Site icon Vistara News

Karnataka Election: ಬಿಜೆಪಿಯಿಂದ ಜಗದೀಶ್ ಶೆಟ್ಟರ್‌ 27 ಬೆಂಬಲಿಗರ ಉಚ್ಚಾಟನೆ

Karnataka Is Not Gujarat, Hubballi Is Not Ahmedabad; Jagadish Shettar Taunts BJP

ಜಗದೀಶ್‌ ಶೆಟ್ಟರ್

ಹುಬ್ಬಳ್ಳಿ: ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಆರೋಪದಲ್ಲಿ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಅವರ 27 ಬೆಂಬಲಿಗರನ್ನು ಬಿಜೆಪಿಯಿಂದ ಉಚ್ಚಾಟಿಸಲಾಗಿದೆ. ಬಿಜೆಪಿ ರಾಜ್ಯ ಶಿಸ್ತು ಸಮಿತಿ ಆದೇಶದ ಮೇರೆಗೆ 27 ಸದಸ್ಯರನ್ನು 6 ವರ್ಷಗಳ ಕಾಲ ಉಚ್ಚಾಟಿಸಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ (Karnataka Election) ಬಿಜೆಪಿ ಅಧ್ಯಕ್ಷ ಸಂತೋಷ ಚವ್ಹಾಣ್ ಆದೇಶ ಹೊರಡಿಸಿದ್ದಾರೆ.

ಹುಡಾ ಮಾಜಿ ಅಧ್ಯಕ್ಷ ನಾಗೇಶ ಕಲಬುರ್ಗಿ, ಮಲ್ಲಿಕಾರ್ಜುನ್ ಸಾಹುಕಾರ, ವಿರುಪಾಕ್ಷ ರಾಯನಗೌಡರ್, ವಿಜಯಲಕ್ಷ್ಮೀ ತಿಮ್ಮೋಲೆ, ಭಾರತಿ ಟಪಾಲ್, ಇಮ್ತಿಯಾಜ್ ಮುಲ್ಲಾ ಸೇರಿದಂತೆ 27 ಸದಸ್ಯರು, ಕಾರ್ಯಕರ್ತರು, ಪಕ್ಷದ ಪದಾಧಿಕಾರಿಗಳನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಲಾಗಿದೆ.

ಇದನ್ನೂ ಓದಿ | Karnataka Election: ದುಬಾರಿ ಹೇಳಿಕೆ ನೀಡಿ ಪಕ್ಷಕ್ಕೆ ಘಾಸಿ ಮಾಡದಂತೆ ನಾಯಕರಿಗೆ ‘ಕಾಂಗ್ರೆಸ್ ಥಿಂಕ್‌ ಟ್ಯಾಂಕ್‌’ ತಾಕೀತು

ಹುಬ್ಬಳ್ಳಿ-ಧಾರವಾಡ ಕ್ಷೇತ್ರದ ಬಿಜೆಪಿ ಟಿಕೆಟ್‌ ಸಿಗದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಜಗದೀಶ ಶೆಟ್ಟರ್ ಇತ್ತೀಚೆಗೆ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಅವರು ಈಗ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದಾರೆ. ಆದರೆ, ಈಗ ಬಿಜೆಪಿಯಲ್ಲಿದ್ದುಕೊಂಡು ಜಗದೀಶ್ ಶೆಟ್ಟರ್‌ಗೆ ಬೆಂಬಲ ನೀಡುತ್ತಿದ್ದ ಹಿನ್ನೆಲೆಯಲ್ಲಿ 27 ಮಂದಿಯನ್ನು 6 ವರ್ಷ ಉಚ್ಚಾಟಿಸಲಾಗಿದೆ.

ಇದನ್ನೂ ಓದಿ | Karnataka Election 2023: ರಾಜ್ಯದ ಭವಿಷ್ಯ ಈ ಚುನಾವಣೆ ಮೇಲೆ ನಿಂತಿದೆ: ಅಮಿತ್‌ ಶಾ

ನನ್ನ ಶಕ್ತಿ ಏನೆಂದು ಬಿಜೆಪಿಯವರಿಗೆ ಗೊತ್ತಾಗಿದೆ: ಜಗದೀಶ್‌ ಶೆಟ್ಟರ್‌

ಹುಬ್ಬಳ್ಳಿ: ಶೆಟ್ಟರ್ ಮುಖ ನೋಡಿ ವೋಟು ಹಾಕುತ್ತೇವೆ ಎಂಬ ಭಾವನೆ ಜನರಲ್ಲಿ ಬರುತ್ತಿದೆ. ಬಿಜೆಪಿ ರಾಷ್ಟ್ರೀಯ ನಾಯಕರ ಚಾಲೆಂಜ್‌ ಅನ್ನು ಜನರೇ ಸ್ವೀಕರಿಸುತ್ತಿದ್ದಾರೆ. ಎಲ್ಲರೂ ನನ್ನನ್ನು ಗೆಲ್ಲಿಸಿ ಎಂದು ಪ್ರಚಾರ ಮಾಡಿದರೆ, ಬಿಜೆಪಿಯವರು ಶೆಟ್ಟರ್ ಸೋಲಿಸಿ ಅಂತ ಕ್ಯಾಂಪೇನ್ ಮಾಡುತ್ತಿದ್ದಾರೆ. ಹೀಗಾಗಿ ಜನರಲ್ಲಿ ನನ್ನ ಬಗ್ಗೆ ಸಹಾನುಭೂತಿ ಸೃಷ್ಟಿಯಾಗಿದೆ ಎಂದು ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿಜೆಪಿ ಪಕ್ಷ ಬಿಟ್ಟು ಹೊರಗೆ ಹೋದಮೇಲೆ ಶೆಟ್ಟರ್ ಶಕ್ತಿ ಏನಂತಾ ಗೊತ್ತಾಗಿದೆ. ಹೀಗಾಗಿ ಬಿಜೆಪಿಯವರಿಗೆ ತಳಮಳ ಶುರುವಾಗಿದೆ. ನನ್ನನ್ನು ರಾಜಕೀಯವಾಗಿ ಮುಗಿಸಲು ಷಡ್ಯಂತ್ರ ಮಾಡಿದ್ದರು. ಪ್ರತಿದಿನ ಒಬ್ಬರು ಬಂದು ಪ್ರಚಾರ ಮಾಡಿ, ಸುತ್ತಾಡಿ ಹೋಗುತ್ತಿದ್ದಾರೆ. ಬೇರೆ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಬಗ್ಗೆ ಚಿಂತೆಯಿಲ್ಲ, ಕೇವಲ ಶೆಟ್ಟರ್ ಒಬ್ಬರನ್ನು ಸೋಲಿಸಲು ಪ್ರಯತ್ನ ನಡೆಸುತ್ತಿದ್ದಾರೆ ಎಂದು ಕಿಡಿ ಕಾರಿದರು.

ಹಿಂಬಾಗಿಲ ರಾಜಕೀಯ ಮಾಡುವುದೇ ಬಿ.ಎಲ್. ಸಂತೋಷ್ ಸ್ವಭಾವ

ಕೇಂದ್ರ ಮಂತ್ರಿಗಳು‌ ಹುಬ್ಬಳ್ಳಿ-ಧಾರವಾಡ ಎಲ್ಲಾ ಕಾರ್ಪೋರೇಟರ್‌ಗಳ ಮೇಲೆ ನಿಗಾ ಇಟ್ಟಿದ್ದಾರೆ. ಪ್ರತಿ ಚಲನವಲನದ ಮೇಲೆ ನಿಗಾ ಇಟ್ಟು ಕಾಯುತ್ತಿದ್ದಾರೆ. ನಮ್ಮ ಬೆಂಬಲಿಗರಿಗೆ ಬೆದರಿಕೆ ಹಾಕುತ್ತಿದ್ದಾರೆ. ಬಿಜೆಪಿ ಮಾತ್ರವಲ್ಲಾ, ಕಾಂಗ್ರೆಸ್ ಕಾರ್ಪೊರೇಟರ್‌ಗಳಿಗೆ ಧಮ್ಕಿ ಹಾಕುತ್ತಿದ್ದಾರೆ. ಬಿ.ಎಲ್. ಸಂತೋಷ್‌ಗೆ ಡೈರೆಕ್ಟ್ ಫೈಟ್ ಮಾಡುವ ಸ್ವಭಾವವಿಲ್ಲ. ಹಿಂಬಾಗಿಲ ರಾಜಕೀಯ ಮಾಡುವುದೇ ಇವರ ಸ್ವಭಾವ. ಬಿ.ಎಲ್. ಸಂತೋಷ್ ವಿರುದ್ಧ ಮೊದಲು ಧ್ವನಿ ಎತ್ತಿದವನೇ ನಾನು. ಹೀಗಾಗಿ ಬಹಳಷ್ಟು ಜನ ಫೋನ್ ಮಾಡಿ ಅಭಿನಂದನೆ ಸಲ್ಲಿಸುತ್ತಿದ್ದಾರೆ ಎಂದು ಜಗದೀಶ್‌ ಶೆಟ್ಟರ್ ಹೇಳಿದರು.

ಯಾವುದೇ ಲಾಬಿ ಮಾಡಿ, ಕೈಕಾಲು ಹಿಡಿದು ರಾಜಕೀಯ ಮಾಡಿದವನು ನಾನಲ್ಲಾ. ಬಿ.ಎಲ್. ಸಂತೋಷ್ ಅವರೇ ತೇಜಸ್ವಿನಿ ಅನಂತಕುಮಾರ್‌ಗೆ ಟಿಕೆಟ್ ಕೈತಪ್ಪಿಸಿದರು. ಲಿಂಗಾಯತ ಲೀಡರ್‌ಶಿಪ್ ಇಲ್ಲದೆ ಸರ್ಕಾರ ಮಾಡುತ್ತೇವೆ ಎಂದು ಹೊರಟಿದ್ದಾರೆ. ಈಶ್ವರಪ್ಪ, ಯಡಿಯೂರಪ್ಪ ಯಾರೇ ನನಗೆ ಬೈದರೂ ಆಶೀರ್ವಾದ ಅಂತ ತೆಗೆದುಕೊಳ್ಳುತ್ತೇನೆ. ಇನ್ನೊಬ್ಬರ ಹೆಗಲ ಮೇಲೆ ಬಂದೂಕು ಇಟ್ಟು ಹೊಡೆಯುವುದು ಬಿಡಲಿ, ನೇರವಾಗಿ ನನ್ನ ಜತೆ ಯುದ್ಧಕ್ಕೆ ಬರಲಿ ಎಂದು ಬಿಜೆಪಿ ನಾಯಕರಿಗೆ ಸವಾಲು ಹಾಕಿದರು.

ಇದನ್ನೂ ಓದಿ | Karnataka Election 2023: ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ಓಪನ್ ಮಾಡಲು ಬಂದಿದ್ದೇನೆ: ರಾಹುಲ್ ಗಾಂಧಿ

ನಾನು ಹೊರಗೆ ಹೋದರೆ ಇವರಿಗೆ ಐಡಿಯಾಲಜಿ ನೆನಪಾಗಿದೆ. ಕಾಂಗ್ರೆಸ್‌ನವರನ್ನು ಕರೆತಂದು ಸರ್ಕಾರ ಮಾಡಿದಾಗ ಇವರ ಸಿದ್ಧಾಂತ ಎಲ್ಲಿ ಹೋಗಿತ್ತು? ಕಾಂಗ್ರೆಸ್ ಐಡಿಯಾಲಜಿ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗೆ ಇಲ್ಲಾ. ಕ್ರಿಮಿನಲ್‌ಗಳಿಗೆ ಟಿಕೆಟ್ ಕೊಡುತ್ತಿರುವ ಬಿಜೆಪಿಯಲ್ಲಿ ಯಾವುದೇ ಸಿದ್ಧಾಂತಗಳು ಉಳಿದಿಲ್ಲ. ಬಿಜೆಪಿ ಟೀಕಿಸಿದಷ್ಟು ನಾನು ಜಯದ ಹತ್ತಿರ ಹೋಗುತ್ತೇನೆ. ನಾನು ಎಲ್ಲ ಸವಾಲುಗಳನ್ನು ಎದುರಿಸಿ ಐತಿಹಾಸಿಕ ಗೆಲುವು ಸಾಧಿಸುತ್ತೇನೆ ಎಂದು ಹೇಳಿದರು.

Exit mobile version