ಬೆಂಗಳೂರು: ಶಾಸಕರ ಅಸಮಾಧಾನ ಹಾಗೂ ಬಹಿರಂಗ ಹೇಳಿಕೆಗಳ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ರಾಜ್ಯ ಜಿಜೆಪಿ ನಾಯಕರು (BJP Karnataka ) ಕೊನೆಗೂ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಸೋಮವಾರ (ಡಿಸೆಂಬರ್11ರಂದು) ಬೆಳಗ್ಗೆ ಬೆಳಗಾವಿಯ ಸುವರ್ಣ ಸೌಧದಲ್ಲಿ ಸಭೆ ನಡೆಯಲಿದೆ. ಒಳಗಿನ ಬೇಗುದಿ ಹಾಗೂ ಪ್ರಖರ ಟೀಕೆಗಳನ್ನು ತಣ್ಣಗಾಗಿಸಲು ಈ ಸಭೆಯಲ್ಲಿ ಪ್ರಯತ್ನ ನಡೆಯಲಿದೆ.
ಬೆಳಗಾವಿ ಅಧಿವೇಶನದ ಬಿರುಸಿನ ನಡುವೆ ಶಾಸಕಾಂಗ ಪಕ್ಷದ ಸಭೆ ಕರೆಯಲು ಬಿಜೆಪಿ ಮರೆತಿತತತ್ತು. ಇದೀಗ ಸುವರ್ಣ ಸೌಧದಲ್ಲಿ ಬೆಳಗ್ಗೆ 10.15 ಕ್ಕೆ ಶಾಸಕಾಂಗ ಪಕ್ಷ ನಡೆಯಲು ಸಮಯ ನಿಗದಿ ಮಾಡಲಾಗಿದೆ. ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ವಿಪಕ್ಷ ನಾಯಕ ಆರ್ ಅಶೋಕ್ ನೇತೃತ್ವದಲ್ಲಿ ಈ ಸಭೆ ನಡೆಯಲಿದೆ. ಪಕ್ಷದ ಶಾಸಕರಲ್ಲಿ ಅಸಮಾಧಾನ ಭುಗಿಲೆದ್ದಿರುವ ಕಾರಣ ಈ ಸಭೆಗೆ ಹೆಚ್ಚು ಮಹತ್ವ ಸಿಗಲಿದೆ.
ಸಭೆಯಲ್ಲಿ ಬಿಜೆಪಿ ಶಾಸಕರ ಸಮಾಧಾನ ತಣಿಸುವ ಕೆಲಸವನ್ನು ಬಿವೈ ವಿಜಯೇಂದ್ರ ಅವರು ಮಾಡಲಿದ್ದಾರೆ. ವಿಪಕ್ಷ ನಾಯಕ ಆರ್ ಅಶೋಕ್ ವಿರುದ್ಧ ಕೆಲ ಶಾಸಕರು ಮುನಿಸಿಕೊಂಡಿದ್ದಾರೆ. ಅವರ ಬಗ್ಗೆ ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ಅವರೆಲ್ಲರನ್ನೂ ಸಮಾಧಾನ ಮಾಡುವ ಅಜೆಂಡಾ ಈ ಸಭೆಯದ್ದಾಗಿದೆ.
ಇದನ್ನೂ ಓದಿ : ಮೊಗಸಾಲೆ ಅಂಕಣ: ಒಣಗಿದ ಜಿಲ್ಲೆಯಲ್ಲಿ ಜೋಗದ ಬದಲು ಕಚ್ಚಾಟದ ರೋಗ
ಎಲ್ಲರನ್ನೂ ಜತೆಗೆ ಕರೆದುಕೊಂಡು ಹೋಗುವ ಉತ್ಸಾಹವನ್ನು ಬಿವೈ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಮೇಲೆ ವ್ಯಕ್ತಪಡಿಸಿದ್ದರು. ಅದೇ ಗುರಿಯೊಂದಿಗೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಅವರು ಎಲ್ಲ ಅಸಮಾಧಾನಗಳಿಗೆ ಉತ್ತರ ಹೇಳಲಿದ್ದಾರೆ. ಅದೇ ರೀತಿ ಸದನದಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ ಕಟ್ಟಿ ಹಾಕುವುದಕ್ಕೂ ಯೋಜನೆ ರೂಪಿಸಲಿದೆ.
ರಾಜ್ಯ ಬಿಜೆಪಿಯಲ್ಲಿ ಮುಂದುವರಿದ ಆಂತರಿಕ ಜಗಳ
ವಿರೋಧ ಪಕ್ಷದ ನಾಯಕ ಆರ್. ಆಶೋಕ್ ವಿರುದ್ಧ ಸಮರ ಸಾರಲು ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಸಭೆ ನಡೆಸಲು ಮುಂದಾಗಿದ್ದಾರೆ. ಬೆಂಗಳೂರು ಶಾಸಕರನ್ನು ಒಟ್ಟು ಸೇರಿ ಸಭೆ ಕರೆದಿದ್ದಾರೆ ವಿಶ್ವನಾಥ್. ಬುಧವಾರ ಬೆಳಗಾವಿಯಲ್ಲಿ ಸಭೆ ನಡೆಯಲಿದೆ. ರಾತ್ರಿಯ ಭೋಜನಕ್ಕೆ ಜತೆ ಸೇರಿ ಅವರು ಚರ್ಚೆ ನಡೆಸಲಿದ್ದಾರೆ.
ಕಳೆದ ಗುರುವಾರ ಆಶೋಕ್ ಅವರು ಸದನ ಬಹಿಷ್ಕಾರ ನಿಲುವಿಗೆ ವಿಶ್ವನಾಥ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು. ಪ್ರತಿಭಟನೆ ಮಾಡಬೇಕು ಎಂದು ಬಿಜೆಪಿ ಶಾಸಕರು ಪಟ್ಟು ಹಿಡಿದಿದ್ದರು. ಈ ವೇಳೆ ಬಹಿಷ್ಕಾರ ಮಾಡುವ ನಿರ್ಧಾರ ತೆಗೆದುಕೊಂಡಿದ್ದರು ಆರ್. ಆಶೋಕ್.
ಕಾರ್ಯಕರ್ತರ ಮೇಲಿನ ಹಲ್ಲೆ ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಳ್ಳದ ಆಶೋಕ್ ಎಂದು ವಿಶ್ವನಾಥ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಅವರು ಏಕವಚನದಲ್ಲಿ ಅಶೋಕ್ ಅವರನ್ನು ನಿಂದಿಸಿದ್ದಾರೆ ಕೂಡ.