ಶಿವಮೊಗ್ಗ: ಜಿಲ್ಲೆಯ ಶಿಕಾರಿಪುರ ತಾಲೂಕಿನ ತರಲಘಟ್ಟ ಬಳಿ ಶುಕ್ರವಾರ (ಜೂನ್ 28) ತಡರಾತ್ರಿ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆಂಬುಲೆನ್ಸ್ ಹಾಗೂ ಬೈಕ್ ಡಿಕ್ಕಿಯಾಗಿದ್ದು, ಮೂವರು ಬೈಕ್ ಸವಾರರು ಮೃತಪಟ್ಟಿದ್ದಾರೆ. ಮೃತರನ್ನು ಪ್ರಸನ್ನ (25), ಕಾರ್ತಿಕ್ (27), ಅಜಯ್ (25) ಎಂಬುದಾಗಿ ಗುರುತಿಸಲಾಗಿದೆ. ವೇಗವಾಗಿ ಚಲಿಸುತ್ತಿದ್ದ ಬೈಕ್, ಸವಾರನ ನಿಯಂತ್ರಣ ತಪ್ಪಿ ಆಂಬುಲೆನ್ಸ್‌ಗೆ ಡಿಕ್ಕಿಯಾಗಿದೆ ಎಂದು ತಿಳಿದುಬಂದಿದೆ.
ತಡರಾತ್ರಿ ಶಿವಮೊಗ್ಗದಿಂದ ಹಾವೇರಿ ಕಡೆ ಆಂಬುಲೆನ್ಸ್ ತೆರಳುತ್ತಿತ್ತು. ಇದೇ ವೇಳೆ ಶಿಕಾರಿಪುರ ಕಡೆಯಿಂದ ಜೋಗದ ಕಡೆ ತೆರಳುತ್ತಿದ್ದ ಬೈಕ್, ತರಲಘಟ್ಟ ಗ್ರಾಮದ ಬಳಿ ಆಂಬುಲೆನ್ಸ್‌ಗೆ ಡಿಕ್ಕಿಯಾಗಿದೆ. ಮೃತರನ್ನು ಜೋಗದ ನಿವಾಸಿಗಳು ಎಂಬುದಾಗಿ ಗುರುತಿಸಲಾಗಿದೆ. ಸ್ಥಳಕ್ಕೆ ಶಿಕಾರಿಪುರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಜಿರೆಯಲ್ಲಿ ಅಪಘಾತ; ಉದ್ಯಮಿ ಪುತ್ರನ ಸಾವು
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಉಜಿರೆ ಉದ್ಯಮಿ ಎಂ.ಆರ್.ನಾಯಕ್ ಅವರ ಪುತ್ರ ಪ್ರಜ್ವಲ್ ಮೃತಪಟ್ಟಿದ್ದಾರೆ. ಉಜಿರೆ ಬಳಿಕ ಕಾರು ವೇಗವಾಗಿ ಚಲಿಸುತ್ತಿದ್ದ ವೇಳೆ ನಿಯಂತ್ರಣ ತಪ್ಪಿದ್ದು, ಡಿವೈಡರ್ ಮೇಲೇರಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ಶನಿವಾರ (ಜೂನ್ 6) ಬೆಳಗ್ಗೆ ಅಪಘಾತ ಸಂಭವಿಸಿದ್ದು, ತೀವ್ರತೆಗೆ ಕಾರು ನಜ್ಜುಗುಜ್ಜಾಗಿದೆ. ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ.
ಹಾವೇರಿ ಬಳಿ ಶುಕ್ರವಾರ (ಜೂನ್ 28) ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಳೆ ಹೊನ್ನೂರು ಬಳಿಯ ಎಮ್ಮಿಹಟ್ಟಿ ಗ್ರಾಮದ 13 ಮಂದಿ ಮೃತಪಟ್ಟಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಲಾಗಿದೆ. ಹಾವೇರಿ ಜಿಲ್ಲಾಸ್ಪತ್ರೆಗೆ 13 ಮೃತದೇಹಗಳನ್ನು ರವಾನಿಸಿದ್ದು, ಈ ವೇಳೆ ಮೃತರ ಕುಟುಂಬಗಳಿಗೆ ಪರಿಹಾರ ನೀಡಬೇಕು, ಇಲ್ಲದಿದ್ದರೆ ಶವಗಳನ್ನು ತೆಗೆದುಕೊಂಡು ಹೋಗುವುದಿಲ್ಲ ಎಂದು ಸಂಬಂಧಿಕರು, ಗ್ರಾಮಸ್ಥರು ಆಗ್ರಹಿಸಿದರು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಪರಿಹಾರ ಘೋಷಣೆ ಮಾಡಿದೆ.
ಇದನ್ನೂ ಓದಿ: Haveri Accident: ಹಾವೇರಿ ಅಪಘಾತ ಪ್ರಕರಣ; ಭಾರತ ಅಂಧರ ಪುಟ್‌ಬಾಲ್ ತಂಡದ ಕ್ಯಾಪ್ಟನ್ ಕೂಡ ಸಾವು