ಬೆಂಗಳೂರು: ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಸರಳ ಬಹುಮತ ಪಡೆಯುವುದಿಲ್ಲ ಎನ್ನುವುದು ಅವರಿಗೆ ಖಾತ್ರಿಯಾಗಿದ್ದು, ಜೆಡಿಎಸ್ ಪಕ್ಷವನ್ನು ತಮ್ಮ ವಿಶ್ವಾಸಕ್ಕೆ ಪಡೆದುಕೊಳ್ಳುವುದು ಹೇಗೆ ಎಂದು ಸ್ಪರ್ಧೆ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಕಾಂಗ್ರೆಸ್, ಬಿಜೆಪಿ ನಾಯಕರು ಒಳ ಒಪ್ಪಂದ ಅಂತಾ ಪದೇ ಪದೇ ಹೇಳಬೇಡಿ. ಇದಕ್ಕೆ ಒಂದು ಫುಲ್ ಸ್ಟಾಪ್ ಇಡಿ. ನಿನ್ನೆ ಸಿಎಂ, ಸಿದ್ದರಾಮಯ್ಯ ಎಲ್ಲರೂ ಇದೇ ಪದ ಬಳಸಿ ಮಾತಾಡಿದ್ದಾರೆ. ನಿಮಗಿಬ್ಬರಿಗೂ ಬೇರೆ ವಿಷಯಗಳೇ ಇಲ್ವಾ ಮಾತಾಡೋಕೆ? ಈ ಇಬ್ಬರಿಗೂ ಸ್ಪಷ್ಟವಾಗಿ ಬಹುಮತ ಬರ್ತೀವಿ ಅನ್ನೋ ನಂಬಿಕೆ ಇಲ್ಲ. ಈ ಇಬ್ಬರಿಗೂ ಜೆಡಿಎಸ್ ಬಗ್ಗೆ ಆತಂಕ. ನಾವು 123 ಗುರಿ ತಲುಪುತ್ತೇವೆ. ಇದು ಕೆಲವರಿಗೆ ಹಾಸ್ಯವಾಗಿ ಕಾಣಬಹುದು. ಆದರೆ ನಾನು ಕಳೆದ ಕೆಲವು ದಿನಗಳಿಂದ ಜೆಡಿ ಎಸ್ ಕಾರ್ಯಕ್ರಮಗಳಲ್ಲಿ ಜನರ ಭಾಗವಹಿಸುವಿಕೆ ನೋಡಿ ಹೇಳ್ತಾ ಇದ್ದೇನೆ.
ಜೆಡಿಎಸ್‌ನವ್ರು ಎಲ್ಲಿ ಬಿಜೆಪಿ ಜೊತೆ ಹೋಗ್ತಾರೆ ಅಂತ ಕಾಂಗ್ರೆಸ್‌ನವರಿಗೆ, ಕಾಂಗ್ರೆಸ್ ಜೊತೆ ಎಲ್ಲಿ ಹೋಗ್ತಾರೆ ಅಂತ ಬಿಜೆಪಿಯವರಿಗೆ ಆತಂಕ. ಹೀಗಾಗಿ ಪದೇ ಪದೆ ನಮ್ಮನ್ನ ಕೆಣಕುತ್ತಾರೆ. ನಾನು ಈ ಬಾರಿ 123 ಗುರಿಯಿಟ್ಟು ಹೊರಟಿದ್ದೇನೆ. ಇದು ನಿಮಗೆ ಹಾಸ್ಯವಾಗಿ ಲಘುವಾಗಿ ಕಾಣಬಹದು. ಈಗಾಗಲೇ ನೂರಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಹಳ್ಳಿ ಹಳ್ಳಿಗೆ ತಲುಪಿದ್ದೇನೆ. ಜನತಾ ಜಲಧಾರೆ, ಪಂಚರತ್ನ ಸಮಾರೋಪ ಯಶಸ್ವಿಯಾಗಿದೆ.
ನಿನ್ನೆ ನೋಡಿದೆ ನಾಲ್ಕೈದು ಸರ್ವೆ ರಿಪೋರ್ಟ್‌ಗಳನ್ನ. ನನಗೆ ಆ ಸರ್ವೇಗಳ ಬಗ್ಗೆ ಆತಂಕವಿಲ್ಲ. ಅದೇ ಸಿ ವೋಟರ್ ಹಿಂದೆ ಕಾಂಗ್ರೆಸ್ 120 ಅಂತ ಹೇಳಿತ್ತು, ಕಾಂಗ್ರೆಸ್ ಗೆಲ್ತಾ? ರಾಷ್ಟ್ರೀಯ ಪಕ್ಷಗಳು ತಮ್ಮ ತಂತ್ರಗಾರಿಕೆಗಾಗಿ ಯಾವುದೋ ಕಂಪನಿ ಹೆಸರಾಕಿ ಸರ್ವೆ ರಿಪೋರ್ಟ್ ಅಂತ ಬಿಡುಗಡೆ ಮಾಡುಸ್ತಾರೆ. ನಾನು ಕೂಡ ನಾಳೆ ದುಡ್ಡು ಕೊಟ್ಟು ಈ ರೀತಿ ಮಾಡಿ ಅಂತ ಹೇಳಬಹದು.
ಪದೇ ಪದೇ ಒಳ ಒಪ್ಪಂದ ಅಂತ ಹೇಳಿಕೆ ನೀಡಿ ಹಾಸ್ಯಾಸ್ಪದಕ್ಕೆ ಒಳಗಾಗಬೇಡಿ. ನಾನೇನು ಸುಳ್ಳು ಹೇಳೋನಲ್ಲ, ನನ್ನನ್ನ ಸಂಪರ್ಕ ಮಾಡಿದ್ದಾರೆ. ಎರಡೂ ಪಕ್ಷಗಳಲ್ಲಿ ಹೇಗಪ್ಪ ಜೆಡಿಎಸ್‌ನ ವಿಶ್ವಾಸಕ್ಕೆ ಪಡೆಯೋದು ಅಂತ ಕಾಂಪಿಟ್ ಶುರುವಾಗಿದೆ. ನಾನೇನು ಸುಮ್ಮನೆ ಹೇಳ್ತಿದ್ದೀನ? ನಮ್ಮ ಪಕ್ಷದ ಬಗ್ಗೆ ಹೊರಗೆ ಸಣ್ಣತನದ ಹೇಳಿಕೆ ನೀಡ್ತಾರೆ. ಮತ್ತೆ ನನ್ನತ್ರಕ್ಕೆ ಏಕೆ ಮಾತನಾಡಿಸುತ್ತಾರೆ? ಈ ಸಲ ನನ್ನ ಪಕ್ಷ ಮುಗಿಸಲು ಸಾಧ್ಯವಿಲ್ಲ. ಹದಿನೈದು ವರ್ಷದಿಂದ ನಾನು ಟ್ರ್ಯಾಪ್ ಆಗಿ ಸಾಕಾಗಿದೆ ಎಂದರು.
ಜೆಡಿಎಸ್‌ನಲ್ಲಿ ಅಪ್ಪ ಮಕ್ಕಳ ಮಾತನ್ನ ಕೇಳದಿದ್ರೆ ಹೊರ ಹಾಕುತ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯನವರ ಇವತ್ತಿನ ಹೇಳಿಕೆ ವಿಶ್ವದ ಎಂಟನೇ ಅದ್ಭುತ. ನಾವು ಸ್ಟೇಜ್ ಹಾಕಬೇಕು, ಜನ ಸೇರಿಸಬೇಕು. ಇವರು ಬಂದು ಕಾಲುಮೇಲೆ ಕಾಲು ಹಾಕಿ ದೇವೆಗೌಡರನ್ನ ಕಾಲಲ್ಲಿ ಒದ್ದುಕೊಂಡು ಕೂರುತ್ತಿದ್ದರು. ಯಾವತ್ತು ದೇವೆಗೌಡರು ತಮ್ಮ ಮಕ್ಕಳನ್ನ ಮುಂದೆ ನಿಲ್ಲಿಸಿಕೊಂಡಿದ್ರು?
ಇದನ್ನೂ ಓದಿ: Karnataka Election: ಈ ಬಾರಿಯೂ ಅತಂತ್ರ ವಿಧಾನಸಭೆ? ಕುಮಾರಸ್ವಾಮಿ ಜತೆ ʼಸಂಧಾನʼಕ್ಕೆ ಬಂದವರಾರು?
ಸಿದ್ದರಾಮಯ್ಯ ಈ ಪಕ್ಷದಲ್ಲಿ ಪಾಳೆಗಾರಿಕೆ ಮಾಡ್ತಾ ದೇವೆಗೌಡರನ್ನ ಹೆದರಿಸಿಟ್ಟುಕೊಂಡಿದ್ರು. ಬ್ಯಾನರ್‌ನಲ್ಲಿ ಭಾವಚಿತ್ರ ಇಲ್ಲ ಅಂತ ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷ ಕಟ್ಟಿ ಎರಡು ಸೀಟು ತರಲಿ ನೋಡೋಣ. ಜೆಡಿಎಸ್ ಬೆಳೆಸದಿದ್ರೆ ನಿಮ್ಮನ್ನ ಕಾಂಗ್ರೆಸ್‌ನವ್ರು ಎಲ್ಲಿ ಕರೆಯುತ್ತಿದ್ರು? ಮೈಸೂರಲ್ಲಿ ಎಂಟು ಜನ ಶಾಸಕರನ್ನ ಕರೆದುಕೊಂಡು ಹೋಗಿ ಮತ್ತೆ ಎಷ್ಟು ಗೆಲ್ಲಿಸಿಕೊಂಡ್ರಿ? ನಿಮಗೆ ಜನತೆಯ ಮೂಲಕ ಉತ್ತರ ಕೊಡಿಸುತ್ತೀನಿ. ಇದೇ ಸಿದ್ದರಾಮಯ್ಯ ಹಿಂದೆ ಇಕ್ಬಾಲ್ ಅನ್ಸಾರಿಯನ್ನ ಮಂತ್ರಿ ಮಾಡಬೇಡಿ ಅಂತ ಹೇಳಿದ್ರು. ಎಂಎಲ್‌ಸಿ ಮಾಡಿದ್ದೆ ಗ್ರೇಟ್, ಯಾಕೆ ಮಂತ್ರಿ ಮಾಡ್ತೀರ ಅಂತ ಹೇಳಿದ್ದರು ಎಂದರು.
ಮುಂದೆ ಬಿಜೆಪಿ, ಕಾಂಗ್ರೆಸ್ ಮೈತ್ರಿಯ ಬಗ್ಗೆ ಯಾವುದೇ ಸಂಶಯವೇ ಬೇಡ. ಮೈತ್ರಿ ಸರ್ಕಾರ ತೆಗೆಯಲು ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುವ ಹಣ ಕೊಟ್ಟವರನ್ನ ಮದ್ದೂರು ಕಾಂಗ್ರೆಸ್ ಟಿಕೆಟ್ ಕೊಡಲು ಮುಂದಾಗಿದೆ. ನಾರಾಯಣಗೌಡರನ್ನ ಏಕೆ ಕಾಂಗ್ರೆಸ್‌ಗೆ ಸೇರಿಸಿಕೊಳ್ಳಲು ಹೊರಟಿದ್ದೀರ? ಕಾಂಗ್ರೆಸ್ ಬಿಜೆಪಿ ಮೈತ್ರಿ ಒಳ ಒಪ್ಪಂದದ ಬಗ್ಗೆ ಯಾವುದೇ ಅನುಮಾನ ಬೇಡ ಎಂದರು.