Site icon Vistara News

Birth and Death Certificate: ಇನ್ಮುಂದೆ ಗ್ರಾಮ ಪಂಚಾಯಿತಿ ಕಚೇರಿಗಳಲ್ಲೇ ಸಿಗಲಿದೆ ಜನನ, ಮರಣ ಪ್ರಮಾಣ ಪತ್ರ

Birth and Death Certificate

ಬೆಂಗಳೂರು: ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮತ್ತು ಗ್ರಾಮ ಆಡಳಿತ ಅಧಿಕಾರಿಗಳಿಗೆ ಜನನ, ಮರಣ ಉಪ ನೋಂದನಾಧಿಕಾರಿಗಳ (Birth and Death Certificate) ಕಾರ್ಯ ನಿರ್ವಹಿಸಲು ರಾಜ್ಯ ಸರ್ಕಾರ ಅಧಿಕಾರ ನೀಡಿದೆ. ಇದರಿಂದ ಇನ್ನು ಮುಂದೆ ಆಸ್ಪತ್ರೆ, ತಾಲೂಕು ಕಚೇರಿ ಅಥವಾ ಇತರ ಸ್ಥಳೀಯ ಸಂಸ್ಥೆ ಕಚೇರಿಗಳಿಗೆ ಜನರು ಅಲೆದಾಡುವುದು ತಪ್ಪಲಿದ್ದು, ಗ್ರಾಮ ಪಂಚಾಯಿತಿ (gram panchayat) ಕಚೇರಿಗಳಲ್ಲೇ ಜನನ, ಮರಣ ಪ್ರಮಾಣಪತ್ರ ಪಡೆಯಬಹುದಾಗಿದೆ.

ಜುಲೈ1 ರಿಂದ ಜಾರಿಗೆ ಬರುವಂತೆ ಜನನ ಅಥವಾ ಮರಣ ಘಟನೆ ಸಂಭವಿಸಿದ 30 ದಿನಗಳ ಒಳಗೆ ನೋಂದಣಿ ಮಾಡಿ ಪ್ರಮಾಣ ಪತ್ರವನ್ನು ವಿತರಿಸುವ ಅಧಿಕಾರವನ್ನು ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳಿಗೆ ನೀಡಲಾಗಿದೆ. ಅದೇ ರೀತಿ ಜನನ, ಮರಣ ಘಟನೆಗಳು ಸಂಭವಿಸಿದ 30 ದಿನಗಳ ನಂತರದ ವಿಳಂಬ ನೋಂದಣಿಯನ್ನು ಗ್ರಾಮ ಆಡಳಿತ ಅಧಿಕಾರಿಗಳು ಮಾಡಲಿದ್ದಾರೆ.

ಈ ಕುರಿತಂತೆ ಜನನ, ಮರಣಗಳ ಮುಖ್ಯ ನೋಂದಣಾಧಿಕಾರಿಗಳು ಹಾಗೂ ಅಪರ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದು, ದೇಶಾದ್ಯಂತ ಜನನ, ಮರಣ ನೋಂದಣಿ ಅಧಿನಿಯಮ, 1969 ಜಾರಿಯಲ್ಲಿದೆ. ಕರ್ನಾಟಕ ಜನನ, ಮರಣಗಳ ನೋಂದಣಿ ನಿಯಮಗಳು, 1999ರ ಮೂಲಕ ಪುನರ್ ರಚಿತ ನಾಗರಿಕ ನೋಂದಣಿ ಪದ್ಧತಿಯನ್ನು ದಿನಾಂಕ: 01-01-2000 ರಿಂದ ರಾಜ್ಯಾದ್ಯಂತ ಏಕೀಕರಿಸಿ ಜನನ, ಮರಣ ನೋಂದಣಿಯನ್ನು ಕಡ್ಡಾಯವಾಗಿ ಜಾರಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | UGCET 2024: ಯುಜಿಸಿಇಟಿಗೆ ಜೂನ್ 25ರಿಂದ ಆಫ್‌ಲೈನ್ ವೆರಿಫಿಕೇಶನ್‌; ಈ ಅಭ್ಯರ್ಥಿಗಳು ಮಾತ್ರ ಹಾಜರಾಗಬೇಕಿಲ್ಲ!

ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಲೆಕ್ಕಿಗರನ್ನು ಜನನ, ಮರಣ ನೋಂದಣಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ನಾಗರಿಕ ನೋಂದಣಿ ಪದ್ಧತಿಯನ್ನು ಬಲಪಡಿಸಲು ಹಾಗೂ ಘಟಿಸುವ ಶೇ.100 ರಷ್ಟು ಜನನ, ಮರಣ ನೋಂದಣಿ ಘಟನೆಗಳನ್ನು ದಾಖಲಿಸಲು ಜನನ, ಮರಣ ನೋಂದಣಿ ಅಧಿನಿಯಮ 1969ರ ಪ್ರಕರಣ 7(5) ರನ್ವಯ ಜನನ, ಮರಣ ಘಟನೆಗಳು ಘಟಿಸಿದ 30 ದಿನಗಳವರೆಗಿನ ಘಟನೆಗಳನ್ನು ನೋಂದಾಯಿಸಲು ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳನ್ನು ಜನನ, ಮರಣ ಉಪ ನೋಂದಣಾಧಿಕಾರಿಗಳನ್ನಾಗಿ ಹಾಗೂ ಪ್ರಕರಣ 7(1) ರನ್ವಯ ಜನನ, ಮರಣ ಘಟನೆಗಳು ಸಂಭವಿಸಿದ 30 ದಿನಗಳ ನಂತರದ ವಿಳಂಬ ನೋಂದಣಿಯನ್ನು ನೋಂದಾಯಿಸಲು ಗ್ರಾಮ ಆಡಳಿತ ಅಧಿಕಾರಿಗಳನ್ನು ಜನನ, ಮರಣ ನೋಂದಣಾಧಿಕಾರಿಗಳನ್ನಾಗಿ ಉಲ್ಲೇಖಿತ (3) ರಲ್ಲಿ ಸರ್ಕಾರದ ಆದೇಶವನ್ನು ಹೊರಡಿಸಲಾಗಿದೆ ಎಂದು ಹೇಳಿದ್ದಾರೆ.

ಜುಲೈ 1 ರಿಂದ ಜಾರಿಗೆ ಬರುವಂತೆ ಸರ್ಕಾರದ ಆದೇಶವನ್ನು ಗ್ರಾಮೀಣ ಪ್ರದೇಶಕ್ಕೆ ಅನ್ವಯವಾಗುವಂತೆ ಅನುಷ್ಠಾನಗೊಳಿಸಲಾಗುತ್ತಿದ್ದು, ಈ ಕೆಳಕಂಡ ಅಂಶಗಳನ್ನು ಪಾಲಿಸಲು ಸೂಚಿಸಲಾಗಿದೆ.

  1. 1.ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಘಟಿಸುವ ಜನನ, ಮರಣ ಘಟನೆಗಳು ಸಂಭವಿಸಿದ 30 ದಿನಗಳೊಳಗೆ ಜನನ, ಮರಣ ಉಪ ನೋಂದಣಾಧಿಕಾರಿಗಳಾದ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ನಿಯಮಾನುಸಾರ ನೋಂದಣಿ ಮಾಡತಕ್ಕದ್ದು.
    a. ಘಟನೆ ಸಂಭವಿಸಿದ 21 ದಿನಗಳೊಳಗೆ ಜನನ, ಮರಣ ಘಟನೆಗಳನ್ನು ನೋಂದಣಿ ಮಾಡಿ ಉಚಿತವಾಗಿ ಒಂದು ಪ್ರಮಾಣ ಪತ್ರವನ್ನು ವಿತರಿಸುವುದು.
    b. ಕರ್ನಾಟಕ ಜನನ, ಮರಣ ನೋಂದಣಿ ನಿಯಮ 5ರಲ್ಲಿ ನಿಗದಿಪಡಿಸಿದ 21 ದಿನಗಳ ತರುವಾಯ ಮತ್ತು 30 ದಿನಗಳೊಳಗಾಗಿ ವರದಿಯಾಗುವ ಘಟನೆಗಳನ್ನು ಕರ್ನಾಟಕ ಜನನ, ಮರಣ ನೋಂದಣಿ ನಿಯಮಗಳು 1999ರ 9(1) ರ ಪುಕಾರ ರೂ.2/- ತಡ ಶುಲ್ಕ ಪಡೆದು ನೋಂದಾಯಿಸುವುದು.
    c. ಘಟನೆ ಸಂಭವಿಸಿದ 30 ದಿನಗಳ ತರುವಾಯ ವರದಿಯಾಗುವ ಘಟನೆಗಳ ನೋಂದಣಿಯನ್ನು ಮಾಡತಕ್ಕದ್ದಲ್ಲ. ಈ ಘಟನೆಗಳ ನೋಂದಣಿಗೆ ಸಂಬಂಧಿಸಿದಂತೆ ಅಗತ್ಯ ದಾಖಲೆಗಳೊಂದಿಗೆ ಗ್ರಾಮ ಆಡಳಿತ ಅಧಿಕಾರಿಗಳನ್ನು ಸಂಪರ್ಕಿಸಬೇಕಾಗಿರುವ ಹಿನ್ನೆಲೆಯಲ್ಲಿ ಕುರಿತಂತೆ ಸಾರ್ವಜನಿಕರಿಗೆ/ ಅರ್ಜಿದಾರರಿಗೆ ಮಾಹಿತಿಯನ್ನು ನೀಡುವುದು.
  2. 2.ಜನನ, ಮರಣ ಘಟನೆ ಸಂಭವಿಸಿದ 30 ದಿನಗಳ ನಂತರ ವರದಿಯಾಗುವ ಘಟನೆಗಳನ್ನು ಜನನ, ಮರಣ ನೋಂದಣಾಧಿಕಾರಿಗಳಾದ ಗ್ರಾಮ ಆಡಳಿತ ಅಧಿಕಾರಿಗಳು ನಿಯಮಾನುಸಾರ ಈ ಕೆಳಕಂಡಂತೆ ನೋಂದಣಿ ಮಾಡತಕ್ಕದ್ದು.
    a. ಕರ್ನಾಟಕ ಜನನ, ಮರಣ ನೋಂದಣಿ ನಿಯಮಗಳು 1999ರ ನಿಯಮ 9(2) ರ ಪ್ರಕಾರ 30 ದಿನಗಳ ತರುವಾಯ ಒಂದು ವರ್ಷದ ಒಳಗೆ ವರದಿಯಾಗುವ ಜನನ, ಮರಣ ಹಾಗೂ ನಿರ್ಜೀವ ಜನನಗಳನ್ನು ತಹಸೀಲ್ದಾರರ ಲಿಖಿತ ಅನುಮತಿಯೊಂದಿಗೆ ರೂ.5/- ತಡೆ ಶುಲ್ಕ ಪಡೆದು ನೋಂದಾಯಿಸುವುದು
    b. ಕರ್ನಾಟಕ ಜನನ, ಮರಣ ನೋಂದಣಿ ನಿಯಮಗಳು 1999ರ ನಿಯಮ 9(3) ರ ಪ್ರಕಾರ ಒಂದು ವರ್ಷದ ನಂತರ ವರದಿಯಾಗುವ ಜನನ, ಮರಣ ಘಟನೆಗಳಿಗೆ ವಿಳಂಬ ನೋಂದಣಿ ಮಾಡಲು ಮೊದಲನೇ ವರ್ಗದ ದಂಡಾಧಿಕಾರಿ ಅಥವಾ ಮಹಾ ಪ್ರಾಂತ ದಂಡಾಧಿಕಾರಿ (Presidency Magistrate) ರವರ ಆದೇಶದೊಂದಿಗೆ ರೂ.10/- ತಡೆ ಶುಲ್ಕ ಪಡೆದು ನೋಂದಾಯಿಸುವುದು.
    ಜನನ, ಮರಣ ನೋಂದಣಿ ಸಂಬಂಧ ಯಾವುದಾದರೂ ಸಂದೇಹ/ಸೃಷ್ಟಿಕರಣ ಅವಶ್ಯಕತೆ ಇದ್ದಲ್ಲಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಛೇರಿ ಹಾಗೂ ಜನನ, ಮರಣಗಳ ಮುಖ್ಯ ನೋಂದಣಾಧಿಕಾರಿಗಳ ಕಛೇರಿಯನ್ನು ಸಂಪರ್ಕಿಸುವುದು.

ಜನನ, ಮರಣ ಮತ್ತು ನಿರ್ಜೀವ ಜನನಗಳ ನೋಂದಣಿ ಮಾಡುವ ಸಂದರ್ಭದಲ್ಲಿ ಇ-ಜನ್ಮ ತಂತ್ರಾಂಶದಲ್ಲಿ ತಾಂತ್ರಿಕ ಸಮಸ್ಯೆಗಳು ಕಂಡು ಬಂದಲ್ಲಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿ ಅಥವಾ ಇ-ಜನ್ಮ ಸಹಾಯವಾಣಿ ಹಾಗೂ ಇ-ಮೇಲ್ crbdkar@gmail.com / ejanmahelpdesk@gmail.com ಮತ್ತು ದೂರವಾಣಿ 1800-425-6578 ಕ್ಕೆ ಸಂಪರ್ಕಿಸಬಹುದು ಎಂದು ಜನನ, ಮರಣಗಳ ಮುಖ್ಯ ನೋಂದಣಾಧಿಕಾರಿಗಳು ಹಾಗೂ ಅಪರ ನಿರ್ದೇಶಕರು ತಿಳಿಸಿದ್ದಾರೆ.

Exit mobile version