ಗದಗ: ಸಾರಿಗೆ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ (Bike Accident) ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವುದು ಜಿಲ್ಲೆಯ ರೋಣ ಪಟ್ಟಣದ ಅಬ್ಬಿಗೇರಿ ರಸ್ತೆಯಲ್ಲಿ ಬುಧವಾರ ನಡೆದಿದೆ. ಮುಂಡರಗಿ ತಾಲೂಕಿನ ಪೇಠಾಲೂರ ಗ್ರಾಮದ ನಿವಾಸಿ ವಸಂತ ಗುಡಿಸಾಗರ ಮೃತ ಬೈಕ್ ಸವಾರ. ಇಟಗಿ ಭೀಮಾಂಬಿಕಾ ದೇವಸ್ಥಾನಕ್ಕೆ ಹೋಗಿ ಮರಳಿ ಪೇಠಾಲೂರಿಗೆ ತೆರಳುತ್ತಿದ್ದಾಗ ದುರ್ಘಟನೆ ಸಂಭವಿಸಿದೆ.
ಮರಕ್ಕೆ ಬೈಕ್ ಡಿಕ್ಕಿಯಾಗಿ ಸವಾರ ಮೃತ್ಯು, ಇನ್ನೊಬ್ಬನಿಗೆ ಗಂಭೀರ ಗಾಯ
ಕಲಬುರಗಿ: ಮರಕ್ಕೆ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೆ ಬೈಕ್ ಸವಾರ ಮೃತಪಟ್ಟು, ಮತ್ತೊಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ಅಫಜಲಪುರ ತಾಲೂಕಿನ ಅಳ್ಳಗಿ ಕ್ರಾಸ್ ಬಳಿ ನಡೆದಿದೆ. ಅಫಜಲಪುರ ತಾಲೂಕಿನ ಗೊಬ್ಬರ ಬಿ.ಗ್ರಾಮದ ನಿವಾಸಿ ಚನ್ನಮಲ್ಲಪ್ಪ (40) ಮೃತರು. ಗಾಯಾಳು ರಾಜುಗೆ(35) ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಇವರು ಗಬ್ಬೂರ ಬಿ ಗ್ರಾಮದಿಂದ ಉಡಚಳ ಗ್ರಾಮದ ಹುಚ್ಚಲಿಂಗೇಶ್ವರ ದೇವರ ದರ್ಶನಕ್ಕೆ ಹೋಗಿದ್ದರು. ಅಲ್ಲಿಂದ ವಾಪಸ್ ಬರುತ್ತಿದ್ದಾಗ ಅಳ್ಳಗಿ ಕ್ರಾಸ್ ಬಳಿ ಬೈಕ್ ಸವಾರನ ನಿಯಂತ್ರಣ ತಪ್ಪಿ ಬೈಕ್ ಮರಕ್ಕೆ ಡಿಕ್ಕಿ ಹೊಡೆದಿದ್ದರಿಂದ ಅಪಘಾತ ಸಂಭವಿಸಿದೆ.
ಮದುವೆಗೆ ಯುವಕನ ಕುಟುಂಬಸ್ಥರ ವಿರೋಧ; ಯುವತಿ ಆತ್ಮಹತ್ಯೆಗೆ ಯತ್ನ
ಗದಗ: ಮದುವೆಗೆ ತಾನು ಪ್ರೀತಿಸಿದ ಯುವಕನ ಕುಟುಂಬಸ್ಥರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ವಿಷ ಸೇವಿಸಿ ಯುವತಿ ಆತ್ಮಹತ್ಯೆಗೆ ಯತ್ನಿಸಿರುವುದು ಜಿಲ್ಲೆ ಮುಂಡರಗಿ ತಾಲೂಕಿನ ಚಿಕ್ಕವಡ್ಡಟ್ಟಿ ಗ್ರಾಮದಲ್ಲಿ ನಡೆದಿದೆ. ಅಕ್ಷತಾ ಬಸಪ್ಪ ಬಂಡಿವಡ್ಡರ (19) ಆತ್ಮಹತ್ಯೆಗೆ ಯತ್ನಿಸಿದ ಯುವತಿ. ಪ್ರೀತಿಸಿದಾತ ಕೈ ಹಿಡಿಯಲಿಲ್ಲ ಎಂದು ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಈಕೆ ಪ್ರಶಾಂತ ಬಸವಣ್ಣೆಪ್ಪ ಅನಕನಳ್ಳಿ (23) ಏಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಇಬ್ಬರ ಮದುವೆಗೆ ಯುವಕನ ಕುಟುಂಬಸ್ಥರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಯುವತಿಯನ್ನು ಮುಂಡರಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ವಿಚಾರಣೆ ನಡೆಸುತ್ತಿದ್ದಾರೆ.
ಕದ್ದ ಮೊಬೈಲ್‌ಗಳಿಂದ ಹಣ ಲಪಟಾಯಿಸುತ್ತಿದ್ದ ಮೂವರ ಬಂಧನ
ಹಾವೇರಿ: ಕಳ್ಳತನ ಮಾಡಿದ ಮೊಬೈಲ್‌ಗಳಲ್ಲಿ ಫೋನ್ ಪೇ ಹಾಗೂ ಗೂಗಲ್ ಪೇ ಬಳಸಿ ಹಣ ಲಪಾಟಾಯಿಸುತ್ತಿದ್ದವ ಮೂವರು ಅಂತಾರಾಜ್ಯ ಕಳ್ಳರನ್ನು ಹಾವೇರಿಯ ಗುತ್ತಲ ಪೊಲೀಸರು ಬಂಧಿಸಿದ್ದಾರೆ. ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯದ ಆರೋಪಿಗಳಾದ ಗುಂಜಾರಿಯಾ ಸಾಯಿಕುಮಾರ್, ಅಕುಲ್ ವಡಿವೆಲು ಹಾಗೂ 12 ವರ್ಷದ ಬಾಲಕನನ್ನು ಬಂಧಿಸಲಾಗಿದೆ. ಬಂಧಿತರಿಂದ 1.36 ಲಕ್ಷ ರೂಪಾಯಿ, 27 ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ್ದ ಟಾಟಾ ಇಂಡಿಗೋ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸುಟ್ಟು ಕರಕಲಾದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ
ಆನೇಕಲ್: ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಅತ್ತಿಬೆಲೆ ಸಮೀಪದ ಬಳ್ಳೂರು ಗ್ರಾಮದಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ. ಅಸ್ಸಾಂ ಮೂಲದ ದೀಪಕ್ ಹರಿಜನ್ (25) ಕೊಲೆಯಾದ ಯುವಕ. ದುಷ್ಕರ್ಮಿಗಳು ಕೊಲೆ ಮಾಡಿ ಬೆಂಕಿ ಹಚ್ಚಿದ್ದು, ಸ್ಥಳಕ್ಕೆ ಅಡಿಷನಲ್ ಎಸ್.ಪಿ ಎಮ್.ಎಲ್ ಪುರುಷೋತ್ತಮ್, ಅತ್ತಿಬೆಲೆ ಪೊಲೀಸರು, ಎಫ್.ಎಸ್.ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.