ಹಾಸನ: ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ (Karnataka Election 2023) ಕೆಲವೇ ದಿನಗಳು ಬಾಕಿ ಇದ್ದು, ಆಯಾ ರಾಜಕೀಯ ಪಕ್ಷಗಳು ಗೆಲುವಿಗಾಗಿ ಇನ್ನಿಲ್ಲದ ತಂತ್ರ ಮಾಡುತ್ತಿವೆ. ಅಭ್ಯರ್ಥಿಗಳು ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ಇನ್ನು, ಚುನಾವಣೆ ಫಲಿತಾಂಶದ ಬಳಿಕ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತವೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ನಮಗೆ ಜೆಡಿಎಸ್ ಬೆಂಬಲ ಬೇಡ ಎಂದು ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ನಾವೇನೂ, ಬಿಜೆಪಿಗೆ ಬೆಂಬಲ ಕೊಡುತ್ತೇವೆ ಎಂಬುದಾಗಿ ಹೇಳಿಲ್ಲ ಎಂದು ಎಚ್.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಇದರ ಬೆನ್ನಲ್ಲೇ, ಹಾಸನ ಬಿಜೆಪಿ ಅಭ್ಯರ್ಥಿ ಪ್ರೀತಂ ಗೌಡ ಅವರು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯ ಕುರಿತು ಸುಳಿವು ನೀಡಿದ್ದಾರೆ.
ಹಾಸನದಲ್ಲಿ ಪ್ರಚಾರದ ವೇಳೆ ಜನರನ್ನುದ್ದೇಶಿಸಿ ಮಾತನಾಡಿದ ಪ್ರೀತಂ ಗೌಡ, “ಜೆಡಿಎಸ್‌ಗೆ ಮತ ಹಾಕಿದರೆ ಬಿಜೆಪಿಗೆ ಮತ ಹಾಕಿದಂತೆ. ನಿಮಗೆ ಅರ್ಥವಾಗಲಿ ಎಂಬುದಾಗಿ ಬಿಡಿಸಿ ಹೇಳುತ್ತಿದ್ದೇನೆ. ಜನತಾದಳಕ್ಕೆ ವೋಟು ಹಾಕಿದರೂ ಬಿಜೆಪಿಗೆ ವೋಟು ಹಾಕಿದ ಲೆಕ್ಕವೇ” ಎಂದು ಹೇಳಿದ್ದಾರೆ. ಆ ಮೂಲಕ ಚುನಾವಣೆ ಫಲಿತಾಂಶದ ಬಳಿಕ ಬಿಜೆಪಿ ಹಾಗೂ ಜೆಡಿಎಸ್ ಜತೆಗೂಡಿ ಸರ್ಕಾರ ರಚಿಸುತ್ತವೆ ಎಂಬುದನ್ನು ಸೂಚ್ಯವಾಗಿ ಹೇಳಿದ್ದಾರೆ.
ಪ್ರೀತಂ ಗೌಡ ಹೇಳಿದ್ದಿಷ್ಟು
“ಎಚ್.ಡಿ.ದೇವೇಗೌಡರು ಹಾಗೂ ನರೇಂದ್ರ ಮೋದಿ ಸಾಹೇಬರು ಮಾತನಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಜೆಡಿಎಸ್‌ಗೆ ಬರುವುದು 20-25 ಸೀಟು. ಹಾಗಾಗಿ, ಇಬ್ಬರೂ ಮಾತನಾಡಿಕೊಂಡಿದ್ದಾರೆ. ಬೆಂಗಳೂರಿಗೆ ಹೋಗಬೇಕು ಎಂದರೆ ಮೈಸೂರಿಗೆ ಹೋಗಿ, ಅಲ್ಲಿಂದ ಬೆಂಗಳೂರಿಗೆ ಹೋಗಬೇಡಿ. ಹಾಸನದಿಂದ ಬೆಳ್ಳೂರು ಕ್ರಾಸ್ ಮೂಲಕ ಬೆಂಗಳೂರಿಗೆ ಹೋಗಿ. ಇದರ ಮೇಲೆ ನಿಮ್ಮಿಷ್ಟ” ಎಂದರು. ಆ ಮೂಲಕ ನೇರವಾಗಿ ಬಿಜೆಪಿಗೆ ಮತ ನೀಡಿ ಎಂದು ಹೇಳಿದರು.
“ನನ್ನ ಹತ್ತಿರ ಸುತ್ತಿ ಬಳಸಿ ಬರುವುದು ಬೇಡ. ನೇರವಾಗಿ ಬನ್ನಿ, ನನಗೇ ಮತ ನೀಡಿ. ಮತ್ತೆ ಎಲ್ಲ ನದಿಗಳು ಸೇರುವುದು ಸಮುದ್ರಕ್ಕೇನೇ. ನೀವು ಜೆಡಿಎಸ್‌ಗೆ ಮತ ಹಾಕಿದರೂ ನನ್ನ ಹತ್ತಿರವೇ ಬರಬೇಕು. ಹಾಗಾಗಿ, ನೇರವಾಗಿ ಬಿಜೆಪಿಗೆ ಮತ ನೀಡಿ” ಎಂದು ಹೇಳಿದರು. ಪ್ರೀತಂ ಗೌಡ ಹೇಳಿಕೆಯಿಂದ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯ ಚರ್ಚೆಗಳು ಶುರುವಾಗಿವೆ. ಅವರು ನೀಡಿದ ಹೇಳಿಕೆಯ ವಿಡಿಯೊ ವೈರಲ್ ಆಗಿದೆ.