ವಸಾಹತುಶಾಹಿ ಆಡಳಿತದ ಹಿಡಿತದಲ್ಲಿ ದೇಶ ನಲುಗುತ್ತಿದ್ದ ಕಾಲದಲ್ಲಿ ಮೈಸೂರು ನಾಡಿನ ಆಡಳಿತವನ್ನು ನಾಜೂಕಾಗಿ ನಿಭಾಯಿಸಿದ ಮಹಾರಾಜರುಗಳಲ್ಲಿ ಒಬ್ಬರು ಮುಮ್ಮಡಿ ಕೃಷ್ಣರಾಜ ಒಡೆಯರು.
1794ರ ಜುಲೈ 14ರಂದು ಜನಿಸಿದ ಮುಮ್ಮಡಿ ಕೃಷ್ಣರಾಜ ಒಡೆಯರು ಮೈಸೂರು ರಾಜ್ಯದ ಇತಿಹಾಸದಲ್ಲಿ ತುಂಬಾ ಕಷ್ಟಕರ ಸಂದರ್ಭದಲ್ಲಿ ಅಧಿಕಾರಕ್ಕೆ ಬಂದವರು. ಆಡಳಿತಾತ್ಮಕವಾಗಿ ಇವರ ಹೆಸರು ಅಷ್ಟಾಗಿ ಕೇಳಿಬರುವುದಿಲ್ಲ. ಆದರೆ ಸಾಹಿತ್ಯ ಕಲೆ ಸಂಸ್ಕೃತಿಗಳಿಗೆ ಇವರ ಕೊಡುಗೆ ಅಪಾರ. ಹೀಗಾಗಿ ಇವರನ್ನು ʻಕನ್ನಡದ ಭೋಜರಾಜʼ ಎಂದೂ ಕರೆಯಲಾಗುತ್ತದೆ.
ಬ್ರಿಟಿಷರೊಡನೆ 1799ರ ಎರಡನೇ ಮೈಸೂರು ಯುದ್ಧದಲ್ಲಿ ಟಿಪ್ಪೂವಿನ ಮರಣವಾಯಿತು. ನಂತರ ಮೈಸೂರು ರಾಜ್ಯದ ಆಡಳಿತವನ್ನು ಪುನಃ ಮೈಸೂರು ಅರಸು ಮನೆತನಕ್ಕೆ ವಹಿಸಬೇಕೆಂಬ ಒಪ್ಪಂದವಾಯಿತು. ಅದಕ್ಕೆ ತುಂಬಾ ಬಲವಾದ ವಿರೋಧಗಳೂ ಇದ್ದವು. ಮಹಾರಾಣಿ ಲಕ್ಷ್ಮಮ್ಮಣ್ಣಿಯವರ ಬುದ್ಧಿವಂತಿಕೆ, ಚಿಂತನೆಯಿಂದ ಒಪ್ಪಂದ ಕೈಗೂಡಿತು. ಮುಮ್ಮಡಿ ಕೃಷ್ಣರಾಜ ಒಡೆಯರ್ ಆಗ ಐದು ವರ್ಷದ ಬಾಲಕನಾಗಿದ್ದರು. ಇವರ ಪರವಾಗಿ ಮಹಾರಾಣಿಯವರು ಮತ್ತು ದಿವಾನ್ ಪೂರ್ಣಯ್ಯನವರು ಆಡಳಿತ ನಡೆಸಬೇಕೆಂದು ಒಪ್ಪಂದವಾಯಿತು. ಆಂತರಿಕ ಆಡಳಿತವನ್ನು ಮಾತ್ರ ಅರಸರು ನಿರ್ವಹಿಸುವುದು, ಉಳಿದ ಎಲ್ಲಾ ಹೊರ ವ್ಯವಹಾರಗಳೂ ಈಸ್ಟ್ ಇಂಡಿಯ ಕಂಪನಿ ಸರ್ಕಾರದವೆಂದು ಒಪ್ಪಂದವಾಯಿತು. ವಾರ್ಷಿಕವಾಗಿ ಕಂಪನಿ ಸರ್ಕಾರಕ್ಕೆ ಏಳು ಲಕ್ಷ ಪಗೋಡಾಗಳನ್ನು ಕಪ್ಪವಾಗಿ ಕೊಡಬೇಕಿತ್ತು. ಅರಮನೆಯ ಅಪಾರ ಐಶ್ವರ್ಯ ಬ್ರಿಟಿಷರ ಪಾಲಾಯಿತು.
ಇದನ್ನೂ ಓದಿ: Modi in Karnataka | ಮೈಸೂರು ಅರಮನೆಯಲ್ಲಿ ಮೋದಿ, ಇಲ್ಲಿವೆ ಸ್ಮರಣೀಯ ಚಿತ್ರಗಳು
ಮುಮ್ಮಡಿ ಕೃಷ್ಣರಾಜ ಒಡೆಯರ ವಿದ್ಯಾಭ್ಯಾಸ ಮತ್ತು ತರಬೇತಿಯನ್ನು ಮಹಾರಾಣಿ ಸಮರ್ಪಕವಾಗಿ ನಿರ್ವಹಿಸಿದರು. ಅವರು 1810ರಲ್ಲಿ ಮರಣಿಸಿದರು. ಪೂರ್ಣಯ್ಯನವರೂ ಕಾಲವಾದರು. ನಂತರ ಮುಮ್ಮಡಿ ಕೃಷ್ಣರಾಜ ಒಡೆಯರು ಹೆಚ್ಚು ಕಾಲ ಅಧಿಕಾರ ನಡೆಸಲು ಬ್ರಿಟಿಷ್ ಆಡಳಿತ ಅವಕಾಶ ಕೊಡಲಿಲ್ಲ. 1931ರಲ್ಲಿ, ಸರಿಯಾಗಿ ಕಪ್ಪ ಕೊಡಲಿಲ್ಲವೆಂಬ ನೆಪದಿಂದ ಆಗಿನ ಗೌರ್ನರ್ ಜನರಲ್ ವಿಲಿಯಂ ಬೆಂಟಿಂಕ್, ಲುಷಿಂಗ್ಟನ್ ಕಬ್ಬನ್ ಎಂಬ ಅಧಿಕಾರಿಯನ್ನು ಆಡಳಿತಾಧಿಕಾರಿಯಾಗಿ ಇವರ ಮೇಲೆ ನೇಮಿಸಿದ. ನಂತರ 27 ಮಾರ್ಚ್ 1868ರವರೆಗೆ, ಅಂದರೆ ಸಾವನ್ನಪ್ಪುವವರೆಗೂ ಒಡೆಯರ್ ಬ್ರಿಟಿಷ್ ಕಣ್ಗಾವಲಲ್ಲಿ ಆಡಳಿತ ನಡೆಸಿದರು.
ತಮಗಿದ್ದ ಅತ್ಯಂತ ಸೀಮಿತ ಅವಕಾಶದಲ್ಲಿಯೇ ಮುಮ್ಮಡಿ ಕೃಷ್ಣರಾಜರು ಒಳ್ಳೆಯ ಆಡಳಿತ ನಡೆಸಿದರು. ಅವರ ಕಾಲದಲ್ಲಿಯೇ ಮೈಸೂರು ನಗರದಲ್ಲಿ ಸಾರ್ವಜನಿಕ ಉಚಿತ ವೈದ್ಯಶಾಲೆಗಳು ಆರಂಭವಾದವು. ಆಂಗ್ಲ ವಿದ್ಯಾಭ್ಯಾಸಕ್ಕಾಗಿ ಶಾಲೆಗಳು ಆರಂಭವಾದವು. ಶಿವನಸಮುದ್ರದ ಬಳಿ ಕಾವೇರಿ ನದಿಗೆ ಸೇತುವೆ ನಿರ್ಮಾಣವಾಯಿತು. ಸಾಹಿತ್ಯಕ್ಷೇತ್ರಕ್ಕೆ ಅವರ ಸೇವೆ ಗಣನೀಯವಾಗಿತ್ತು. ತತ್ವನಿಧಿ, ಗಣಿತ ಸಂಗ್ರಹ, ಸೌಗಂಧಿಕಾ ಪರಿಣಯ, ಸೂರ್ಯ ಚಂದ್ರವಂಶಾವಳಿ, ಶ್ರೀ ಚಾಮುಂಡಿಕಾ ಲಘು ನಿಘಂಟು, ಕೃಷ್ಣ ಕಥಾ ಸಾರ ಸಂಗ್ರಹ, ಚತುರಂಗ ಸಾರ ಸರ್ವಸ್ವ, ದೇವತಾನಾಮ ಕುಸುಮ ಮಂಜರಿ, ದಶವಿಭಾಗ ಪದಕ, ಮಹಾ ಕೋಶ ಸುಧಾಕರ, ಸಂಖ್ಯರತ್ನ ಕೋಶ, ಸ್ವರ ಚೂಡಾಮಣಿ ಮೊದಲಾದ ಕೃತಿಗಳನ್ನು ಇವರು ರಚಿಸಿದರು. ಹೊಸಗನ್ನಡದ ಮೊದಲ ಗದ್ಯ ಗ್ರಂಥವೆಂದು ಮನ್ನಣೆಗೆ ಪಾತ್ರವಾಗಿರುವ ʻಮುದ್ರಾ ಮಂಜೂಷ’ ಕೃತಿಯ ಕರ್ತೃ ಕೆಂಪುನಾರಾಯಣನು ಮುಮ್ಮಡಿ ಕೃಷ್ಣರಾಜರ ಆಶ್ರಿತನಾಗಿದ್ದನು.
ಇದನ್ನೂ ಓದಿ: ನಾಲ್ವಡಿ ಕೃಷ್ಣರಾಜ ಒಡೆಯರ್: ಮರೆಯಲಾಗದ ಮೈಸೂರಿನ ಮಹಾರಾಜ