ನವದೆಹಲಿ/ಬೆಂಗಳೂರು: ಮುಡಾ ಹಗರಣ ಸೇರಿ ಹಲವು ಭ್ರಷ್ಟಾಚಾರ ಆರೋಪ ಹೊತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಕೈಗೊಳ್ಳಲು ತೀರ್ಮಾನಿಸಿರುವ ಪಾದಯಾತ್ರೆಗೆ (BJP Padayatra) ಸಹಕಾರ ನೀಡುವುದಿಲ್ಲ ಎಂದು ಬಂಡಾಯದ ಬಾವುಟ ಹಾರಿಸಿದ್ದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಅವರ ಮುನಿಸು ಈಗ ಶಮನವಾಗಿದೆ. ದೆಹಲಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿ ಹಲವರು ಮಾತುಕತೆ ನಡೆಸಿದ್ದು, “ಬಿಜೆಪಿ ಹಾಗೂ ಜೆಡಿಎಸ್ ಒಗ್ಗೂಡಿ ಶನಿವಾರದಿಂದ (ಆಗಸ್ಟ್ 3) ಪಾದಯಾತ್ರೆ ಆರಂಭಿಸಲಾಗುತ್ತದೆ” ಎಂದು ಪ್ರಲ್ಹಾದ್ ಜೋಶಿ ಮಾಹಿತಿ ನೀಡಿದ್ದಾರೆ.
ದೆಹಲಿಯಲ್ಲಿ ಪ್ರಲ್ಹಾದ್ ಜೋಶಿ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರು ಮಾತುಕತೆ ನಡೆಸಿದ ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಿದರು. “ಶನಿವಾರದಿಂದ ನಮ್ಮ ಪಾದಯಾತ್ರೆ ಪ್ರಾರಂಭ ಆಗಲಿದೆ. ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ತೊಡಗಿದೆ. ಮೂಡಾ ಹಾಗೂ ವಾಲ್ಮೀಕಿ ಹಗರಣಗಳು ಇದಕ್ಕೆ ಜ್ವಲoತ ಉದಾಹರಣೆಗಳಾಗಿವೆ. ಕಾಂಗ್ರೆಸ್‌ನವರು ಕೂಡ ಮೂಡಾ ಹಗರಣದ ಬಗ್ಗೆ ಮಾತನಾಡುತ್ತಿದ್ದಾರೆ. ಜೆಡಿಎಸ್ ಹಾಗೂ ಬಿಜೆಪಿ ಒಟ್ಟಿಗೆ ಪಾದಯಾತ್ರೆ ಕೈಗೊಳ್ಳುತ್ತವೆ. ಕುಮಾರಸ್ವಾಮಿ ಅವರ ಜತೆ ಇದ್ದ ಸಣ್ಣ ಕಮ್ಯುನಿಕೇಷನ್ ಗ್ಯಾಪ್ ಸರಿ ಆಗಿದೆ. ನಾವು ಕುಮಾರಸ್ವಾಮಿ ಅವರ ಹತ್ತಿರ ಮಾತಾಡಿದ್ದೇವೆ. 7 ದಿನಗಳ ಪಾದಯಾತ್ರೆ ಪೂರ್ಣಗೊಳ್ಳಲಿದೆ” ಎಂದು ಪ್ರಲ್ಹಾದ್ ಜೋಶಿ ತಿಳಿಸಿದರು.
ಕುಮಾರಸ್ವಾಮಿ ಅವರಿಂದ ಉದ್ಘಾಟನೆ ಎಂದ ವಿಜಯೇಂದ್ರ
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿದರು. ಶನಿವಾರ ಬೆಳಗ್ಗೆ 8.30ಕ್ಕೆ ನೈಸ್ ರೋಡ್ ಜಂಕ್ಷನ್‌ನಿಂದ ಪಾದಯಾತ್ರೆ ಪ್ರಾರಂಭ ಆಗುತ್ತದೆ. ರಾಜ್ಯದ ಎಲ್ಲ ಬಿಜೆಪಿ ಹಾಗೂ ಜೆಡಿಎಸ್ ಸಂಸದರು, ಶಾಸಕರು ಇರುತ್ತಾರೆ ಕುಮಾರಸ್ವಾಮಿ ಅವರು ಸಹ ಬಂದು ಕಾರ್ಯಕ್ರಮ ಉದ್ಘಾಟನೆ ಮಾಡುತ್ತಾರೆ. ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾಂದೋಲನ ಮಾಡುತ್ತಿದ್ದೇವೆ. ಇದನ್ನು ಯಶಸ್ವಿಗೊಳಿಸುತ್ತೇವೆ” ಎಂದು ತಿಳಿಸಿದರು.
“ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಅಹಿಂದ ಹೆಸರು ಹೇಳಿಕೊಂಡು ಅಧಿಕಾರ ಹಿಡಿದಿದ್ದು, ಈಗ ಈಗ ಭ್ರಷ್ಟಾಚಾರದಲ್ಲಿ ಮುಳುಗಿದೆ. ಈ ಬಗ್ಗೆ ರಾಜ್ಯದಲ್ಲಿ ಅಲ್ಲ, ದೇಶದಲ್ಲೇ ಚರ್ಚೆ ಆಗುತ್ತಿದೆ. ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಇಟ್ಟಿದ್ದ ಹಣ ದೋಚಿದ್ದಾರೆ. ಸಿದ್ದರಾಮಯ್ಯ ನವರೇ ಒಪ್ಪಿಕೊಂಡಿದ್ದಾರೆ ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಾಚಾರ ಆಗಿದೆ ಅಂತ. ಇನ್ನು ಮೂಡಾದಲ್ಲೂ 4,000 ಕೋಟಿ ರೂ.ಗಿಂತ ಹೆಚ್ಚು ಬೆಲೆ ಬಾಳುವ ನಿವೇಶನಗಳನ್ನು ಬೇರೆಯವರಿಗೆ ಕೊಟ್ಟಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರದ ಭ್ರಷ್ಟಾಚಾರವನ್ನು ಖಂಡಿಸಿ ಬೆಂಗಳೂರಿನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಾದ ಮೈಸೂರಿಗೆ ಪಾದಯಾತ್ರೆ ಕೈಗೊಳ್ಳಲು ಬಿಜೆಪಿ ತೀರ್ಮಾನಿಸಿದೆ. ಆಗಸ್ಟ್ 3ರಿಂದ ಪಾದಯಾತ್ರೆ ಆರಂಭವಾಗಲಿದೆ. ಆದರೆ, ಪಾದಯಾತ್ರೆಗೆ ನಾನು ಬೆಂಬಲ ನೀಡುವುದಿಲ್ಲ ಎಂಬುದಾಗಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದರು. ಪಾದಯಾತ್ರೆ ಕುರಿತ ಚರ್ಚೆ ಸಭೆಗೆ ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡ ಅವರನ್ನು ಕರೆಸಿದ್ದರಿಂದ ಕುಮಾರಸ್ವಾಮಿ ಬೇಸರಗೊಂಡು ಬೆಂಬಲ ವಾಪಸ್ ಪಡೆದಿದ್ದರು.
ಇದನ್ನೂ ಓದಿ: BJP-JDS Padayatra: ರಾಜ್ಯ ಸರ್ಕಾರದ ವಿರುದ್ಧ ಆ.3ರಿಂದ ಬೆಂಗಳೂರು-ಮೈಸೂರು ಪಾದಯಾತ್ರೆ: ಬಿ.ವೈ.ವಿಜಯೇಂದ್ರ