Site icon Vistara News

Bit Coin Scam : ಬಿಟ್‌ ಕಾಯಿನ್‌ ಹಗರಣದಲ್ಲಿ ಶಾಮೀಲು; ಇನ್ಸ್‌ಪೆಕ್ಟರ್‌, ಸೈಬರ್‌ ಎಕ್ಸ್‌ಪರ್ಟ್‌ ಬಂಧನ

Bit Coin Arrest

ಬೆಂಗಳೂರು: ರಾಜ್ಯಾದ್ಯಂತ ಭಾರಿ ಸದ್ದು ಮಾಡಿದ್ದ, ಹಲವಾರು ರಾಜಕಾರಣಿಗಳು ಕೂಡಾ ಶಾಮೀಲಾಗಿದ್ದಾರೆ ಎನ್ನಲಾದ ಬಿಟ್‌ ಕಾಯಿನ್‌ ಹಗರಣಕ್ಕೆ (Bit Coin Scam) ಸಂಬಂಧಿಸಿ ಇದೀಗ ಈ ಪ್ರಕರಣದಲ್ಲಿ ತನಿಖಾಧಿಕಾರಿಯಾಗಿದ್ದ ಪೊಲೀಸ್‌ ಅಧಿಕಾರಿ (Police Inspector arrest) ಮತ್ತು ಒಬ್ಬ ಸೈಬರ್‌ ಎಕ್ಸ್‌ ಪರ್ಟ್‌ನನ್ನು (Cyber Expert arrest) ವಿಶೇಷ ತನಿಖಾ ತಂಡ (Special Investigation Team-SIT) ಬಂಧಿಸಿದೆ.

ಬಂಧಿತರನ್ನು ಪೊಲೀಸ್ ಅಧಿಕಾರಿ ಪ್ರಶಾಂತಬಾಬು ಹಾಗು ಸೈಬರ್ ಎಕ್ಸಪರ್ಟ್ ಸಂತೋಷ್ ಎಂದು ಗುರುತಿಸಲಾಗಿದೆ. ಇವರನ್ನು ಬುಧವಾರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಕೊನೆಗೆ ಬಂಧನಕ್ಕೆ ಒಳಪಡಿಸಿದ್ದಾರೆ. ಬಿಜೆಪಿ ‌ ಆಡಳಿತ ಅವಧಿಯಲ್ಲಿ ಬಯಲಾದ ಈ ಪ್ರಕರಣವನ್ನು ಆರಂಭದಲ್ಲಿ ಸಿಸಿಬಿ ತನಿಖೆ ನಡೆಸಿತ್ತು. ಆದರೆ, ಅದರ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದ ಕಾಂಗ್ರೆಸ್‌ ಬಳಿಕ ತಾನು ಅಧಿಕಾರಕ್ಕೆ ಬಂದಾಗ ಎಸ್‌ಐಟಿ ತನಿಖೆಗೆ ಒಪ್ಪಿಸಿತ್ತು. ಎಸ್‌ಐಟಿ ತನಿಖೆ ಆರಂಭಗೊಂಡು ಆರು ತಿಂಗಳು ಕಳೆದಿದ್ದು, ಇದೇ ಮೊದಲ ಬಾರಿ ಅಧಿಕಾರಿಗಳ ಬಂಧನ ನಡೆದಿದೆ.

ಶ್ರೀಕಿ ಅಲಿಯಾಸ್‌ ಶ್ರೀಕೃಷ್ಣ ಪ್ರಧಾನ ಸೂತ್ರಧಾರನಾಗಿರುವ ಈ ಹಗರಣದಲ್ಲಿ ಸಾವಿರಾರು ಕೋಟಿ ರೂ ಹಗರಣ ನಡೆದಿದೆ ಎಂದು ಕಾಂಗ್ರೆಸ್‌ ಆರೋಪ ಮಾಡಿತ್ತು. ಆದರೆ, ಇದುವರೆಗೆ ಬಯಲಾಗಿರುವುದು ಕೇವಲ ಮೂರುವರೆ ಲಕ್ಷ ರೂಪಾಯಿ ಮೌಲ್ಯದ ಬಿಟ್ ಕಾಯಿನ್ ವರ್ಗಾವಣೆ ಮಾಹಿತಿ ಎಂದು ಹೇಳಲಾಗಿದೆ.

ಐವರು ಇನ್‌ಸ್ಟೆಕ್ಟರ್‌ಗಳ ವಿರುದ್ಧ ಎಫ್ಐಆರ್ ದಾಖಲು

ಬಿಗ್‌ ಕಾಯಿನ್‌ ಹಗರಣದಲ್ಲಿ ಶ್ರೀಕಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ಆತ ನೀಡಿದ ಮಾಹಿತಿಯು ಆಧಾರದಲ್ಲಿ ಮುಂದಿನ ತನಿಖೆ ನಡೆಯುತ್ತಿದೆ. ಈಗ ತನಿಖೆ ನಡೆಸುತ್ತಿರುವ ಎಸ್‌ಐಟಿ ಐವರು ಪೊಲೀಸ್‌ ಇನ್ಸ್‌ ಪೆಕ್ಟರ್‌ಗಳ ಮೇಲೆ ಎಫ್‌ಐಆರ್‌ ದಾಖಲಿಸಿಕೊಂಡಿದೆ. ಐವರಲ್ಲಿ ಮೂವರಿಗೆ ನೋಟಿಸ್‌ ನೀಡಿದ್ದರೆ, ಇಬ್ಬರನ್ನು ವಿಚಾರಣೆಗೆ ಕರೆದು ಬಂಧಿಸಿದೆ.

ಈ ಅಧಿಕಾರಿಗಳ ಮಾಡಿದ ತಪ್ಪೇನು?

ಈಗ ಎಫ್‌ಐಆರ್‌ಗೆ ಒಳಗಾಗಿರುವ ಪೊಲೀಸ್‌ ಅಧಿಕಾರಿಗಳು ಹಿಂದಿನ ಸಿಸಿಬಿ ತನಿಖಾ ತಂಡದಲ್ಲಿ ಇದ್ದವರು. ಇವರು ಹಗರಣದ ಆರೋಪಿಗಳ ಜತೆ ಸೇರಿಕೊಂಡು ತಾವೇ ಕಳ್ಳಾಟ ಆಡಿದ್ದಾರೆ ಎಂಬ ಗಂಭೀರ ಆರೋಪವಿದೆ. ಎಸ್‌ಐಟಿ ನಡೆಸಿದ ತನಿಖೆ ವೇಳೆ ಇದು ಬಯಲಾದ ಹಿನ್ನೆಲೆಯಲ್ಲಿ ಅವರನ್ನೇ ವಿಚಾರಣೆಗೆ ಒಳಪಡಿಸಲಾಗಿದೆ.

ಬಿಟ್‌ ಕಾಯಿನ್‌ ಹಗರಣದಲ್ಲಿ ಶ್ರೀಕಿ ಹಾಗೂ ರಾಬಿನ್ ನನ್ನು ವಿಚಾರಣಗೊಳಪಡಿಸಿದ್ದ ಸಿಸಿಬಿ ಪೊಲೀಸರು ಅವರ ಕೈಯಲ್ಲೇ ಹ್ಯಾಕಿಂಗ್‌ ಮಾಡಿಸಿದ್ದಾರೆ ಎಂಬ ಆರೋಪವಿದೆ. ಶ್ರೀಕಿ ಹಾಗೂ ರಾಬಿನ್ ನನ್ನ ಅಕ್ರಮ ಬಂಧನದಲ್ಲಿಟ್ಟಿದ್ದ ಅಧಿಕಾರಿಗಳು ಅವರ ಮೂಲಕ ಬಿಟ್ ಕಾಯಿನ್ ಹ್ಯಾಕ್ ಮಾಡಿಸಲು ಪ್ಲ್ಯಾನ್‌ ಮಾಡಿದ್ದರು.

ಶ್ರೀಕಿ ಹಾಗೂ ರಾಬಿನ್ ಕಸ್ಟಡಿಯಲ್ಲಿದ್ದ 90 ದಿನಗಳಲ್ಲಿ ಸಿಸಿಬಿ ಅಧಿಕಾರಿಗಳು ನಾನಾ ದೇಶಗಳ ಬಿಟ್ ಕಾಯಿನ್ ಹ್ಯಾಕ್ ಮಾಡೋ ಪ್ಲ್ಯಾನ್‌ ಮಾಡಿದ್ದರು ಎನ್ನಲಾಗಿದೆ. ನೆದರ್ಲ್ಯಾಂಡ್ಸ್, ಸ್ಪೇನ್, ಸಿಂಗಪುರ ದೇಶಗಳ ಬಿಟ್ ಕಾಯಿನ್ ಹ್ಯಾಕ್ ಮಾಡಲಾಗಿತ್ತು ಎನ್ನಲಾಗಿದೆ.

ಅಧಿಕಾರಿಗಳು ಮಾಡಿದ ಖತರ್ನಾಕ್‌ ಕೆಲಸವೇನು?

ಬಿಟ್ ಕಾಯಿನ್ ಹ್ಯಾಕ್ ಮಾಡಲು ಸಿಸಿಬಿ ಅಧಿಕಾರಿಗಳೇ ಹೊಸ ಲ್ಯಾಪ್‌ಟಾಪ್ ಖರೀದಿ ಮಾಡಿದ್ದರು. ಬಿಟ್ ಕಾಯಿನ್ ಹ್ಯಾಕ್ ಮಾಡಿದ ನಂತರ ವಿತ್ ಡ್ರಾ ವಾಲೆಟ್ ಗೆ ಅದನ್ನು ವರ್ಗಾವಣೆ ಮಾಡಿದ್ದರು ಎನ್ನಲಾಗಿದೆ.

ಗುಜರಾತ್ ಗೆ ತೆರಳಿ ಹಾರ್ಡ್‌ವೇರ್ ವ್ಯಾಲೆಟ್‌ ಖರೀದಿ ಮಾಡಿದ್ದ ಅಧಿಕಾರಿಗಳು ಹ್ಯಾಕಿಂಗ್ ಮಾಡಿದ ನಂತರ ಟೂಲ್ ಅಂಡ್ ಡೆಸ್ಟ್ರಾಯ್ ಆ್ಯಪ್ ಬಳಸಿ ಡಿಲಿಟ್ ಮಾಡಿದ್ದರು ಎಂಬ ಬಗ್ಗೆ ಎಸ್ಐಟಿ ಟೀಂ ಮಾಹಿತಿ ಕಲೆ ಹಾಕಿದೆ. ಇದೇ ಹಿನ್ನೆಲೆ ಎಫ್ಐ ಆರ್ ದಾಖಲು ಮಾಡಿದೆ.

ಇದನ್ನೂ ಓದಿ: Bitcoin Scam : ಬಿಟ್‌ ಕಾಯಿನ್‌ ತನಿಖೆ ನಡೆಸಿದ್ದ ಇನ್ಸ್‌ಪೆಕ್ಟರ್‌ಗಳ ಮನೆಗೆ ಎಸ್‌ಐಟಿ ದಾಳಿ

ಬಿಟ್‌ ಕಾಯಿನ್‌ ಹಗರಣ ನಡೆದು ಬಂದ ಹಾದಿ

  1. 2020ರಲ್ಲಿ ಕೆಂಪೇಗೌಡ ನಗರ ಪೊಲೀಸರು ಡ್ರಗ್ಸ್ ಪ್ರಕರಣದಲ್ಲಿ ಆರೋಪಿ ಸುಜಯ್ ಎಂಬಾತನನ್ನು ಬಂಧಿಸಿದ್ದರು.
  2. ಈತ ಡಾರ್ಕ್ ನೆಟ್ ನಲ್ಲಿ ಬಿಟ್ ಕಾಯಿನ್ ಮೂಲಕ ಡ್ರಗ್ಸ್ ಖರೀದಿ ಮಾಡಿದ್ದ ಮಾಹಿತಿ ಪಡೆದು ಜಾಲಾಡಿದಾಗ ಬಿಟ್‌ ಕಾಯಿನ್‌ ರೂವಾರಿ ಶ್ರೀಕೃಷ್ಣ ಆಲಿಯಾಸ್ ಶ್ರೀಕಿ ಸಿಕ್ಕಿಬಿದ್ದಿದ್ದ.
  3. ಶ್ರೀಕಿ ಆ್ಯಂಡ್ ಗ್ಯಾಂಗ್‌ ಸರ್ಕಾರಿ ವೆಬ್ ಸೈಟ್ ಸೇರಿದಂತೆ ಆನ್ ಲೈನ್ ಗೇಮಿಂಗ್ ಆ್ಯಪ್ ಗಳನ್ನು ಹ್ಯಾಕ್‌ ಮಾಡಿ ಕೋಟ್ಯಂತರ ರೂಪಾಯಿ ದೋಚಿದ್ದ.
  4. ಅಕ್ರಮ ಸಂಪಾದನೆ ಮಾಡಿರುವ ಬಗ್ಗೆ ಹೊರಬಂದ ಬೆನ್ನಲೇ‌ ಪ್ರಕರಣವನ್ನ ಸಿಸಿಬಿಗೆ ಹಸ್ತಾಂತರಿಸಲಾಗಿತ್ತು. ಸಿಸಿಬಿ ತನಿಖೆ ವೇಳೆ ದೊಡ್ಡ ಪ್ರಮಾಣದಲ್ಲಿ ವಂಚಿಸಿರುವುದಾಗಿ ತಿಳಿದುಬಂದಿತ್ತು.
  5. ಪ್ರಕರಣದ ಹಿಂದೆ ಹಿಂದಿನ ಸರ್ಕಾರದ ಕೆಲ ರಾಜಕಾರಣಿಗಳು ಶಾಮೀಲಾಗಿದ್ದಾರೆ ಎಂದು ಪ್ರತಿಪಕ್ಷವಾಗಿದ್ದ ಕಾಂಗ್ರೆಸ್ ಆರೋಪಿಸಿತ್ತು.
  6. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಬಿಟ್ ಕಾಯಿನ್ ಪ್ರಕರಣವನ್ನ ಮರುತನಿಖೆ ನಡೆಸಲು ಕಳೆದ ವರ್ಷ ಜುಲೈನಲ್ಲಿ ಎಸ್ಐಟಿ ರಚಿಸಿತ್ತು.
  7. ಹಿರಿಯ ಐಪಿಎಸ್ ಮನೀಶ್‌ ಕರ್ಬೀಕರ್ ನೇತೃತ್ವದ ತಂಡ ಶ್ರೀಕಿ ಸೇರಿದಂತೆ‌ ಇನ್ನಿತರ ಆರೋಪಿಗಳ ವಿಚಾರಣೆ ನಡೆಸಿತ್ತು ಹಾಗೂ ಆಗ ತನಿಖೆ ನಡೆಸಿದ್ದ ಸಿಸಿಬಿ ಪೊಲೀಸರನ್ನ ವಿಚಾರಣೆ ನಡೆಸಿ ಹೇಳಿಕೆ ಪಡೆದುಕೊಂಡಿತ್ತು.
  8. ಸದ್ಯ ವಶಕ್ಕೆ ಪಡೆದ ಐವರು ಪ್ರಕರಣ ಉದ್ದೇಶಪೂರ್ವಕವಾಗಿ ಸಾಕ್ಷ್ಯ ನಾಶಪಡಿಸಿರುವ ಬಗ್ಗೆ ಮಾಹಿತಿ ಇದ್ದು ಅವರಲ್ಲಿ ಇಬ್ಬರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗುತ್ತಿದೆ.

Exit mobile version