ಚಳ್ಳಕೆರೆ: ಅವರಿಬ್ಬರು ಇನ್ನೂ 16 ತುಂಬದ ವಿದ್ಯಾರ್ಥಿಗಳು. ಊರಿನಲ್ಲಿ ನಡೆಯುತ್ತಿದ್ದ ನಾಟಕದ ಅಂತ್ಯದಲ್ಲಿ ಸಿಡಿಸಲೆಂದು ಪಟಾಕಿ ತರಲು ಹೊರಟಿದ್ದರು. ಆದರೆ, ಅವರು ಹೊರಟಿದ್ದು ಬೈಕ್‌ನಲ್ಲಿ. ಗುರುವಾರ ನಸುಕಿನ ಜಾವ ಹೊರಟ ಅವರ ಬೈಕ್ ಮಾರ್ಗ ಮಧ್ಯೆ ಎತ್ತಿನಗಾಡಿಗೆ ಡಿಕ್ಕಿ ಹೊಡೆದಿದೆ. ಆ ಹುಡುಗರಿಬ್ಬರೂ ರಸ್ತೆಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಅವರ ಜತೆಗಿದ್ದ ಇನ್ನೊಬ್ಬ ಹುಡುಗನಿಗೂ ಗಾಯಗಳಾಗಿವೆ.
ಈ ಘಟನೆ ನಡೆದಿರುವುದು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು ಚಳ್ಳಕೆರೆ- ಪಾವಗಡ ಮುಖ್ಯ ರಸ್ತೆಯ ಚೌಳೂರು ಗೇಟ್ ಸನಿಹದ ವೇದಾವತಿ ನದಿ ಸೇತುವೆ ಬಳಿ ನಡೆದಿದೆ. ಮೃತ ಬಾಲಕರನ್ನು ಅಲ್ಲಾಪುರ ಗ್ರಾಮದ ಕಿರಣ(15), ದಿಲೀಪ್ (14) ಎಂದು ಗುರುತಿಸಲಾಗಿದೆ.
ಕಿರಣ್ ಮತ್ತು ದಿಲೀಪ್ ತಮ್ಮ ಗ್ರಾಮದಲ್ಲಿ ನಡೆಯುತ್ತಿದ್ದ ನಾಟಕದ ಮುಕ್ತಾಯ ವೇಳೆ ಪಟಾಕಿ ಹಚ್ಚಬೇಕು ಎಂದುಕೊಂಡು ಸನಿಹದ ಪರಶುರಾಂಪುರ ಗ್ರಾಮಕ್ಕೆ ಪಟಾಕಿ ತರಲು ಹೋಗುತ್ತಿದ್ದರು. ಈ ವೇಳೆ ವೇಗವಾಗಿ ಸಾಗುತ್ತಿದ್ದ ಅವರ ಬೈಕ್ ಎತ್ತಿನ ಬಂಡಿ ಹಿಂಬದಿಗೆ ಡಿಕ್ಕಿಯಾಗಿದೆ. ಇದರಿಂದ ದುರಂತ ಸಂಭವಿಸಿತು ಎಂದು ಗಾಯಾಳು ವೀರೇಶ ವಿವರಿಸಿದ್ದಾರೆ.
ಮೃತ ಕಿರಣ ಚೌಳೂರು ಗ್ರಾಮದ ವೀರಭದ್ರಸ್ವಾಮಿ ಗ್ರಾಮೀಣ ಪ್ರೌಢಶಾಲೆಯಲ್ಲಿ ಈ ಸಾರಿ ಎಸ್ ಎಸ್ ಎಲ್ ಸಿ ಓದುತ್ತಿದ್ದ. ಅವನು ಗುರುವಾರ ಇಂಗ್ಲಿಷ್ ಭಾಷೆ ಪರೀಕ್ಷೆಯನ್ನು ಬರೆಯಬೇಕಿತ್ತು. ಮೃತ ದಿಲೀಪ್ ಜುಂಜರಗುಂಟೆ ಗ್ರಾಮದ ಗಾದ್ರಿ ಪಾಲನಾಯಕ ಪ್ರೌಢಶಾಲೆಯ ಒಂಬತ್ತನೆ ತರಗತಿಯ ವಿದ್ಯಾರ್ಥಿ.
ಮೃತ ವಿದ್ಯಾರ್ಥಿಗಳು ಒಂದೇ ಕುಟುಂಬದ ಸಹೋದರ ಮಕ್ಕಳಾದ್ದರಿಂದ ಕುಟುಂಬದವರ ಅಕ್ರಂದನ ಮುಗಿಲು ಮುಟ್ಟಿತ್ತು. ಈ ಸಂಬಂಧ ಪರಶುರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉರುಳಿಬಿದ್ದ ಬೈಕ್; ರಸ್ತೆಗೆ ಬಿದ್ದ ಸವಾರರ ಮೇಲೆ ಏರಿದ ಲಾರಿ, ಇಬ್ಬರು ಯುವಕರು ದುರ್ಮರಣ
ಚಿಕ್ಕಮಗಳೂರು: ಶೃಂಗೇರಿ ತಾಲೂಕಿನ ನೆಮ್ಮಾರು ವ್ಯಾಪ್ತಿಯ ಕೆರೆ ಕಟ್ಟೆ ಗ್ರಾಮದ ಬಳಿ ಅಪಘಾತಗೊಂಡು ರಸ್ತೆಗೆ ಉರುಳಿಬಿದ್ದ ಇಬ್ಬರು ಯುವಕರ ಮೇಲೆ ಲಾರಿ ಹರಿದು ಇಬ್ಬರೂ ಪ್ರಾಣ (Road accident) ಕಳೆದುಕೊಂಡಿದ್ದಾರೆ. ಮೃತರು ಬಾಳೆಹೊನ್ನೂರು ಮೂಲದವರು ಎಂದು ಗುರುತಿಸಲಾಗಿದೆ.
ಈ ಯುವಕರಿಬ್ಬರು ಬೈಕ್‌ನಲ್ಲಿ ಸಾಗುತ್ತಿದ್ದಾಗ ಬೈಕ್ ಕಾರಿಗೆ ಡಿಕ್ಕಿ ಹೊಡೆದಿದೆ. ಆಗ ಅವರಿಬ್ಬರೂ ಬೈಕ್ ಸಮೇತ ರಸ್ತೆಗೆ ಉರುಳಿಬಿದ್ದರು. ಈ ವೇಳೆ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಲಾರಿಯೊಂದು ರಸ್ತೆಯಲ್ಲಿ ಬಿದ್ದ ಅವರ ಮೇಲೆಯೇ ಹರಿದಿದೆ. ಟಿಪ್ಪರ್ ಲಾರಿ ಅವರ ಮೇಲೆ ಹರಿದಿದ್ದರಿಂದ ಇಬ್ಬರೂ ಪ್ರಾಣ ಕಳೆದುಕೊಂಡಿದ್ದಾರೆ. ಸ್ಥಳಕ್ಕೆ ಶೃಂಗೇರಿ ಪೊಲೀಸರು ಭೇಟಿ ನೀಡಿದ್ದು, ಮೃತಪಟ್ಟವರ ಗುರುತು ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ.
ಇದನ್ನೂ ಓದಿ : House Collapse : ಸಿಡಿಲಿನ ಹೊಡೆತಕ್ಕೆ ಮನೆಯ ಚಾವಣಿ ಕುಸಿದು ಇಬ್ಬರು ಮಹಿಳೆಯರು ಸ್ಥಳದಲ್ಲೇ ಸಾವು