Site icon Vistara News

BJP Karnataka: ಸಿಎಂ ಶಕುನಿ ಎಂದರೆ ನಿಮ್ಮನ್ನು ಶಿಖಂಡಿ ಎನ್ನಬಹುದೆ?: ಕಾಂಗ್ರೆಸ್‌ನ ಸುರ್ಜೆವಾಲಾಗೆ ಬಿಜೆಪಿ ಪ್ರಶ್ನೆ, ದೂರು ದಾಖಲು

Bommai surjewala

#image_title

ಬೆಂಗಳೂರು: ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ‘ಆಧುನಿಕ ಶಕುನಿ’ ಎಂದು ಸಂಬೋಧಿಸಿ ಅವರ ಘನತೆಗೆ ಚ್ಯುತಿ ತಂದಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಬಿಜೆಪಿ ಮನವಿ ಮಾಡಿದೆ. ಸಿಎಂ ಅವರನ್ನು ಶಕುನಿ ಎನ್ನುವುದಾದರೆ ನಿಮ್ಮನ್ನು ಶಿಖಂಡಿ ಎನ್ನಬಹುದಲ್ಲವೇ? ಎಂದು ಬಿಜೆಪಿ ಮುಖಂಡ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.

ಸುರ್ಜೆವಾಲ ಹೇಳಿಕೆ ವಿರುದ್ಧ ಬಿಜೆಪಿ ಕಾನೂನು ಪ್ರಕೋಷ್ಠದ ವತಿಯಿಂದ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. “ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಆಧುನಿಕ ಶಕುನಿ, ಮೀಸಲಾತಿ ಮೂಲಕ ಜನರನ್ನು ಒಡೆದು ಸಂಘರ್ಷ ಸೃಷ್ಟಿಸಿದ್ದಾರೆ” ಎಂದು ಸುರ್ಜೇವಾಲಾ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯಿಂದ ಮುಖ್ಯಮಂತ್ರಿಗಳ ಗೌರವಕ್ಕೆ ಚ್ಯುತಿ ಉಂಟಾಗಿದೆ. ಈ ಹೇಳಿಕೆಯಿಂದ ಪಕ್ಷದ ಕಾರ್ಯಕರ್ತರು ಪ್ರಚೋದನೆಗೆ ಒಳಗಾಗುವ ಮತ್ತು ಕೆರಳುವ ಸಂಭವವಿದೆ. ಆದ್ದರಿಂದ ಇಂಥ ಹೇಳಿಕೆ ಕೊಟ್ಟ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ತಿಳಿಸಲಾಗಿದೆ.
ಇನ್ನೊಂದು ಮನವಿಯಲ್ಲಿ, ತಿರುಪತಿ ತಿರುಮಲ ದೇವಸ್ಥಾನಕ್ಕೆ ಆರ್‍ಬಿಐ ವಿಧಿಸಿದ ದಂಡವನ್ನು ಮೋದಿ ಅವರ ಬಿಜೆಪಿ ಸರಕಾರ ತಿರುಪತಿ ಮೇಲೆ ದಾಳಿ ಮಾಡಿಸಿದೆ ಎಂದು ಸುಳ್ಳು ಆರೋಪ ಮಾಡಿ ಬಿಜೆಪಿ ವಿರುದ್ಧ ದುರುದ್ದೇಶಪೂರ್ವಕ ಹೇಳಿಕೆ ನೀಡಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ವಿರುದ್ಧ ನೀಡಲಾಗಿದೆ.

ದೂರಿನ ಬಳಿಕ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಚುನಾವಣಾ ಆಯೋಗಕ್ಕೆ ಎರಡು ವಿಚಾರವಾಗಿ ದೂರು ದಾಖಲಾಗಿದೆ. ರಣದೀಪ್ ಸಿಂಗ್ ಸುರ್ಜೇವಾಲ ಅವರು ಸಿಎಂ ಬೊಮ್ಮಾಯಿ ಅವರನ್ನ ಶಕುನಿಗೆ ಹೋಲಿಕೆ ಮಾಡಿ ಮಾತನಾಡಿದ್ದಾರೆ. ಒಬ್ಬ ಸಿಎಂ ಅನ್ನ ಹೇಗೆ ಸಂಬೋಧಿಸಬೇಕು ಅನ್ನೋದು ಗೊತ್ತಿಲ್ಲ. ಅವರ ನಾಯಕ ರಾಹುಲ್ ಗಾಂಧಿ ಅವರನ್ನ ಅನ್ವಯಿಸಿಕೊಂಡಿದ್ದಾರೆ.

ರಾಹುಲ್ ಗಾಂಧಿ ಬಾಯಿಗೂ ಬೀಗ ಇಲ್ಲ, ಇವರಿಗೂ ಇಲ್ಲ. ಇಬ್ಬರಿಗೂ ನಾಲಿಗೆ ಮೇಲೆ ಹಿಡಿತ ಇಲ್ಲ, ಆರೋಗ್ಯ ಕಳೆದುಕೊಂಡಿದ್ದಾರೆ. ಯಾವುದೇ ಮಾತು ಅಸಾಂಧಾನಿಕವಾಗಿದೆ. ಸಿಎಂ‌ ಅವರನ್ನ ಶಕುನಿ ಅಂದ್ರೆ, ನಿಮ್ಮನ್ನ ಶಿಖಂಡಿ ಅನ್ನಬಹುದಲ್ವಾ.? ಆದ್ರೆ ನಾವು ಆ ರೀತಿ ಹೇಳಲ್ಲ. ಸಿಎಂ ಅವರನ್ನ, ಪ್ರಧಾನಿ ಅವರನ್ನ ಕೇವಲವಾಗಿ ಮಾತನಾಡ್ತಾರೆ. ರಾಹುಲ್ ಗಾಂಧಿ ಅವರ ಜಾತಿಯನ್ನ ನಿಂಧನೆ ಮಾಡಿದ್ದಕ್ಕೆ ಅನರ್ಹ ಮಾಡಿದ್ದಾರೆ. ಇದು ನಿಮಗೆ ಪಾಠ ಅನಿಸಲ್ವಾ.? ರಾಜ್ಯದ ಕ್ಷಮೆ ಕೇಳಬೇಕು. ಈ ಬಗ್ಗೆ ದೂರು ನೀಡಲಾಗಿದೆ.

ಇದನ್ನೂ ಓದಿ: Rahul Gandhi: ಸರ್ವಾಧಿಕಾರಿ ಹೆದರಿದಾಗ ಪೊಲೀಸರನ್ನು ಕಳುಹಿಸುತ್ತಾನೆ: ಮೋದಿ ವಿರುದ್ಧ ಸುರ್ಜೆವಾಲ ಕಿಡಿ

ತಿರುಪತಿ ತಿರುಮಲದಲ್ಲಿ ಏನಾಗಿದೆ ಅನ್ನೋದು ಗೊತ್ತಿಲ್ಲ. ಈ ಬಗ್ಗೆ ವಿದೇಶಿ ವಿನಿಮಯ ಬಗ್ಗೆ ಆರ್.ಬಿ.ಐ ದಂಡ ಹಾಕಿದೆ. ಹಿಂದೂ ದೇವಾಲಯ ವಿಚಾರ ಬಂದಾಗ ಮೊದಲು ನಿಲ್ಲೋದೆ ಬಿಜೆಪಿ. ಹಿಂದೂ ವಿಚಾರದಲ್ಲಿ ಬಿಜೆಪಿ ಯಾವುದೇ ವಿರೋಧ ಮಾಡಲ್ಲ. ವಿದೇಶಿ ವಿನಿಮಯದ ವಿಚಾರವಾಗಿ ದಂಡ ಹಾಕಿದೆ. ಅದನ್ನ ಮಾಧ್ಯಮದ ಮೂಲಕ ನೋಡಿದೆವು. ನಮ್ಮ ಪಕ್ಷದ ಮೇಲೆ ಸುಳ್ಳು ಆರೋಪ ಮಾಡ್ತಿದ್ದಾರೆ.

ಮೋದಿ ಸರ್ಕಾರ ಹಾಗೂ ಬಿಜೆಪಿ ತಿರುಪತಿ ಮೇಲೆ ದಾಳಿ ನಡೆಸಿದೆ, ಭಕ್ತರ ಹುಂಡಿಗೆ ಹಾಕಿದ ಹಣಕ್ಕೆ 3.5ಕೋಟಿ ದಂಡ ಹಾಕಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಯಾಕೆ ವೈಲೇಷನ್ ಆಗಿದೆ ಅಂತ ತಿಳಿದುಕೊಳ್ಳಿ.. ಜನರನ್ನ ದಿಕ್ಕು ತಪ್ಪಿಸುವ ಕೆಲಸ ಮಾಡಲಾಗ್ತಿದೆ. ಈ ರೀತಿಯ ಟೂಲ್ ಕಿಟ್‌ಗೆ ಬಿಜೆಪಿ ಹೆದರಲ್ಲ. ಜನರಲ್ಲಿ ಅವಿಶ್ವಾಸ ಮೂಡಿಸೋ ಕೆಲಸ ಕಾಂಗ್ರೆಸ್ ಮಾಡ್ತಿದೆ. ನಿಮಗೆ ದಿಟ್ಟ ಉತ್ತರ ಕೊಡ್ತೀವಿ.

ಸಿಎಂ ಕುರಿತು ಎಸ್ಡಿಪಿಐ ಮುಖಂಡನಿಂದ ಅವಹೇಳನಕಾರಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಆವೇಶದಲ್ಲಿ ಅನೇಕರು ಏನೇನೋ ಮಾತಾಡ್ತಾರೆ. ಎಸ್‌ಡಿಪಿಐನವರು ಅಸಾಂವಿಧಾನಿಕವಾಗಿ ಮಾತನಾಡಿದ್ದಾರೆ. ಹೀಗೆ ಮಾತಾಡುವಾಗ ಅವರ ಎಚ್ಚರ ವಹಿಸಲಿ. ಅವರು ಏನು ಬಿಚ್ಚಿಸ್ತೀವಿ ಅಂದಿದಾರೋ ಅದನ್ನ ಪೊಲೀಸರು ಬಿಚ್ಚಿಸ್ತಾರೆ. ಸಂವಿಧಾನದ ಮೇಲೆ ನಂಬಿಕೆ ಇರೋರು ಹೀಗೆಲ್ಲ ಮಾತಾಡಲ್ಲ. ಕೆಲವರನ್ನು ಕಾಂಗ್ರೆಸ್‌ನವರು ಎತ್ತಿ ಕಟ್ಟಿ ಗೊಂದಲ ಸೃಷ್ಟಿಸ್ತಿದಾರೆ ಎಂದರು.

ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕ ಯೋಗೇಂದ್ರ ಹೂಡಾಘಟ್ಟ, ರಾಜ್ಯ ಪ್ಯಾನಲಿಸ್ಟ್ ಮಧು ಎನ್ ರಾವ್, ಕಾನೂನು ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯ ವಸಂತ್ ಕುಮಾರ್, ಯಶವಂತಕುಮಾರ್ ಅವರು ಈ ನಿಯೋಗದಲ್ಲಿದ್ದರು.

Exit mobile version