Site icon Vistara News

Jain Muni Murder: ಪೊಲೀಸರು ಒತ್ತಡದಲ್ಲಿದ್ದಾರೆ; ಜೈನ ಮುನಿ ಹತ್ಯೆ ತನಿಖೆ ಸಿಬಿಐಗೆ ಕೊಡಿ: ಬಿಜೆಪಿ ಆಗ್ರಹ

Jain muni kam kumar nandi case to cbi

ಬೆಂಗಳೂರು: ಚಿಕ್ಕೋಡಿಯ ಜೈನ ಮುನಿ ಕಾಮಕುಮಾರ ನಂದಿ ಹತ್ಯೆ (Jain Muni Murder) ಪ್ರಕರಣದಲ್ಲಿ ಯಾರದ್ದೋ ಒತ್ತಡಕ್ಕೆ ಪೊಲೀಸರು ಒಳಗಾಗಿದ್ದು, ಸರಿಯಾದ ತನಿಖೆ ಆಗಬೇಕೆಂದರೆ ಸಿಬಿಐಗೆ ಪ್ರಕರಣವನ್ನು ಒಪ್ಪಿಸಬೇಕು ಎಂದು ಬಿಜೆಪಿ ಸದಸ್ಯರು ಆಗ್ರಹಿಸಿದ್ದಾರೆ.

ಬಿಜೆಪಿ ಶಾಸಕ ಸಿದ್ದು ಸವದಿ ಮಾತನಾಡಿ, ಜೈನ ಮುನಿಗಳ ಹತ್ಯೆ ಪ್ರಕರಣದ ಹಿಂದೆ ಐಸೀಸ್ ಚಿತಾವಣೆ ಇದೆ. ಚಿತ್ರಹಿಂಸೆ ಮಾಡಿ ಕರೆಂಟ್ ಶಾಕ್ ಕೊಟ್ಡು ಕೊಂದಿದ್ದಾರೆ. ಇದರ ಹಿಂದೆ ಉಗ್ರಗಾಮಿಗಳ ಕೈವಾಡ ಇದೆ. ಇನ್ನೂ ಭಯಾನಕ ಘಟನೆ ಭವಿಷ್ಯದಲ್ಲಿ ಕಾಣುವ ಆತಂಕ ಇದೆ. ಇದರ ಹಿಂದೆ ಐಸಿಸ್‌ ಉಗ್ರರ ಚಿತಾವಣೆ ಇದೆ. ಆದರೆ ಸರ್ಕಾರದ ನಡೆ ಸಂಶಯಾಸ್ಪದವಾಗಿದೆ.

ಸರ್ವ ಸಂಗತ್ಯಾಗ ಮಾಡಿದ ಮುನಿಗಳ ಹತ್ಯೆಯ ಹಿಂದೆ ಪಿತೂರಿ ಇದೆ. ಜೈನ ಮುನಿಗಳ ಹತ್ಯೆ ಪ್ರಕರಣದ ತನಿಖೆ ಸಿಬಿಐಗೆ ನೀಡಬೇಕು. ಸ್ವಾಮಿಗಳು ಆರ್ಥಿಕ ವ್ಯವಹಾರ ಮಾಡಿರುವ ಸಾಧ್ಯತೆ ಇಲ್ಲ. ಭಕ್ತರು ಆರ್ಥಿಕ ವ್ಯವಹಾರ ಮಾಡಿರಬಹುದು. ಸಂಸ್ಕಾರ ಕೊಡುವ ಮುನಿಗಳು ಆರ್ಥಿಕ ವ್ಯವಹಾರ ಮಾಡುವ ಸಾಧ್ಯವಿಲ್ಲ. ಸರ್ಕಾರ ಮುಚ್ಚಿಡುವ ಯತ್ನ ಮಾಡುತ್ತಿದೆ. ಎಲ್ಲ ಮುನಿಗಳಿಗೆ ರಕ್ಷಣೆ ನೀಡಬೇಕು ಎಂದರು.

ಬಿಜೆಪಿ ಶಾಸಕ ಅಭಯ್ ಪಾಟೀಲ್ ಮಾತನಾಡಿ, ನನ್ನ ನೇತೃತ್ವದಲ್ಲಿ ಕಮಿಟಿ ಆಗಿಲ್ಲ. ಆದರೆ ಜೈನ ಮುನಿಗಳ ಹತ್ಯೆ ಬಗ್ಗೆ ವರದಿ ಪಡೆದಿದ್ದೇನೆ. ಅವರ ಪೂರ್ವಾಶ್ರಮದ 40 ಎಕರೆ ಜಮೀನಿದೆ. ಎಲ್ಲಾ ತ್ಯಾಗ ಮಾಡಿದವರು ಬಡ್ಡಿಗೆ ದುಡ್ಡು ಬಿಟ್ಟಿದ್ದಾರೆ ಅನ್ನೋದು ಹಾಸ್ಯಾಸ್ಪದ. ನಾನು ಸ್ವತಃ ಚಿಕ್ಕೋಡಿಗೆ ಹೋಗಿದ್ದೆ. ಅಲ್ಲಿನ ಜನರಿಗೆ ಹೀಗೆ ಸ್ಟೇಟ್ಮೆಂಟ್ ಕೊಡಬೇಕು ಅಂತ ಒತ್ತಡ ಹಾಕಿದ್ದಾರೆ.

ಇದೆಲ್ಲ ನೋಡಿದ್ರೆ ಪೊಲೀಸರು ಯಾರದ್ದೋ ಒತ್ತಡಕ್ಕೆ ಬಲಿಯಾಗಿದ್ದಾರೆ. ಹಾಗಾಗಿ ಸಿಬಿಐ ತನಿಖೆ ಮಾಡಬೇಕು. ಸರ್ಕಾರ ಇಬ್ಬರು ಆರೋಪಿಗಳ ಹೆಸರನ್ನ ಹೇಳಲಿಲ್ಲ‌. ನಾರಾಯಣಪಾಳಿ ಒಬ್ಬರ ಹೆಸರನ್ನ ಮಾತ್ರ ಹೇಳಿದ್ದಾರೆ. ಸ್ವಾಮೀಜಿ ಹಣಕಾಸು ವ್ಯವಹಾರ ಮಾಡಿದ್ದಾರೆ ಅಂತ ಹೇಳಿದ್ದಾರೆ. ಇದು ಸತ್ಯಕ್ಕೆ ದೂರವಾದ್ದು ಎಂದು ಹೇಳಿದರು.

ಇದನ್ನೂ ಓದಿ: Jain Muni Murder : ರಾಜ್ಯ ಸರಕಾರಕ್ಕೆ ಆಮರಣಾಂತ ಉಪವಾಸ ಎಚ್ಚರಿಕೆ ಕೊಟ್ಟ ಜೈನಮುನಿ

ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ದಯವಿಟ್ಟು ನಿಮಗೆ ಕೊಲೆ ಮಾಹಿತಿ ಇದ್ರೆ ಗೃಹ ಇಲಾಖೆಗೆ ತಿಳಿಸಿ ಎಂದು ಬಿಜೆಪಿ ನಾಯಕರಿಗೆ ತಿಳಿಸುತ್ತೇನೆ. ಮಾಧ್ಯಮದ ಮುಂದೆ ಹೇಳಿಕೆ ಬೇಡ. ತನಿಖಾ ತಂಡಕ್ಕೆ ಮಾಹಿತಿ ಕೊಡಿ. ಸಿದ್ದು ಸವದಿ ಅವರು ISIS ಅಂತ ಹೇಳಿದ್ದಾರೆ. ಇದು ದಿಕ್ಕು ತಪ್ಪಿಸೋ ಕೆಲಸ. ನಾವು ಪಾರದರ್ಶಕ ತನಿಖೆ ಮಾಡ್ತಿದ್ದೇವೆ. ವಾಟ್ಸಾಪ್ ಸ್ಟೇಟಸ್ ಬದಲಾವಣೆ ರೀತಿಯಲ್ಲಿ ಮಾಡಲು ಸಾಧ್ಯವಿಲ್ಲ. ಬಿಜೆಪಿಯವರಿಗೆ ಯಾಕೆ ಆತುರ? ಏನೇ ಸಾಕ್ಷಿ ಇದ್ರೂ ಕೊಡಿ ಎಂದರು.

ಗೃಹ ಸಚಿವರು ಸ್ಥಳಕ್ಕೆ ಹೋಗದ ಬಗ್ಗೆ ಬಿಜೆಪಿ ಕಳವಳ ವಿಚಾರಕ್ಕೆ ಪ್ರತಿಕ್ರಿಯಿಸಿ, ಪ್ರಾಥಮಿಕ ತನಿಖೆಯಲ್ಲಿ, ವೈಯಕ್ತಿಕ ವಿಚಾರ ಅಂತ ಬಂದಿದೆ. ರಾಜ್ಯಪಾಲರ ಭಾಷಣ ಆಗಿದೆ, ಬಜೆಟ್ ಆಗಿದೆ, ಜನರು ಸಮಸ್ಯೆ ಎದುರಿಸ್ತಿದ್ದಾರೆ. ನಿಮ್ಮ ವಿಪಕ್ಷ ನಾಯಕ ಎಲ್ಲಿ? ಕರ್ನಾಟಕ ಸದನಕ್ಕೆ ಒಂದು ಇತಿಹಾಸ ಇದೆ. ಅದಕ್ಕೆ ಕಳಂಕ ತಂದು ಕಪ್ಪು ಚುಕ್ಕೆ ಆಗಿದ್ದೀರ. ಎಲ್ಲಿ ನಿಮ್ಮ ವಿಪಕ್ಷ ನಾಯಕರೆಲ್ಲಿ ಸ್ವಾಮಿ? ಮೊದಲು ಅದರ ಕಡೆ ಗಮನ ಕೊಡಿ. ಗೃಹ ಇಲಾಖೆ ಸಮರ್ಥರ ಕೈಯಲ್ಲಿದೆ. ಏನೇ ಇದ್ದರೂ ತನಿಖೆ ನಡೆಸುತ್ತಾರೆ ಎಂದರು.

Exit mobile version