ಕಡೂರು: ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಸಾಮಾಜಿಕ ನ್ಯಾಯದ ಕುರಿತು ಭಾಷಣ ಮಾಡಿದರೇ ಹೊರತು, ನಿಜವಾಗಿ ಸಾಮಾಜಿಕ ನ್ಯಾಯ ನೀಡಿದ್ದು ಬಿಜೆಪಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಬೃಹತ್ ಜನಸಂಕಲ್ಪ ಯಾತ್ರೆಯಲ್ಲಿ ಬೊಮ್ಮಾಯಿ ಮಾತನಾಡಿದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ, ಮಾಜಿ ಶಾಸಕರಾದ ಜೀವರಾಜ್, ಕೇಂದ್ರ ಸಚಿವೆ ಹಾಗೂ ಸಂಸದೆ ಶೋಭಾ ಕರಂದ್ಲಾಜೆ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್, ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು.
ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜು: ನಮ್ಮ ಸಮುದಾಯದ (ಕುರುಬ) ಜನರಲ್ಲಿ ನಾನು ಮನವಿ ಮಾಡುತ್ತೇನೆ, ನೀವು ಬೇರೆ ಯಾರ ಮಾತನ್ನೂ ಕೇಳಬೇಡಿ. ಸಿಎಂ ಬಸವರಾಜ ಬೊಮ್ಮಾಯಿ ಅವರು ಅನೇಕ ಸವಲತ್ತುಗಳನ್ನು ನಮಗೆ ನೀಡಿದ್ದಾರೆ. ಜಿಲ್ಲೆಯ ಅಭಿವೃದ್ಧಿಗೆ, ಲಂಬಾಣಿ, ಕುರುಬ ಸಮುದಾಯಗಳ ಏಳಿಗೆಗೆ ಬಿಜೆಪಿ ಶ್ರಮಿಸುತ್ತಿದೆ. ಎಲ್ಲರೂ ಬಿಜೆಪಿಯನ್ನು ಬೆಂಬಲಿಸಬೇಕು, ನಮ್ಮಂಥ ಯುವಕರನ್ನು ಬೆಳೆಸಬೇಕು.
ಕೇಂದ್ರ ಸಚಿವೆ ಹಾಗೂ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ: ಇತಿಹಾಸದಲ್ಲಿ ಅನೇಕ ಸಂದರ್ಭದಲ್ಲಿ ಭಾರತದ ಭೂಭಾಗಗಳನ್ನು ಪಾಕಿಸ್ತಾನ, ಚೀನಾಕ್ಕೆ ಬಿಟ್ಟುಕೊಟ್ಟಿದ್ದು ಕಾಂಗ್ರೆಸ್. ಅಂತಹ ಕಾಂಗ್ರೆಸ್ ಪಕ್ಷ ಇಂದು ಭಾರತ್ ಜೋಡೊ ಯಾತ್ರೆ ಮಾಡುತ್ತಿದೆ. ಭಾರತದ ಒಳಗಲ್ಲ, ದೇಶದ ಗಡಿಯಲ್ಲಿ ಭಾರತ್ ಜೋಡೊ ಮಾಡಬೇಕಿದೆ. ಸ್ವಾತಂತ್ರ್ಯದ ಏಳು ದಶಕದಲ್ಲಿ ಭಾರತದ ಆಡಳಿತವನ್ನು ಹಾಳು ಮಾಡಿದ್ದು ಕಾಂಗ್ರೆಸ್.
ಕರ್ನಾಟಕದಲ್ಲಿ ಜಾತಿ, ಜಾತಿಗಳ ನಡುವೆ ಒಡೆದು ಆಳುವ ನೀತಿ ಅನುಸರಿಸಿದ್ದು ಕಾಂಗ್ರೆಸ್. ಯಡಿಯೂರಪ್ಪ ಅವರು ರೂಪಿಸಿದ, ಮೋದಿಯವರು ರೂಪಿಸಿದ ಯಾವ ಯೋಜನೆಯೂ ನಿರ್ದಿಷ್ಟ ಜಾತಿಯನ್ನು ಗಮನದಲ್ಲಿ ಇರಿಸಿಕೊಂಡಿರಲಿಲ್ಲ. ಸಿದ್ದರಾಮಯ್ಯ ಟಿಪ್ಪು ಜಯಂತಿ ಆಚರಣೆ ಮಾಡಿದ್ದು ಕಾಂಗ್ರೆಸ್. ಮೂರ್ತಿ ಪೂಜೆ ಮಾಡುವವರನ್ನು ಕಾಫೀರರು ಎಂದು ಹೇಳುವ ಮುಸ್ಲಿಂ ಸಮುದಾಯದ ತನ್ವೀರ್ ಸೇಠ್, ಟಿಪ್ಪು ಪ್ರತಿಮೆ ಮಾಡುವುದಾಗಿ ಹೇಳುತ್ತಿದ್ದಾರೆ. ಜಾತಿ, ಧರ್ಮ, ದೇಶವನ್ನು ಒಡೆಯುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ.
16 ಸಾವಿರ ಕೋಟಿ ರೂ. ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ನೀಡುತ್ತಿದೆ. ಈ ಯೋಜನೆಯಿಂದ ಚಿಕ್ಕಮಗಳೂರು, ದಾವಣಗೆರೆ, ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಗಳಿಗೆ ಉಪಯೋಗವಾಗುತ್ತದೆ. ಬರ ಸಂಪೂರ್ಣ ನೀಗುತ್ತದೆ.
ಕಡೂರು ಕ್ಷೇತ್ರದ ಶಾಸಕರಾಗಿದ್ದವರು ಆಟೋದಲ್ಲಿ, ರೈಲಿನಲ್ಲಿ, ಬಸ್ಸಿನಲ್ಲಿ ಹೋಗುವ ಪ್ರಾಮಾಣಿಕತೆಯ ಸೋಗು ಹಾಕಿಕೊಂಡು ಓಡಾಡುತ್ತಿದ್ದರು. ಯಾವುದೇ ಅಭಿವೃದ್ಧಿ ಮಾಡಲಿಲ್ಲ. ಆದರೆ ಬೆಳ್ಳಿ ಪ್ರಕಾಶ್ ಅವರು 2,800 ಕೋಟಿ ರೂ. ಮೊತ್ತದ ಯೋಜನೆಗಳನ್ನು ತಂದಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವಾಗ್ದಾಳಿ: ನಾವು ಎಲ್ಲಿ ಸ್ಪರ್ಧೆ ಮಾಡಿದರೂ ಗೆಲ್ಲುತ್ತೇವೆ ಎಂಬ ನಂಬಿಕೆ ಇದೆ. ಆದರೆ ಅಲ್ಲೊಬ್ಬರು ಕಾಂಗ್ರೆಸ್ ಕ್ಯಾಪ್ಟನ್ಗೆ ಎಲ್ಲಿ ಸ್ಪರ್ಧೆ ಮಾಡಬೇಕು ಎನ್ನುವುದೇ ಗೊತ್ತಿಲ್ಲ ಎಂದು ಸಿದ್ದರಾಮಯ್ಯ ಅವರನ್ನು ಸಿ.ಟಿ. ರವಿ ಟೀಕಿಸಿದರು. ಇಂಥವರಿಗೆ ಭಾರತ ಸೇಫ್ ಅಲ್ಲ. ಅಂಥದ್ದೇನಾದರೂ ಇದ್ದರೆ ಅದು ಪಾಕಿಸ್ತಾನದಲ್ಲಿ ಮಾತ್ರ ಎಂದರು.
ಪ್ರಮೋದ್ ಮುತಾಲಿಕ್ ವಿರುದ್ಧ ಸಿ.ಟಿ. ರವಿ ವಾಗ್ದಾಳಿ, ಈ ವಾರದಲ್ಲಿ ದತ್ತ ಪೀಠಕ್ಕೆ ಮುಕ್ತಿ ಎಂದ ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ:
ದತ್ತಪೀಠ ಮುಕ್ತಿಗಾಗಿ ಬಿಜೆಪಿ ಕೆಲಸ ಮಾಡುತ್ತಿಲ್ಲ ಎಂಬ ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಮಾತಿಗೆ ಸಿ.ಟಿ. ರವಿ ತಿರುಗೇಟು ನೀಡಿದರು. ಮುತಾಲಿಕರೇ, ನಾವು ವರ್ಷಕ್ಕೊಮ್ಮೆ ದತ್ತಪೀಠ ನೆನಪು ಮಾಡಿಕೊಳ್ಳುವ ಜನರಲ್ಲ. ದತ್ತಪೀಠದ ಮುಕ್ತಿಗಾಗಿ 40-45 ವರ್ಷದ ಹೋರಾಟದ ಭಾಗವಾಗಿದ್ದೇವೆ. ಒಂದೆರಡು ದಿನದಲ್ಲಿ ಬಸವರಾಜ ಬೊಮ್ಮಾಯಿ ಸರ್ಕಾರ ದತ್ತಪೀಠಕ್ಕೆ ನ್ಯಾಯ ಕೊಡುತ್ತದೆ. ನಿಮ್ಮೆಲ್ಲರ ಆಶೀರ್ವಾದ ಇರಲಿ. ಇವತ್ತು ಮಂಗಳವಾರ, ಈ ಶನಿವಾರದೊಳಗೆ ದತ್ತಪೀಠಕ್ಕೆ ನ್ಯಾಯಕೊಡುವ ಆದೇಶ ಬರುತ್ತದೆ. ಅಯೋಧ್ಯೆಯ ರಾಮನಿಗೆ ನ್ಯಾಯ ಕೊಟ್ಟಿದ್ದು ಬಿಜೆಪಿ, ಅನ್ಯಾಯ ಮಾಡಿದ್ದು ಕಾಂಗ್ರೆಸ್. ಕಾಶಿಗೆ ನ್ಯಾಯ ಕೊಟ್ಟಿದ್ದು, ಕಾಶ್ಮೀರಕ್ಕೆ, ಉಜ್ಜಯಿನಿ ಮಹಾಕಾಲನಿಗೆ, ಸೋಮನಾಥನಿಗೆ ನ್ಯಾಯ ಕೊಟ್ಟಿದ್ದು ಬಿಜೆಪಿ, ಅನ್ಯಾಯ ಮಾಡಿದ್ದು ಕಾಂಗ್ರೆಸ್. ದತ್ತಪೀಠಕ್ಕೂ ನ್ಯಾಯ ಕೊಡಿಸುತ್ತೇವೆ ಎಂದರು.
ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ: ಸುಮಾರು ಎಂಟು ಸಾವಿರ ಕೊಠಡಿಗಳನ್ನು ವಿವೇಕ ಶಾಲೆ ಯೋಜನೆಯಲ್ಲಿ ನಿರ್ಮಿಸುತ್ತಿದ್ದೇವೆ. ಆದರೆ ಕೇಸರಿ ಬಣ್ಣ ಕಂಡರೆ ಕೆಲವರಿಗೆ ಆಗುವುದಿಲ್ಲ. ಅದಕ್ಕಾಗಿಯೇ ಇಲ್ಲಿ ಬಂದಿರುವವರೆಲ್ಲರೂ ಕೇಸರಿ ಬಣ್ಣ ಹಾಕಿಕೊಂಡು ಬಂದಿದ್ದೇವೆ. ಈ ಕೇಸರಿ ಅಲೆಗೆ, ಎದುರು ಬರುವವರೆಲ್ಲರೂ ತೂರಿ ಅರಬ್ಬೀ ಸಮುದ್ರಕ್ಕೆ ಬೀಳುತ್ತೀರ. ನಾವು ಕೇಸರಿ ಮೇಲೆಯೇ ರಾಜಕಾರಣ ಮಾಡುತ್ತೇವೆ. ತಾಕತ್ತಿದ್ದರೆ ಎದುರಿಸಿ, ಬನ್ನಿ.