ಬೆಂಗಳೂರು: ರಾಜ್ಯ ಸರ್ಕಾರದ ಸೇವಾಸಿಂಧು ಪೋರ್ಟಲ್ ಅನ್ನು ಕೇಂದ್ರ ಸರ್ಕಾರ ಹ್ಯಾಕ್ ಮಾಡಿದೆ ಎಂಬ ಸಚಿವ ಸತೀಶ್ ಜಾರಕಿಹೊಳಿ ಅವರ ಹೇಳಿಕೆಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಕ್ರೋಶ ಹೊರಹಾಕಿದ್ದಾರೆ. ಧಾರವಾಡದಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಪ್ರಲ್ಹಾದ ಜೋಶಿ, ಸಚಿವರಾದವರು ಗಂಭೀರವಾಗಿರಬೇಕು ಎಂದಿದ್ದಾರೆ.
ನಗುತ್ತ ಪ್ರತಿಕ್ರಿಯಿಸಿದ ಪ್ರಲ್ಹಾದ ಜೋಶಿ, ರಾಜ್ಯ ಸರ್ಕಾರದ ಸರ್ವರ್‌ಗಳನ್ನು ಕೇಂದ್ರ ಸರ್ಕಾರ ಹ್ಯಾಕ್ ಮಾಡುತ್ತಿದೆ ಎನ್ನುವುದು ಹಾಸ್ಯಾಸ್ಪದವಾದ ಹೇಳಿಕೆ. ಮಂತ್ರಿ ಆಗಿದ್ದೀರಿ, ಮುಂದಿನ ದಿನದಲ್ಲಿ ಸಿಎಂ ಅಂತ ಹೇಳ್ತೀರಿ, ಗಂಭೀರವಾಗಿರಿ. ರಾಜ್ಯದ ಮರ್ಯಾದೆ ತೆಗೆಯಬೇಡಿ. ಹ್ಯಾಕ್ ಮಾಡಿದ್ರೆ ದೂರು ದಾಖಲಿಸಿ. ಸೈಬರ್ ಕ್ರೈಂ ಇದೆ. ಯೋಜನೆಗಳನ್ನು ಜಾರಿ ಮಾಡಲು ಆಗ್ತಾ ಇಲ್ಲ, ಅದಕ್ಕೆ ವಿಳಂಬ ಮಾಡಲಿಕ್ಕೆ ವ್ಯವಸ್ತಿತ ಹುನ್ನಾರ ಇದು. ಇವರು ಹೀಗೆ ಕಂಡಿಶನ್ ಹಾಕೋ ಸಲುವಾಗಿ ವಿಳಂಬ ಮಾಡುತ್ತಿದ್ದಾರೆ. ಗರೀಭಿ ಹಠಾವೋ ಎಂದು 1970ರಲ್ಲಿ ಇಂದಿರಾಗಾಂಧಿ ಹೇಳಿದ್ರು. ಸತ್ಯದ ಮುಖದ ಮೇಲೆ ಹೊಡದಂಗೆ ಸುಳ್ಳು ಹೇಳುತ್ತಿದೆ ಕಾಂಗ್ರೆಸ್. ಜನರು ಅವರಿಗೆ ತಕ್ಕ ಪಾಠವನ್ನ ಕಲಿಸುತ್ತಾರೆ. ಕುಣಿಯಲಿಕ್ಕೆ ಆಗದವರು ನೆಲ ಡೊಂಕು ಅಂತ ಹೇಳ್ತಾರೆ. ಕೈಯಲ್ಲಿ ಆಗದವನು ಮೈಯಲ್ಲ ಪರಚಿಕೊಂಡಂತೆ. ನಾವು ಅವರಿಗೂ ಸ್ವಲ್ಪ ಸಮಯ ಕೊಡುತ್ತೇವೆ. ಜನರಿಗೆ ವಂಚನೆ ಮಾಡಿದ್ದೀರಿ, ನಾವು ಮುಂದಿನ ದಿನಗಳಲ್ಲಿ ಹೋರಾಟವನ್ನ ಮಾಡುತ್ತೇವೆ. ಜನರಿಗೆ ಕೊಟ್ಟ ಭರವಸೆಯನ್ನ ಇಡೇರಿಸದಿದ್ದಲ್ಲಿ ನಾವು ಹೋರಾಟ ಮಾಡುತ್ತೇವೆ ಎಂದರು.
ಅನ್ನಭಾಗ್ಯಕ್ಕೆ ಅಕ್ಕಿ ಕೊಡಲು ಕೇಂದ್ರ ಸರ್ಕಾರ ಅಡ್ಡಗಾಲು ಹಾಕುತ್ತಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ಪ್ರಲ್ಹಾದ ಜೋಶಿ, ಸಿಎಂ ಸಿದ್ದರಾಮಯ್ಯ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ಕಾಂಗ್ರೆಸ್ ಪಕ್ಷದವರು ಸುಳ್ಳು ಹೇಳುತ್ತಾರೆ. ಭಾರತ ಸರ್ಕಾರ ಐದು ಕೆಜಿ ಅಕ್ಕಿಯನ್ನ ಕೊಡ್ತಾ ಇದೆ. 80 ಕೋಟಿ ಜನರಿಗೆ ಐದು ಕೆಜಿ ಅಕ್ಕಿ ಕೊಡ್ತಾ ಇದ್ದೀವಿ. ಸಿದ್ದರಾಮಯ್ಯರಿಗೆ ಕೇಂದ್ರದಿಂದ ಐದು ಕೆಜಿ ಅಕ್ಕಿ ಬರುತ್ತೆ ಅಂತ ಹೇಳುವಷ್ಟು ಅವಧಾನವಿಲ್ಲ. ದೇಶಕ್ಕೇ ನಾವು ಅಕ್ಕಿ ಕೊಡುತ್ತಿದ್ದೇವೆ, ಇನ್ನು 60 ಕೋಟಿ ಜನರು ಇದಾರೆ ಅವರಿಗೂ ಫ್ರೀಯಾಗಿ ಅಕ್ಕಿ ಕೊಡಬೇಕು.
ನಾವು ಮಾರುಕಟ್ಟೆ ಮೂಲಕ ಕಡಿಮೆ ದರದಲ್ಲಿ ಸಿಗುವ ಪಾಲಿಸಿಯನ್ನ ಮಾಡಿದ್ದೇವೆ. ಇದು ಬಿಜೆಪಿ ಆಡಳಿತ ಇರುವ ರಾಜ್ಯಕ್ಕೂ ಅನ್ವಯವಾಗಿದೆ. ಮಹಾದೇವಪ್ಪ ನಿನಗೂ ಫ್ರೀ, ಕಾಕಾ ಸಾಹೇಬ್ ನಿನಗೂ ಫ್ರೀ ಅಂತ ಹೇಳಿದ್ದರು ಸಿದ್ದರಾಮಯ್ಯ. ಹೇಳುವಾಗ ನಿಮಗೆ ಗೊತ್ತಾಗಲಿಲ್ಲವಾ..? ಕೇಂದ್ರ ಸರಕಾರ ಕೊಟ್ರೆ ಕೊಡುತ್ತೆವೆ ಅಂತ ಹೇಳಬೇಕಿತ್ತು ಎಂದರು.
ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿ, ಕುಣಿಯಕ್ಕಾಗದವರಿಗೆ ನೆಲ ಡೊಂಕು ಅನ್ನುವಂತಾಗಿದೆ ಕಾಂಗ್ರೆಸ್‌ನವರ ಕತೆ. ಸತೀಶ್ ಜಾರಕಿಹೊಳಿಯವ್ರು ಗೃಹಲಕ್ಷ್ಮಿ ಅರ್ಜಿ ವಿಳಂಬಕ್ಕೆ ಕಾರಣ ಸರ್ವರ್ ಡೌನ್ ಅಂತ ಹೇಳಿದಾರೆ. ಕೇಂದ್ರ ಸರ್ಕಾರ ಹ್ಯಾಕ್ ಮಾಡಿದೆ ಅಂತ ಆರೋಪ ಮಾಡಿದಾರೆ. ಇವರ ಹುಳುಕು ಮುಚ್ಚಲು ಸರ್ವರ್ ಮೇಲೆ ಹಾಕ್ತಿದಾರೆ. ಈ ಯೋಜನೆ ವಿಳಂಬ ಆಗಲು ಕೇಂದ್ರ ಸರ್ಕಾರ ಹೇಗೆ ಕಾರಣ ಆಗುತ್ತೆ? ಕೇಂದ್ರದವ್ರು ಹ್ಯಾಕ್ ಮಾಡಕ್ಕೆ ರಿಮೋಟ್ ಕಂಟ್ರೋಲ್ ಇಟ್ಕೊಂಡಿದ್ದಾರಾ?
ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರದ ಮೇಲೆ ಆಪಾದನೆ ಮಾಡ್ತಿದಾರೆ. ಇವರಿಗೆ ಕೊಡಕ್ಕಾಗಲ್ಲ ಅಂದ್ರೆ ಕೇಂದ್ರ ಹೇಗೆ ಜವಾಬ್ದಾರಿ ಆಗುತ್ತೆ? ಸರ್ವರ್ ಡೌನ್ ಆದ್ರೆ ಸರಿ ಮಾಡಿಸೋಕ್ಕೆ ಆಗಲ್ವಾ? ಸರ್ವರ್ ಹ್ಯಾಕ್ ಮಾಡಿದ್ದಾರೆ ಅಂದ್ರೆ, ಹ್ಯಾಕ್ ಮಾಡಿದವ್ರನ್ನ ಬಂಧಿಸಿ. ಸರ್ವರ್ ಹ್ಯಾಕ್‌ಗೂ ಕೇಂದ್ರಕ್ಕೂ ಏನು ಸಂಬಂಧ? ಐದು ಗ್ಯಾರಂಟಿ ಯೋಜನೆಗಳಲ್ಲಿ ಯಾವುದೂ ಸಕ್ಸಸ್ ಆಗ್ತಿಲ್ಲ. ಪ್ರತಿಯೊಂದು ಗ್ಯಾರಂಟಿಗಳಲ್ಲೂ ಸಮಸ್ಯೆ, ಲೋಪ ಇದೆ. ನಾಚಿಕೆ ಆಗಬೇಕು ಈ ಸರ್ಕಾರಕ್ಕೆ. ಎಲ್ಲದಕ್ಕೂ ಕೇಂದ್ರ ಸರ್ಕಾರಕ್ಕೆ ದೂರುತ್ತಿದ್ದಾರೆ, ನಾಚಿಕೆ ಆಗಬೇಕು ಇವರಿಗೆ ಎಂದಿದ್ದಾರೆ.
ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಸತೀಶ್ ಜಾರಕಿಹೊಳಿ ಅವರು, ಸಾಫ್ಟ್‌ವೇರ್ ಎಲ್ಲಿದೆ ಅಂತಲೂ ಅವರಿಗೆ ಗೊತ್ತಿಲ್ಲ. ಕೇಂದ್ರ ಸರ್ಕಾರ ಹ್ಯಾಕ್ ಮಾಡಿದೆ, ಹಾಗಾಗಿ ಸರ್ವರ್ ಡೌನ್ ಆಗಿದೆ ಅಂತ ಹೇಳಿದ್ದಾರೆ. ಇದು ಹಾಸ್ಯಾಸ್ಪದ ವಿಚಾರ. ಅವರ ಬುದ್ದಿವಂತಿಕೆ ಪ್ರಚಾರ ಮಾಡಿದ್ದಾರೆ. ಸತೀಶ್ ಜಾರಕಿಹೊಳಿ ಅವರೇ ಈ ರೀತಿ ಅಪಹಾಸ್ಯ ಹೇಳಿಕೆ ನೀಡಬೇಡಿ. ನೀವು ಸರ್ಕಾರದ ಮಂತ್ರಿ ಆಗಿದ್ದೀರಿ. ಇದರಿಂದ ನಿಮ್ಮ ಘನತೆ ಕಮ್ಮಿ ಆಗಲಿದೆ. ನೀವು ಕೊಟ್ಟಿರೋ ಏಜೆನ್ಸಿ ಕೇಳಿ ಯಾಕೆ ಹ್ಯಾಕ್ ಆಗಿದೆ ಅಂತ. ನೀವು ಕೊಟ್ಟಿರೋ ಅಪ್ಲಿಕೇಶನ್ ಸರಿಯಾದ ಸಮಯಕ್ಕೆ ಆಗದಿರಲಿ ಅಂತ ಹ್ಯಾಕ್ ಆಗುವಂತೆ ನೀವು ಮಾಡಿದ್ದೀರಿ ಎಂದರು.
ಮಹಿಳೆಯರು ಪ್ರಯಾಣ ಮಾಡಲು ಶಕ್ತಿ ಯೋಜನೆ ಕೊಟ್ರಿ. ಡೋರ್ ಕಿತ್ತಾಕುವಷ್ಟು ಶಕ್ತಿ ಬಂದಿದೆ. ಈ ಯೋಜನೆ ಕೈ ಬಿಟ್ರೆ, ನಿಮಗೆ ಸಂಕಷ್ಟ ಕಟ್ಟಿಟ್ಟಬುತ್ತಿ. ನೀವು ಮಾತು ಕೊಟ್ಟು ತಪ್ಪಿದ್ರೆ ಆಪ್ ಪಾರ್ಟಿ ಸಿಂಬಲ್ ಮಹಿಳೆಯರ ಕೈಗೆ ಬರಲಿದೆ ಎಂದು, ಪರೋಕ್ಷವಾಗಿ ಪೊರ್ಕೆ ಹಿಡಿದು ಹೊಡೀತಾರೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ. ಎಲ್ಲದಕ್ಕೂ ಮೋದಿ ಕಾರಣ ಅಂತೀರ? ಎಷ್ಟಕ್ಕೆ ನೀವು ಮೋದಿಯನ್ನ ಕಾರಣ ಮಾಡ್ತೀರಾ? ಎಂದರು.
ಜಾರಿಕೊಂಡ ಡಿ.ಕೆ. ಶಿವಕುಮಾರ್
ಸರ್ವರ್ ಹ್ಯಾಕ್ ಕುರಿತು ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿ, ನಾನು ಟೆಕ್ನಿಕಲ್ ಮನುಷ್ಯ ಅಲ್ಲ. ಸಂಬಂಧಪಟ್ಟ ಇಲಾಖೆಯವರನ್ನು ಕೇಳಿ. ನಾನು ಟೆಕ್ನಿಕಲ್ ಮನುಷ್ಯ ಅಲ್ಲ ಅಂತ ಹೇಳ್ತಾ ಇದ್ದೀನಿ. ನಾನು ಹಳ್ಳಿಯಿಂದ ವಿಧಾನಸೌಧಕ್ಕೆ ಬಂದವನು. ಏನಾಗಿದೆ ಎಂಬುದನ್ನು ತಿಳಿದುಕೊಳ್ತೇನೆ ಎಂದಿದ್ದಾರೆ.