ಬೆಂಗಳೂರು: ʻಇದು ಲಂಚ-ಮಂಚದ ಸರಕಾರʼ ಎಂಬ ಕಾಂಗ್ರೆಸ್ ನಾಯಕ, ಶಾಸಕ ಪ್ರಿಯಾಂಕ್ ಖರ್ಗೆ ಅವರ ಗಂಭೀರ ಆರೋಪಕ್ಕೆ ಬಿಜೆಪಿ ಸಿಕ್ಕಾಪಟ್ಟೆ ಗರಂ ಆಗಿದೆ. ಬಿಜೆಪಿಯ ನಾಯಕರೆಲ್ಲರೂ ಪ್ರಿಯಾಂಕ್ ಖರ್ಗೆ ಅವರನ್ನು ತೀವ್ರ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಬಿಜೆಪಿ ಕಾಲದಲ್ಲಿ ಉದ್ಯೋಗ ಪಡೆದವರೆಲ್ಲರನ್ನು ಈ ಹೇಳಿಕೆ ಅಪಮಾನ ಮಾಡುತ್ತಿದೆ ಎಂದು ಪ್ರಿಯಾಂಕ ಖರ್ಗೆ ಮೇಲೆ ಸಾರ್ವಜನಿಕರ ಆಕ್ರೋಶ ತಿರುಗುವಂತೆ ಮಾಡಲಾಗಿದೆ. ಇದರ ನಡುವೆಯೇ ಬಿಜೆಪಿಯು ʻಮಹಿಳಾ ವಿರೋಧಿ ಕಾಂಗ್ರೆಸ್ʼ ಎಂಬ ಹ್ಯಾಷ್ ಟ್ಯಾಗ್ ನಡಿ ಕಾಂಗ್ರೆಸ್ ನಾಯಕರ ಲಂಚ-ಮಂಚದ ಕತೆಗಳನ್ನು ತೆರೆದಿಟ್ಟಿದೆ. ಜತೆಗೆ ಕೂಡಲೇ ಕ್ಷಮೆ ಯಾಚಿಸಿ ಎಂದು ಆಗ್ರಹಿಸಿದೆ.
ಬಿಜೆಪಿ ಹೇಳಿದ ಕತೆಗಳು ಇಲ್ಲಿವೆ
೧. ಲಂಚ- ಮಂಚದ ಸರ್ಕಾರ ಎಂದು ಆರೋಪ ಮಾಡಿದ್ದ ಮಾಜಿ ಸಚಿವ ಪ್ರಿಯಾಂಕ ಖರ್ಗೆಯವರಿಗೆ “ತಮ್ಮ ಮನೆಯ ಹೆಂಚು ತೂತು” ಎಂಬುದೇ ಗೊತ್ತಿಲ್ಲ. ಇವರು ಆರೋಪ ಮಾಡಿದ ಬೆನ್ನಲ್ಲೆ ಜಯಮಾಲಾ ಅವರ ಲಂಚದ ಹಗರಣ ಬಯಲಾಗಿದೆ. ಹಾಗಾದರೆ ಲಂಚದ ಸರ್ಕಾರ ಯಾರದ್ದು? (ಮಾಜಿ ಸಚಿವೆ ಜಯಮಾಲಾ ಅವರು ಯಾರಿಂದಲೋ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪ ಎದುರಾಗಿದೆ.)
೨. ಪ್ರಿಯಾಂಕ್ ಖರ್ಗೆ ಅವರೇ, ಸಹಾಯ ಮಾಡುವುದಾಗಿ ನಂಬಿಸಿ ಅಸಹಾಯಕ ಹೆಣ್ಣೊಬ್ಬಳ ಮೇಲೆ ಮೇಟಿ ಲೈಂಗಿಕ ದೌರ್ಜನ್ಯ ಎಸಗಿದ್ದು ನಿಮ್ಮ ಕಾಲದಲ್ಲೇ ಅಲ್ಲವೇ?
೩. ಯುಪಿಎ ಸರ್ಕಾರದಲ್ಲಿ ಪ್ರಭಾವಿಗಳಾಗಿದ್ದ ಕಾಂಗ್ರೆಸ್ ನಾಯಕರುಗಳು ಮಹಿಳೆಯರ ಮೇಲೆ ನಡೆಸಿದ ʻದಿಗ್ವಿಜಯʼ, ʻಅಭಿಷೇಕʼಗಳ ಸಿಡಿ ನಿಮ್ಮ ಮಂಚದ ಸರ್ಕಾರದ ಫಲವಲ್ಲವೇ?
೪. ಕಾಂಗ್ರೆಸ್ ನಾಯಕರ ರಾತ್ರಿ ಬದುಕಿನ ರಂಗ-ಬಿರಂಗಿ ಬಗ್ಗೆ ಸಾಕಷ್ಟು ದಂತಕತೆಗಳು ಮಾತ್ರವಲ್ಲ, ಗುಪ್ತಸಿಡಿಗಳೂ ಇವೆ.
೫. ಜೂನಿಯರ್ ಖರ್ಗೆ ಅವರೇ, ಸಭ್ಯಸ್ಥರ ಮುಖವಾಡ ಹಾಕಿ ಸಮಾಜದ ಕಣ್ಣಿಗೆ ಗಣ್ಯರೆಂದು ಬಿಂಬಿಸಿಕೊಂಡ ಕಾಂಗ್ರೆಸ್ ಗೋಮುಖ ವ್ಯಾಘ್ರಗಳ ಪಟ್ಟಿ ನೀಡಿದರೆ ಸಮರ್ಥನೆ ಮಾಡಿಕೊಳ್ಳುವುದಕ್ಕೂ ನಿಮಗೆ ಕಷ್ಟವಾಗಬಹುದು.
೬. ಸಾವಿರಾರು ಮಹಿಳೆಯರು, ಪ್ರತಿಭಾವಂತರು, ವಿದ್ಯಾವಂತರು ಕಷ್ಟಪಟ್ಟು, ಅನೇಕ ಪರೀಕ್ಷೆಗಳನ್ನು ಉತ್ತೀರ್ಣರಾಗಿ, ಕೆಲಸ ಗಿಟ್ಟಿಸಿಕೊಳ್ಳುತ್ತಾರೆ. ಪ್ರಿಯಾಂಕ ಖರ್ಗೆ ಅವರೇ ನಿಮ್ಮ ಈ ಮಾತುಗಳು, ಅಷ್ಟು ಜನ ಮಹಿಳೆಯರಿಗೆ ಅವಮಾನ ಮಾಡಿದಂತಲ್ಲವೇ?
ಮೂಲ ಸುದ್ದಿ | ಇದು ಲಂಚ, ಮಂಚದ ಸರಕಾರ ಎಂದ ಪ್ರಿಯಾಂಕ ಖರ್ಗೆ, ಏನಿದು ಗಂಭೀರ ಆರೋಪ