ಮೈಸೂರು: ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಬೆಂಗಳೂರು-ಮೈಸೂರು (Bengaluru-Mysuru Expressway) ಹೆದ್ದಾರಿ ಕ್ರೆಡಿಟ್ ವಾರ್ ನಡೆಯುತ್ತಿರುವ ನಡುವೆ ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ನೇತೃತ್ವದ ಕಾಂಗ್ರೆಸ್ ನಿಯೋಗ, ಶುಕ್ರವಾರ ದಶಪಥ ಹೆದ್ದಾರಿ ವೀಕ್ಷಣೆ ನಡೆಸಿತು. ಈ ವೇಳೆ ಹೆದ್ದಾರಿಯಲ್ಲಿ ಸಾಗುತ್ತಿದ್ದ ಪ್ರಯಾಣಿಕರು ಹಾಗೂ ಬೈಕ್ ಸವಾರರು, ಮೋದಿ ಮೋದಿ ಎಂದು ಕೂಗಿರುವುದು ಕಂಡುಬಂದಿದೆ.
ಮಾಜಿ ಸಚಿವ ಮಹದೇವಪ್ಪ ಹಾಗೂ ಸ್ಥಳೀಯ ಕೈ ನಾಯಕರು, ಸಿದ್ದಲಿಂಗಪುರ ಬಳಿ ಮುಖ್ಯ ರಸ್ತೆ ಹಾಗೂ ಸರ್ವಿಸ್ ರಸ್ತೆ ಕಾಮಗಾರಿಯನ್ನು ವೀಕ್ಷಿಸಿ ಗುಣಮಟ್ಟ ಪರೀಕ್ಷೆ ಮಾಡಿದರು. ಈ ಸಂದರ್ಭದಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ ಪ್ರಯಾಣಿಕರು ಮೋದಿಗೆ ಜೈಕಾರ ಹಾಕಿದ್ದಾರೆ. ಬೈಕ್ ನಿಲ್ಲಿಸಿ ಸವಾರನೊಬ್ಬ, ಭಾರತ್ ಮಾತಾಕಿ ಜೈ ಎಂದು ಹೇಳಿ, ನಂತರ `ಮೋದಿ ಮೋದಿ’ ಎಂದು ಘೋಷಣೆ ಕೂಗಿದ್ದಾನೆ. ಇದರಿಂದ ಕಾಂಗ್ರೆಸ್ ನಾಯಕರು ತಬ್ಬಿಬ್ಬಾದರು. ಕೆಲ ಕೈ ನಾಯಕರು ತಕ್ಷಣ ಬೈಕ್ ಸವಾರನ ಬಳಿ ತೆರಳಲು ಮುಂದಾದಾಗ ಸ್ಥಳದಿಂದ ಬೈಕ್ ಸವಾರ ನಿರ್ಗಮಿಸಿದ್ದಾನೆ.
ಇದನ್ನೂ ಓದಿ | Sumalatha Ambareesh PC: ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ನನ್ನ ಬೆಂಬಲ: ಅಧಿಕೃತವಾಗಿ ಘೋಷಣೆ ಮಾಡಿದ ಸುಮಲತಾ ಅಂಬರೀಶ್
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಮನ್ವಯದೊಂದಿಗೆ ಕೆಲಸ ಮಾಡಬೇಕಿರುವುದು ಸಂವಿಧಾನದ ಆಶಯ. ಕೇಂದ್ರ ಸರ್ಕಾರ ಇತ್ತೀಚೆಗೆ ರಾಜ್ಯದ ಸ್ವಾಯತ್ತತೆಯನ್ನು ದುರ್ಬಲಗೊಳಿಸುತ್ತಿದೆ. ಇದು ಸಂವಿಧಾನಕ್ಕೆ ಶ್ರೇಯಸ್ಸು ತರುವುದಿಲ್ಲ. ಕಾಂಗ್ರೆಸ್ 60 ವರ್ಷಗಳಿಂದ ಗ್ರಾಮೀಣ ರಸ್ತೆಗಳು ಸೇರಿ ಮೂಲಸೌಕರ್ಯ ಅಭಿವೃದ್ಧಿಗೆ ಶ್ರಮಿಸಿದೆ ಎಂದು ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.
ನಾಗನಹಳ್ಳಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2013ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದರು. ನಾನು ಲೋಕೋಪಯೋಗಿ ಸಚಿವನಾಗಿದ್ದೆ. ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮಗಳ ನಡುವೆ ಸಂಪರ್ಕ ರಸ್ತೆ ಮಾಡಲು ತೀರ್ಮಾನಿಸಿದ್ದೆವು ಎಂದು ಹೇಳಿದರು.
ಬೆಂಗಳೂರುರು-ಮೈಸೂರು ರಸ್ತೆ 2013ರವರೆಗೆ ರಾಜ್ಯ ಹೆದ್ದಾರಿ-75 ಆಗಿತ್ತು. ವಾಹನ ದಟ್ಟಣೆ, ಪ್ಯಾಸೆಂಜರ್ ಕಾರ್ ಯೂನಿಟ್ (ಪಿಸಿಯು) ಹೆಚ್ಚಾಯಿತು. ಮೈಸೂರು- ಬೆಂಗಳೂರು ನಡುವಿನ ಪ್ರಯಾಣ ಅವಧಿ 5-6 ಗಂಟೆ ಆಗುತ್ತಿತ್ತು. ನಾವು ಅಧಿಕಾರಕ್ಕೆ ಬಂದಾಗ ರಾಜ್ಯದಲ್ಲಿ 4480 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಇತ್ತು. ಮಾರ್ಗದರ್ಶಿ ಸೂತ್ರದಡಿ ಪ್ರಸ್ತಾವನೆ ಸಲ್ಲಿಸಿದಾಗ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿ ಮಾಡುವುದು ವಾಡಿಕೆಯಾಗಿದೆ ಎಂದರು.
2014ರಲ್ಲಿ ನಾನು ಹೆದ್ದಾರಿ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಆಗ ಮನಮೋಹನ್ ಸಿಂಗ್ ಪ್ರಧಾನಿ, ಆಸ್ಕರ್ ಫರ್ನಾಂಡೀಸ್ ಸಾರಿಗೆ ಸಚಿವರಾಗಿದ್ದರು. ಖಾಸಗಿ, ಸರ್ಕಾರ ತಜ್ಞರನ್ನು ಬಳಸಿಕೊಂಡು ಡಿಪಿಆರ್ ಸಲ್ಲಿಸಿದೆ. 2014ರ ಮಾರ್ಚ್ 4ರಂದು ಗೆಜೆಟ್ ನೋಟಿಫಿಕೇಷನ್ ಮಾಡಲಾಯಿತು. 1882 ಕಿ.ಮೀ. ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಲು ಆದೇಶ ಮಾಡಲಾಯಿತು. ಆಗ ಅಡಗೂರು ಎಚ್.ವಿಶ್ವನಾಥ್ ಸಂಸದರಾಗಿದ್ದರು. ನವದೆಹಲಿಯಲ್ಲಿ ಎಲ್ಲ ಪಕ್ಷದ ಸಂಸದರನ್ನೂ ಒಗ್ಗೂಡಿಸಿ ಸಭೆ ಮಾಡಿದ್ದೆ. ರಾಜ್ಯದ ಇತಿಹಾಸದಲ್ಲೇ ಅದು ಪ್ರಥಮ ಪ್ರಯತ್ನವಾಗಿತ್ತು. ಈಗ ಬೊಗಳೆ ಬಿಡುತ್ತಿರುವ ಯಾರೂ ಇರಲಿಲ್ಲ ಎಂದು ಹೇಳಿದರು.
ಅಭಿವೃದ್ಧಿ ಯಾರದ್ದೋ ಸ್ವತ್ತಲ್ಲ, ಸಾಂವಿಧಾನಿಕ ಜವಾಬ್ದಾರಿ.
ಅಭಿವೃದ್ಧಿ ಯಾರದ್ದೋ ಸ್ವತ್ತಲ್ಲ, ಸಾಂವಿಧಾನಿಕ ಜವಾಬ್ದಾರಿಯಾಗಿದೆ. ಸಾರ್ವಜನಿಕರ ತೆರಿಗೆ ಹಣದಲ್ಲಿ ರಸ್ತೆ ಮಾಡಿದ್ದಾರೆ. ಬೆಂಗಳುರು-ಮೈಸೂರು ದಶಪಥ ಹೆದ್ದಾರಿ ಸಿದ್ದರಾಮಯ್ಯ, ಡಾ.ಮಹದೇವಪ್ಪ ಕನಸು. ಅದಕ್ಕೆ ಆಸ್ಕರ್ ಫರ್ನಾಂಡೀಸ್ ಮತ್ತು ಕೇಂದ್ರ ಸರ್ಕಾರ ನೆರವು ನೀಡಿತು. ಈಗ ಬಿಜೆಪಿಯ ಸಿ.ಟಿ.ರವಿ, ಪ್ರತಾಪ್ ಸಿಂಹ, ಪ್ರಲ್ಹಾದ್ ಜೋಶಿ ಏನೇನೋ ಮಾತನಾಡುತ್ತಾರೆ. ಕೆಲಸ ಮಾಡದೆ ಇರುವವರು ಯೋಜನೆ ನಮ್ಮದು ಎಂದು ಹೇಳಿಕೊಂಡು ಓಡಾಡುತ್ತಾರೆ ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ | ಡಿ.ಕೆ. ಶಿವಕುಮಾರ್‌ಗೆ ಯಾಕೆ ಅಧಿಕಾರ ನೀಡಬೇಕು? ಇನ್ನೊಂದು ಹತ್ತು ಲುಲು ಮಾಲ್ ಕಟ್ಟೋದಕ್ಕ?: ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆ
2021ರ ಸೆ.15ರಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಕೂಡ ಸಿದ್ದರಾಮಯ್ಯ ಅವಧಿಯಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ವಿಧಾನ ಪರಿಷತ್ತಿನಲ್ಲಿ ಹೇಳಿದ್ದಾರೆ. 118 ಕಿ.ಮೀ.ನಲ್ಲಿ 22 ಕಿ.ಮೀ. ಹೆದ್ದಾರಿ ಇನ್ನೂ ಕಾಮಗಾರಿ ಆಗಿಲ್ಲ. ಕಾಮಗಾರಿ ಮುಗಿದ ಮೇಲೆ ಪ್ರಧಾನಿ ಉದ್ಘಾಟನೆ ಮಾಡಬೇಕಿತ್ತು. ಪೂಜಾರಿ ಫಿಶ್ ಲ್ಯಾಂಡ್ ಹೋಟೆಲ್‌ಗೆ ನೇರವಾಗಿ ಅಂಡರ್‌ಪಾಸ್ ಕೊಟ್ಟಿದ್ದಾರೆ. ನಾಗನಹಳ್ಳಿಯ ಜನ ಗಲಾಟೆ ಮಾಡಿದ ಮೇಲೆ ಅಂಡರ್ ಪಾಸ್ ಕೊಟ್ಟರು ಎಂದು ಸಂಸದ ಪ್ರತಾಪ್ ಸಿಂಹ ವಿರುದ್ಧ ಕಿಡಿಕಾರಿದರು.