ಬೆಂಗಳೂರು: “ಬಿಗ್‌ಬಾಸ್ ಒಟಿಟಿ ಸೀಸನ್-1 ಕೇವಲ 42 ದಿನಕ್ಕೆ ಮುಗಿದು ಹೋಗುವುದಿಲ್ಲ. ಕಾರಣ, ಇಲ್ಲಿ ಆಯ್ಕೆಯಾಗುವ ಕೆಲವು ಸ್ಪರ್ಧಿಗಳು ಮುಂದೆ ನಡೆಯುವ ಬಿಗ್‌ಬಾಸ್ ಟೆಲಿವಿಷನ್ ಸೀಸನ್-9ಕ್ಕೂ ಆಯ್ಕೆ ಆಗಲಿದ್ದಾರೆ. ಹೀಗಾಗಿ ‘ಬಿಗ್‌ಬಾಸ್’ ಒಟಿಟಿ ಸೀಸನ್-1 ಅನ್ನು ‘ಮಿನಿ ಬಿಗ್‌ಬಾಸ್’ ಎಂದು ಕರೆಯುವುದುಂಟು”.
ಇದು ‘ಮಿನಿ ಬಿಗ್‌ಬಾಸ್’ ಸೀಸನ್-1ರಲ್ಲಿ ಮೊದಲನೇ ವಾರವೇ ಎಲಿಮಿನೇಟ್ ಆಗಿರುವ ಸ್ಪರ್ಧಿ ಕಿರಣ್ ಯೋಗೇಶ್ವರ್ ಅವರ ಮನದಾಳದ ಮಾತು. ಅವರು ತಮ್ಮ ಅನುಭವವನ್ನು ವಿಸ್ತಾರ ನ್ಯೂಸ್ ಜತೆ ಹಂಚಿಕೊಂಡಿದ್ದು, ಈಗಲೂ ತಾವು ಎಲಿಮಿನೇಟ್ ಆದ ಕಾರಣವನ್ನು ಹುಡುಕುತ್ತಿದ್ದಾರೆ. ಅವರ ಜತೆಗಿನ ಸಂದರ್ಶನದ ಪೂರ್ಣಪಾಠ ಇಲ್ಲಿದೆ.
ಹೇಗಿತ್ತು ಬಿಗ್‌ಬಾಸ್ ಅನುಭವ?
ಜೀವನದಲ್ಲಿ ಒಮ್ಮೆಯಾದರೂ ಇಂತಹ ಅನುಭವ ಪಡೆಯಲೇಬೇಕು. ಬೇರೆ ಬೇರೆ ಜಾಗದಿಂದ ಬಂದ, ವೈವಿಧ್ಯಮಯ ವ್ಯಕ್ತಿತ್ವಗಳ ಜತೆ ಬೆರೆಯಲು ನಮಗೆ ಅವಕಾಶ ಸಿಗುತ್ತದೆ. ‘ಬಿಗ್‌ಬಾಸ್’ ಶೋಗೆ ಹೋದ ಬಳಿಕ ನಾನು ತುಂಬಾ ಕಲಿತುಕೊಂಡೆ. ನೀವು ಹೊರಗಿನಿಂದ ಬಿಗ್‌ಬಾಸ್ ಮನೆ ಬಗ್ಗೆ ಜಡ್ಜ್ ಮಾಡಲು ಆಗುವುದಿಲ್ಲ. ಒಳಗೆ ಹೋದಾಗ ಮಾತ್ರ ‘ಬಿಗ್‌ಬಾಸ್’ ಪ್ರಪಂಚ ತಿಳಿಯುತ್ತದೆ. ಟಾಸ್ಕ್ ವಿಚಾರವೇ ಇರಬಹುದು ಅಥವಾ ತಪ್ಪು ಮಾಡಿದಾಗ ಬಿಗ್‌ಬಾಸ್ ಮನೆಯಲ್ಲಿ ನೀಡುವ ಶಿಕ್ಷೆಯ ವಿಚಾರವೇ ಆಗಿರಬಹುದು, ಎಲ್ಲವೂ ತುಂಬಾ ವಿಭಿನ್ನ. ‘ಬಿಗ್‌ಬಾಸ್’ನ ಆ ಒಂದು ವಾರ ಜೀವನದಲ್ಲಿ ಭಾವನಾತ್ಮಕ ಹಾಗೂ ಎಂದೂ ಮರೆಯಲಾಗದ ಅನುಭವವನ್ನು ನೀಡಿದೆ.
ಬಿಗ್‌ಬಾಸ್‌ನಿಂದ ಹೊರಬಂದ ಅನುಭವ ಹೇಗಿತ್ತು?
ಬಿಗ್‌ಬಾಸ್ ಶೋನಿಂದ ಎಲಿಮಿನೇಟ್ ಆಗಿರುವುದನ್ನು ಈಗಲೂ ನಂಬಲು ಆಗುತ್ತಿಲ್ಲ. ನಾನು ಬಿಗ್‌ಬಾಸ್ ಮನೆಯಲ್ಲಿ ಎಲ್ಲರ ಜತೆಗೂ ಬೆರೆಯುತ್ತಿದ್ದೆ. ಟಾಸ್ಕ್ ವಿಚಾರದಲ್ಲೂ ತುಂಬಾ ಚೆನ್ನಾಗಿ ಭಾಗವಹಿಸುತ್ತಿದ್ದೆ. ಆದರೆ ನಾನು ಯಾಕೆ ಎಲಿಮಿನೇಟ್ ಆಗಿದ್ದೇನೆ ಎನ್ನುವುದು ಈವರೆಗೂ ಗೊತ್ತಾಗುತ್ತಿಲ್ಲ. ಸಾಕಷ್ಟು ಜನ ಈ ಬಗ್ಗೆ ನನಗೆ ಸೋಷಿಯಲ್ ಮೀಡಿಯಾದಲ್ಲಿ ಮೆಸೇಜ್ ಮಾಡಿ ಕೇಳಿದ್ದಾರೆ. ಬಿಗ್‌ಬಾಸ್ ಶೋನಿಂದ ಹೊರಬಂದ ಬಳಿಕ ಆ ಜಾಗ ಮತ್ತು ಅಲ್ಲಿನ ಸ್ಪರ್ಧಿಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನನಗೆ ಸಫೋರ್ಟ್ ಸಿಗುತ್ತಿದೆ. ಈ ಬೆಂಬಲವನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಳ್ಳುತ್ತೇನೆ.
ಯಾರನ್ನು ಮಿಸ್ ಮಾಡಿಕೊಳ್ಳುತ್ತಿದ್ದೀರಿ?
ರಾಕೇಶ್ ಅವರನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಏಕೆಂದರೆ ನಾನು ಮತ್ತು ರಾಕೇಶ್ ಒಟ್ಟಿಗೆ ಯೋಗ ಮಾಡುತ್ತಿದ್ದೆವು. ನಮ್ಮಿಬ್ಬರ ನಡುವೆ ಮಾತುಕತೆಯೂ ತುಂಬಾ ಚೆನ್ನಾಗಿ ನಡೆಯುತ್ತಿತ್ತು. ಹೀಗಾಗಿ ರಾಕೇಶ್‌ನ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಜತೆಗೆ ನಂದು-ಜಶ್ವಂತ್ ಕೂಡ ನನಗೆ ತುಂಬಾ ಹತ್ತಿರವಾಗಿದ್ದರು. ಅವರನ್ನು ಕೂಡ ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ.
ಬಿಗ್‌ಬಾಸ್‌ಗೆ ಅವಕಾಶ ಸಿಕ್ಕಿದ್ದು ಹೇಗೆ?
ನಾನು ಮಾಡೆಲಿಂಗ್‌ನಲ್ಲಿ ಫೇಮಸ್ ಆಗಿದ್ದ ಕಾರಣ ಬಹುತೇಕರಿಗೆ ಪರಿಚಿತವಾಗಿದ್ದೆ. ಹೀಗಾಗಿ ನನಗೆ ಒಬ್ಬರು ಕರೆ ಮಾಡಿ ಬಿಗ್‌ಬಾಸ್ ಸ್ಪರ್ಧೆಯಲ್ಲಿ ಭಾಗವಹಿಸುತ್ತೀರಾ ಎಂದು ಕೇಳಿದ್ದರು. ನನಗೆ ಈ ಅವಕಾಶ ಸಿಕ್ಕಿದ್ದು ತುಂಬಾನೆ ಖುಷಿ ಕೊಟ್ಟಿತ್ತು. ಇದೇ ಕಾರಣಕ್ಕೆ ನಾನು ಸ್ಪರ್ಧೆಯಲ್ಲಿ ಭಾಗವಹಿಸಲು ಒಪ್ಪಿಕೊಂಡೆ. ನನ್ನ ಜೀವನದಲ್ಲಿ ಎಂದಿಗೂ ಮರೆಯಲಾಗದ ಅನುಭವ ಅಲ್ಲಿಂದ ಸಿಕ್ಕಿದೆ.
ಹೊರಗಿನಿಂದ ಬಂದಿದ್ದು ಕಷ್ಟ ಆಯಿತಾ?
ನಾನು ಹೊರಗಿನಿಂದ ಬಂದಿದ್ದೀನಿ ಎಂದು ನನ್ನ ಎಲಿಮಿನೇಟ್ ಮಾಡಿದ್ದಾರೆಂದು ಕೆಲ ಸ್ಪರ್ಧಿಗಳು ಮಾತನಾಡಿದ್ದಾರೆ. ಇದನ್ನು ಹೊರಗೆ ಬಂದ ಬಳಿಕ ಗಮನಿಸಿದ್ದೇನೆ. ಆದರೆ, ನಾನು ಎಲ್ಲರ ಜತೆ ಬೆರೆಯಲು ತುಂಬಾ ಪ್ರಯತ್ನಿಸಿದೆ. ಆದರೆ ಬಹುತೇಕರು ನನ್ನ ಮಾತನ್ನು ಕೇಳುವುದಕ್ಕೆ ಸಿದ್ಧರಿರಲಿಲ್ಲ. ನಾನು ಮಾತನಾಡುವಾಗ ಅವರು ಬೇರೆ ಏನನ್ನೋ ಹೇಳುತ್ತಿದ್ದರು. ಇಂತಹ ಘಟನೆಗಳು ನನಗೆ ತುಂಬಾ ಬೇಸರ ತರಿಸಿತ್ತು.
ಸೋನು ಶ್ರೀನಿವಾಸ್ ಗೌಡ ಬಗ್ಗೆ ಏನಂತೀರ?
ಒಬ್ಬರ ಬಗ್ಗೆ ಮತ್ತೊಬ್ಬರು ಜಡ್ಜ್ ಮಾಡಲು ಆಗುವುದಿಲ್ಲ. ಹೀಗೆ ಸೋನು ಶ್ರೀನಿವಾಸ್ ಗೌಡ ಅವರನ್ನು ಗಮನಿಸಿದರೆ ಅವರು ಕೆಟ್ಟವರಲ್ಲ. ಆದರೆ, ಸೋನು ಶ್ರೀನಿವಾಸ್ ಗೌಡ ವಾಸ್ತವ ಅರ್ಥಮಾಡಿಕೊಳ್ಳಲ್ಲ. ಚೈಲ್ಡಿಶ್ ವರ್ತನೆ ಅವರಲ್ಲಿ ದೊಡ್ಡ ಸಮಸ್ಯೆಯಾಗಿದೆ. ಈ ವರ್ತನೆ ಬದಲಾಯಿಸಿಕೊಂಡರೆ ಭವಿಷ್ಯದಲ್ಲಿ ಅವರಿಗೆ ಒಳ್ಳೆಯದಾಗುತ್ತದೆ.
ಇದು ಮಿನಿ ಬಿಗ್‌ಬಾಸ್ ಸೀಸನ್-1 ರಲ್ಲಿ ಮೊದಲನೇ ವಾರವೇ ಎಲಿಮಿನೇಟ್ ಆದ ಸ್ಪರ್ಧಿ ಕಿರಣ್ ಯೋಗೇಶ್ವರ್ ಮನದಾಳದ ಮಾತು. ತಮ್ಮಲ್ಲಿರುವ ಕನ್ನಡ ಪ್ರೀತಿ ಸೇರಿದಂತೆ ಅನೇಕ ಸ್ವಾರಸ್ಯಕರ ಮಾಹಿತಿಯನ್ನು ವಿಸ್ತಾರ ನ್ಯೂಸ್ ಜತೆಯಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ | Bigg Boss Kannada | ಮೊದಲ ದಿನವೇ ಜಶ್ವಂತ್ ಬೋಪಣ್ಣಗೆ ಸರ್ಪ್ರೈಸ್ ನೀಡಿದ ಬಿಗ್ ಬಾಸ್!