Site icon Vistara News

DK Shivakumar : ಡಿಕೆಶಿಗೆ ಬಿಗ್‌ ರಿಲೀಫ್;‌ ಐದು ಪ್ರಕರಣಗಳನ್ನು ರದ್ದುಪಡಿಸಿದ ಹೈಕೋರ್ಟ್‌

DK Shivakumar

ಬೆಂಗಳೂರು: ರಾಜ್ಯದ ಡಿಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಅವರಿಗೆ ರಾಜ್ಯ ಹೈಕೋರ್ಟ್‌ (Karnataka Highcourt) ಬಿಗ್‌ ರಿಲೀಫ್‌ ನೀಡಿದೆ. ಅವರ ವಿರುದ್ಧದ ಐದು ಪ್ರಕರಣಗಳನ್ನು ರದ್ದುಗೊಳಿಸುವ ಮೂಲಕ ಅವರನ್ನು ನಿರಾಳಗೊಳಿಸಿದೆ. ಹಲವಾರು ಕೇಸುಗಳನ್ನು ಹೊತ್ತುಕೊಂಡಿದ್ದ ಅವರಿಗೆ ಈಗ ಐದು ಪ್ರಕರಣಗಳಿಂದ ಮುಕ್ತಿ ಸಿಕ್ಕಿದಂತಾಗಿದೆ.

2022ರಲ್ಲಿ ನಡೆದ ಮೇಕೆದಾಟು ಪಾದಯಾತ್ರೆ ಸಂದರ್ಭದಲ್ಲಿ ಕಾನೂನು ಮತ್ತು ಕಾಯಿದೆಗಳ ಉಲ್ಲಂಘನೆಗೆ ಸಂಬಂಧಿಸಿ ದಾಖಲಾದ ಪ್ರಕರಣಗಳು ಇವಾಗಿದ್ದು, ಒಟ್ಟು ಐದು ಪ್ರಕರಣಗಳನ್ನು ರದ್ದುಪಡಿಸಿ ರಾಜ್ಯ ಹೈಕೋರ್ಟ್‌ ಜೂನ್‌ 16 (ಶುಕ್ರವಾರ) ಆದೇಶ ಹೊರಡಿಸಿದೆ. ಡಿ.ಕೆ. ಶಿವಕುಮಾರ್‌ ಅವರು ಸಿಬಿಐ, ಇ.ಡಿ., ಐಟಿ ಸೇರಿದಂತೆ ನಾನಾ ತನಿಖಾ ಮಂಡಳಿಗಳ ತನಿಖೆ, ವಿಚಾರಣೆ ಮತ್ತು ಕೋರ್ಟ್‌ ಖಟ್ಲೆಗಳನ್ನು ಎದುರಿಸುತ್ತಿದ್ದಾರೆ. ಅವುಗಳಲ್ಲೂ ಕೆಲವು ನಿರಾಳವಾಗಿದ್ದರೂ ಆಗಾಗ ಪ್ರಕರಣಗಳು ಎದ್ದುಬರುತ್ತಲೇ ಇರುತ್ತವೆ.

ಮೇಕೆದಾಟು ಹೋರಾಟದ ವೇಳೆ ಏನೇನು ಪ್ರಕರಣ?

ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರದ ಅನುಮತಿಗೆ ಆಗ್ರಹಿಸಿ ಕಾಂಗ್ರೆಸ್‌ ವತಿಯಿಂದ ಡಿ.ಕೆ. ಶಿವಕುಮಾರ್‌ ದೊಡ್ಡ ಪಾದಯಾತ್ರೆಯನ್ನು ಆಯೋಜಿಸಿದ್ದರು. ಈ ವೇಳೆ ರಾಜ್ಯದಲ್ಲಿ ಕೋವಿಡ್‌ ಮಾರ್ಗಸೂಚಿ ಜಾರಿಯಲ್ಲಿತ್ತು ಎಂಬ ಕಾರಣಕ್ಕಾಗಿ ದೊಡ್ಡ ಸಂಖ್ಯೆಯಲ್ಲಿ ಜನರನ್ನು ಸೇರಿಸಿದ್ದರ ವಿರುದ್ಧ ಡಿ.ಕೆ.ಶಿ ಹಾಗೂ ಕಾಂಗ್ರೆಸ್‌ ಮೇಲೆ ಪ್ರಕರಣಗಳು ದಾಖಲಾಗಿದ್ದವು.

ಸರ್ಕಾರದ ಕೋವಿಡ್‌ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಪಾದಯಾತ್ರೆ ನಡೆಸಲಾಗಿದೆ ಎಂದು ಹಂತ ಹಂತವಾಗಿ ಹಲವು ಕಡೆ ಡಿ.ಕೆ. ಶಿವಕುಮಾರ್‌ ಮೇಲೆ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಇದು ಒಂದು ಕಡೆ ಕಾನೂನುಭಂಗ ಇನ್ನೊಂದು ಕಡೆ ಜನರ ಜೀವನದ ಜತೆ ಚೆಲ್ಲಾಟ ಎಂದು ರಾಜ್ಯ ಸರ್ಕಾರ ಆಪಾದಿಸಿತ್ತು. ಈ ಪ್ರಕರಣಗಳಿಗೆ ಸಂಬಂಧಿಸಿ ಹೈಕೋರ್ಟ್‌ ಈ ಹಿಂದೆಯೇ ಮಧ್ಯಂತರ ತಡೆಯಾಜ್ಞೆಯನ್ನು ನೀಡಿತ್ತು. ಇದೀಗ ಪ್ರಕರಣಗಳನ್ನೇ ರದ್ದುಗೊಳಿಸಿದೆ.

ಈ ನಡುವೆ, ಕಾನೂನುಭಂಗ ಆರೋಪದಲ್ಲಿ ಡಿ.ಕೆ. ಶಿವಕುಮಾರ್‌ ವಿರುದ್ಧ ಶಿವಾಜಿ ನಗರ ಠಾಣೆಯಲ್ಲಿ ದಾಖಲಾದ ಪ್ರಕರಣವನ್ನೂ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಇದನ್ನೂ ಓದಿ : DK Shivakumar: ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ತಾತ್ಕಾಲಿಕ ರಿಲೀಫ್; ಸಿಬಿಐಗೆ ಹೈಕೋರ್ಟ್‌ ನೋಟಿಸ್‌

Exit mobile version