Site icon Vistara News

ಮಹಿಳೆಯರ ಬಗ್ಗೆ ವಿಶಾಲ ದೃಷ್ಟಿಕೋನವುಳ್ಳ ಏಕೈಕ ಪಕ್ಷ ಬಿಜೆಪಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

BJP is the only party with a broad vision for women says Cm Basavaraj Bommai

ತುಮಕೂರು: ಮಹಿಳೆಯರ ಕುರಿತಾಗಿ ವಿಶಾಲ ದೃಷ್ಟಿಕೋನವನ್ನು ಹೊಂದಿರುವ ಏಕೈಕ ಪಕ್ಷ ಬಿಜೆಪಿಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.

ಅವರು ತುಮಕೂರಿನಲ್ಲಿ ಶನಿವಾರ (ಜ.೨೧) ನಡೆದ ರಾಷ್ಟ್ರೀಯ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ಆರ್ಥಿಕತೆಯಲ್ಲಿಯೂ ಮಹಿಳೆಯರ ಪಾತ್ರ ಬಹಳ ದೊಡ್ಡದಿದೆ. ನಮ್ಮದು ಉಳಿತಾಯದ ಸಂಸ್ಕೃತಿ. ಈ ಉಳಿತಾಯ ಕುಟುಂಬದ ಆಸ್ತಿಯಾಗುತ್ತದೆ. ಕಷ್ಟದ ದಿನಗಳಲ್ಲಿ ಈ ಹಣ ನೆರವಿಗೆ ಬರಲಿದೆ. ಆದ್ದರಿಂದಲೇ ನಮ್ಮ ದೇಶದಲ್ಲಿ ಅತ್ಯಂತ ಕಡಿಮೆ ಬ್ಯಾಂಕುಗಳು ದಿವಾಳಿಯಾಗುತ್ತವೆ. ಪಾಶ್ಚಿಮಾತ್ಯ ದೇಶಗಳ ಬ್ಯಾಂಕುಗಳು ಹಾಗೂ ಮನೆಗಳಲ್ಲಿ ಉಳಿತಾಯ ಮಾಡುವ ಹಣದೊಂದಿಗೆ ನೇರವಾದ ಆರ್ಥಿಕ ಸ್ಪರ್ಧೆಯಿದೆ. ಉಳಿತಾಯ ಮಹಿಳೆಯರ ಶಕ್ತಿಯೂ ಹೌದು. ಸಾಕಷ್ಟು ವಿಚಾರಗಳಲ್ಲಿ ಮಹಿಳೆ ಅಭ್ಯಾಸದಿಂದಲೇ ಸಂಸ್ಕೃತಿಯನ್ನು ಬೆಳೆಸಿದ್ದಾರೆ ಎಂದು ಹೇಳಿದರು.

ನಮ್ಮ ತಾಯಂದಿರು ಶಿಕ್ಷಣ ಪಡೆಯದಿದ್ದರೂ ಅವರಲ್ಲಿ ಜ್ಞಾನ ಭಂಡಾರವೇ ಇತ್ತು. ಆಧ್ಯಾತ್ಮ, ಮೌಲ್ಯಗಳ ಜ್ಞಾನವರಲ್ಲಿತ್ತು. ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರೀಯ ಕಾರ್ಯಕಾರಿಣಿ ಸಮತಿಯಲ್ಲಿ ಹೆಣ್ಣುಮಗುವಿನ ಭ್ರೂಣಹತ್ಯೆಯ ಬಗ್ಗೆ ಮಾತನಾಡಿದ್ದನ್ನು ಸ್ಮರಿಸಿದ ಮುಖ್ಯಮಂತ್ರಿಗಳು, ನಮ್ಮ ಪ್ರಧಾನಿಗಳು ಅತ್ಯಂತ ಮೃದು ಹೃದಯದ, ಕರುಣೆಯುಳ್ಳ ವ್ಯಕ್ತಿ. ಇನ್ನೂ 25 ವರ್ಷಗಳ ಕಾಲ ಅವರೇ ಈ ದೇಶವನ್ನು ಮುನ್ನಡೆಸುತ್ತಾರೆ ಎನ್ನುವ ಬಗ್ಗೆ ಸಂಶಯವಿಲ್ಲ ಎಂದರು.

ಇದನ್ನೂ ಓದಿ: Karnataka Election: ಹಾಸನ ಪ್ರಜಾಧ್ವನಿಯಲ್ಲಿ ಒಡಕು ಧ್ವನಿ; ಸಿದ್ದರಾಮಯ್ಯ ಕುರಿತ ಹಾಡಿಗೆ ಡಿ.ಕೆ. ಸುರೇಶ್‌ ಅಪಸ್ವರ

ನಾಳೆಗಳು ನಿಮ್ಮವೇ
ಮಹಿಳೆಯರು ಸಂಘಟಿತರಾಗಿ, ಬಿಜೆಪಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಬೇಕು. ಬಿಜೆಪಿ ಮಹಿಳಾ ಮೋರ್ಚಾಕ್ಕೆ ಮಾತ್ರವಲ್ಲದೇ ಬಿಜೆಪಿಯ ನಾಯಕಿಯರೂ ಆಗಬೇಕು. ಸುಶ್ಮಾ ಸ್ವರಾಜ್ ಅವರು ಪಕ್ಷದ ಪ್ರಮುಖ ನಾಯಕಿಯಾಗಿದ್ದರು. ಎಲ್ಲ ಪ್ರಮುಖರೊಂದಿಗೆ ಹೆಗಲಿಗೆ ಹೆಗಲು ನೀಡಿ ಕಾರ್ಯನಿರ್ವಹಿಸಿದ್ದರು. ಕರ್ನಾಟಕದೊಂದಿಗೆ ಅವರಿಗೆ ವಿಶೇಷ ಸಂಬಂಧವಿತ್ತು. ಕನ್ನಡಿಗರ ಹೃದಯಗಳನ್ನು ಅವರು ತಲುಪಿದ್ದರು ಎಂದರು.

ಯಾವುದೇ ತರಬೇತಿಯಿಲ್ಲದೆ ಅವರು ಇದನ್ನು ಸಾಧಿಸಿದ್ದರು. ಆದರೆ ನಿಮಗೆ ಮಾಹಿತಿ ತಂತ್ರಜ್ಞಾನ, ಡಿಜಿಟಲ್ ಶಿಕ್ಷಣ, ಆರ್ಥಿಕ ಶಿಕ್ಷಣದ ಲಭ್ಯತೆ ಇದೆ. ಶಿಕ್ಷಣ ಮತ್ತು ಆರ್ಥಿಕ ಶಿಕ್ಷಣ ಇಂದಿನ ಅಗತ್ಯವಾಗಿದ್ದು, ಮಹಿಳೆಯರು ಇದನ್ನು ಸಾಧಿಸಿದರೆ ಅದಕ್ಕಿಂತ ದೊಡ್ಡ ಅಸ್ತ್ರವಿಲ್ಲ. ದೊಡ್ಡದಾಗಿ ಆಲೋಚಿಸಿ, ಕ್ರಮಗಳೂ ದೊಡ್ಡದಾಗಿರಬೇಕು. ಮಹಿಳೆಯರು ಶ್ರಮಜೀವಿಗಳು, ಪ್ರಾಮಾಣಿಕರಾಗಿದ್ದಾರೆ. ನ್ಯಾಯ, ಸಮಾನ ಅವಕಾಶಗಳಿಗಾಗಿ ಮಾತನಾಡಬೇಕು. ತನ್ಮೂಲಕ ದೇಶಕ್ಕೆ ಕೀರ್ತಿ ತರಬೇಕು ಎಂದರಲ್ಲದೆ ನಾಳೆಗಳು ನಿಮ್ಮವೇ ಎಂದರು.

ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ
ತಾಯಿಯೊಂದಿಗೆ ಜನ್ಮಪೂರ್ವದ ಸಂಬಂಧವಿರುತ್ತದೆ. ದೇಶವನ್ನು ನಾವು ಭಾರತ ಮಾತೆ ಎಂದು ಕರೆಯುತ್ತೇವೆ. ಭೂಮಿ ತಾಯಿ ಎಲ್ಲರ ಭಾರವನ್ನು ಹೊರುತ್ತಾಳೆ. ಅಂತೆಯೇ ತಾಯಿಯೊಬ್ಬಳು ತನ್ನ ಮಕ್ಕಳು. ಸಮಾಜದ ಭಾರವನ್ನು ಹೊರುತ್ತಾಳೆ. ದೇಶದ ಬಡವರಲ್ಲಿ ಬಡವರಾದ ತಾಯಂದಿರಿಗೆ ಶಿಕ್ಷಣ, ಉದ್ಯೋಗ ಮತ್ತು ಸಬಲೀಕರಣ ಒದಗಿಸಬೇಕು. ನಮ್ಮ ಸರ್ಕಾರ ಇದನೇ ಮಾಡುತ್ತಿದೆ. ನಮ್ಮ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ನೀಡಿದ್ದು, ರೈತ ವಿದ್ಯಾ ನಿಧಿ ಮೂಲಕ ರೈತರ ಮಕ್ಕಳು, ಕಾರ್ಮಿಕರ ಮಕ್ಕಳಿಗೆ ಈ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ. ಎಲ್ಲ ಹೆಣ್ಣುಮಕ್ಕಳಿಗೆ ಅವಕಾಶ ದೊರೆತರೆ ಗಂಡು ಮಕ್ಕಳನ್ನು ಎಲ್ಲ ಕ್ಷೇತ್ರಗಳಲ್ಲಿ ಹಿಂದಿಕ್ಕಿ ಮುಂದುವರಿಯುತ್ತಿದ್ದಾರೆ ಎಂದರು.

ಇದನ್ನೂ ಓದಿ: ಸಮಸ್ಯೆಗಿಂತ ಸನ್ಮಾನವೇ ದೊಡ್ಡದಾಯ್ತು; ಚಿಕ್ಕದಾಸರಹಳ್ಳಿ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳ ಗಲಾಟೆ ಜೋರಾಯ್ತು

ಸ್ವಾವಲಂಬಿ ಹಾಗೂ ಸ್ವಾಭಿಮಾನದ ಬದುಕು ಕಟ್ಟಿಕಳ್ಳಲು ನೆರವು
ಕಷ್ಟಕರ, ಸೂಕ್ಷ್ಮ ಹಾಗೂ ಬುದ್ದಿವಂತ ಕೆಲಸಗಳನ್ನು ಮಾಡಲು ಮಹಿಳೆಯರು ಸಮರ್ಥರಿದ್ದು, ಕೇವಲ ಅವಕಾಶಗಳನ್ನು ನೀಡಬೇಕಿದೆ. ನಮ್ಮ ಸರ್ಕಾರ ಅವಕಾಶಗಳನ್ನು ನೀಡುವ ಕೆಲಸ ಮಾಡುತ್ತಿದ್ದು, ಈ ವರ್ಷ 5 ಲಕ್ಷ ಮಹಿಳೆಯರಿಗೆ ಸ್ವಯಂ ಉದ್ಯೋಗವನ್ನು ನೀಡುತ್ತಿದೆ. ಸ್ತ್ರೀ ಸಾಮರ್ಥ್ಯ ಯೋಜನೆಯಡಿ ಯೋಜನೆಗಳಿಗೆ ಆರ್ಥಿಕ ನೆರವು, ಉತ್ಪಾದನೆ, ಮಾರುಕಟ್ಟೆ ವ್ಯವಸ್ಥೆಗಳನ್ನು ಒದಗಿಸಲಾಗುತ್ತಿದೆ. ಸ್ವಾವಲಂಬಿ ಹಾಗೂ ಸ್ವಾಭಿಮಾನದ ಬದುಕನ್ನು ಕಟ್ಟಿಕಳ್ಳಲು ಸರ್ಕಾರ ನೆರವು ನೀಡುತ್ತಿದೆ ಎಂದು ತಿಳಿಸಿದರು.

Exit mobile version