ಬೆಂಗಳೂರು: ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ (Congress-JDS) ಮೈತ್ರಿ ಮಾಡಿಕೊಂಡು ಬಿಜೆಪಿ ವಿರುದ್ಧ ಸ್ಪರ್ಧೆ ಮಾಡಿದ್ದವು. ಆದರೆ, ಕೊನೆಯಲ್ಲಿ ಈ ಎರಡೂ ಪಕ್ಷಗಳು ತಲಾ 1 ಸ್ಥಾನವನ್ನು ಗೆದ್ದುಕೊಂಡರೆ ಉಳಿದ 25 + 1 ಸ್ಥಾನವನ್ನು ಬಿಜೆಪಿ ಮತ್ತು ಬೆಂಬಲಿತ ಅಭ್ಯರ್ಥಿಗೆ ಜಯ ಒಲಿದಿತ್ತು. ಆದರೆ, ಈ ಬಾರಿ ಈ ಚಿತ್ರಣವೇ ಉಲ್ಟಾ ಆಗುವ ಲಕ್ಷಣಗಳು ಕಾಣುತ್ತಿದ್ದು, 2024ರ ಲೋಕಸಭಾ ಚುನಾವಣೆಗೆ (Lok Sabha Election 2024) ಕಾಂಗ್ರೆಸ್ ಅನ್ನು ಮಣಿಸಲು ಜೆಡಿಎಸ್ ಜತೆಗೆ ಮೈತ್ರಿ ಮಾಡಿಕೊಳ್ಳಲು ಬಿಜೆಪಿ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಲವು ಲೆಕ್ಕಾಚಾರಗಳೂ ಈ ಪಕ್ಷಗಳಲ್ಲಿ ನಡೆಯುತ್ತಿವೆ ಎಂಬ ಗುಸು ಗುಸು ಪ್ರಾರಂಭವಾಗಿದೆ.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದಿದೆ. 135 ಸ್ಥಾನಗಳನ್ನು ಗೆದ್ದು ಬೀಗಿದೆ. ಅಲ್ಲದೆ, ಈಗಾಗಲೇ ಘೋಷಿಸಿದಂತೆ 5 ಗ್ಯಾರಂಟಿಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಈಗಾಗಲೇ ಆದೇಶವನ್ನೂ ಹೊರಡಿಸಿದೆ. ಜತೆಗೆ ಮುಂದಿನ ಲೋಕಸಭೆ ಚುನಾವಣೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಮುಂದಡಿ ಇಡುತ್ತಿದೆ. ಪ್ರತಿಯೊಂದು ಹೆಜ್ಜೆಯನ್ನೂ ಈ ನಿಟ್ಟಿನಲ್ಲಿ ಇಡಲಾಗುತ್ತಿದೆ. ಹೀಗಾಗಿ ಮುಂದಿನ ವರ್ಷ ಬರುವ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನವನ್ನು ಗೆಲ್ಲುವ ಟಾರ್ಗೆಟ್ ಅನ್ನು ಕೈ ಪಕ್ಷ ಇಟ್ಟುಕೊಂಡಿದೆ.
ಎದುರೇಟು ಕೊಡಲು ಮಾಸ್ಟರ್ ಪ್ಲ್ಯಾನ್?
ಕಾಂಗ್ರೆಸ್‌ನ ಈ ಟಾರ್ಗೆಟ್‌ಗೆ ಎದುರೇಟು ಕೊಡಲು ಬಿಜೆಪಿ, ಜೆಡಿಎಸ್ ಪಕ್ಷಗಳ ನಡುವೆ ಮಾತುಕತೆ ನಡೆದಿದೆ. ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ಎರಡಂಕಿ ದಾಟದಂತೆ ನೋಡಿಕೊಳ್ಳಲು ಮಾಸ್ಟರ್ ಪ್ಲ್ಯಾನ್ ಅನ್ನೇ ಹೆಣೆಯಲಾಗಿದೆ. 2019ರಲ್ಲಿ ಒಂದು ಸ್ಥಾನವನ್ನು ಮಾತ್ರ ಗೆದ್ದಿರುವ ಕಾಂಗ್ರೆಸ್, ಈ ಬಾರಿ ಶತಾಯಗತಾಯ 20ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸದಲ್ಲಿದೆ. ಅಲ್ಲದೆ, ತನ್ನ ಟಾರ್ಗೆಟ್ ಕ್ಷೇತ್ರಗಳಲ್ಲಿ ಆ ನಿಟ್ಟಿನಲ್ಲಿ ಕೆಲವು ಸೂಚನೆಗಳನ್ನೂ ನೀಡಿದೆ ಎನ್ನಲಾಗಿದೆ. ಇದನ್ನು ತಡೆಯಲು ಈಗ ಬಿಜೆಪಿ ಪ್ಲ್ಯಾನ್ ಮಾಡಿದೆ.
ಇದನ್ನೂ ಓದಿ: Free Electricity: ಹೊರಬಿತ್ತು ಗೃಹ ಜ್ಯೋತಿ ಮಾರ್ಗಸೂಚಿ; ಬಾಡಿಗೆದಾರನಿಗಿಲ್ಲ ಉಚಿತ ವಿದ್ಯುತ್?
ಏನಿದೆ ಲೆಕ್ಕಾಚಾರದ ಸೂತ್ರ?
ಹಳೇ ಮೈಸೂರು ಭಾಗದಲ್ಲಿ ಮಾತ್ರ ಜೆಡಿಎಸ್‌ಗೆ ಶಕ್ತಿ ಇದೆ. ಹೀಗಾಗಿ ಇಲ್ಲಿ ಕ್ಷೇತ್ರ ಹಂಚಿಕೆಯ ಸೂತ್ರವನ್ನು ಅನುಸರಿಸಲಾಗುತ್ತಿದೆ. ಅಂದರೆ, ಮಂಡ್ಯ, ಹಾಸನ, ತುಮಕೂರು ಮೂರು ಕ್ಷೇತ್ರ ಬಿಟ್ಟು ಕೊಟ್ಟರೆ ಮೈತ್ರಿಗೆ ಸಿದ್ಧ ಎಂದು ಜೆಡಿಎಸ್ ಹೇಳಿಕೊಂಡಿದೆ ಎಂದು ಹೇಳಲಾಗುತ್ತಿದೆ. ಆದರೆ, ಮೂರು ಕ್ಷೇತ್ರಗಳಲ್ಲಿ ಬಿಜೆಪಿ ತನ್ನದೇ ಆದ ಮತ ಬ್ಯಾಂಕ್ ಅನ್ನು ಹೊಂದಿದೆ. ಹೀಗಾಗಿ ಹೈಕಮಾಂಡ್ ಮಟ್ಟದಲ್ಲಿ ಇದಕ್ಕೆ ಸಮ್ಮತಿ ಸಿಕ್ಕರೆ ಕಾಂಗ್ರೆಸ್‌ಗೆ ಮೈತ್ರಿ ಪಕ್ಷಗಳನ್ನು ಎದುರಿಸುವ ಸವಾಲು ತಲೆದೋರಲಿದೆ.