ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿಯ ಫ್ಲೈ ಓವರ್‌ನಿಂದ ಕೆಳಗೆ ಬಿದ್ದು ಯುವಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಅಂದ್ರ ಮೂಲದ ಯುವಕ ಕೌರಿ ನಾಗಾರ್ಜುನ (೩೩) ಮೃತ ದುರ್ದೈವಿ.
ಬೆಂಗಳೂರಿನಿಂದ ಹೊಸೂರು ಕಡೆ ಹೊರಟಿದ್ದ ನಾಗಾರ್ಜುನ ಎಲೆಕ್ಟ್ರಾನಿಕ್ ಸಿಟಿಯ BETPL ನಿರ್ವಹಣೆಯ ಫ್ಲೈಓವರ್‌ನಿಂದ ಇಳಿಯುವಾಗ ನಿಯಂತ್ರಣ ತಪ್ಪಿದ್ದಾನೆ. ಬೈಕ್ ಆತನ ಕಂಟ್ರೋಲ್‌ಗೆ ಬಾರದೆ ಸ್ಕೀಡ್ ಆಗಿದೆ. ಅಲ್ಲಿಂದ ತಡೆಗೋಡೆಗೆ ಬಡಿದು ಕೆಳಭಾಗಕ್ಕೆ ಉರುಳಿದೆ.
ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆತನ ಮೃತದೇಹವನ್ನು ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಇಡಲಾಗಿದೆ. ನಾಗಾರ್ಜುನ ಇಲ್ಲಿ ಯಾವ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಎಂಬ ಬಗ್ಗೆ ಮಾಹಿತಿ ಸದ್ಯಕ್ಕಿಲ್ಲ. ಆತನ ಪೋಷಕರು ಆಂಧ್ರದಲ್ಲೇ ಇದ್ದು ಇಲ್ಲಿಗೆ ಆಗಮಿಸಬೇಕಾಗಿದೆ.
ಕಳೆದ ವರ್ಷದ ಸೆಪ್ಟೆಂಬರ್ ೨೧ರಂದು ಇದೇ ಫ್ಲೈ ಓವರ್‌ನಲ್ಲಿ ಬೈಕ್ ಮತ್ತು ಕಾರಿನ ಮಧ್ಯೆ ಅಪಘಾತ ಸಂಭವಿಸಿ ಬೈಕ್‌ನಲ್ಲಿದ್ದ ಯುವಕ ಮತ್ತು ಯುವತಿ ಮೇಲಿಂದ ಕೆಳಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದರು. ಇಬ್ಬರ ದೇಹಗಳೂ ಛಿದ್ರಗೊಂಡಿದ್ದವು.