Site icon Vistara News

Karnataka Election 2023: ಚುನಾವಣೆಗೆ ಬಿಜೆಪಿ ಮಾಸ್ಟರ್‌ಪ್ಲಾನ್‌; 50 ಜನರ ತಂಡ ರಚನೆ, 115 ಕ್ಷೇತ್ರಗಳೇ ಗುರಿ

Post Against BL Santosh; Case Filed Against Dinesh Amin Mattu, Bindu Gowda and others

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ (Karnataka Election 2023) ನಿಗದಿಯಾಗಿದೆ. ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳು ಇನ್ನಿಲ್ಲದ ಪ್ರಚಾರ ಆರಂಭಿಸಿವೆ. ಅದರಲ್ಲೂ, ಆಡಳಿತಾರೂಢ ಭಾರತೀಯ ಜನತಾ ಪಕ್ಷವು ಚುನಾವಣೆ ಘೋಷಣೆಯಾದ 24 ಗಂಟೆಯಲ್ಲಿಯೇ ಪಕ್ಷದ 50 ಶಾಸಕರು ಹಾಗೂ ಸಂಸದರ ತಂಡವೊಂದನ್ನು ರಚಿಸುವ ಮೂಲಕ ಚುನಾವಣೆಯ ಗೆಲುವಿಗೆ ರಣತಂತ್ರ ರೂಪಿಸಿದೆ ಎಂದು ತಿಳಿದುಬಂದಿದೆ. ಕರ್ನಾಟಕದ ಯಾವ ಕ್ಷೇತ್ರಗಳಿಗೆ ಆದ್ಯತೆ ನೀಡಬೇಕು, ಎಲ್ಲಿ ಪ್ರಚಾರ ಹೆಚ್ಚಿಸಬೇಕು, ಕಾರ್ಯತಂತ್ರ ಏನು ಎಂಬುದರ ಕುರಿತು ಚರ್ಚೆ ನಡೆಸಿಯೇ ತಂಡ ರಚಿಸಲಾಗಿದ್ದು, ತಂಡದ ಸದಸ್ಯರು ಈಗಾಗಲೇ ರಾಜ್ಯದಲ್ಲಿ ಕಾರ್ಯಾರಂಭ ಮಾಡಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ಬಿ.ಎಲ್‌.ಸಂತೋಷ್‌ ನೇತೃತ್ವದಲ್ಲಿ ಸಭೆ

ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾಗುತ್ತಲೇ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಕೇಂದ್ರ ಸಚಿವ, ಕರ್ನಾಟಕದ ಉಸ್ತುವಾರಿ ಧರ್ಮೇಂದ್ರ ಪ್ರಧಾನ್‌ ಸೇರಿ ಹಲವು ಮುಖಂಡರ ಜತೆ ಸಭೆ ನಡೆಸಲಾಗಿದ್ದು, ಆಗಲೇ 50 ಶಾಸಕರು ಹಾಗೂ ಸಂಸದರ ತಂಡವನ್ನು ರಚಿಸಲಾಗಿದೆ. ಕರ್ನಾಟಕದವರು ಮಾತ್ರವಲ್ಲ, ದೇಶದ ಹಲವೆಡೆ ಇರುವ ಬಿಜೆಪಿ ಶಾಸಕರು ಹಾಗೂ ಸಂಸದರು ತಂಡದಲ್ಲಿದ್ದಾರೆ ಎಂದು ತಿಳಿದುಬಂದಿದೆ.

ತಂಡದ ಸದಸ್ಯರ ಕೆಲಸವೇನು?

ಕರ್ನಾಟಕದ 224 ವಿಧಾನಸಭೆ ಕ್ಷೇತ್ರಗಳಲ್ಲಿ ಪ್ರಮುಖವಾಗಿ ಗಮನ ಹರಿಸಬೇಕಾದ 115 ಸೀಟುಗಳನ್ನು ಗುರುತಿಸಲಾಗಿದೆ. ತಂಡದಲ್ಲಿರುವ 50 ಸದಸ್ಯರಿಗೆ 2-3 ಕ್ಷೇತ್ರಗಳ ಜವಾಬ್ದಾರಿಯನ್ನು ವಹಿಸಲಾಗಿದೆ. ಈಗಾಗಲೇ ತಂಡದ ಸದಸ್ಯರು ಕರ್ನಾಟಕಕ್ಕೆ ಆಗಮಿಸಿದ್ದು, ಬಿ ಕೆಟಗರಿಯಲ್ಲಿರುವ 115 ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗೆ ಗುರುತಿಸಲಾದ ಕ್ಷೇತ್ರಗಳಲ್ಲಿ ಬಿಜೆಪಿಯ ಗೆಲುವು ಕಷ್ಟಸಾಧ್ಯವಾಗಿದೆ. ಹಾಗಾಗಿ, ಇಂತಹ ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಚಾರ ಕೈಗೊಳ್ಳುವುದು, ಜನರಿಗೆ ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಮಾಹಿತಿ ನೀಡುವುದು, ಗೆಲುವಿಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಏನು ಮಾಡಬೇಕು, ಯಾರಿಗೆ ಟಿಕೆಟ್‌ ನೀಡಬೇಕು ಎಂಬುದು ಸೇರಿ ಹಲವು ವಿಷಯಗಳ ಕುರಿತು ತಂಡದ ಸದಸ್ಯರು ಯೋಜನೆ ರೂಪಿಸಲಿದ್ದಾರೆ ಎಂದು ತಿಳಿದುಬಂದಿದೆ.

ತಂಡದಲ್ಲಿರುವ ಪ್ರಮುಖರು ಯಾರು?

ಕೇಂದ್ರ ಹಣಕಾಸು ಖಾತೆ ಸಹಾಯಕ ಸಚಿವ ಪಂಕಜ್‌ ಚೌಧರಿ, ಬಿಹಾರ ಶಾಸಕ ಸಂಜೀವ್‌ ಚೌರಾಸಿಯಾ, ಉತ್ತರ ಪ್ರದೇಶದ ಶಾಸಕ ಸತೀಶ್‌ ದ್ವಿವೇದಿ, ಆಂಧ್ರಪ್ರದೇಶದ ಪಿ.ಸುಧಾಕರ ರೆಡ್ಡಿ, ಸಂಸದರಾದ ರಮೇಶ್‌ ಬಿಧುರಿ, ನಿಶಿಕಾಂತ್‌ ದುಬೆ, ಸಂಜಯ್‌ ಭಾಟಿಯಾ ತಂಡದಲ್ಲಿದ್ದಾರೆ. ತಂಡದಲ್ಲಿರುವವರಲ್ಲಿ ಬಹುತೇಕರು ಇದಕ್ಕೂ ಮೊದಲು ಹಲವು ಚುನಾವಣೆಗಳಲ್ಲಿ ಕೆಲಸ ಮಾಡಿದವರೇ ಆಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಾಗೆಯೇ, ತಂಡದಲ್ಲಿರುವವರಿಗೆ ನಿಖರ ಕಾರ್ಯಯೋಜನೆಯ ಪಟ್ಟಿ ಕೂಡ ಲಭ್ಯವಾಗಬೇಕಿದೆ. ಇದಾದ ಬಳಿಕ ಕಾರ್ಯತಂತ್ರವು ಇನ್ನಷ್ಟು ಚುರುಕಾಗಲಿದೆ ಎನ್ನಲಾಗಿದೆ.

ಕರ್ನಾಟಕದಲ್ಲಿ ಈ ಬಾರಿ ತೀವ್ರ ಸ್ಪರ್ಧೆ ಇದೆ. ಮುಖ್ಯಮಂತ್ರಿ ಬದಲಾವಣೆ, ಬಸವರಾಜ ಬೊಮ್ಮಾಯಿ ನೇತೃತ್ವದ, ಭ್ರಷ್ಟಾಚಾರ ಆರೋಪ, ಸಮೀಕ್ಷೆಗಳ ಪ್ರಕಾರ ಕಾಂಗ್ರೆಸ್‌ಗೆ ಮುನ್ನಡೆ ಸಿಗುವ ಅಂದಾಜು, ಲಿಂಗಾಯತರ ಮತಗಳು ಒಡೆಯದಂತೆ ನೋಡಿಕೊಳ್ಳುವುದು, ಹಳೇ ಮೈಸೂರು ಭಾಗದಲ್ಲಿ ಪ್ರಾಬಲ್ಯ ಸಾಧಿಸುವುದು ಸೇರಿ ಬಿಜೆಪಿಗೆ ಹಲವು ಸವಾಲುಗಳಿವೆ. ಹಾಗಾಗಿಯೇ, ಇಂತಹ ನುರಿತ ತಂಡವನ್ನು ರಚಿಸುವ ಮೂಲಕ ಗೆಲುವಿಗೆ ಯೋಜನೆ ರೂಪಿಸಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Karnataka Elections: ಕಾಂಗ್ರೆಸ್‌ 2ನೇ ಪಟ್ಟಿಗೆ ಸಿದ್ದು, ಡಿಕೆಶಿ ನಡುವೆ ಮೂಡದ ಒಮ್ಮತ, 30 ಕ್ಷೇತ್ರಗಳಿಗೆ ಸಿಂಗಲ್‌ ಹೆಸರು

Exit mobile version