Site icon Vistara News

ರಾಜೀವ್‌ ಹಂತಕರ ಜತೆ ಸಿದ್ದರಾಮಯ್ಯ ಸಖ್ಯ? ರಾಹುಲ್‌ ಗಾಂಧಿಯವರೇ ಗಮನಿಸಿ ಎಂದ ಬಿಜೆಪಿ

ಸಿದ್ದರಾಮಯ್ಯ

ಬೆಂಗಳೂರು: ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರು ಬುಧವಾರ ದಾವಣಗೆರೆಯಲ್ಲಿ ನಡೆಯುವ ಹುಟ್ಟುಹಬ್ಬದ ಅಮೃತ ಮಹೋತ್ಸವ-ಸಿದ್ದರಾಮೋತ್ಸವಕ್ಕೆ ಅಣಿಯಾಗುತ್ತಿರುವಂತೆಯೇ ಬಿಜೆಪಿ ಅವರ ಮೇಲೆ ಗಂಭೀರ ಆರೋಪಗಳನ್ನು ಮಾಡಿದೆ. ಸಿದ್ದರಾಮಯ್ಯ ಅವರು ರಾಜೀವ್‌ ಗಾಂಧಿ ಅವರನ್ನು ಕೊಲೆ ಮಾಡಿದವರ ಜತೆ ಸಖ್ಯ ಬೆಳೆಸುತ್ತಿದ್ದಾರೆ ಎಂದು ಆರೋಪಿಸಿದೆ.

ಶಾಸಕ ಪಿ. ರಾಜೀವ್‌ ಮತ್ತು ಚಲವಾದಿ ನಾರಾಯಣ ಸ್ವಾಮಿ ಅವರು ಮಂಗಳವಾರ ಬಿಜೆಪಿ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಹಲವು ಗಂಭೀರ ಆರೋಪಗಳನ್ನು ಮಾಡಿದ್ದು, ಸಿದ್ದರಾಮಯ್ಯ ಅವರ ನಡೆಗಳ ಮೇಲೆ ಕಣ್ಣಿಡುವಂತೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೂ ಮನವಿ ಮಾಡಿದೆ.

ಏನಿದು ರಾಜೀವ್‌ ಹಂತಕರ ಜತೆ ಸಖ್ಯ?
ಸಿದ್ದರಾಮಯ್ಯ ಅವರಿಗೆ ಇತ್ತೀಚೆಗೆ ತಮಿಳುನಾಡಿನ ಚೆನ್ನೈನಲ್ಲಿ ಆಯೋಜಿಸಲಾದ ಒಂದು ಕಾರ್ಯಕ್ರಮದಲ್ಲಿ ಅಂಬೇಡ್ಕರ್‌ ಅವರ ಹೆಸರಿನಲ್ಲಿ ನೀಡುವ ಪ್ರಶಸ್ತಿಯನ್ನು ಸ್ವೀಕರಿಸಿದ್ದರು. ಈ ಕಾರ್ಯಕ್ರಮವನ್ನು ವಿಡುದಲೈ ಚಿರುತೈಗಳ್ವಿ‌ ಕಚ್ಚಿ (ವಿಸಿಕೆ ಪಕ್ಷ) ಆಯೋಜಿಸಿತ್ತು. ಡಿ. ರವಿಕುಮಾರ್‌ ಈಗ ಇದರ ಪ್ರಧಾನ ಕಾರ್ಯದರ್ಶಿ.

ಸಿದ್ದರಾಮಯ್ಯ ಅವರು ಈ ಪಕ್ಷದ ಆಹ್ವಾನವನ್ನು ಮನ್ನಿಸಿ, ಸಮಾರಂಭದಲ್ಲಿ ಭಾಗವಹಿಸಿ, ಪ್ರಶಸ್ತಿಯನ್ನು ಸ್ವೀಕರಿಸಿದ್ದು ಅವರು ರಾಜೀವ್‌ ಗಾಂಧಿ ಹಂತರ ಜತೆ ಸಖ್ಯ ಬೆಳೆಸುತ್ತಿರುವುದರ ಸೂಚನೆ ಎಂದು ಬಿಜೆಪಿ ಆರೋಪಿಸಿದೆ.

೧೯೯೧ರಲ್ಲಿ ರಾಜೀವ್‌ ಗಾಂಧಿ ಅವರನ್ನು ಹತ್ಯೆ ಮಾಡಿದವರನ್ನು ಬಿಡುಗಡೆ ಮಾಡಬೇಕು ಎಂದು ವಿಸಿಕೆ ಪಕ್ಷ ಒತ್ತಾಯ ಮಾಡಿತ್ತು. ಇಂಥ ಪಕ್ಷ ಕೊಟ್ಟಿರುವ ಪ್ರಶಸ್ತಿಯನ್ನು ಸಿದ್ದರಾಮಯ್ಯ ಸ್ವೀಕಾರ ಮಾಡಿದ್ದಾರೆ. ನಿಜವಾಗಿಯೂ ಅವರಿಗೆ ಗಾಂಧಿ ಕುಟುಂಬದ ಬಗ್ಗೆ ಗೌರವ ಇದ್ದಿದ್ದರೆ ಆ ಪ್ರಶಸ್ತಿಯನ್ನು ನಿರಾಕರಿಸಬೇಕಿತ್ತು ಎಂದು ಹೇಳಿರುವ ಬಿಜೆಪಿ ನಾಯಕರಾದ ಪಿ. ರಾಜೀವ್‌ ಮತ್ತು ಚಲವಾದಿ ನಾರಾಯಣಸ್ವಾಮಿ ಅವರು, ʻʻನಿಮ್ಮ ತಂದೆಯವರನ್ನು ಹತ್ಯೆ ಮಾಡಿದವರ ಜೊತೆ ಸಿದ್ದರಾಮಯ್ಯನವರ ಸಹಾನುಭೂತಿಯನ್ನು ನೀವು ಒಪ್ತಿರಾ?ʼʼ ಎಂದು ರಾಹುಲ್‌ ಗಾಂಧಿ ಅವರನ್ನು ಪ್ರಶ್ನಿಸಿದೆ.

ರಾಹುಲ್‌ ಅವರನ್ನೇ ಪ್ರಶ್ನಿಸ್ತೀವಿ
ಸಿದ್ದರಾಮಯ್ಯ ಅವರ ಹುಟ್ಟುಹಬ್ಬದ ಸಮಾರಂಭದಲ್ಲಿ ಭಾವಹಿಸಲು ಬರುತ್ತಿರುವ ರಾಹುಲ್‌ ಗಾಂಧಿ ಅವರನ್ನೇ ಬಿಜೆಪಿ ಪ್ರಶ್ನಿಸಲಿದೆ ಎಂದು ರಾಜೀವ್‌ ಮತ್ತು ನಾರಾಯಣ ಸ್ವಾಮಿ ಹೇಳಿದ್ದಾರೆ.

ʻʻಕರ್ನಾಟಕಕ್ಕೆ ಆಗಮಿಸುತ್ತಿರುವ ರಾಹುಲ್ ಗಾಂಧಿಯನ್ನು ಬಿಜೆಪಿ ಪ್ರಶ್ನೆ ಮಾಡ್ತೀವಿ, ನಿಮ್ಮ ತಂದೆ ಹತ್ಯೆ ಮಾಡಿದವರನ್ನು ಬೆಂಬಲಿಸುವ ವಿಸಿಕೆ ಪಕ್ಷದ ಪ್ರಶಸ್ತಿ ಪಡೆದ ಸಿದ್ದರಾಮಯ್ಯ ಅವರ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಎಲ್‌ಟಿಟಿಇ ಬೆಂಬಲಿಸೋ‌ ವಿಸಿಕೆ ಪಕ್ಷವನ್ನು ಬೆಂಬಲಿಸುವ ಸಿದ್ದರಾಮಯ್ಯ ನಡೆ ಗಾಂಧಿ ಕುಟುಂಬಕ್ಕೆ ಅವಮಾನ ಮಾಡಿದಂತೆ ಆಗಲ್ವಾʼʼ ಎಂದು ಪ್ರಶ್ನಿಸುವುದಾಗಿ ಹೇಳಿರುವ ಈ ಇಬ್ಬರು ನಾಯಕರು, ʻʻಸಿದ್ದರಾಮಯ್ಯ ಅವರಿಗೆ ಯಾವ ಸಿದ್ಧಾಂತವೂ ಇಲ್ಲ. ಅಧಿಕಾರಕ್ಕೆ ಏನು ಬೇಕಾದ್ರೂ ಮಾಡುತ್ತಾರೆ. ಸಮಾಜವಾದಿಯಾಗಿದ್ದರೂ ಯೂಬ್ಲೆಟ್ ವಾಚ್ ಕೂಡಾ ಕಟ್ತಾರೆ” ಎಂದು ಹೇಳಿದರು.

ಎಲ್ಲರ ಮೂಲೆ ಗುಂಪು

ʻʻಕಾಂಗ್ರೆಸ್ ಪಕ್ಷದಲ್ಲಿ ಒಂದು ನಿಯಮ ಇದೆ. ಯಾರು ಕೆಪಿಸಿಸಿ ಅಧ್ಯಕ್ಷರಾಗಿರುತ್ತಾರೋ ಪಕ್ಷ ಅಧಿಕಾರಕ್ಕೆ ಬಂದಾಗ ಅವರನ್ನು ಸಿಎಂ ಮಾಡಲಾಗುತ್ತದೆ. ಈ ನಿಯಮ ತನಗೆ ಮುಳ್ಳಾಗಬಹುದು ಅಂತ ಪರಮೇಶ್ವರ್ ಅವರನ್ನೇ ಸಿದ್ದರಾಮಯ್ಯ ಚುನಾವಣೆಯಲ್ಲಿ ಸೋಲಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಮೂಲೆಗುಂಪು ಮಾಡಿದರುʼʼ ಎಂದು ಆರೋಪಿಸಿದರು.

ಡಿಕೆಶಿಗೆ ಖೆಡ್ಡಾ ತೋಡಲೆಂದು ಸಿದ್ದರಾಮೋತ್ಸವ

ಈಗ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ. ಶಿವಕುಮಾರ್‌ ಅವರಿಗೆ ಖೆಡ್ಡಾ ತೋಡಲೆಂದೇ ಸಿದ್ದರಾಮೋತ್ಸವ ಮಾಡಲಾಗುತ್ತಿದೆ. ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಇವತ್ತು ಯಾವ ದಾರುಣ ಪರಿಸ್ಥಿತಿಗೆ ಬಂದಿದೆ ಅಂದ್ರೆ ಸ್ವತಃ ‌ ಸಿದ್ದರಾಮಯ್ಯ ಅವರ ವ್ಯಕ್ತಿ ಪೂಜೆ ಆಗುತ್ತಿರುವುದನ್ನು ನೋಡಿಯೂ ಕಣ್ಮುಚ್ಚಿ ಕುಳಿತಿದೆ. ಸಿದ್ದರಾಮೋತ್ಸವ ಕಾಂಗ್ರೆಸ್ ಹಾಗೂ ಡಿಕೆಶಿಗೆ ಮಗ್ಗುಲ ಮುಳ್ಳಾಗಲಿದೆ. ಸಿದ್ದರಾಮೋತ್ಸವ ಬಳಿಕ ಕಾಂಗ್ರೆಸ್ ಸಂಪೂರ್ಣ ಸರ್ವನಾಶವಾಗಲಿದೆ ಎಂದು ರಾಜೀವ್‌ ಮತ್ತು ನಾರಾಯಣಸ್ವಾಮಿ ಹೇಳಿದರು.

ಇದನ್ನೂ ಓದಿ| ಸಿದ್ದರಾಮೋತ್ಸವದಲ್ಲಿ ಡಿ.ಕೆ. ಶಿವಕುಮಾರ್‌ ಮಾಡಬೇಕಿದ್ದ ಭಾಷಣ ಲೀಕ್‌: ಸಿದ್ದುಗೆ ಹೇಳಿದರೇ ಬುದ್ಧಿ?

Exit mobile version