ನವದೆಹಲಿ/ಬೆಂಗಳೂರು: ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಮುಗಿದು, ಕಾಂಗ್ರೆಸ್ ಸರ್ಕಾರ ರಚನೆಯಾಗಿ ಒಂದು ತಿಂಗಳಾದರೂ ಬಿಜೆಪಿಗೆ ಮಾತ್ರ ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡಲು ಆಗುತ್ತಿಲ್ಲ. ಪ್ರತಿಪಕ್ಷ ನಾಯಕನ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಭಾನುವಾರ ದೆಹಲಿಗೆ ತೆರಳಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದರೂ ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡಿಲ್ಲ. ಹಾಗಾಗಿ, ಸೋಮವಾರದಿಂದ ಆರಂಭವಾಗುವ ರಾಜ್ಯ ಬಜೆಟ್ ಅಧಿವೇಶನದ ವೇಳೆ ಪ್ರತಿಪಕ್ಷ ನಾಯಕನ ಕುರ್ಚಿ ಖಾಲಿಯೇ ಇರಲಿದೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಈ ಕುರಿತು ಬಿ.ಎಸ್.ಯಡಿಯೂರಪ್ಪ ಮಾತನಾಡಿದರು. “ಜೆ.ಪಿ. ನಡ್ಡಾ ಹಾಗೂ ಅಮಿತ್ ಶಾ ಅವರನ್ನು ಭೇಟಿಯಾಗಿ ರಾಜ್ಯ ರಾಜಕೀಯದ ಕುರಿತು ಚರ್ಚಿಸಿದ್ದೇನೆ. ಪ್ರತಿಪಕ್ಷ ನಾಯಕನ ಕುರಿತು ಕೂಡ ಚರ್ಚಿಸಲಾಗಿದೆ. ವೀಕ್ಷಕರಾಗಿ ಸೋಮವಾರವೇ ಮನ್ಸುಖ್ ಮಂಡಾವಿಯ ಹಾಗೂ ವಿನೋದ್ ತಾವಡೆ ಅವರನ್ನು ರಾಜ್ಯಕ್ಕೆ ಕಳುಹಿಸಲಿದ್ದಾರೆ. ಇದಾದ ಬಳಿಕ ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡಲಾಗುತ್ತದೆ” ಎಂದು ತಿಳಿಸಿದರು.
ದೆಹಲಿಯಲ್ಲಿ ಬಿಎಸ್‌ವೈ ಮಾಹಿತಿ
“ರಾಜ್ಯಕ್ಕೆ ಆಗಮಿಸಲಿರುವ ವೀಕ್ಷಕರು ಶಾಸಕರ ಅಭಿಪ್ರಾಯವನ್ನು ಪಡೆದುಕೊಂಡು ಮುಂದಿನ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಪ್ರತಿಪಕ್ಷ ನಾಯಕನ ಆಯ್ಕೆಯು ಇನ್ನೆರಡು ದಿನದಲ್ಲಿ ಆಗುತ್ತದೆ. ಪ್ರತಿಪಕ್ಷ ನಾಯಕನ ಆಯ್ಕೆ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮವಾಗಿದೆ. ಪಕ್ಷದ ನಾಯಕರ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿ ಕೆಲಸ ಮಾಡುತ್ತೇವೆ” ಎಂದು ಬಿಎಸ್‌ವೈ ಸ್ಪಷ್ಟಪಡಿಸಿದರು.
ಇದನ್ನೂ ಓದಿ: BJP Karnataka : ಪ್ರತಿಪಕ್ಷ ನಾಯಕ, ರಾಜ್ಯ ಅಧ್ಯಕ್ಷ ಸ್ಥಾನದ ಬಗ್ಗೆ ಮಾತಾಡಬೇಡಿ: ಬಿಜೆಪಿ ನಾಯಕರಿಗೆ ನಳಿನ್ ಕಟೀಲ್ ಸೂಚನೆ
“ಕರ್ನಾಟಕದ ರಾಜಕೀಯ ಬೆಳವಣಿಗೆ ಸೇರಿ ಹಲವು ವಿಷಯಗಳ ಕುರಿತು ನಾಯಕರು ಮಾಹಿತಿ ಪಡೆದುಕೊಂಡಿದ್ದಾರೆ. ಅಗತ್ಯ ಬಿದ್ದರೆ ಮತ್ತೆ ದೆಹಲಿಗೆ ಆಗಮಿಸಬೇಕು ಎಂದು ಹೇಳಿದ್ದಾರೆ” ಎಂದು ಹೇಳಿದರು. ಸೋಮವಾರದಿಂದ ಬಜೆಟ್ ಅಧಿವೇಶನ ಆರಂಭವಾಗುವುದರಿಂದ ಭಾನುವಾರ ರಾತ್ರಿಯೇ ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ನೂತನ ಸರ್ಕಾರ ರಚನೆಯಾಗಿ ಒಂದು ತಿಂಗಳಾದರೂ ಬಿಜೆಪಿಗೆ ಮಾತ್ರ ಕರ್ನಾಟಕದಲ್ಲಿ ಒಬ್ಬ ಪ್ರತಿಪಕ್ಷ ನಾಯಕ ಸಿಗುತ್ತಿಲ್ಲ.