Site icon Vistara News

BJP Executive : ಕಾಂಗ್ರೆಸ್‌ನದು ಬೀದಿಜಗಳ, ಜೆಡಿಎಸ್‌ ಒಳಜಗಳ, ನಮ್ಮ ಗೆಲುವು ಅಚಲ ಎಂದ ನಳಿನ್‌ ಕುಮಾರ್‌ ಕಟೀಲ್‌

Nalin kumar Kateel

#image_title

ಬೆಂಗಳೂರು: ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಯಾರಾಗಬೇಕು ಎನ್ನುವುದೂ ಸೇರಿದಂತೆ ಹಲವು ವಿಚಾರದಲ್ಲಿ ಬೀದಿ ಕಾಳಗವೇ ನಡೆಯುತ್ತಿದೆ. ಜೆಡಿಎಸ್‌ನ ಬಸ್‌ ಯಾತ್ರೆ ಮನೆಯೊಳಗಿನ ಜಗಳದಿಂದಾಗಿ ಹಾಸನದಲ್ಲೇ ಬ್ರೇಕ್‌ ಫೇಲ್‌ ಆಗಿದೆ. ಆದರೆ, ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಮಾತ್ರ ಎಗ್ಗಿಲ್ಲದೆ ಸಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.‌ ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ಬಿಜೆಪಿ ರಾಜ್ಯ ವಿಶೇಷ ಕಾರ್ಯಕಾರಿಣಿ ಸಭೆಯ(BJP Executive) ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದ ಎರಡು ರಾಜಕೀಯ ಪಕ್ಷಗಳು ತಮ್ಮ ಆಂತರಿಕ ಗೊಂದಲದಿಂದ ಕುಸಿಯುತ್ತಿದೆ ಎಂದರು. ಬಿಜೆಪಿ ತನ್ನ ಪ್ರಚಾರವನ್ನು ಇನ್ನಷ್ಟು ವಿಸ್ತಾರಗೊಳಿಸುತ್ತಾ ಮನೆ ಮನೆಗಳಿಗೆ ತಲುಪಲು ಸಂಕಲ್ಪ ಮಾಡಿದೆ. ಈ ಬಾರಿ ೧೫೦ ಸ್ಥಾನಗಳಲ್ಲಿ ಗೆಲ್ಲುವುದು ಖಚಿತ ಎಂದರು.

ಬಿಜೆಪಿ ಕಾರ್ಯಕಾರಿ ಸಮಿತಿ ಸಭೆಯ ಉದ್ಘಾಟನೆ

ಪಕ್ಷವು ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ 150ಕ್ಕಿಂತ ಹೆಚ್ಚು ಶಾಸಕರ ಸ್ಥಾನ ಗೆದ್ದು ಮತ್ತೊಮ್ಮೆ ಸರಕಾರ ರಚಿಸಲಿದೆ ಎಂದು ವಿಶ್ವಾಸದಿಂದ ನುಡಿದ ಅವರು, ಬೂತ್, ಗ್ರಾಮಗಳಲ್ಲಿರುವ ಫಲಾನುಭವಿಯ ಮನಸ್ಸಿನಲ್ಲಿ ಬಿಜೆಪಿ ಪರ ಅಲೆ ಇದೆ. ವಾತಾವರಣ ನಮ್ಮ ಪರ ಇದೆ. ಬೂತ್ ವಿಜಯ, ಬೂತ್ ಸಂಕಲ್ಪ ಅಭಿಯಾನ ಅತ್ಯಂತ ಯಶಸ್ವಿಯಾಗಿದೆ ಎಂದು ಮೆಚ್ಚುಗೆ ಸೂಚಿಸಿದರು. ಇದರ ಮುಂದುವರಿದ ಭಾಗವಾಗಿದೆ. ಜಿಲ್ಲಾ ಸಮಾವೇಶಗಳು ಮತ್ತು ನಾಲ್ಕು ತಂಡಗಳಲ್ಲಿ ವಿಜಯ ಸಂಕಲ್ಪ ಯಾತ್ರೆ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಎಂದು ಪ್ರಕಟಿಸಿದರು.

ಒಂದೊಂದು ಕ್ಷೇತ್ರಕ್ಕೂ ಸಾವಿರ ಕೋಟಿ ಅನುದಾನ

ʻʻರಾಜ್ಯದ ಡಬಲ್ ಎಂಜಿನ್ ಸರಕಾರ ಅದ್ಭುತವಾಗಿ ಕೆಲಸ ನಿರ್ವಹಿಸುತ್ತಿದೆ. ಒಬ್ಬೊಬ್ಬ ಶಾಸಕರ ಕ್ಷೇತ್ರಕ್ಕೆ ಒಂದೊಂದು ಸಾವಿರ ಕೋಟಿಗೂ ಹೆಚ್ಚು ಅನುದಾನ ಬಂದಿದೆ. ಕೇಂದ್ರ- ರಾಜ್ಯ ಸರಕಾರಗಳು ಅತ್ಯಂತ ಸಮರ್ಥವಾಗಿ ಕಾರ್ಯ ಮಾಡುತ್ತಿವೆ. ರೈತ ವಿದ್ಯಾ ನಿಧಿಯಿಂದ 11 ಲಕ್ಷ ವಿದ್ಯಾರ್ಥಿಗಳಿಗೆ ಪ್ರಯೋಜನ ಸಿಕ್ಕಿದೆ. ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರ ಆರು ಸಾವಿರ ಮತ್ತು ರಾಜ್ಯ ಸರಕಾರ ನಾಲ್ಕು ಸಾವಿರ ಕೊಡುತ್ತಿದೆ. ದೇಶದಲ್ಲೇ ಮೊದಲ ಬಾರಿಗೆ ಬಂಜಾರ ಸಮುದಾಯಕ್ಕೆ 50 ಸಾವಿರ ಹಕ್ಕುಪತ್ರಗಳನ್ನು ಹಂಚಲಾಗಿದೆ. ಗೋವುಗಳಿಗೆ ಆಂಬುಲೆನ್ಸ್ ಆರಂಭಿಸಿದ ಪ್ರಥಮ ಸರಕಾರವಾಗಿ ಕರ್ನಾಟಕ ಗುರುತಿಸಿಕೊಂಡಿದೆ ಎಂದು ಸಾಧನೆಗಳ ವಿವರ ನೀಡಿದರು.

ಕಾಂಗ್ರೆಸ್‌, ಜೆಡಿಎಸ್‌ ಸ್ಥಿತಿ ಅಧೋಗತಿ

ʻʻಇವತ್ತು ಕಾಂಗ್ರೆಸ್ ಪಕ್ಷವು ಬಸ್ ಯಾತ್ರೆ ಜೊತೆಗೇ ಮುಖ್ಯಮಂತ್ರಿ ಸ್ಥಾನಕ್ಕೆ ಹೋರಾಟ ಮುಂದುವರಿಸಿದೆ. ಕಾಂಗ್ರೆಸ್ ಸಿಎಂ ಅಭ್ಯರ್ಥಿ ಒಬ್ಬರಿಗೆ ಕ್ಷೇತ್ರ ಹುಡುಕಾಡಿ ಮುಗಿದಿಲ್ಲ ಎಂದು ವ್ಯಂಗ್ಯವಾಗಿ ನುಡಿದರು.
ಪರಮೇಶ್ವರ್, ಮುನಿಯಪ್ಪರ ಹೋರಾಟದಿಂದ ಕಾಂಗ್ರೆಸ್ ಬಸ್ ಪಂಕ್ಚರ್ ಆಗುತ್ತಿದೆ. ಕಾಂಗ್ರೆಸ್ ಕಾಳಗ ಬೀದಿಕಾಳಗವಾಗಿದೆ. ಜೆಡಿಎಸ್ ಪಂಚರತ್ನ ಯಾತ್ರೆ ಬಿಜಾಪುರ ತಲುಪುವಾಗ ಹಾಸನದಲ್ಲಿ ಮನೆಯೊಳಗೆ ಜಗಳ ಆರಂಭವಾಗಿದೆ. ಆದ್ದರಿಂದ ಬಿಜೆಪಿ ಜನರ ವಿಶ್ವಾಸದ ಪಕ್ಷವಾಗಿ ಕಾಣುತ್ತಿದೆʼʼ ಎಂದು ವಿಶ್ಲೇಷಿಸಿದರು.

ರಾಜ್ಯದ ಸಾಧಕರಿಗೆ ಸಿಕ್ಕಿದೆ ಗೌರವ

ಹತ್ತಾರು ವರ್ಷಗಳಿಂದ ಪದ್ಮಶ್ರೀ, ಪದ್ಮವಿಭೂಷಣ, ಪದ್ಮಭೂಷಣ ಪ್ರಶಸ್ತಿಗಳನ್ನು ಕೊಡುತ್ತಾ ಬರಲಾಗುತ್ತಿದೆ. ಈ ಬಾರಿ ಕರ್ನಾಟಕಕ್ಕೆ 8 ‘ಪದ್ಮ’ ಪ್ರಶಸ್ತಿ ಲಭಿಸಿದೆ. ಹಿಂದೆ ಅರ್ಜಿ ಹಿಡಿದು ಹೋದವರಿಗೆ, ಮಂತ್ರಿಗಳ ಹಿಂದೆ ಸುತ್ತಿದವರಿಗೆ ಪ್ರಶಸ್ತಿ ಸಿಗುತ್ತಿತ್ತು. ಈಗ ಸಮಾಜದಲ್ಲಿ ತಮಟೆವಾದಕ ಮುನಿವೆಂಕಟಪ್ಪ, ರಾಣಿ ಮಾಚಯ್ಯ ಸೇರಿ ಅರ್ಹರಿಗೆ ಪ್ರಶಸ್ತಿ ಸಿಕ್ಕಿದೆ. ಎಸ್.ಎಲ್.ಭೈರಪ್ಪ, ಸುಧಾಮೂರ್ತಿ, ಎಸ್.ಎಂ.ಕೃಷ್ಣರಿಗೂ ಪ್ರಶಸ್ತಿ ಸಿಕ್ಕಿದ್ದು ಅವರೆಲ್ಲರಿಗೆ ಅಭಿನಂದನೆಗಳು ಎಂದು ತಿಳಿಸಿದರು.

ಬಿಜೆಪಿಗೆ ಮತ್ತೆ ಅಧಿಕಾರ ನಿಶ್ಚಿತ ಎಂದ ಅರುಣ್‌ ಸಿಂಗ್‌

ಅರುಣ್‌ ಸಿಂಗ್

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್ ಅವರು ಮಾತನಾಡಿ, ಮೂರ್ನಾಲ್ಕು ತಿಂಗಳಿನಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯಲಿದ್ದು, ಇದು ಅತ್ಯಂತ ಮಹತ್ವದ ಸಭೆ ಎಂದರು. ಪಕ್ಷದ ಸಿದ್ಧತೆ, ಜನರ ಒಲವು, ಹಿರಿಯರ ವಿಶ್ಲೇಷಣೆ ಗಮನಿಸಿದರೆ ಬಿಜೆಪಿ ಮತ್ತೆ ಅಧಿಕಾರ ಪಡೆಯುವುದು ನಿಶ್ಚಿತ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ ಎಂದು ತಿಳಿಸಿದರು.

ಬಿಜೆಪಿ 150ಕ್ಕೂ ಹೆಚ್ಚು ಸೀಟು ಗೆಲ್ಲಲಿದೆ. ಬಿಜೆಪಿ ಬಳಿ ಸಕ್ರಿಯ- ಸದೃಢ ಕಾರ್ಯಕರ್ತರ ಶಕ್ತಿ ಇದೆ. ಬಿಜೆಪಿ ನಿರಂತರವಾಗಿ ದೇಶಸೇವೆ, ಸಮಾಜಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಬೂತ್ ಕಮಿಟಿ, ಪೇಜ್ ಸಮಿತಿ ಸೇರಿ ಅಭೇದ್ಯ ಸಂಘಟನೆ ನಮ್ಮ ಪಕ್ಷದ್ದು. ಇಂಥ ಸಂಘಟನೆ ಬೇರೆ ಪಕ್ಷಗಳ ಬಳಿ ಇಲ್ಲ ಎಂದು ವಿಶ್ಲೇಷಿಸಿದರು.


ಸಮರ್ಥ ನಾಯಕರೇ ಇಲ್ಲದ ಕಾಂಗ್ರೆಸ್ ಪಕ್ಷ
ಕಾಂಗ್ರೆಸ್ ಪಕ್ಷ ನಾಯಕರು, ನೀತಿ ಇಲ್ಲದ ಪಕ್ಷ. ಕಾಂಗ್ರೆಸ್ ತೊರೆಯುವವರ ಸಂಖ್ಯೆ ಹೆಚ್ಚಾಗಿದೆ. ದೃಷ್ಟಿಹೀನ ಪಕ್ಷವದು. ರಾಹುಲ್ ಗಾಂಧಿಯವರು ಏನು ಹೇಳುತ್ತಾರೆಂದು ಯಾರಿಗೂ ಅರ್ಥ ಆಗುವುದಿಲ್ಲ. ತುಷ್ಟೀಕರಣದ ನೀತಿ ಕಾಂಗ್ರೆಸ್‍ನದು. ಸಿದ್ದರಾಮಯ್ಯ ಆಡಳಿತದಲ್ಲಿ ಪಿಎಫ್‍ಐಗೆ ಪ್ರೋತ್ಸಾಹ, ಹಿಂದೂಗಳ ಹತ್ಯೆ ನಿರಂತರವಾಗಿತ್ತು ಎಂದು ಅರುಣ್ ಸಿಂಗ್ ಟೀಕಿಸಿದರು.

ಮೋದಿ-ಅಮಿತ್‌ ಶಾ ಜೋಡಿ ಮಾಡುತ್ತೆ ಮೋಡಿ ಎಂದ ಬಿಎಸ್‌ವೈ

ಬಿ.ಎಸ್‌. ಯಡಿಯೂರಪ್ಪ

ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಾತನಾಡಿ, ಕಾಂಗ್ರೆಸ್ ಮುಖಂಡ ಯಾರು ರಾಹುಲ್ ಗಾಂಧಿಯೇ? ವಿಶ್ವವೇ ಮೆಚ್ಚಿದ ಮಹಾನ್ ನಾಯಕ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರು ನಮ್ಮ ಜೊತೆ ಇರಬೇಕಾದರೆ ಬರುವಂಥ ಕರ್ನಾಟಕ ಸೇರಿ ಎಲ್ಲ ಚುನಾವಣೆಗಳಲ್ಲಿ ಬಿಜೆಪಿ ಜಯಭೇರಿ ಬಾರಿಸುವುದು ನಿಶ್ಚಿತ ಎಂದು ನುಡಿದರು.

ಕರ್ನಾಟಕದ ಯಾವುದಾದರೂ ಮನೆಗೆ ಹೋಗಿ ಸರಕಾರದ ಸವಲತ್ತು ಸಿಗದ ಒಂದು ಮನೆ ಇದ್ದರೆ ತಿಳಿಸಿ ಎಂದು ಕಾರ್ಯಕರ್ತರು ಮತ್ತು ಮುಖಂಡರಿಗೆ ಸೂಚಿಸಿದ ಅವರು, ಸರ್ವರಿಗೂ ಸಮಬಾಳು, ಸಮಪಾಲು ಚಿಂತನೆಯಡಿ ಅನೇಕ ಸವಲತ್ತುಗಳನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೊಟ್ಟಿವೆ. ಕರ್ನಾಟಕದ ಬಜೆಟ್ ಸಂದರ್ಭದಲ್ಲೂ ನಿರೀಕ್ಷೆಗೆ ಮೀರಿ ಸವಲತ್ತುಗಳನ್ನು ಕೊಡಲಿದ್ದೇವೆ ಎಂದು ಬಿಎಸ್‌ವೈ ಪ್ರಕಟಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರ ಗೌರವಧನ ಹೆಚ್ಚಳ, ಬಂಜಾರ ಸಮುದಾಯಕ್ಕೆ ಹಕ್ಕುಪತ್ರ, ಗ್ರಾಮ ಒನ್ ಯೋಜನೆ ಜಾರಿ, ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರಕಾರದಿಂದ 5,300 ಕೋಟಿ ನೀಡಿದ್ದು, ಪ್ರಧಾನಿ ಮೋದಿಜಿ ಅವರಿಗೆ ಅಭಿನಂದನೆಗಳು ಎಂದು ತಿಳಿಸಿದರು. ಕೃಷಿಗೆ ಒತ್ತು, ಇಂಧನ ಕ್ಷೇತ್ರಕ್ಕೆ ಆದ್ಯತೆ ಕೊಟ್ಟಿದ್ದು, ಇದು ದೂರದೃಷ್ಟಿಯ ಚಿಂತನೆ ಎಂದರು ಯಡಿಯೂರಪ್ಪ.

ಕಾಂಗ್ರೆಸ್ ಯಾತ್ರೆ ಪಂಕ್ಚರ್ ಆಗಲಿದೆ
ಕಾಂಗ್ರೆಸ್ 2 ಬಸ್ ಯಾತ್ರೆ ನಡೆದಿದೆ. ಕಾಂಗ್ರೆಸ್ ಪಕ್ಷದಲ್ಲಿ ಅತೃಪ್ತಿ ಅಸಮಾಧಾನ ತುಂಬಿ ತುಳುಕುತ್ತಿದೆ. ಪರಮೇಶ್ವರ್ ಅವರು ಅಸಮಾಧಾನ ಸೂಚಿಸಿದ್ದಾರೆ ಕಾಂಗ್ರೆಸ್ ಬಸ್ ಯಾತ್ರೆ ಮಧ್ಯದಲ್ಲೇ ಪಂಕ್ಚರ್ ಆಗಲಿದೆ ಎಂದು ಯಡಿಯೂರಪ್ಪ ನುಡಿದರು. ಕಾಂಗ್ರೆಸ್ ಕನಸು ಕಾಣುವ ಕಾಲ ಮುಗಿದಿದೆ ಎಂದು ವಿಶ್ವಾಸದಿಂದ ತಿಳಿಸಿದರು.
ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ನಾವು ಒಗ್ಗಟ್ಟಿನಿಂದ ಇದ್ದೇವೆ. ರಾಜ್ಯಾಧ್ಯಕ್ಷರು, ಮುಖ್ಯಮಂತ್ರಿ, ನಾನು ಮತ್ತು ಅರುಣ್ ಸಿಂಗ್ 3 ತಂಡಗಳಲ್ಲಿ ಯಾತ್ರೆ ಮಾಡಲಿದ್ದೇವೆ ಎಂದು ತಿಳಿಸಿದರು.

ದಲಿತರಿಗೆ ಅನ್ಯಾಯ ಮಾಡಿದ ಪಕ್ಷ ಕಾಂಗ್ರೆಸ್‌ ಎಂದ ಜೋಶಿ

ಕೇಂದ್ರದ ಸಚಿವ ಪ್ರಲ್ಹಾದ್ ಜೋಶಿ ಅವರು ಮಾತನಾಡಿ, ಅತ್ಯುತ್ತಮ ಬಜೆಟ್ ಅನ್ನು ಕೇಂದ್ರ ಸರಕಾರ ಮಂಡಿಸಿದೆ. ಅಮೃತ ಕಾಲದ ಲಕ್ಷಣಗಳು ಕಾಣುತ್ತಿವೆ. ರಾಜ್ಯದ ಚುನಾವಣಾ ಯುದ್ಧದಲ್ಲಿ ನಾವು ಗೆಲ್ಲಲಿದ್ದೇವೆ ಎಂದು ನುಡಿದರು. ಭಾರತವು ಮೋದಿಜಿ ಅವರ ನೇತೃತ್ವದಲ್ಲಿ ಜಗತ್ತಿನ ನಾಯಕನಾಗಿದೆ. ಇನ್ನು ಕೆಲಸವೇ ವರ್ಷಗಳಲ್ಲಿ ಅದು ವಿಶ್ವದ ಮುಂಚೂಣಿ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ತಿಳಿಸಿದರು.
ಸಿದ್ದರಾಮಯ್ಯನವರು ಖರ್ಗೆಯನ್ನು ಸೋಲಿಸಿದರು. ಪರಮೇಶ್ವರರನ್ನು ಮುಗಿಸಿದರು. ಮುನಿಯಪ್ಪರನ್ನು ಮುಳುಗಿಸಲು ಹೊರಟಿದ್ದಾರೆ. ದಲಿತರಿಗೆ ಅನ್ಯಾಯ ಮಾಡಿದ ಪಕ್ಷ ಕಾಂಗ್ರೆಸ್ ಎಂಬುದನ್ನು ಜನರಿಗೆ ತಿಳಿಸಬೇಕಿದೆ. ನಾವು ಮೀಸಲಾತಿ ಹೆಚ್ಚಿಸಿ ಸಾಮಾಜಿಕ ನ್ಯಾಯ ಕೊಟ್ಟದ್ದನ್ನು ತಿಳಿಸಬೇಕು ಎಂದು ಮನವಿ ಮಾಡಿದರು.

ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಕರ್ನಾಟಕದ ಸಹ ಉಸ್ತುವಾರಿ ಡಿ.ಕೆ. ಅರುಣಾ, ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ್, ಡಿ.ವಿ.ಸದಾನಂದ ಗೌಡ, ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಅಧ್ಯಕ್ಷರು, ಅಪೇಕ್ಷಿತರು ಭಾಗವಹಿಸಿದ್ದರು.

ಇದನ್ನೂ ಓದಿ : Karnataka Election : ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿಯಾಗಿ ಧರ್ಮೇಂದ್ರ ಪ್ರಧಾನ್‌, ಅಣ್ಣಾಮಲೈ ಸಹ ಪ್ರಭಾರಿ

Exit mobile version