ಬೆಂಗಳೂರು: ಬಿಜೆಪಿಯವರು ಇಷ್ಟು ವರ್ಷ ಮಹಿಳೆಯರ ಕುರಿತು ಯಾವುದೇ ಮಾತನಾಡದೆ ಇದೀಗ ಘೋಷಣೆಗಳನ್ನು ಮಾಡುತ್ತಿರುವುದನ್ನು ನೋಡಿದರೆ ಕಾಂಗ್ರೆಸ್‌ನ 200 ಯುನಿಟ್ ಉಚಿತ ವಿದ್ಯುತ್ ಯೋಜನೆಗೆ ಹೆದರಿದ್ದಾರೆ ಎನ್ನುವುದು ತಿಳಿಯುತ್ತದೆ ಎಂದು ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ತಿಳಿಸಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಭಾಗಿಯಾಗುವ, ನಾ ನಾಯಕಿ ಸಮಾವೇಶದ ನಡುವೆ ಸಲೀಂ ಅಹ್ಮದ್ ಮಾತನಾಡಿದರು.
೨೦೦ ಯುನಿಟ್ ಕೊಡುತ್ತೀವಿ ಎಂದು ಹೇಳಿದ್ದನ್ನು ತಡೆಯಲು ಅವರಿಗೆ ಆಗುತ್ತಿಲ್ಲ. ಇಲ್ಲಿವರೆಗೆ ಏನೂ ಮಾಡದಿದ್ದ ಸರ್ಕಾರ, ಇದೀಗ ಪ್ರಿಯಾಂಕಾ ಗಾಂಧಿಯವರು ಆಗಮಿಸುತ್ತಿರುವಾಗ, ತಾವು ಮಹಿಳಾ ಪರ ಎಂದು ಹೇಳಿಕೊಳ್ಳುತ್ತಿದ್ದಾರೆ. ಪೂರ್ಣ ಪುಟ ಜಾಹೀರಾತು ನೀಡಿದ್ದಾರೆ ಎಂದರು.
ಮಹಿಳೆಯರಿಗೆ ಟಿಕೆಟ್ ನೀಡುವ ಕುರಿತು ಪ್ರತಿಕ್ರಿಯಿಸಿ, ಮಹಿಳೆಯರಿಗೆ ಹೆಚ್ಚು ಟಿಕೆಟ್ ನೀಡುವ ಕುರಿತು ಹೇಳಬಹುದು. ಆದರೆ ಇಷ್ಟೇ ನೀಡಬೇಕು ಎಂದು ಹೇಳುವ ಸಾಧ್ಯತೆ ಕಡಿಮೆ ಎಂದರು.
ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿದ ಮಾಜಿ ಸಚಿವೆ ಮೋಟಮ್ಮ, ಜೂನಿಯರ್ ಇಂದಿರಾ ಗಾಂಧಿ ಅವರ ಮಾತುಗಳನ್ನು ಕೇಳಲು ಸೇರಿದ್ದೇವೆ. ಒಂದು ಕುಟುಂಬವನ್ನು ನಿರ್ವಹಿಸಲು ಸಮರ್ಥ ಆಗಿದ್ದೇವೆ. ಅದೇ ರೀತಿ ಪಕ್ಷವನ್ನು ಅಧಿಕಾರಕ್ಕೆ ತರಲು ಸಮರ್ಥರಾಗಿದ್ದೇವೆ. ಆ ರೀತಿ ಪಕ್ಷ ಕಟ್ಟಲು ಟೊಂಕ ಕಟ್ಟಿ ನಿಲ್ಲಬೇಕು. ಮಹಿಳೆಯರಿಗೆ ಕಾಂಗ್ರೆಸ್ ಪಕ್ಷ ಏನು ಮಾಡಿಲ್ಲ ಹೇಳಿ? ಇಂದಿರಾ ಗಾಂಧಿ, ಮನಮೋಹನ್ ಸಿಂಗ್ ಅವರು ಅನೇಕ ಯೋಜನೆಗಳನ್ನು ಕೊಟ್ಟರು. ಸಂವಿಧಾನದಿಂದ ಮತದಾನ ಹಕ್ಕು, ಆಸ್ತಿ ಹಕ್ಕು, ರಾಜಕೀಯವಾಗಿ ಸ್ಥಳೀಯ ಸಂಸ್ಥೆಗಳಲ್ಲಿ 50% ಮೀಸಲಾತಿ ಕೊಟ್ಟಿದ್ದಾರೆ. ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು, ಇದಕ್ಕಾಗಿ ಅಂದಿನ ಸ್ತ್ರೀ ಸಂಘಗಳನ್ನು ಮಾಡಿದರು ಎಂದರು.
ಗಂಡಸರು ವೇದಿಕೆ ಮುಂದೆ
ಮಹಿಳೆಯರ ಕಾರ್ಯಕ್ರಮವಾದ್ಧರಿಂದ ವೇದಿಕೆ ಮೇಲೆ ಯಾವುದೇ ಗಂಡಸರು ಕೂರುವುದಿಲ್ಲ ಎಂದು ನಿರ್ಧರಿಸದಲಾಗಿತ್ತು. ವೇದಿಕೆಗೆ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಇದು ನಿಮ್ಮ ಕಾರ್ಯಕ್ರಮ. ಆಹ್ವಾನಿತ ಗಣ್ಯರು ವೇದಿಕೆ ಎದುರು ಕೂರುತ್ತಾರೆ. ಆದರೆ ಯಾವುದೇ ಗಂಡಸರು ವೇದಿಕೆ ಮೇಲೆ ಇರುವುದಿಲ್ಲ ಎಂದು ವೇದಿಕೆಯಿಂದ ಕೆಳಗಿಳಿದರು. ಮಾಜಿ ಸಿಎಂ ಸಿದ್ದರಾಮಯ್ಯ ಸೇರಿ ಅನೇಕರು ಎದುರುಗಡೆ ಆಸೀನರಾದರು.