ಮಂಡ್ಯ: ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಈ ಮೊದಲು ದೇವಾಲಯ ಆಗಿತ್ತು ಎಂಬುದಕ್ಕೆ ಮತ್ತೊಂದು ಸಾಕ್ಷಿ ದೊರೆತಿರುವುದಾಗಿ ಹಿಂದು ಸಂಘಟನೆಗಳು ಪ್ರತಿಪಾದಿಸಿವೆ. ಇದರೊಂದಿಗೆ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇಗುಲದ ಸತ್ಯಕ್ಕೆ ಇನ್ನೊಂದು ಸಾಕ್ಷ್ಯ ಸಿಕ್ಕಿದಂತಾಗಿದ್ದು, ಆಂಜನೇಯಸ್ವಾಮಿ ದೇಗುಲ ಕೆಡವಿದ ಬಳಿಕ ಕಾವೇರಿ ನದಿಯಲ್ಲಿ ವಿಗ್ರಹವಿತ್ತು ಎಂಬುವುದಕ್ಕೆ “ಆರ್ಕಿಯಾಲಜಿಕಲ್ ಸರ್ವೇ ಆಫ್ ಇಂಡಿಯಾ-1912” ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.
ಈ ಪುಸ್ತಕದಲ್ಲಿ ಆಂಜನೇಯಸ್ವಾಮಿ ದೇಗುಲ, ವಿಗ್ರಹ ಹಾಗೂ ಮಸೀದಿ ಬಗ್ಗೆ ಉಲ್ಲೇಖ ಮಾಡಲಾಗಿದೆ. ಆಂಜನೇಯಸ್ವಾಮಿ ಮೂರ್ತಿಯನ್ನು ಕಾವೇರಿ ನದಿಯ ಗೌರಿ ಕಡದಲ್ಲಿ ಹಾಕಲಾಗಿತ್ತು. ಆ ಮೂರ್ತಿಯನ್ನ ದಳವಾಯಿ ದೊಡ್ಡಯ್ಯ ಅವರು ಹೊರತೆಗೆದು ಮರು ಪ್ರತಿಷ್ಠಾಪನೆ ಮಾಡಿದ್ದರು ಎನ್ನಲಾಗಿದೆ.
ಇತ್ತೀಚೆಗೆ ಮೂಡಲ ಬಾಗಿಲು ಶ್ರೀ ಆಂಜನೇಯಸ್ವಾಮಿ ಸುಪ್ರಭಾತ ಪುಸ್ತಕ ಸಿಕ್ಕಿತ್ತು, ಅದರಲ್ಲಿ ವಿಗ್ರಹವನ್ನು ಕಾವೇರಿ ನದಿಯಲ್ಲಿ ಎಸೆದ ಬಗ್ಗೆ ಉಲ್ಲೇಖಿಸಲಾಗಿತ್ತು. ಇದರಿಂದ ಮಸೀದಿಯನ್ನು ಆಂಜನೇಯ ದೇಗುಲ ಕೆಡವಿ ಕಟ್ಟಲಾಗಿದೆ. ಮಸೀದಿಯಲ್ಲಿನ ಮದರಸಾವನ್ನು ತೆರವುಗೊಳಿಸಿ ವಿಡಿಯೋಗ್ರಫಿ ಸಮೀಕ್ಷೆ ಮಾಡಬೇಕು ಎಂದು ಹೋರಾಡುತ್ತಿರುವ ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ವಿವಿಧ ಹಿಂದೂಪರ ಸಂಘಟನೆಗಳ ಹೋರಾಟಕ್ಕೆ ಬಲವಾದ ಸಾಕ್ಷ್ಯಗಳು ದೊರೆತಂತಾಗಿದೆ.
ವಕ್ಫ್ ಬೋರ್ಡ್ ರದ್ದು ಮಾಡಿ:
ದೇವಸ್ಥಾನವಿತ್ತು ಎನ್ನುವ ಬಗ್ಗೆ ಸಾಕ್ಷ್ಯಗಳು ದೊರೆತ ಬೆನ್ನಲ್ಲೇ ಮಸೀದಿಯನ್ನು ತೆರವುಗೊಳಿಸುವಂತೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಒತ್ತಾಯಿಸಿದ್ದಾರೆ. ದೇವಸ್ಥಾನವನ್ನು ಕೆಡವಿ ಮಸೀದಿ ಕಟ್ಟಿರುವುದು ಖಚಿತ. ಟಿಪ್ಪು ಸುಲ್ತಾನನ ಕಾಲದಲ್ಲೇ ಈ ಕಾರ್ಯವಾಗಿದೆ ಎಂಬುದಕ್ಕೆ ಪೂರಕ ದಾಖಲೆಗಳು ಸಿಕ್ಕಿವೆ. ವಕ್ಫ್ ಬೋರ್ಡ್ ಒಂದು ಬೋಗಸ್ ಬೋರ್ಡ್ ಆಗಿದ್ದು ಈ ಮಂಡಳಿಯನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ | ಶ್ರೀರಂಗಪಟ್ಟಣ ಜಾಮಿಯಾ ಮಸೀದಿ ವಿವಾದಕ್ಕೆ ಬಿಗ್ ಟ್ವಿಸ್ಟ್: ವೈರಲ್ ವಿಡಿಯೋ ಸತ್ಯವೂ ಬಹಿರಂಗ !