ಬೆಂಗಳೂರು: ನಗರದ ದಾಸರಹಳ್ಳಿ ಮೆಟ್ರೊ ಸ್ಟೇಷನ್ ಬಳಿ ಬಿಎಂಟಿಸಿ ಬಸ್ ಹರಿದು ಬೈಕ್ ಸವಾರ ಮೃತಪಟ್ಟಿರುವ ಘಟನೆ ಗುರುವಾರ ನಡೆದಿದೆ. ಸರ್ವೀಸ್ ರಸ್ತೆಯಲ್ಲಿ ಪಾರ್ಕ್ ಮಾಡಿದ್ದ ಕಾರೊಂದಕ್ಕೆ ಡಿಕ್ಕಿ ಹೊಡೆದು ಬೈಕ್ ಸವಾರ ಕೆಳಗೆ ಬಿದ್ದಾಗ ಬಿಎಂಟಿಸಿ ಬಸ್ (BMTC Bus Accident) ಹರಿದಿದೆ.
ದಾಸಪ್ಪ (42) ಮೃತ ಬೈಕ್ ಸವಾರ. ದಾಸರಹಳ್ಳಿ ಮೇಟ್ರೊ ಸ್ಟೇಷನ್ ಬಳಿಯ ಸರ್ವೀಸ್ ರಸ್ತೆಯಲ್ಲಿ ಕಾರಿನ ಬಲಬದಿಗೆ ಡಿಕ್ಕಿ ಹೊಡೆದು ದಾಸಪ್ಪ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಹಿಂಬದಿಯಿಂದ ಬಂದ ಬಿಎಂಟಿಸಿ ಬಸ್ ಹರಿದಿದ್ದರಿಂದ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಪೀಣ್ಯಾ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಾಗಡಿ ರಸ್ತೆಯಲ್ಲಿ ಮಹಿಳೆ ಮೇಲೆ ಹರಿದ ಶಾಲಾ ಬಸ್; ತಲೆ ಹೋಳು
ಬೆಂಗಳೂರು: ಮಾಗಡಿ ರಸ್ತೆಯ ಚಿಕ್ಕಗೊಲ್ಲರಹಟ್ಟಿಯಲ್ಲಿ ಖಾಸಗಿ ಶಾಲಾ ಬಸ್ ಹರಿದು ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪತಿಯೊಂದಿಗೆ ತೆರಳುವಾಗ ಸ್ಕೂಟರ್ ಸ್ಕಿಡ್ ಆಗಿ ಮಹಿಳೆ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಬಸ್ ಹರಿದಿದ್ದರಿಂದ (Road Accident) ಮಹಿಳೆ ತಲೆ ಛಿದ್ರ ಛಿದ್ರವಾಗಿದೆ.
ಇದನ್ನೂ ಓದಿ: Physical Assault: ಪ್ರೇಮ ನಿವೇದನೆ ಒಪ್ಪದ 12 ವರ್ಷದ ಬಾಲಕಿಗೆ 10 ಬಾರಿ ಚಾಕು ಇರಿದು ಕೊಂದ ದುಷ್ಟ
ಸುಮಂಗಲ (58) ಮೃತರು. ಇವರು ಪತಿ ಶರಣಪ್ಪ ಜತೆಗೆ ಸ್ಕೂಟರ್‌ನಲ್ಲಿ ತೆರಳುವಾಗ ರಸ್ತೆಯಲ್ಲಿದ್ದ ಕಲ್ಲು ಟಯರ್‌ಗೆ ಸಿಲುಕಿ ಸ್ಕೂಟರ್ ಸ್ಕಿಡ್ ಆಗಿದೆ. ಈ ವೇಳೆ ಇಬ್ಬರೂ ಕೆಳಗೆ ಬಿದ್ದಿದ್ದಾರೆ. ಇದೇ ವೇಳೆ ಹಿಂದೆಯಿಂದ ವೇಗವಾಗಿ ಬರುತ್ತಿದ್ದ ಶಾಲಾ ಬಸ್ ಮಹಿಳೆ ತಲೆ ಮೇಲೆ ಹರಿದಿದೆ. ಇದರಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕಣ್ಣಮುಂದೆ ಪತ್ನಿ ಮೇಲೆ ಬಸ್ ಹರಿದಿದ್ದನ್ನು ಕಂಡ ಪತಿ ಅಳುತ್ತಾ ಮೃತದೇಹದ ಮೇಲೆ ಬಿದ್ದು ನರಳಾಡಿದ್ದು ಮನಕಳಕುವಂತಿತ್ತು. ಈ ಬಗ್ಗೆ ಮಾದನಾಯಕನ ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಜರುಗುತ್ತಿದ್ದಂತೆ ಶಾಲಾ ಬಸ್ ಚಾಲಕ ಪರಾರಿಯಾಗಿದ್ದಾನೆ. ಕಳೆದ ಶನಿವಾರವಷ್ಟೆ ಇದೇ ರಸ್ತೆಯಲ್ಲಿ ಯುವಕನೊಬ್ಬ ಲಾರಿಗೆ ಸಿಲುಕಿ ಕೊನೆಯುಸಿರೆಳೆದಿದ್ದ.
ಇದನ್ನೂ ಓದಿ | Pramod Muthalik : ರಾಜ್ಯದಲ್ಲಿ 3 ವರ್ಷದಲ್ಲಿ 40 ಸಾವಿರ ಮಹಿಳೆಯರು ನಿಗೂಢ ಕಣ್ಮರೆ; 45 ಸಾವಿರ ಬಾಲಕಿಯರಿಗೆ ಅಕ್ರಮ ಗರ್ಭ!
ಮಾಗಡಿ ರಸ್ತೆಯ ಚಿಕ್ಕಗೊಲ್ಲರಹಟ್ಟಿ ರಸ್ತೆ ಕಾಮಗಾರಿ ಕಳೆದ ಹಲವು ತಿಂಗಳಿನಿಂದ ನಿಂತುಹೋಗಿದೆ. ರಾಜ್ಯ ಹೆದ್ದಾರಿಯಾದ ಹಿನ್ನೆಲೆಯಲ್ಲಿ ವಾಹನ ಸಂಚಾರ ಹೆಚ್ಚಾಗಿಯೇ ಇರುತ್ತದೆ. ರಸ್ತೆ ಗುಂಡಿಮಯವಾಗಿರುವುದರಿಂದ ಹೆಚ್ಚಿನ ಅಪಘಾತಗಳು ನಡೆಯುತ್ತಿವೆ.