ದೊಡ್ಡಬಳ್ಳಾಪುರ: ಎಲ್ಲಿವರೆಗೆ ದೇಶದಲ್ಲಿ ನರೇಂದ್ರ ಮೋದಿ ಪ್ರಧಾನಿ ಆಗಿರುತ್ತಾರೋ ಅಲ್ಲಿವರೆಗೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ, ಬರಲ್ಲ, ಬರಲ್ಲ… ಇದನ್ನು ವಿಧಾನ ಮಂಡಲದಲ್ಲೂ ಹೇಳಿದ್ದೇನೆ… ಈಗಲೂ ಹೇಳುತ್ತಿದ್ದೇನೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ಭ್ರಮೆಗಳನ್ನು ಕಳಚುತ್ತೇವೆ: ಹೀಗೆ ಘಂಟಾಘೋಷವಾಗಿ ಹೇಳಿದವರು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಷ್ಟ್ರೀಯ ಸಲಹಾ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ.
ಅವರು ದೊಡ್ಡಬಳ್ಳಾಪುರದಲ್ಲಿ ನಡೆಯುತ್ತಿರುವ ಬಿಜೆಪಿ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಚಿವ ಕೆ. ಸುಧಾಕರ್ ಅವರ ಶ್ರಮದಿಂದಾಗಿ ಬಿಜೆಪಿಗೆ ಹೆಚ್ಚು ಅಸ್ತಿತ್ವ ಇಲ್ಲದ ಈ ಜಾಗದಲ್ಲಿ ಲಕ್ಷಾಂತರ ಜನರನ್ನು ಸೇರಿಸಿದ್ದಾರೆ. ಇಲ್ಲಿ ನಮ್ಮ ಶಕ್ತಿ ಇರಲಿಲ್ಲ. ಇಲ್ಲೇ ಇಷ್ಟು ಜನ ಬೆಂಬಲ ಸಿಕ್ಕಿರುವಾಗ ಇನ್ನು ಬೇರೆ ಕಡೆ ಹೇಗಿರಬಹುದು ಊಹಿಸಿ. ಇನ್ನೂ ನಾಲ್ಕೈದು ಕಡೆ ಸಮಾವೇಶ ಮಾಡ್ತೇವೆ. ಆಗ ನಮ್ಮ ಶಕ್ತಿ ತೋರಿಸ್ತೇವೆ ಎಂದು ಹೇಳಿದ ಅವರು, ಬಿಜೆಪಿ ಹೆಚ್ಚು ಶಾಸಕರನ್ನು ಗೆದ್ದು ಬಿಜೆಪಿ ರಾಜ್ಯದಲ್ಲಿ ೧೫೦ ಸ್ಥಾನ ಗೆಲ್ಲುವಂತಾಗಲಿ ಎಂದು ಆಶಿಸಿದರು.
ʻʻನೇಕಾರರು ಮತ್ತು ರೈತರು ನಮ್ಮ ಎರಡು ಕಣ್ಣುಗಳಿದ್ದಂತೆ. ನಾನು ಅಧಿಕಾರದಲ್ಲಿದ್ದಾಗ ನೇಕಾರರ ಸಾಲವನ್ನೂ ಮನ್ನಾ ಮಾಡಿದ್ದೇನೆ. ನನ್ನ ಜೀವನದ ಬಹುಭಾಗ ರೈತರಿಗೆ ಮೀಸಲಾಗಿದೆ. ರೈತರಿಗೆ ನಾನು ಕೊಟ್ಟಷ್ಟು ಕೊಡುಗೆ ಬೇರೆ ಯಾರೂ ಕೊಟ್ಟಿಲ್ಲ. ಪ್ರಧಾನಿ ಕಿಸಾನ್ ಸಮ್ಮಾನ್‌ನಡಿ ಆರು ಸಾವಿರ ರೂ. ಕೊಟ್ಟರೆ ನಾನು ನಾಲ್ಕು ಸಾವಿರ ಕೊಟ್ಟಿದ್ದೇನೆʼʼ ಎಂದು ಬಿಎಸ್‌ವೈ ನೆನಪಿಸಿದರು.
ʻʻರಾಹುಲ್ ಗಾಂಧಿ ಬಡತನದ ಬಗ್ಗೆ ಮಾತನಾಡಲು ಶುರು ಮಾಡಿದ್ದಾರೆ. ಅವರ ಮನೆಯಲ್ಲೇ ಮೂರು ಜನ ಪ್ರಧಾನಿಗಳು ಆಗಿ ಹೋಗಿದ್ದಾರೆ. ಏನು ಮಾಡಿದ್ದಾರೆ?ʼʼ ಎಂದು ಪ್ರಶ್ನಿಸಿದ ಅವರು, ಪ್ರಧಾನಿ ಮೋದಿ ಅವರು ನಮ್ಮ ದೇಶದ ಜನ ನೆಮ್ಮದಿಯಿಂದ ಬದುಕುವ ಹಾಗೆ ಮಾಡಿದ್ದಾರೆ ಎಂದರು.
ಬೆಂಗಳೂರಿನಲ್ಲಿ ಬೋಟಿನಲ್ಲಿ ಓಡಾಡುವ ಸ್ಥಿತಿ ಬಂದಿದೆ ಎಂದು ಗೇಲಿ ಮಾಡಿದರು ಸಿದ್ದರಾಮಯ್ಯ. ಬೆಂಗಳೂರಿನಲ್ಲಿ ಎಷ್ಟೊಂದು ಮಳೆ ಬಂದಿದೆ ಎನ್ನುವುದು ಅವರಿಗೆ ಗೊತ್ತಿಲ್ವಾ ಎಂದು ಪ್ರಶ್ನಿಸಿದ ಅವರು, ವಿಧಾನಸಭಾ ಅಧಿವೇಶನದಲ್ಲಿ ತಕ್ಕ ಉತ್ತರ ಕೊಡುತ್ತೇನೆ ಎಂದರು.
ʻʻಹಣ, ಹೆಂಡ, ತೋಳ್ಬಲದಿಂದ ಅಧಿಕಾರಕ್ಕೆ ಬರುತ್ತೇವೆ ಎನ್ನುವ ಕಾಂಗ್ರೆಸ್ ನಂಬಿಕೆ ಹೊಂದಿದೆ. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಜನ ಸ್ವಾಭಿಮಾನದ ಪಾಠ ಕಲಿತಿದ್ದಾರೆ. ನರೇಂದ್ರ ಮೋದಿ ಅವರು ಕಲಿಸಿದ್ದಾರೆ. ಹೀಗಾಗಿ ಜನರು ಕಾಂಗ್ರೆಸ್‌ನ ನಂಬಿಕೆಗಳನ್ನು, ಪಕ್ಷವನ್ನು ಬುಡಮೇಲು ಮಾಡುತ್ತಾರೆ ʼʼ ಎಂದರು ಬಿಎಸ್‌ವೈ.
ಇದನ್ನೂ ಓದಿ| BJP ಜನಸ್ಪಂದನ | ಇದು ವ್ಯಕ್ತಿಯ ವೈಭವೀಕರಣವಲ್ಲ, ಆಸೆಯೆಂಬ ಬಿಸಿಲುಗುದುರೆ ಏಕೆ ಏರುವೆ? ಸಿದ್ದು ಕಾಲೆಳೆದ ಸುಧಾಕರ್