ನವದೆಹಲಿ: ಕರ್ನಾಟಕದಲ್ಲಿ ವಿಧಾನಸಭಾ ಚುನಾವಣಾ (Karnataka Election) ಪ್ರಚಾರದ ವೇಳೆ ರಾಜಕೀಯ ನಾಯಕರು ದ್ವೇಷ ಭಾಷಣ ಮಾಡುತ್ತಿರುವುದು ಕಂಡುಬರುತ್ತಿವೆ. ಇದಕ್ಕೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ವಿಷದ ಹಾವು ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿರೋಧಿಸಿ ಬಿಜೆಪಿ ದೂರು ನೀಡಿದ್ದರೆ, ಮತ್ತೊಂದೆಡೆ ಕೇಂದ್ರ ಸಚಿವ ಅಮಿತ್ ಶಾ ಹಾಗೂ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ದ್ವೇಷ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ದೂರು ಸಲ್ಲಿಸಿದೆ.
ಮೋದಿ ವಿಷದ ಹಾವು ಎಂಬ ಖರ್ಗೆ ಹೇಳಿಕೆಗೆ ಬಿಜೆಪಿ ಖಂಡನೆ
ಪ್ರಧಾನಿ ಮೋದಿ ವಿಷದ ಹಾವು ಎಂಬ ಹೇಳಿಕೆ ನೀಡಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ಖಂಡಿಸಿ ಬಿಜೆಪಿ ನಿಯೋಗ, ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಕೇಂದ್ರ ಸಚಿವ ಭೂಪೇಂದ್ರ ಯಾದವ್ ನೇತೃತ್ವದ ನಿಯೋಗ ದೂರು ಸಲ್ಲಿಸಿದೆ. ಬಳಿಕ ಮಾತನಾಡಿದ ಭೂಪೇಂದ್ರ ಯಾದವ್ ಅವರು, ಕರ್ನಾಟಕದಲ್ಲಿ ಪ್ರಜಾಪ್ರಭುತ್ವದ ಮರ್ಯಾದೆ ತೆಗೆಯುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಕಾಂಗ್ರೆಸ್ ನಕಾರಾತ್ಮಕ ರಾಜಕೀಯ ಮಾಡುತ್ತಿದೆ. ಖರ್ಗೆ ಉದ್ದೇಶಪೂರ್ವಕವಾಗಿ ಮೋದಿ ವಿರುದ್ಧ ಹೇಳಿಕೆ ನೀಡಿದ್ದು, ಪ್ರಧಾನಿ ವಿರುದ್ಧ ವ್ಯಕ್ತಿಗತ ಆರೋಪ ಮಾಡಿದ್ದಾರೆ ಎಂದು ಕಿಡಿಕಾರಿದರು.
ಇದನ್ನೂ ಓದಿ | ವಿಸ್ತಾರ TOP 10 NEWS: ಕಾಂಗ್ರೆಸ್ ವಾರಂಟಿ ಮುಗಿದಿದೆ ಎಂದ ಮೋದಿ, ಮೋದಿ ವಿಷದ ಹಾವೆಂದ ಖರ್ಗೆ ಇತ್ಯಾದಿ ಪ್ರಮುಖ ಸುದ್ದಿಗಳು
ಕಾಂಗ್ರೆಸ್ ನಾಯಕರು ಹತಾಶೆಗೆ ಒಳಗಾಗಿದ್ದಾರೆ. ಇಡೀ ದೇಶ ಪ್ರೀತಿಸುವ ಪ್ರಧಾನಿಯ ಮೇಲೆ ಇಂಥ ಶಬ್ದಗಳನ್ನು ಪ್ರಯೋಗ ಮಾಡುತ್ತಿದ್ದಾರೆ. ಖರ್ಗೆಯವರು ಈ ಹಿಂದೆ ಮೋದಿ ಅವರು ನೂರು ತಲೆಯ ರಾವಣ ಎಂಬ ಹೇಳಿಕೆ ನೀಡುದ್ದರು. ಇದೀಗ ಪ್ರಧಾನಿಯನ್ನು ವಿಷದ ಹಾವು ಎಂದಿರುವ ಅವರು ಕೂಡಲೇ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿರುವ ಅವರು, ಪ್ರಚಾರದಿಂದ ಖರ್ಗೆಯವರನ್ನು ದೂರ ಇಟ್ಟು, ಎಫ್‌ಐಆರ್ ದಾಖಲಿಸಬೇಕು ಎಂದು ಆಯೋಗಕ್ಕೆ ಮನವಿ ಮಾಡಿರುವುದಾಗಿ ತಿಳಿಸಿದರು.
ಅಮಿತ್ ಶಾ, ಯೋಗಿ ಆದಿತ್ಯನಾಥ್ ಪ್ರಚಾರಕ್ಕೆ ನಿಷೇಧ ಹೇರಬೇಕು: ಕಾಂಗ್ರೆಸ್
ಕರ್ನಾಟಕದಲ್ಲಿ ಚುನಾವಣಾ ಪ್ರಚಾರದ ವೇಳೆ ಕೇಂದ್ರ ಸಚಿವ ಅಮಿತ್ ಶಾ ಹಾಗೂ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ದ್ವೇಷ ಭಾಷಣ ಮಾಡಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಹಿರಿಯ ಮುಖಂಡ ಅಭಿಷೇಕ್ ಮನು ಸಿಂಘ್ವಿ ನೇತೃತ್ವದಲ್ಲಿ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ.
ದೂರು ನೀಡಿದ ಬಳಿಕ ಕಾಂಗ್ರೆಸ್ ಹಿರಿಯ ಮುಖಂಡ ಅಭಿಷೇಕ್ ಮನು ಸಿಂಘ್ವಿ ಮಾತನಾಡಿ, ಕೇಂದ್ರ ಗೃಹ ಸಚಿವ ಅಮಿತ್ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಅದಿತ್ಯನಾಥ್ ಅವರ ವಿರುದ್ಧ ದೂರು ನೀಡಿದ್ದೇವೆ. ಇಂತಹವರ ಪ್ರಚಾರಕ್ಕೆ ನಿಷೇಧ ಹೇರಬೇಕು ಎಂದು ಆಗ್ರಹಿಸಲಾಗಿದೆ ಎಂದು ತಿಳಸಿದರು.
ಇದನ್ನೂ ಓದಿ | Karnataka Election 2023: ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ಓಪನ್ ಮಾಡಲು ಬಂದಿದ್ದೇನೆ: ರಾಹುಲ್ ಗಾಂಧಿ
ಇಬ್ಬರು ನಾಯಕರು ಜನರ ನಡುವೆ ದ್ವೇಷ ಹೆಚ್ಚಿಸುವ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಬಂದರೆ ಬ್ಯಾನ್ ಮಾಡಿರುವ ಸಂಘಟನೆ ಕಾರ್ಯಕರ್ತರನ್ನು ಹೊರಬಿಡುತ್ತಾರೆ ಎಂದು ಭಾಷಣದಲ್ಲಿ ಹೇಳಿದ್ದಾರೆ. ಕೋಮು ಸಂಘರ್ಷಕ್ಕೆ ಕಾರಣವಾಗುವಂತಹ ಹೇಳಿಕೆ ನೀಡಿದ್ದು, ಇವೆಲ್ಲ ಸತ್ಯಕ್ಕೆ ದೂರವಾದ ಹೇಳಿಕೆಗಳಾಗಿವೆ. ಹೇಳಿಕೆ ನೀಡಿದವರು ಎಷ್ಟೇ ದೊಡ್ಡವರಾಗಿದ್ದರೂ ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶ ಇದೆ. ಈ ಬಗ್ಗೆ ಆಯೋಗಕ್ಕೆ ಮನವಿ ಮಾಡಿದ್ದೇವೆ ಎಂದು ಹೇಳಿದರು.