Site icon Vistara News

Birthday Flex | ತುಮಕೂರಲ್ಲಿ ಫ್ಲೆಕ್ಸ್ ಜಟಾಪಟಿ; ಕಾಂಗ್ರೆಸ್‌-ಜೆಡಿಎಸ್‌ ಕಾರ್ಯಕರ್ತರ ಗಲಾಟೆ

ಫ್ಲೆಕ್ಸ್‌ ಫೈಟ್‌

ತುಮಕೂರು: ಜೆಡಿಎಸ್ ಮಾಜಿ ಶಾಸಕ ಪಿ.ಆರ್. ಸುಧಾಕರ್ ಲಾಲ್‌ ಹಾಗೂ ಕಾಂಗ್ರೆಸ್‌ನ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್‌ ಬೆಂಬಲಿಗರ ನಡುವೆ ಕೊರಟಗೆರೆ ಪಟ್ಟಣದಲ್ಲಿ ಫ್ಲೆಕ್ಸ್‌ ವಿಚಾರಕ್ಕೆ (Birthday Flex) ಮಂಗಳವಾರ ರಾತ್ರಿ ಗಲಾಟೆಯಾಗಿದೆ.

ಗುರುವಾರ (ಆ.18) ಸುಧಾಕರ್ ಲಾಲ್ ಅವರ ಹುಟ್ಟುಹಬ್ಬ ಇತ್ತು. ಈ ಹಿನ್ನೆಲೆಯಲ್ಲಿ ಜೆಡಿಎಸ್‌ ಕಾರ್ಯಕರ್ತರು ಕೊರಟಗೆರೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸುಧಾಕರ್‌ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿರುವ ಫ್ಲೆಕ್ಸ್‌ ಅನ್ನು ಅಳವಡಿಸುತ್ತಿದ್ದರು. ಆದರೆ, ಈ ವೇಳೆ ರಸ್ತೆಯ ಫ್ಲೆಕ್ಸ್‌ ಹಾಕುವ ಜಾಗದಲ್ಲಿ ಈ ಹಿಂದೆ ಡಾ.ಜಿ. ಪರಮೇಶ್ವರ್‌ ಅವರ ಹುಟ್ಟುಹಬ್ಬಕ್ಕೆ ಹಾಕಿದ್ದ ಫ್ಲೆಕ್ಸ್‌ ತೆರವುಗೊಳಿಸುತ್ತಿದ್ದರು. ಇದೇ ಗಲಾಟೆಗೆ ಕಾರಣವಾಗಿದೆ.

ಫ್ಲೆಕ್ಸ್‌ ತೆರವು ವಿಚಾರ ತಿಳಿಯುತ್ತಿದ್ದಂತೆ ಕಾಂಗ್ರೆಸ್‌ ಕಾರ್ಯಕರ್ತರು ಸ್ಥಳಕ್ಕೆ ಬಂದು ಗಲಾಟೆ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಪರಮೇಶ್ವರ್‌ ಅವರ ಫ್ಲೆಕ್ಸ್‌ ತೆಗೆಯದಂತೆ ತಾಕೀತು ಮಾಡಿದ್ದಾರೆ. ಅಲ್ಲದೆ, ಪರಮೇಶ್ವರ್‌ ಅವರ ಜನ್ಮದಿನದ ಶುಭಾಶಯ ಕೋರುವ ಫ್ಲೆಕ್ಸ್‌ ಜತೆಗೆ, ಗೌರಿ ಗಣೇಶ್ ಹಬ್ಬದ ಶುಭಾಶಯ ಕೋರಿದ ಫ್ಲೆಕ್ಸ್ ಅನ್ನು ಸಹ ಹಾಕಲಾಗಿತ್ತು.‌ ಈ ಹಿನ್ನೆಲೆಯಲ್ಲಿ ಎರಡೂ ಪಕ್ಷದ ಕಾರ್ಯಕರ್ತರ ನಡುವೆ ಜಟಾಪಟಿ ಆರಂಭವಾಯಿತು.

ತೀವ್ರಗೊಂಡ ಗಲಾಟೆ

ಒಂದು ಹಂತದಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಗಲಾಟೆ ತೀವ್ರವಾಗಿ ಕೈ ಕೈ ಮಿಲಾಯಿಸುವ ಹಂತವನ್ನು ತಲುಪಿತ್ತು. ವಿಷಯ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದು, ಬಳಿಕ ಸುಧಾಕರ್‌ ಲಾಲ್‌ ಅವರ ಫ್ಲೆಕ್ಸ್‌ ಕಟ್ಟಿ ಜೆಡಿಎಸ್‌ ಕಾರ್ಯಕರ್ತರು ತೆರಳಿದ್ದಾರೆ.

ಇದನ್ನೂ ಓದಿ | Shivamogga Clash | ಸಾವರ್ಕರ್‌ ಫ್ಲೆಕ್ಸ್‌ ವಿವಾದ; ಹಣೆಗೆ ಇಟ್ಟ ತಿಲಕವೇ ಚಾಕು ಇರಿತಕ್ಕೆ ಕಾರಣವಾ?

Exit mobile version