Site icon Vistara News

Minister D Sudhakar : ಸಚಿವ ಸುಧಾಕರ್‌ ವಿರುದ್ಧ ಮುಗಿಬಿದ್ದ ಬಿಜೆಪಿ ನಿಯೋಗ; ಸಂತ್ರಸ್ತೆ ಭೇಟಿ, ನ್ಯಾಯಕ್ಕೆ ಗುಡುಗು

Protest against Minister D Sudhakar from dalit organizations

ಬೆಂಗಳೂರು:‌ ದಲಿತರ ಆಸ್ತಿ ಕಬಳಿಕೆ, ಹಲ್ಲೆ ಹಾಗೂ ಜಾತಿ ನಿಂದನೆ (Property grabbing, assault and casteist slurs) ಆರೋಪದ ಅಡಿಯಲ್ಲಿ ಸಚಿವ ಡಿ. ಸುಧಾಕರ್‌ (Minister D Sudhakar)​ ಮೇಲೆ ದಾಖಲಾಗಿರುವ ಎಫ್‌ಐಆರ್‌ (FIR registered) ಪ್ರಕರಣವನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದೆ. ಈ ನಿಟ್ಟಿನಲ್ಲಿ ಉಗ್ರ ಹೋರಾಟಕ್ಕೆ ಮುಂದಾಗಿದ್ದು, ಇದರ ಭಾಗವಾಗಿ ಸಚಿವ ಡಿ.ಸುಧಾಕರ್‌ ಅವರಿಂದ ವಂಚನೆಗೆ ಒಳಗಾಗಿರುವುದಾಗಿ ಆರೋಪ ಮಾಡಿರುವ ಮುನಿಯಮ್ಮ ಎಂಬುವವರ ಕುಟುಂಬವನ್ನು ಬಿಜೆಪಿ ನಿಯೋಗ ಭೇಟಿ ಮಾಡಿದೆ.

ಯಲಹಂಕದಲ್ಲಿರುವ ಮುನಿಯಮ್ಮ ಅವರ ಮನೆಗೆ ಬಿಜೆಪಿ ಪಕ್ಷದ ದಲಿತ ನಿಯೋಗ ಭೇಟಿ ನೀಡಿದ್ದು, ಮಾಜಿ ಡಿಸಿಎಂ ಗೋವಿಂದ ಕಾರಜೋಳ ಹಾಗೂ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಎನ್. ರವಿಕುಮಾರ್ ಸೇರಿದಂತೆ ಸ್ಥಳೀಯ ಮುಖಂಡರು ಮಾತುಕತೆ ನಡೆಸಿದ್ದಾರೆ.

Minister D Sudhakar infront of Vidhana soudha

ಶೆಡ್‌ನಲ್ಲಿರುವವರಿಗೆ ತರಾಟೆ

ಅಲ್ಲದೆ, ಈ ವಿವಾದಿತ ಜಾಗದಲ್ಲಿ ಈಗ ಶೆಡ್‌ ನಿರ್ಮಾಣಗೊಂಡಿದ್ದಲ್ಲದೆ, ಅಲ್ಲಿ ಕೆಲವು ಯುವಕರು ವಾಸವಾಗಿದ್ದಾರೆ. ಇದಕ್ಕಾಗಿ ಅಲ್ಲಿಗೆ ಹೋಗಿ ಆ ಯುವಕರನ್ನು ಬಿಜೆಪಿ ನಾಯಕರು ಪ್ರಶ್ನೆ ಮಾಡಿದ್ದಾರೆ. “ಯಾರು ನೀವು? ಎಲ್ಲಿಂದ ಬಂದಿದ್ದೀರಾ? ಇಲ್ಲಿ ನಿಮಗೆ ಏನು ಕೆಲಸ? ಎಂದು ಕಟುವಾಗಿ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಆ ಯುವಕರು ಉತ್ತರ ಹೇಳಲು ತಬ್ಬಿಬ್ಬಾಗಿದ್ದಾರೆ. ನಿಮ್ಮ ಜಾಗ ಅಲ್ಲ ಅಂದ ಮೇಲೆ ಇಲ್ಲಿಗೆ ಯಾಕೆ ಬಂದಿದ್ದೀರಿ? ಇಲ್ಲಿ ಏಕೆ ಉಳಿದುಕೊಂಡಿದ್ದೀರಿ ಎಂದು ಬಿಜೆಪಿ ನಾಯಕರು ಪ್ರಶ್ನೆ ಮಾಡಿದ್ದಾರೆ.

ಸಂಪುಟದಿಂದ ಸುಧಾಕರ್‌ ವಜಾಕ್ಕೆ ಕಾರಜೋಳ ಆಗ್ರಹ

ಕೂಡಲೇ ಸಚಿವ ಡಿ. ಸುಧಾಕರ್ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು. ರಾಜಧಾನಿಯಲ್ಲಿ ಈ ರೀತಿ ನಡೆದಿರುವುದು ಇದೇ ಮೊದಲು. ದಲಿತರ ಮೇಲೆ ದೌರ್ಜನ್ಯ ಮಾಡೋಕೆ ಸರ್ಕಾರ‌ ಇದೆಯಾ? ಇಲ್ಲಿ ಬಂದು ಸೇರಿರುವ ಗೂಂಡಾಗಳನ್ನು ಹೊರಹಾಕಬೇಕು ಎಂದು ಮಾಜಿ ಡಿಸಿಎಂ ಗೋವಿಂದ ಕಾರಜೋಳ ಆಗ್ರಹಿಸಿದ್ದಾರೆ.

Minister D Sudhakar infront of Vidhana soudha

ಸುಧಾಕರ್‌ ರಾಜೀನಾಮೆ ಕೊಡಲಿ: ಛಲವಾದಿ ನಾರಾಯಣ ಸ್ವಾಮಿ

ನಮ್ಮದು ನ್ಯಾಯಬದ್ಧ ಹೋರಾಟವಾಗಿದೆ. 2019ರಲ್ಲಿ‌ ಈ ಜಾಗಕ್ಕೆ ಡಿ.,. ಸುಧಾಕರ್‌ ಬಂದರು. ಡೆವಲಪ್ ಮಾಡುವುದಾಗಿ ಅನುಮತಿ ಪಡೆದುಕೊಂಡರು. ಅದಕ್ಕೆ ಸಬ್ ರಿಜಿಸ್ಟ್ರಾರ್‌ ಕಚೇರಿಯಲ್ಲಿ ಅಗ್ರಿಮೆಂಟ್ ಮಾಡಿಸಿಕೊಂಡಿದ್ದಾರೆ. 1 ಕೋಟಿ 40 ಲಕ್ಷ ರೂಪಾಯಿಗೆ ಚೆಕ್ ಕೊಟ್ಟರು. ಅದೆಲ್ಲಾ ಬೌನ್ಸ್ ಆಗಿದೆ. ಈ ಸಂಬಂಧ ತಕರಾರು ಅರ್ಜಿ ಸಲ್ಲಿಸಲಾಗಿದೆ. ಈ‌ ನಡುವೆಯೂ ಸಾಲ ಪಡೆದಿದ್ದಾರೆ. ಕೇಸ್ ಪೆಂಡಿಂಗ್ ಇದ್ದರೂ ಖಾತೆ ಮಾಡಿಸಿಕೊಂಡು ಕುಟುಂಬದವರನ್ನು ಎತ್ತಂಗಡಿ ಮಾಡಿಸಲು ಮುಂದಾಗಿದ್ದಾರೆ. ಹೀಗಾಗಿ ಸುಧಾಕರ್ ಅವರೇ ಸ್ವಯಂ ಆಗಿ ರಾಜೀನಾಮೆ ಕೊಡಬೇಕು. ಇಲ್ಲವೇ ಅವರನ್ನು ಸರ್ಕಾರವೇ ವಜಾ ಮಾಡಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಛಲವಾದಿ ನಾರಾಯಣ ಸ್ವಾಮಿ ಒತ್ತಾಯಿಸಿದ್ದಾರೆ.

ದಲಿತರಿಗೆ ಅನ್ಯಾಯವಾದರೂ ಸರ್ಕಾರ ಮೌನ: ಪೂರ್ಣಿಮಾ ಶ್ರೀನಿವಾಸ್ ಕಿಡಿ

ಈ ಸರ್ಕಾರ ದೀನದಲಿತರ ಪರ ಎಂದು ಹೇಳಿದ್ದು ಸುಳ್ಳಾ? ಅನ್ಯಾಯ ಆಗಿದೆ ಎಂದರೂ ಸುಮ್ಮನೆ ಇದ್ದಾರೆ. ಯಾಕೆ ಮೌನ ಆಗಿದ್ದೀರಿ? ಈ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಇಲ್ಲವಾದರೆ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ. ಜನರ ಬಳಿ ಹೋಗುತ್ತೇವೆ. ಕೂಡಲೇ ಕ್ರಮ ತೆಗೆದುಕೊಂಡು ಅವರನ್ನು ಸಚಿವ ಸ್ಥಾನದಿಂದ ಕೈಬಿಡಬೇಕು ಎಂದು ಪೂರ್ಣಿಮಾ ಶ್ರೀನಿವಾಸ್‌ ಆಗ್ರಹಿಸಿದ್ದಾರೆ.

ಇದನ್ನೂ ಓದಿ: Load Shedding : ಬೆಂಗಳೂರಲ್ಲೂ ಶುರವಾಯ್ತಾ ಅನಧಿಕೃತ ಲೋಡ್‌ ಶೆಡ್ಡಿಂಗ್!

ಇವರು ಆಡಿದ್ದೇ ಆಟವಾ?: ರವಿಕುಮಾರ್

ಸುಧಾಕರ್ ಒಬ್ಬರು ಮಂತ್ರಿಯಾಗಿ ಏನು ಮಾಡಿದ್ದಾರೆ ಎಂದು ನೋಡಲು ಬಂದೆವು. ಇಲ್ಲಿ‌ ನೋಡಿದರೆ ಗೊತ್ತಾಗುತ್ತದೆ. ನಿಜವಾದ ಭೂಮಾಲೀಕರು ನಿರಾಶ್ರಿತರಾಗಿದ್ದಾರೆ. ಈ‌ ಜಾಗವನ್ನು ಅಕ್ರಮವಾಗಿ ಕಬ್ಜ ಮಾಡಲಾಗಿದೆ. ಇವರು ಆಡಿದ್ದೇ ಆಟವೇ? ಎಂದು ವಿಧಾನ ಪರಿಷತ್‌ ಸದಸ್ಯ ರವಿಕುಮಾರ್‌ ಪ್ರಶ್ನೆ ಮಾಡಿದ್ದಾರೆ.

ಶೆಡ್‌ ಬೀಗ ಒಡೆಯಲು ಯತ್ನ

ಬಿಜೆಪಿ ನಾಯಕರ ಮುಂದೆ ವಿಷದ ಬಾಟಲ್ ಹಿಡಿದು ನ್ಯಾಯಕ್ಕಾಗಿ ಆಗ್ರಹಿಸಿದ ಸಂತ್ರಸ್ತ ಕುಟುಂಬ. ನ್ಯಾಯ ಕೊಡಿಸುವಂತೆ ಗೋಳು ತೋಡಿಕೊಂಡಿದ್ದಾರೆ. ವಿವಾದಿತ ಸ್ಥಳದಲ್ಲಿ ಅಕ್ರಮವಾಗಿ ಶೆಡ್ ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಿದರು. ಬಳಿಕ ಬಿಜೆಪಿ ನಿಯೋಗ ಭೇಟಿ ನೀಡುತ್ತಿದ್ದಂತೆ ಕುಟುಂಬದವರೊಂದಿಗೆ ಒಗ್ಗಟ್ಟಾಗಿ ಅಕ್ರಮವಾಗಿ ವಾಸವಾಗಿದ್ದವರನ್ನು ಖಾಲಿ ಮಾಡಿಸಲಾಗಿದೆ. ಶೆಡ್ಡಿಗೆ ಬೀಗ ಹಾಕಿ ತೆರಳುತ್ತಿದ್ದಂತೆ ಸ್ಥಳಕ್ಕೆ ನುಗ್ಗಿ ಬೀಗ ಒಡೆಯಲು ಯತ್ನ ಮಾಡಲಾಗಿದೆ. ಶೆಡ್‌ನಲ್ಲಿ ಅಕ್ರಮವಾಗಿ ಕೆಲವಿ ಪುರುಷರು ಮತ್ತು ಮಹಿಳೆಯರು ವಾಸವಾಗಿದ್ದಾರೆ ಎಂದು ಕೂಗಾಡಲಾಗಿದೆ. ತಳಕ್ಕೆ ಪೊಲೀಸರು ಬರುತ್ತಿದ್ದಂತೆ ಶೆಡ್ ಮುಂದೆಯೇ ಸಂತ್ರಸ್ತರು ಕುಳಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Exit mobile version