ಮಂಗಳೂರು: ಲೋಕಸಭಾ ಚುನಾವಣೆಗೆ ಬಿಜೆಪಿ-ಜೆಡಿಎಸ್ ನಡುವೆ (BJP-JDS alliance) ಇನ್ನೂ ಸೀಟು ಹಂಚಿಕೆ ಬಗ್ಗೆ ಚರ್ಚೆ ನಡೆಯಬೇಕಿದೆ. ದಸರಾ ಬಳಿಕ ಅದರ ಬಗ್ಗೆ ಮಾತುಕತೆಯಾಗಲಿದೆ. ಅಧಿವೇಶನದ ಬಳಿಕ ನನ್ನ ಆರೋಗ್ಯ ಸುಧಾರಿಸಿದರೆ ನಾನು ಅಥವಾ ಕುಮಾರಸ್ವಾಮಿ ಮತ್ತೆ ಅಮಿತ್ ಶಾ ಅವರ ಜತೆ ಚರ್ಚೆ ನಡೆಸಲಿದ್ದೇವೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸುದ್ದಿಗಾರೊಂದಿಗೆ ಸೋಮವಾರ ಮಾತನಾಡಿದ ಅವರು, ಕುಮಾರಸ್ವಾಮಿ ಈಗಾಗಲೇ ಕೇಂದ್ರ ಗೃಹಮಂತ್ರಿ ಜತೆ ಚರ್ಚೆ ನಡೆಸಿದ್ದಾರೆ. ಮೈತ್ರಿಗೆ ಮೊದಲು ಜೆಡಿಎಸ್‌ನ 19 ಶಾಸಕರು, 8 ಎಂಎಲ್‌ಸಿಗಳು ಹಾಗೂ ಪಕ್ಷದ ಅಧ್ಯಕ್ಷ ಸಿ.ಎಮ್. ಇಬ್ರಾಹಿಂ ಜತೆ ಎರಡು ಸುತ್ತು ಮಾತುಕತೆ ನಡೆಸಲಾಗಿದೆ. ಅದಾದ ಬಳಿಕವೇ ಕುಮಾರಸ್ವಾಮಿ, ಗೃಹಮಂತ್ರಿಗಳನ್ನು ಭೇಟಿ ಮಾಡಿದ್ದರು. ಹಿಂದಿನ ಚುನಾವಣೆಯ ಮತಗಳಿಕೆ ಒಟ್ಟು ಗೂಡಿಸಿ ಒಂದು ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಿದ್ದಾರೆ.
ಯಾವ ಕ್ಷೇತ್ರ ಎಂಬ ಬಗ್ಗೆ ಇನ್ನೂ ಫೈನಲ್ ಆಗಿಲ್ಲ. ಮಂಡ್ಯ ಸೇರಿದಂತೆ ಯಾವುದೇ ತೀರ್ಮಾನ ಆಗಿಲ್ಲ. ಸದ್ಯ ಹಾಸನ ಜೆಡಿಎಸ್, ರಾಮನಗರ ಕಾಂಗ್ರೆಸ್ ಕೈಯಲ್ಲಿದೆ. ಉಳಿದೆಡೆ ಬಿಜೆಪಿಯೇ ಇದೆ ಕಾಂಗ್ರೆಸ್ 28 ಸ್ಥಾನ ಗೆಲ್ಲುವ ಉತ್ಸಾಹದಲ್ಲಿದ್ದಾರೆ. ಆ ಕಾರಣಕ್ಕೆ ಬಿಜೆಪಿ, ಜೆಡಿಎಸ್ ಒಂದುಗೂಡಿ ಹೋಗುವ ನಿರ್ಧಾರಕ್ಕೆ ಬಂದಿದ್ದೇವೆ. ಜಾತಿ ಆಧಾರದಲ್ಲಿ ಮತ ವಿಭಜನೆಯ ಬಗ್ಗೆ ನಾನು ಈಗ ವಾದ ಮಾಡಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Lingayat CM : ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಲಿಂಗಾಯತ ಅಸ್ತ್ರ ಡ್ಯಾಮೇಜ್? ಸಾಫ್ಟ್ ಆದ ಸಿದ್ದರಾಮಯ್ಯ!
ಐ ಆ್ಯಮ್ 91 ಕ್ಷಮಿಸಿ ಎಂದ ಮಾಜಿ ಪ್ರಧಾನಿ
ಕೇಂದ್ರದಲ್ಲಿ ಎನ್‌ಡಿಎ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬರುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶೇಕಡಾವಾರು ಮತ ಬಿಜೆಪಿಗೆ 30-33, ಕಾಂಗ್ರೆಸ್ 40, ಜೆಡಿಎಸ್ 20-22 ಸಿಕ್ಕಿದೆ. ಈ ಬಾರಿ ಯಾರಿಗೆ ಓಟ್ ಮಾಡಬೇಕು ಎಂಬುವುದನ್ನು ಮತದಾರ ತೀರ್ಮಾನ ಮಾಡುತ್ತಾನೆ. ಈ ಬಗ್ಗೆ ಹೆಚ್ಚೇನೂ ನಾನು ಚರ್ಚೆ ಮಾಡಲು ಹೋಗಲ್ಲ. ನಾನು ಇರುವುದು ಬೆಂಗಳೂರಿನಲ್ಲಿ, ಯಾರನ್ನೂ ಭೇಟಿಯೂ ಆಗಿಲ್ಲ. ಎನ್‌ಡಿಎ, ಯುಪಿಎ ಅಥವಾ ಯಾರ ಬಗ್ಗೆಯೂ ಹೆಚ್ಚು ತಲೆಕೊಡಿಸಿಕೊಳ್ಳಲು ಹೋಗಲ್ಲ. ‘ಐ ಆ್ಯಮ್ 91 ಕ್ಷಮಿಸಿ’ ಎಂದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ದೇವೇಗೌಡ ದಂಪತಿ ವಿಶೇಷ ಪೂಜೆ
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು (HD Devegowda) ಮತ್ತು ಅವರ ಪತ್ನಿ ಚನ್ನಮ್ಮ ಅವರು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ (Kukke Subrahmanya Temple) ಸೋಮವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಇದನ್ನೂ ಓದಿ | Karnataka Politics : ಡಿಕೆಶಿ ತಿಹಾರ್ ಜೈಲು ಪಾಲು ಎಂದ ಎಚ್‌ಡಿಕೆ ವಿರುದ್ಧ ಗುಡುಗಿದ ಡಿ.ಕೆ. ಬ್ರದರ್ಸ್!
ದೇವೇಗೌಡರು ಭಾನುವಾರ ಮಧ್ಯಾಹ್ನ ವಿಶೇಷ ಹೆಲಿಕಾಪ್ಟರ್ ಮೂಲಕ ಕುಕ್ಕೆ ಸುಬ್ರಹ್ಮಣ್ಯಕ್ಕೆ ನೇರವಾಗಿ ಆಗಮಿಸಬೇಕಾಗಿತ್ತು. ಆದರೆ, ಹವಾಮಾನ ವೈಪರೀತ್ಯ, ಮೋಡ ಕವಿದ ವಾತಾವರಣದಿಂದಾಗಿ ಹೆಲಿಕಾಪ್ಟರ್ ಟೇಕ್ ಆಫ್ ಮಾಡುವುದು ಸಾಧ್ಯವಾಗಿರಲಿಲ್ಲ. ಹೀಗಾಗಿ ದೇವೇಗೌಡರು ಭಾನುವಾರ ರಾತ್ರಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೋಗಿ ಅಲ್ಲಿಂದ ಮಂಗಳೂರಿಗೆ ವಿಮಾನದಲ್ಲಿ ಆಗಮಿಸಿದ್ದರು. ಅಲ್ಲಿಂದ ರಾತ್ರಿಯೇ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದು ವಿಶ್ರಾಂತಿ ಪಡೆದಿದ್ದರು. ಸೋಮವಾರ ಬೆಳಗ್ಗೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.