Site icon Vistara News

Live | BJP Janasankalpa Yatre | ಸಿದ್ದರಾಮಯ್ಯ ಮಾಡಿದ್ದು ಭಾಷಣ; ಸಾಮಾಜಿಕ ನ್ಯಾಯ ನೀಡಿದ್ದು ಬಿಜೆಪಿ: ಸಿಎಂ ಬೊಮ್ಮಾಯಿ

ಕಡೂರು: ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಸಾಮಾಜಿಕ ನ್ಯಾಯದ ಕುರಿತು ಭಾಷಣ ಮಾಡಿದರೇ ಹೊರತು, ನಿಜವಾಗಿ ಸಾಮಾಜಿಕ ನ್ಯಾಯ ನೀಡಿದ್ದು ಬಿಜೆಪಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಬೃಹತ್‌ ಜನಸಂಕಲ್ಪ ಯಾತ್ರೆಯಲ್ಲಿ ಬೊಮ್ಮಾಯಿ ಮಾತನಾಡಿದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ, ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ, ಮಾಜಿ ಶಾಸಕರಾದ ಜೀವರಾಜ್‌, ಕೇಂದ್ರ ಸಚಿವೆ ಹಾಗೂ ಸಂಸದೆ ಶೋಭಾ ಕರಂದ್ಲಾಜೆ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ್‌, ಕಡೂರು ಶಾಸಕ ಬೆಳ್ಳಿ ಪ್ರಕಾಶ್‌ ಮುಂತಾದವರು ಉಪಸ್ಥಿತರಿದ್ದರು.

Ramesha Doddapura

ಸಾಮಾಜಿಕ ನ್ಯಾಯ ನೀಡಿದ್ದು ಬಿಜೆಪಿ ಎಂದ ಸಿಎಂ ಬಸವರಾಜ ಬೊಮ್ಮಾಯಿ: ಸಂವಿಧಾನವನ್ನು ಸಿದ್ದರಾಮಯ್ಯನವರೇ ಬರೆದಂತೆ ಮಾತನಾಡುತ್ತಾರೆ. ಸಾಮಾಜಿಕ ನ್ಯಾಯ ಎನ್ನುತ್ತಲೇ ಬಾಬಾ ಸಾಹೇಬ್‌ ಅಂಬೇಡ್ಕರರನ್ನು ಸೋಲಿಸಿದವರು ನೀವು. ಅವರು ಮೃತಪಟ್ಟಾಗ ಜಾಗವನ್ನೂ ನೀಡಲಿಲ್ಲ. ಎಸ್‌ಸಿಎಸ್‌ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡಲಿಲ್ಲ. ಈಗ ನಮ್ಮ ಸರ್ಕಾರ ಮೀಸಲಾತಿ ಹೆಚ್ಚಳ ಮಾಡಿದೆ. ಇದು ಸಾಮಾಜಿಕ ನ್ಯಾಯ. ಆರ್ಥಿಕ ಹಿಂದುಳಿದವರಿಗೆ ಮೀಸಲಾತಿ ನೀಡುವ ನಿರ್ಧಾರ ಮಾಡಲಾಗಿದೆ, ಇದು ಸಾಮಾಜಿಕ ನ್ಯಾಯ.

ರಾಜಕೀಯವಾಗಿ ಯಾವುದೇ ಸಮುದಾಯವನ್ನೂ ಮೇಲೆ ತರಲಿಲ್ಲ. ಕೊನೆ ಘಳಿಗೆಯಲ್ಲಿ ರೇವಣ್ಣ ಅವರನ್ನು ಮಂತ್ರಿ ಮಾಡಿದರು. ಕುರಿಗಾರರಿಗೂ ಸಿದ್ದರಾಮಯ್ಯ ಸ್ಪಂದನೆ ಮಾಡಲಿಲ್ಲ. ನಿಮಗೆ ಮನಸ್ಸಿರಲಿಲ್ಲ, ಹಾಗಾಗಿ ಯಾವುದೇ ಕೆಲಸ ಮಾಡಲಿಲ್ಲ. ನಮಗೆ ಮನಸ್ಸಿದೆ ಹಾಗಾಗಿ ಮಾರ್ಗವಿದೆ.

Ramesha Doddapura

ಸಿಎಂ ಬಸವರಾಜ ಬೊಮ್ಮಾಯಿ: ಚಿಕ್ಕಮಗಳೂರಿಗೆ ಪ್ರತ್ಯೇಕ ಹಾಲು ಒಕ್ಕೂಟ ಬೇಕೆಂಬ ಹೋರಾಟ ನಡೆಯುತ್ತಿದೆ. ಕೇವಲ ಒಂದು ತಿಂಗಳೊಳಗೆ ಆದೇಶ ಮಾಡಲಾಗುತ್ತದೆ.

Ramesha Doddapura

ಸಿದ್ದರಾಮಯ್ಯ ವಿರುದ್ಧ ಸಿಎಂ ಬೊಮ್ಮಾಯಿ ವಾಗ್ದಾಳಿ:

ಸಿದ್ದರಾಮಯ್ಯ ಅವರಿಗೆ ಕಾಮಾಲೆ ಕಣ್ಣು. ಜನಸಂಕಲ್ಪ ಯಾತ್ರೆಗೆ ಜನರೇ ಸೇರಿಲ್ಲ ಎನ್ನುತ್ತಾರೆ. ಆದರೆ ಇಲ್ಲಿ ಕಡೂರು ಕ್ಷೇತ್ರದಲ್ಲಿ ಜನಸಾಗರವೇ ಸೇರಿದೆ. ನನ್ನನ್ನು ಸಿಎಂ ಮಾಡಬೇಕೆಂದರೆ ನೀವೆಲ್ಲರೂ ಕಾಂಗ್ರೆಸ್‌ಗೆ ಓಟ್‌ ಮಾಡಿ ಎಂದು ಸಿದ್ದರಾಮಯ್ಯ ಮೈಸೂರಿನಲ್ಲಿ ಹೇಳಿದ್ದಾರೆ. ಜನರ ಬೆಂಬಲ ಆಮೇಲೆ. ಮೊದಲು ಡಿ.ಕೆ. ಶಿವಕುಮಾರ್‌ ಅಭಿಪ್ರಾಯವನ್ನೇ ಗೆದ್ದಿಲ್ಲ, ಜನರು ಹೇಗೆ ಬೆಂಬಲಿಸುತ್ತಾರೆ? ಈ ಹಿಂದೆ ಜನರು ನಿಮ್ಮನ್ನು ಸಿಎಂ ಮಾಡಿದ್ದರು. ಆದರೆ ನಿಮಗೆ ಆಶಿರ್ವಾದ ಮಾಡಿದ ಜನರಿಗೆ ನಿಮ್ಮ ಅಧಿಕಾರಾವಧಿಯಲ್ಲಿ ಬರೀ ಘೋಷಣೆ ಮಾಡಿದಿರಿ. ಜನರಿಗೆ ಅದ್ಯಾವುದೂ ತಲುಪಲಿಲ್ಲ. ಇವರನ್ನು ಆರಿಸಿ ಕಳಿಸಿದ್ದೇ ದೌರ್ಭಾಗ್ಯ ಎಂದು 2018ರಲ್ಲಿ ಸೋಲಿಸಿದರು.

ನಿಮ್ಮ ಕಾಳದಲ್ಲಿ ಹಾಸಿಗೆ ದಿಂಬಿನಲ್ಲಿ ಹಗರಣ ನಡೆದಿತ್ತು, ಬಿಡಿಎ ಜಾಗದಲ್ಲಿ ಭ್ರಷ್ಟಾಚಾರ ನಡೆದಿತ್ತು, ಧರ್ಮವನ್ನು ಒಡೆಯಲು ಪ್ರಯತ್ನ ಮಾಡಿದಿರಿ, ಸಾಮಾಜಿಕ ಸಾಮರಸ್ಯವನ್ನು ಹಾಳುಮಾಡಿ ಹಿಂದುತ್ವ ಕಾರ್ಯಕರ್ತರನ್ನು ಕೊಲೆ ಮಾಡಲು ಕಾರಣರಾದಿರಿ, ಅದ್ಯಾವುದನ್ನೂ ಜನರು ಮರೆತಿಲ್ಲ. ಮತ್ತೇಕೆ ನಿಮ್ಮನ್ನು ಸಿಎಂ ಮಾಡಬೇಕು?

ಅಹಿಂದ ಎಂಬ ವೇದಿಕೆ ಮಾಡಿ, ಅವರೆಲ್ಲರನ್ನೂ ಹಿಂದೆ ಬಿಟ್ಟು ನೀವು ಮುಂದೆ ಹೋದಿರಿ. ಸಾಮಾಜಿಕ ನ್ಯಾಯ ಕೇವಲ ಭಾಷಣದ ಸರಕಾಯಿತು. ನಿಮ್ಮ ಕಾಲದಲ್ಲಿ ಎಸ್‌ಸಿಎಸ್‌ಟಿ ಹಾಗೂ ಒಬಿಸಿಗೆ ಅತಿ ಹೆಚ್ಚು ಅನ್ಯಾಯವಾಯಿತು. ನೀವು ಮೀಸಲಿಟ್ಟ ಯಾವುದೇ ಹಣ ಎಸ್‌ಸಿಎಸ್‌ಟಿ ಸಮುದಾಯಕ್ಕೆ ತಲುಪಲೇ ಇಲ್ಲ.

Ramesha Doddapura

ಬೆಳ್ಳಿ ಪ್ರಕಾಶ್‌ಗೆ ಸಿಎಂ ಬಹುಪರಾಕ್‌: ಬೆಳ್ಳಿ ಪ್ರಕಾಶ್‌ ಅವರನ್ನು ಕಣ್ತುಂಬ ನೋಡುವ ಆಶೀರ್ವಾದವನ್ನು ದೇವರು ನೀಡಿದ್ದಾನೆ. ಅವರ ಕೆಲಸ, ನಿಷ್ಠೆಯಿಂದ ಜನರ ಹೃದಯವನ್ನೂ ತುಂಬಿದ್ದಾರೆ. ಅವರು ಯಾರ ಹತ್ತಿರ ಏನೇ ಕೆಲಸ ಕೇಳಿದರೂ ತನ್ನ ಕ್ಷೇತ್ರದ ಜನತೆಗೆ, ಚಿಕ್ಕಮಗಳೂರಿನ ಸಮಗ್ರ ಅಭಿವೃದ್ಧಿಗೇ ಕೇಳಿದ್ದಾರೆ. ವೈಯಕ್ತಿಕವಾಗಿ ಏನನ್ನೂ ಕೇಳಿಲ್ಲ. ಅವರು ಅಧ್ಯಕ್ಷರಾಗಿರುವ ಅಪೆಕ್ಸ್‌ ಬ್ಯಾಂಕ್‌ ಮೂಲಕ ಮೂವತ್ತೆರಡು ಲಕ್ಷ ಜನರಿಗೆ ಇಪ್ಪತ್ತು ಸಾವಿರ ಕೋಟಿ ರೂ. ಸಾಲ ನೀಡಲಾಗಿದೆ. ಅವರಿಗೆ ನಿಮ್ಮ ಆಶೀರ್ವಾದ ಇರಲಿ.

Ramesha Doddapura

ರಾಷ್ಟ್ರೀಯ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ: ಇಲ್ಲಿ ಸೇರಿರುವ ಜನಸಾಗರವನ್ನು ನೋಡಿದರೆ, ಮುಂದಿನ ಚುನಾವಣೆಯಲ್ಲಿ 130-140 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬರುವುದು ನಿಶ್ಚಿತ ಎಂಬ ಸಂದೇಶ ಲಭಿಸುತ್ತಿದೆ. ಜನರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಪೂರಕ ವಾತಾವರಣವಿದೆ. ಕಡೂರು ಮಾತ್ರವಲ್ಲದೆ, ಜಿಲ್ಲೆಯ ಬೇರೆ ಬೇರೆ ಕಡೆಗಳ ಬಂಧುಗಳನ್ನು ಭೇಟಿ ಮಾಡಿ, ಬಿಜೆಪಿಯ ಐದು ಶಾಸಕರನ್ನೂ ಗೆಲ್ಲಿಸಿ ಕಳಿಸುತ್ತೀರ ಎಂಬ ವಿಶ್ವಾಸವಿದೆ.

ವರುಣ ದೇವನ ಕೃಪೆಯಿಂದ ರಾಜ್ಯದ ಉದ್ದಗಲಕ್ಕೂ ಜಲಾಶಯಗಳು ತುಂಬಿ ತುಳುಕುತ್ತಿವೆ. ಕಡೂರಿನಲ್ಲೂ ರೈತರು ನೆಮ್ಮದಿಯಿಂದ ಬಾಳುವ ಸ್ಥಿತಿ ನಿರ್ಮಾಣವಾಗಿದೆ.

ನಾನು ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ, ಒಂದು ಲಕ್ಷ ರೂ.ವರೆಗೆ ರೈತರ ಸಾಲ ಮನ್ನಾ ಮಾಡಿದೆ, ಆಯುಷ್ಮಾನ್‌ ಕರ್ನಾಟಕ ಜಾರಿಗೆ ತಂದೆ, ಫಸಲ್‌ ಬಿಮಾ ಯೋಜನೆ, ಸಿ-ಡಿ ಗ್ರೂಪ್‌ ನೌಕರಿಗೆ ಸಂದರ್ಶನ ರದ್ದು, ಮೆಗಾ ಫಿಲಂ ಸಿಟಿ ನಿರ್ಮಾಣಕ್ಕೆ 500 ಕೋಟಿ ರೂ. ಮೀಸಲು, ನೇಕಾರರ ಸಾಲ ಮನ್ನಾ, ಮೀನುಗಾರರ ಸಾಲ ಮನ್ನಾ, ಕೆರೆಗಳ ಪುನಶ್ಚೇತನ, ಕರೊನಾ ಸೋಂಕಿನಿಂದ ಅನಾಥವಾದವರಿಗೆ ಮಾಸಿಕ 3000 ರೂ. ನೀಡುವ ಬಾಲ ಸೇವಾ ಯೋಜನೆ ಸೇರಿ ಅನೇಕ ಯೋಜನೆಗಳನ್ನು ಜಾರಿ ಮಾಡಲಾಗಿದೆ.

ದೇಶದಲ್ಲಿ ಮೊದಲ ಬಾರಿಗೆ ಭಾಗ್ಯಲಕ್ಷ್ಮೀ ಯೋಜನೆ ಜಾರಿಗೆ ತರಲಾಯಿತು. ಇಲ್ಲಿವರೆಗೆ ಇಪ್ಪತ್ತು ಲಕ್ಷದಷ್ಟು ಹೆಣ್ಣುಮಕ್ಕಳು ಹಣ ಪಡೆದಿದ್ದಾರೆ. ದೇಶದಲ್ಲಿ ಮೊದಲ ಬಾರಿಗೆ, ಹಾಲು ಉತ್ಪಾದನಾ ಪ್ರೋತ್ಸಾಹಧನ ನೀಡಲಾಯಿತು. ಸುವರ್ಣ ಗ್ರಾಮ ಯೋಜನೆ ಜಾರಿಗೆ ತರಲಾಯಿತು. ಕಿಸಾನ್‌ ಸಮ್ಮಾನ್‌ ಯೋಜನೆಯಲ್ಲಿ ಕೇಂದ್ರ ಸರ್ಕಾರ ಆರು ಸಾವಿರ ರೂ. ನೀಡಿದರೆ, ನಮ್ಮ ಸರ್ಕಾರ ನಾಲ್ಕು ಸಾವಿರ ರೂ. ಸೇರಿಸಿ ನೀಡಿತು. ಈ ವಿಚಾರವನ್ನು ಎಲ್ಲ ಕಡೆ ಚರ್ಚೆ ಮಾಡಬೇಕು, ಜನರಿಗೆ ತಿಳಿಸಬೇಕು.

ನರೇಂದ್ರ ಮೋದಿಯವರ ನೇತೃತ್ವದ ಆಡಳಿತ ಉತ್ತಮವಾಗಿ ನಡೆಯುತ್ತಿದ್ದು, ಕಾಂಗ್ರೆಸ್‌ ಹಡಗು ಮುಳುಗುತ್ತಿದೆ. ಆ ಪಕ್ಷದ ಹಿಂದೆ ಯಾರೂ ಹೋಗುವುದಿಲ್ಲ ಎಂಬುದು ಅರಿವಾಗುತ್ತಿದೆ. ಜಾತಿ ವಿಷಬೀಜ ಬಿತ್ತಿ ಗೆಲ್ಲುತ್ತೇವೆ ಎಂದು ಕಾಂಗ್ರೆಸ್‌ನವರು ತಿಳಿದಿದ್ದರು. ಬೆಳ್ಳಿ ಪ್ರಕಾಶ್‌ ಉತ್ತಮ ಕೆಲಸ ಮಡುತ್ತಿದ್ದಾರೆ, ಎಲ್ಲ ಬಿಜೆಪಿ ಅಭ್ಯರ್ಥಿಳನ್ನೂ ಬೆಂಬಲಿಸಿ.

Exit mobile version