ಚಿತ್ರದುರ್ಗ: ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಬಿಜೆಪಿಯ ಇನ್ನೊಂದು ಪ್ರಮುಖ ವಿಕೆಟ್ ಪತನವಾಗಿದೆ. ಕೋಟೆ ನಾಡಿನ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರು ಬಿಜೆಪಿ ತೊರೆಯಲು ನಿರ್ಧರಿಸಿದ್ದಾರೆ. ಅ.20ರಂದು ಅವರು ಕಾಂಗ್ರೆಸ್ ಸೇರ್ಪಡೆಯಾಗಲು (Operation Hasta) ಮುಹೂರ್ತ ನಿಗದಿಯಾಗಿದ್ದು, ಈ ಬಗ್ಗೆ ಅವರೇ ಖಚಿತಪಡಿಸಿದ್ದಾರೆ.
ಮಂಗಳವಾರ ಹಿರಿಯೂರಿನಲ್ಲಿ ಕಾರ್ಯಕರ್ತರ ಜತೆ ಸಭೆ ನಡೆಸಿದ ಬಳಿಕ ಪೂರ್ಣಿಮಾ ಶ್ರೀನಿವಾಸ್ ಅವರು ಕಾಂಗ್ರೆಸ್ ಸೇರ್ಪಡೆಯಾಗಲು ನಿರ್ಧರಿಸಿದ್ದಾರೆ. ಇದರಿಂದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ನಡೆಸಿರುವ ಆಪರೇಶನ್ ಹಸ್ತ ಯಶಸ್ವಿಯಾದಂತಾಗಿದೆ. ಶ್ರೀಕೃಷ್ಣ ಜನ್ಮಾಷ್ಟಮಿಯಂದು ಮಾಜಿ ಶಾಸಕಿ ನಿವಾಸಕ್ಕೆ ಡಿಕೆಶಿ ಭೇಟಿ ನೀಡಿದ್ದಾಗ, ಆ ಭೇಟಿಯ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ. ತಾನು ಬಿಜೆಪಿ ತೊರೆಯುವುದಿಲ್ಲ ಎಂದು ಪೂರ್ಣಿಮಾ ಶ್ರೀನಿವಾಸ್ ಹೇಳಿದ್ದರು. ಆದರೆ, ಈಗ ಕಾಂಗ್ರೆಸ್ ಸೇರ್ಪಡೆಯಾಗುವುದಾಗಿ ಅವರೇ ಘೋಷಿಸಿದ್ದಾರೆ.
ಇದನ್ನೂ ಓದಿ | HD Kumaraswamy : ಶೀಘ್ರ ಸರ್ಕಾರ ಪತನ ಎಚ್‌ಡಿಕೆ ಮೇಲೆ ಮುಗಿಬಿದ್ದ ಕೈ ನಾಯಕರು
ಚಿತ್ರದುರ್ಗದ ಯಾದವ ಗುರುಪೀಠಕ್ಕೆ ಭೇಟಿ ನೀಡಿದ ವೇಳೆ ಮಾತನಾಡಿದ ಹಿರಿಯೂರು ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರು, ಇದೇ ತಿಂಗಳು 20 ರಂದು ಕಾಂಗ್ರೆಸ್ ಸೇರಬೇಕು ಅಂದುಕೊಂಡಿದ್ದೇನೆ. ನಮ್ಮ ಸಮುದಾಯದ ಹಿತ ಬಯಸುವವರು ಬಂದು ಮಾತಾಡಿ, ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ಬಹಳ ಜನ ಹೇಳಿದ್ದಾರೆ. ಡಿಕೆಶಿ ಅವರು ನಿಮ್ಮ ತಂದೆಗೆ ಈ ಹಿಂದೆ ಅನ್ಯಾಯ ಆಗಿದೆ, ಅದನ್ನು ಸರಿಮಾಡಿಕೊಳ್ಳಿ ಎಂದು ಹೇಳಿದ್ದರು. ಹೀಗಾಗಿ ಬದಲಾವಣೆಗಾಗಿ ಕಾಂಗ್ರೆಸ್ ಸೇರುತ್ತೇನೆ. ಆದಷ್ಟು ಬೇಗ ಕಾಂಗ್ರೆಸ್ ಪಕ್ಷ ಸೇರುತ್ತೇನೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಸೇರಲು ಯಾವುದೇ ಬೇಡಿಕೆ ಇಟ್ಟಿಲ್ಲ. ನಾನು ಹಿಂದುಳಿದ ವರ್ಗಗಳ ಪ್ರತಿನಿಧಿ, ನನ್ನ ಸಮುದಾಯಕ್ಕೆ ನ್ಯಾಯ ಕೊಡಿಸುವುದು ನನ್ನ ಕರ್ತವ್ಯ. ಬಿಜೆಪಿಯಲ್ಲಿ ನನಗೆ ಬಿಎಸ್‌ವೈ, ಬೊಮ್ಮಾಯಿ ಅನುದಾನ ಕೊಟ್ಟಿದ್ದಾರೆ, ಆದರೆ, ನಮ್ಮ ಸಮಾಜಕ್ಕೆ ಕೊಟ್ಟ ಮಾತು ತಪ್ಪಿದ್ದಾರೆ. ಅದಕ್ಕೆ ನಮ್ಮ ಸಮಾಜದಲ್ಲಿ ಅಸಮಾಧಾನ ಇದೆ. ರಾಜ್ಯದಲ್ಲಿ ನಮ್ಮ ಸಮಾಜಕ್ಕೆ ರಾಜಕೀಯ ಸ್ಥಾನಮಾನ ಕೊಟ್ಟಿಲ್ಲ, ಆ ಸಮಯದಲ್ಲಿ ನನಗೆ ಬೇಸರವಾಯಿತು. ನಾನು ಕಾಂಗ್ರೆಸ್‌ಗೆ ಹೋದರೂ ಯಾರೇ ತಪ್ಪು ಮಾಡಿದರೂ ವಿರೋಧ ಮಾಡುತ್ತೇನೆ. ಯಾರೇ ಆಗಲಿ ಜನರ ಪರವಾಗಿ ಇದ್ದರೆ ಬೆಂಬಲ ಕೊಡುತ್ತೇನೆ ಎಂದು ಹೇಳಿದ್ದಾರೆ.
ಪತಿ ಶ್ರೀನಿವಾಸ್‌ಗೆ ಎಂಎಲ್‌ಸಿ ಸ್ಥಾನ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ವೈಯಕ್ತಿಕವಾಗಿ ಕೇಳುವುದು ಅವರ ಹಕ್ಕು, ಅವರು ಒಬ್ಬ ಡಬಲ್ ಗ್ರ್ಯಾಜುಯೇಟ್. ಸಮಾಜಸ ರಾಜ್ಯ ಅಧ್ಯಕ್ಷ, ಶಿಕ್ಷಣ ಸಂಸ್ಥೆ ನಡೆಸಿದವರು. ಕೇಳುವುದರಲ್ಲಿ ತಪ್ಪಿಲ್ಲ. ಮುಂದಿನ ದಿನಗಳಲ್ಲಿ ನೋಡೋಣ. ಕೈ ಪಕ್ಷ ಸೇರುವ ದಿನಾಂಕ ಫಿಕ್ಸ್ ಆಗಿಲ್ಲ. ಸಿಎಂ ಜತೆ ಮಾತನಾಡಿದ್ದೇನೆ, ಆದಷ್ಟು ಬೇಗ ಪಕ್ಷ ಸೇರುವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Mahisha Dasara : ಮಹಿಷ ದಸರಾವೂ ಇಲ್ಲ, ಚಾಮುಂಡಿ ಚಲೋವೂ ಇಲ್ಲ; ಎರಡಕ್ಕೂ ಸರ್ಕಾರ ಬ್ರೇಕ್
ಗೊಲ್ಲ ಸಮುದಾಯದ ಮತ ಸೆಳೆಯಲು ಕೈ ಪ್ಲ್ಯಾನ್
ತುಮಕೂರು, ಚಿತ್ರದುರ್ಗ ಭಾಗದಲ್ಲಿ ಗೊಲ್ಲ ಸಮುದಾಯದ ಮತಗಳೇ ನಿರ್ಣಾಯಕ. ಹೀಗಾಗಿ ಪೂರ್ಣಿಮಾ ಶ್ರೀನಿವಾಸ್‌ರನ್ನು ಸೆಳೆಯುವ ಮೂಲಕ ಲೋಕಸಭಾ ಚುನಾವಣೆಯಲ್ಲಿ ಗೊಲ್ಲ ಸಮುದಾಯದ ಮತ ಸೆಳೆಯಲು ಕಾಂಗ್ರೆಸ್ ಪ್ಲ್ಯಾನ್ ಮಾಡಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ʼಆಪರೇಷನ್ ಹಸ್ತʼ ವೇಗ ಪಡೆದಿದ್ದು, ವಿವಿಧ ಪಕ್ಷಗಳ ನಾಯಕರನ್ನು ಕಾಂಗ್ರೆಸ್ ಸೆಳೆಯುತ್ತಿದೆ.