Site icon Vistara News

BJP Janasankalpa Yatre | ಸಿದ್ದು ಸರ್ಕಾರದಲ್ಲಿ ಬಾಯಿ ಮಾತಿನಲ್ಲಿ ಮಾತ್ರವೇ ಇತ್ತು ಸಾಮಾಜಿಕ ನ್ಯಾಯ: ಸಿಎಂ ಬೊಮ್ಮಾಯಿ

ಗದಗ: ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಸಾಮಾಜಿಕ ನ್ಯಾಯ ಎಂದು ಬಾಯಿ ಮಾತಿಗೆ ಹೇಳಿದ್ದರು. ನಮ್ಮ ಸರ್ಕಾರ ನಿಜವಾದ ಸಾಮಾಜಿಕ ನ್ಯಾಯ ಕೊಟ್ಟಿದೆ. ಬದ್ಧತೆಯ ಕಾರಣವೇ ಪರಿಶಿಷ್ಟರಿಗೆ ಮೀಸಲಾತಿ ಕೊಟ್ಟಿದ್ದೇವೆ. ಮುಂದೆ ಯಾವುದೇ ಕಾನೂನು ಹೋರಾಟ ಬಂದರೂ ಸಮರ್ಥವಾಗಿ ಎದುರಿಸುತ್ತೇವೆ. ದುಷ್ಟ ಕಾಂಗ್ರೆಸ್ ಪಕ್ಷವನ್ನು ರಾಜ್ಯದಿಂದ ಓಡಿಸಬೇಕು. ಬಿಜೆಪಿಯನ್ನು (BJP Janasankalpa Yatre) ಮತ್ತೊಮ್ಮೆ ಅಧಿಕಾರಕ್ಕೆ ತಂದು ದಕ್ಷ ಆಡಳಿತ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು.

ಶಿರಹಟ್ಟಿಯಲ್ಲಿ ಮಂಗಳವಾರ (ನ. ೮) ಏರ್ಪಡಿಸಲಾಗಿದ್ದ ಜನಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾವು ಕರ್ನಾಟಕದಲ್ಲಿ‌ ಎಲ್ಲಿ ಹೋದರೂ ಜನರ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಜನಸಂಕಲ್ಪ‌ ಯಾತ್ರೆ ವಿಜಯ ಯಾತ್ರೆ ಆಗಲಿದೆ. 2023ರಲ್ಲಿ ಮತ್ತೆ ಬಿಜೆಪಿ ಬಾವುಟ ಹಾರಿಸುತ್ತೇವೆ ಎಂದು ಹೇಳಿದರು.

ಕಾಂಗ್ರೆಸ್ ಜನರಿಗೆ ದೌರ್ಬಾಗ್ಯವನ್ನು ಕೊಟ್ಟು ಅಧಿಕಾರ ಕಳೆದುಕೊಂಡು ಮನೆಯಲ್ಲಿ ಕುಳಿತಿದೆ. ಕೇಂದ್ರ ಸರ್ಕಾರ ಮನೆಮನೆಗೆ ವಿದ್ಯುತ್, ಕುಡಿಯುವ ನೀರು ತಲುಪಿಸಿದೆ. ಕಾಂಗ್ರೆಸ್‌ನವರಿಗೆ ದೇಶ ಕಟ್ಟಿದ್ದೇವೆ ಎಂದು ಹೇಳಲು ನಾಚಿಕೆಯಾಗಬೇಕು. ದೇಶವನ್ನು ಒಡೆದು ಚೂರುಚೂರು ಮಾಡಿರುವ ಪಕ್ಷ ಕಾಂಗ್ರೆಸ್ ಆಗಿದೆ. ಆ ಪಕ್ಷದವರು ವೋಟಿಗಾಗಿ ಏನು ಬೇಕಾದರೂ ಮಾಡುತ್ತಾರೆ. ಹಿಂದುಸ್ತಾನ ಹಿಂದುಗಳಿಗೆ ಸೇರಿದ್ದು. ವೋಟಿಗಾಗಿ ದೇಶ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಹಿಂದು ಪದ ಅಶ್ಲೀಲ ಎಂದು ಹೇಳಿ ಹಿಂದುಗಳಿಗೆ ಅವಮಾನ ಮಾಡಿದ್ದಾರೆ ಎಂದು ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು.

ಇದನ್ನೂ ಓದಿ | Election 2023 | ಕರ್ನಾಟಕದಲ್ಲಿ ಚುನಾವಣೆ ಗೆಲ್ಲುವ ಮಾತನಾಡುವ ಸಿದ್ದು ಬಾದಾಮಿಯನ್ನೇಕೆ ಬಿಡುತ್ತಿದ್ದಾರೆ: ಬಿಎಸ್‌ವೈ ಪ್ರಶ್ನೆ

ಜನರ ಸಂಕಷ್ಟ ಅರ್ಥ ಮಾಡಿಕೊಂಡು ನಮ್ಮ ನಾಯಕರಾದ ಮಾಜಿ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ಅವರು ಆಡಳಿತ ಮಾಡಿದ್ದಾರೆ. ಅಭಿವೃದ್ಧಿ ಕೆಲಸಗಳಿಂದಾಗಿ ಯಡಿಯೂರಪ್ಪ ಅವರ ಹೆಸರು ಜನರ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ದೂರದೃಷ್ಟಿ ಇರುವ ಕೇಂದ್ರ ಸರ್ಕಾರ, ಕೆಳಹಂತದ ಜನರಿಗೆ ಸಹಾಯ ಮಾಡುವ ರಾಜ್ಯ ಸರ್ಕಾರ ನಮ್ಮದು. ದುಡಿಯುವ ವರ್ಗಕ್ಕೆ ಶಕ್ತಿ ತುಂಬುತ್ತಿದ್ದೇವೆ. ಶಿರಹಟ್ಟಿ, ಮುಂಡರಗಿಯಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ಕೊಡುತ್ತೇವೆ. ಶಿರಹಟ್ಟಿಯಲ್ಲಿ ಕನಕದಾಸ ಸಮುದಾಯ ಭವನ ನಿರ್ಮಾಣಕ್ಕೆ ಕೂಡಲೇ ಒಂದು ಕೋಟಿ ರೂಪಾಯಿ ಬಿಡುಗಡೆ ಮಾಡುತ್ತೇನೆ ಎಂದು ಸಿಎಂ ಘೋಷಿಸಿದರು.

ನಮ್ಮ ಸ್ವಾಭಿಮಾನ, ಅಸ್ಮಿತೆಗೆ ಧಕ್ಕೆ ಬಂದರೆ ಪುಟಿದೇಳುತ್ತೇವೆ. ಸಬ್‌ ಕಾ ಸಾಥ್, ಸಬ್ ಕಾ ವಿಕಾಸ್ ಅನ್ನೋದು ಪ್ರಧಾನಿ ಮೋದಿಯವರ ಮೂಲಮಂತ್ರ. ದೇಶವನ್ನು ಒಡೆದಾಳುವುದು ಕಾಂಗ್ರೆಸ್ ನೀತಿ. ಸಿದ್ದರಾಮಯ್ಯ ಅಧಿಕಾರದಲ್ಲಿ ಇದ್ದಾಗ ಧರ್ಮವನ್ನು ಒಡೆಯಲು ಹೊರಟಿದ್ದರು. ಈಗಲೂ ಅದೇ ಕೆಲಸವನ್ನು ಮಾಡುತ್ತಿದ್ದಾರೆ. ಅಲ್ಪಸಂಖ್ಯಾತರನ್ನು ಮತಕ್ಕಾಗಿ ಬಳಸಿಕೊಂಡು ನಂತರ ಕತ್ತಲೆಯಲ್ಲಿ ಬಿಡುತ್ತಾರೆ. ವಕ್ಫ್ ಆಸ್ತಿ ಕಬಳಿಸಿರುವ ಕಾಂಗ್ರೆಸ್ ನಾಯಕರ ವಿರುದ್ಧ ಉಗ್ರ ಕ್ರಮ ಕೈಗೊಳ್ಳುತ್ತೇವೆ ಎಂದು ಸಿಎಂ ತಿಳಿಸಿದರು.

ಬಿಜೆಪಿ ೧೪೦ ಸ್ಥಾನ ಗೆಲ್ಲಲಿದೆ- ಬಿಎಸ್‌ವೈ
ರಾಜ್ಯದಲ್ಲಿ ಬಿಜೆಪಿ 140 ಸ್ಥಾನಗಳಲ್ಲಿ ಬಿಜೆಪಿ ಗೆಲ್ಲುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವಕ್ಕೆ ಇಡೀ ವಿಶ್ವವೇ ಮೆಚ್ಚಿದೆ. ಅವರಿಗೆ ಸರಿಸಮನಾಗಿ ನಿಲ್ಲುವ ನಾಯಕ ಕಾಂಗ್ರೆಸ್‌ನಲ್ಲಿ ಯಾರೂ ಇಲ್ಲ. ಈ ಹಿಂದೆ ಹಣ, ಹೆಂಡ, ಜಾತಿ ಬಲದಿಂದ ಅಧಿಕಾರಕ್ಕೆ ಬರುವ ಭ್ರಮೆಯಿತ್ತು. ಈಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮುಂದಿಟ್ಟು ಚುನಾವಣೆ ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಬೊಮ್ಮಾಯಿ ದೇಶದ ಇತಿಹಾಸದಲ್ಲಿ ಯಾರೂ ಕೊಡದ ಸೌಲಭ್ಯವನ್ನು ಕೊಟ್ಟಿದ್ದಾರೆ. ಮಹಿಳಾ ಸಬಲೀಕರಣ ಮಾಡುವುದು ಮೋದಿಯವರ ಹಾಗೂ ನಮ್ಮ ಅಪೇಕ್ಷೆ. ಸರ್ಕಾರದ ಯೋಜನೆ ಜನರಿಗೆ ತಲುಪಿಸಿದಾಗ ಕ್ರಾಂತಿಕಾರಿ ಬದಲಾವಣೆ ಆಗಲಿದೆ. ಬಿಜೆಪಿ ಜನ ಸಂಕಲ್ಪ ಯಾತ್ರೆಗೆ ಕಾಂಗ್ರೆಸ್ ಬೆಚ್ಚಿಬಿದ್ದಿದೆ. ಜನ ಬೆಂಬಲ ನೋಡಿದರೆ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಬಿಎಸ್‌ವೈ ಹೇಳಿದರು.

ಇದನ್ನೂ ಓದಿ | BJP Janasankalpa Yatre | ರಾಜ್ಯಕ್ಕೆ ಬಂಡೆ ಬೇಕಾಗಿಲ್ಲ, ಬಾಹುಬಲಿ ಬೊಮ್ಮಾಯಿ ಬೇಕಿದೆ: ಶ್ರೀರಾಮುಲು

Exit mobile version