ವಿಜಯಪುರ/ಶಿವಮೊಗ್ಗ: ಕಳ್ಳತನವನ್ನೇ ಕಾಯಕವನ್ನಾಗಿ ಮಾಡಿಕೊಂಡಿದ್ದವನು ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ಗಳನ್ನು (Bike Thieves) ನಿರಾಯಾಸವಾಗಿ ಕದ್ದು ಮಾಯವಾಗಿಬಿಡುತ್ತಿದ್ದರು. ಆದರೆ, ಅದೃಷ್ಟ ಎಲ್ಲ ಸಮಯವೂ ಇವರ ಕೈಹಿಡಿಯುವುದಿಲ್ಲ ಎಂಬುದು ಸಾಬೀತಾಗಿದ್ದು, ಸ್ಥಳೀಯರ ಕೈಗೆ ಸಿಕ್ಕಿಬಿದ್ದು, ಧರ್ಮದೇಟು ತಿಂದು ಪೊಲೀಸರ ಅತಿಥಿಯಾಗಿದ್ದಾನೆ. ಇನ್ನೊಂದೆಡೆ ಟ್ರ್ಯಾಕ್ಟರ್ ಕದ್ದವರನ್ನು ಪೊಲೀಸರು ಹಿಡಿದುಹಾಕಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. ಇನ್ನು ಶಿವಮೊಗ್ಗದಲ್ಲಿ ಪೆಟ್ರೋಲ್ ಕಳ್ಳರ ಹಾವಳಿ ಮಿತಿಮೀರಿದೆ.
ಸ್ಥಳೀಯರಿಂದ ಧರ್ಮದೇಟು
ಮನೆ ಎದುರು ನಿಲ್ಲಿಸಿದ್ದ ಬೈಕ್ ಕಳ್ಳತನ ಮಾಡುವಾಗಲೇ ಸಿಕ್ಕಿ ಬಿದ್ದ ಕಳ್ಳ ಸ್ಥಳೀಯರು ಧರ್ಮದೇಟು ನೀಡಿರುವ ಘಟನೆ ವಿಜಯಪುರ ತಾಲೂಕಿನ ಶಿವಣಗಿ ಗ್ರಾಮದಲ್ಲಿ ನಡೆದಿದೆ. ಕಳ್ಳನ ಹೆಸರು ಹಾಗೂ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಕಳ್ಳನ ಬಗ್ಗೆ ಸ್ಥಳೀಯರು ಮಾಹಿತಿ ಕೇಳಿದರೂ ಸಮರ್ಪಕ ಮಾಹಿತಿ ನೀಡಿಲ್ಲ. ಹೀಗಾಗಿ ಸ್ಥಳೀಯರು ಧರ್ಮದೇಟು ನೀಡಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಕಳ್ಳನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ದೂರು ದಾಖಲಾಗಿದೆ.
ಅಂತಾರಾಜ್ಯ ಕಳ್ಳರು ಪೊಲೀಸ್ ವಶಕ್ಕೆ
ತಿಕೋಟಾ ಪಟ್ಟಣದ ರತ್ನಾಪುರ ಕ್ರಾಸ್ ಬಳಿ ಟ್ರ್ಯಾಕ್ಟರ್ ಕಳ್ಳತನಗೈದು ಪರಾರಿಯಾಗಿದ್ದ ಮೂವರು ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ಸಂಖ ಗ್ರಾಮದ ಸಂತೋಷ ಕಾಂಬ್ಳೆ, ದಿಲೀಪ್ ಕಾಂಬ್ಳೆ, ಸಚಿನ್ ಕಾಂಬ್ಳೆ ಬಂಧಿತ ಆರೋಪಿಗಳು ಅಂತಾರಾಜ್ಯ ಕಳ್ಳರಾಗಿದ್ದು, ರತ್ನಾಪರದಲ್ಲಿ 2.50 ಲಕ್ಷ ಮೌಲ್ಯದ ಟ್ರ್ಯಾಕ್ಟರ್ ಅನ್ನು ವಶಕ್ಕೆ ಪಡೆದಿದ್ದಾರೆ.
ಶಿವಮೊಗ್ಗದಲ್ಲಿ ಪೆಟ್ರೋಲ್ ಕಳ್ಳರು
ಇತ್ತ ಶಿವಮೊಗ್ಗದಲ್ಲಿ ಪೆಟ್ರೋಲ್ ಕಳ್ಳರ ಕಾಟ ಹೆಚ್ಚಿದೆ. ವಿನೋಬನಗರದ ಡಿವಿಎಸ್ ಶಾಲೆ ಹಿಂಭಾಗದಲ್ಲಿ ಇಬ್ಬರು ಕಳ್ಳರು ಮೂರು ಬೈಕ್ ಪೈಪ್ ಕಟ್ ಮಾಡಿ ಪೆಟ್ರೋಲ್ ಕಳವು ಮಾಡಿದ್ದಾರೆ. ಈ ಎಲ್ಲ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಿವೃತ್ತ ಯೋಧ ಹನುಮಂತಪ್ಪ ಮನೆ ಎದುರು ನಿಲ್ಲಿಸಿದ್ದ ಸ್ಪೈಂಡರ್ ಪ್ರೊ, ಪಲ್ಸರ್ ಹಾಗೂ ರಾಯಲ್ ಎನ್‌ಫಿಲ್ಡ್ ಬೈಕ್‌ನಲ್ಲಿದ್ದ ಪೆಟ್ರೋಲ್ ಕಳವು ಮಾಡಲಾಗಿದೆ. ಗುರುವಾರ ಮಧ್ಯರಾತ್ರಿ ೧.೦೪ರ ಸುಮಾರಿಗೆ ಕಳ್ಳತನ ನಡೆದಿದ್ದು, ಇಬ್ಬರು ಯುವಕರು ಕದಿಯುತ್ತಿರುವುದು ಕಂಡುಬಂದಿದೆ.
ಇದನ್ನೂ ಓದಿ | Harassment | ಬಾಲಕಿಗೆ ಶಿಕ್ಷಕನಿಂದ ಲೈಂಗಿಕ ಕಿರುಕುಳ; ಗ್ರಾಮಸ್ಥರಿಂದ ಧರ್ಮದೇಟು, ಶಿಕ್ಷಕ ಅಮಾನತು