪಪ್ರಚಾರಕ್ಕೆ ಬಲಿಯಾಗಬಾರದು ಎಂದು ತಿಳಿಸಿದ್ದಾರೆ. ಬೀದರ್‌ನ ಬಸವಕಲ್ಯಾಣದಿಂದ ವಿಜಯ ಸಂಕಲ್ಪ ಯಾತ್ರೆಯ ಮೂರನೇ ರಥಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾಲ್ಕೂ ರಥಗಳು ರಾಜ್ಯದಲ್ಲಿ ಎಂಟು ಸಾವಿರ ಕಿಲೋಮೀಟರ್ ಸಾಗಲಿದೆ. ಮಾರ್ಚ್ 25ರಂದು ದಾವಣಗೆರೆಯಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಈ ಕಾರ್ಯಕ್ರಮವನ್ನು ನಡೆಸಿಕೊಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿನಂತಿಸಿದ್ದೇವೆ, ಅವರು ಒಪ್ಪಿದ್ದಾರೆ ಎಂದರು.
ಬಸವ ಕಲ್ಯಾಣ ಈ ಹಿಂದೆ ಹೇಗಿತ್ತು, ಈಗ ಹೇಗಿತ್ತು ಎಂದು ನೋಡಬೇಕಿದೆ. ಸಾವಿರಾರು ಕೋಟಿ ರೂ. ಮಂಜೂರು ಮಾಡಿ ಬಸವಣ್ಣನವರ ಪುಣ್ಯಭೂಮಿಯನ್ನು ಅಭಿವೃದ್ಧಿಪಡಿಸುವ ಕೆಲಸ ನಾವು ಮಾಡಿದ್ದೇವೆ.
ಅಮಿತ್ ಶಾ ಹಾಗೂ ಮೋದಿ ನೇತೃತ್ವದಲ್ಲಿ 140ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಬಿಜೆಪಿ ಅಧಿಕಾರಕ್ಕೆ ಬರುವುದು ಅಷ್ಟೇ ನಿಶ್ಚಿತ. ಕಾಂಗ್ರೆಸ್‌ನವರು ಹಣ, ಹೆಂಡ, ತೋಳ್ಬಲದ ಜತೆಗೆ ಜಾತಿಯ ವಿಷಬೀಜ ಬಿತ್ತಿ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳುತ್ತಿದ್ದಾರೆ. ಇದು ತಿರುಕನ ಕನಸು.
ನಾನು ಚುನಾವಣೆಗೆ ನಿಲ್ಲುವುದಿಲ್ಲ ಎಂದಷ್ಟೇ ಹೇಳಿದ್ದೇನೆ. ನನ್ನ ವೀರಶೈವ ಬಂಧುಗಳಲ್ಲಿ ಕೈಜೋಡಿಸಿ ಪ್ರಾರ್ಥನೆ ಮಾಡುತ್ತೇನೆ, ಕಾಂಗ್ರೆಸ್ ಅಪಪ್ರಚಾರಕ್ಕೆ ಬಲಿಯಾಗಬೇಡಿ. ನಾನೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ನಾನೇ ಮುಂದಿನ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ್ದು. ನನ್ನ ಪೂರ್ಣ ಸಮಯದೊಂದಿಗೆ ರಾಜ್ಯಾದ್ಯಂತ ಸಂಚರಿಸಿ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇವೆ.
ಇದನ್ನೂ ಓದಿ: Vijaya Sankalpa Yatre: ಬುಧವಾರದಿಂದ ಶುರುವಾಗುವ ಯಾತ್ರೆಯನ್ನಾದರೂ ಸಫಲಗೊಳಿಸುವ ಯತ್ನದಲ್ಲಿ ಬಿಜೆಪಿ
ಕಾರ್ಯಕರ್ತರು ಹೆಚ್ಚಿನ ಸಮಯ ನೀಡಿ, ಮನೆಮನೆಗೆ ಹೋಗಿ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹಾಗೂ ಕರ್ನಾಟಕದ ಬಸವರಾಜ ಬೊಮ್ಮಾಯಿ ಯೋಜನೆಗಳನ್ನು ಜನರಿಗೆ ತಿಳಿಸಬೇಕು. ನಾನು ಈ ಹಿಂದೆ ಭಾಗ್ಯಲಕ್ಷ್ಮಿ ಯೋಜನೆ, ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ನೀಡಿದ್ದು, ರೈತರ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ನೀಡಿದ್ದು ನಾನೆ ಎಂದರು.