Site icon Vistara News

BJP ಜನಸ್ಪಂದನ | ವಿಜಯ್‌ ಪ್ರಕಾಶ್‌ ಸಂಗೀತ ಕಛೇರಿಯೊಂದಿಗೆ ಜನಸ್ಪಂದನ ಆರಂಭ

vijay prakash janaspandana

ದೊಡ್ಡಬಳ್ಳಾಪುರ: ಖ್ಯಾತ ಗಾಯಕ ವಿಜಯ್‌ ಪ್ರಕಾಶ್‌ ಅವರ ಬಳಗದ ಸಂಗೀತ ರಸಮಂಜರಿ ಕಾರ್ಯಕ್ರಮದೊಂದಿಗೆ ದೊಡ್ಡಬಳ್ಳಾಪುರದಲ್ಲಿ ರಾಜ್ಯ ಸರ್ಕಾರ ಸಂಯೋಜಿಸಿರುವ ಬೃಹತ್‌ ಜನಸ್ಪಂದನ ಕಾರ್ಯಕ್ರಮ ಆರಂಭವಾಯಿತು. ವಿಜಯ್‌ ಪ್ರಕಾಶ್‌ ಅವರ ತಂಡ ಹಾಡಿಗೆ ಕೆಲವು ಬಿಜೆಪಿ ನಾಯಕರೂ ಹೆಜ್ಜೆ ಹಾಕಿ ವೇದಕೆಗೆ ರಂಗು ತುಂಬಿದರು.

40 ಎಕರೆ ಪ್ರದೇಶದಲ್ಲಿ ಆಯೋಜಿಸಲಾಗಿರುವ, 12 ಗಂಟೆಯಿಂದ ಆರಂಭವಾದ ಕಾರ್ಯಕ್ರಮಕ್ಕೆ ಮುಂಜಾನೆಯಿಂದಲೇ ಜನಸಾಗರ ಹರಿದುಬಂತು. ಸಮಾವೇಶದಲ್ಲಿ ಬೃಹತ್ ಜರ್ಮನ್ ಪೆಂಡಾಲ್‌ಗಳ ವ್ಯವಸ್ಥೆ ಮಾಡಲಾಗಿದ್ದು, ಸಮಾವೇಶಕ್ಕೆ ಬೃಹತ್ ಕೇಸರಿಮಯ ವೇದಿಕೆ‌ ನಿರ್ಮಾಣ ಮಾಡಲಾಗಿತ್ತು. 1200*140 ಅಡಿ‌ ಉದ್ದ ಮತ್ತು ಅಗಲ ವಿಸ್ತೀರ್ಣದ ಮುಖ್ಯ ವೇದಿಕೆಯಲ್ಲಿ ಸುಮಾರು 80 ಗಣ್ಯರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ.

ವೇದಿಕೆಯಲ್ಲಿ ಮೂರು ಬೃಹತ್ ಎಲ್‌ಇಡಿ ಸ್ಕ್ರೀನ್‌ಗಳ ಅಳವಡಿಕೆ ಮಾಡಲಾಗಿದ್ದು, ವೇದಿಕೆ ಪಕ್ಕ ದಿವಂಗತ ಸಚಿವ ಉಮೇಶ್ ಕತ್ತಿ, ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಭಾವಚಿತ್ರಗಳು ರಾರಾಜಿಸಿವೆ. ವೇದಿಕೆಯಲ್ಲಿ ಈ ಭಾಗದ ಸಾಂಪ್ರದಾಯಿಕ ಕಸುಬು ಮಗ್ಗ ಅಳವಡಿಕೆ ಮಾಡಲಾಗಿದ್ದು, ಮಗ್ಗಕ್ಕೆ ಚಾಲನೆ ಕೊಡುವ ಮೂಲಕ ಸ್ಮೃತಿ ಇರಾನಿ ಸಮಾವೇಶ ಉದ್ಘಾಟಿಸಲಿದ್ದಾರೆ.

ಇದನ್ನೂ ಓದಿ | BJP ಜನಸ್ಪಂದನ | ಅದ್ಧೂರಿ ಸಮಾವೇಶಕ್ಕೆ 6 ರಾಜ್ಯ ಸಚಿವರೇ ಗೈರು, ‌ ನಡ್ಡಾ, ಪ್ರಹ್ಲಾದ್‌ ಜೋಶಿ, ಅರುಣ್‌ ಸಿಂಗ್‌ ಕೂಡಾ ಇಲ್ಲ

ಸಮಾವೇಶದಲ್ಲಿ 3 ಲಕ್ಷ ಜನ‌ ಸೇರುವ ನಿರೀಕ್ಷೆ ಇದ್ದು, 5 ಸಾವಿರ ಬಸ್‌ಗಳಲ್ಲಿ ಜನ ಕರೆತರಲು ವ್ಯವಸ್ಥೆ ಮಾಡಲಾಗಿದೆ. ಜನ ಕೂರಲು 1.5 ಲಕ್ಷಕ್ಕೂ ಹೆಚ್ಚು ಆಸನಗಳ ವ್ಯವಸ್ಥೆ ಮಾಡಿದ್ದು, ಎಲ್ಇಡಿ ಸ್ಕ್ರೀನ್ ಮೂಲಕವೂ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. 15 ಅಡಿ ಎತ್ತರ, 90 ಅಡಿ‌ ಅಗಲದ ಬೃಹತ್ ಎಲ್ಇಡಿ ಸ್ಕ್ರೀನ್​ಗಳ ಅಳವಡಿಕೆ ಮಾಡಲಾಗಿದೆ. 200 ಎಕರೆ ಪ್ರದೇಶದಲ್ಲಿ 12 ಕಡೆ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ.

ಸುಸಜ್ಜಿತ ಊಟೋಪಚಾರದ ವ್ಯವಸ್ಥೆ, ತಿಂಡಿ, ಊಟಕ್ಕೆ ತರಕಾರಿ ಪಲಾವ್, ಮೊಸರನ್ನ, ಬಾದುಷಾ, ನೀರಿನ ಬಾಟಲ್ ವಿತರಣೆಯಾಗಲಿದ್ದು, 203 ಊಟದ ಕೌಂಟರ್‌ಗಳ ವ್ಯವಸ್ಥೆಯಾಗಿದೆ. ಕಾರ್ಯಕ್ರಮಕ್ಕೆ ಬಿಗಿ ಭದ್ರತೆ ಒದಗಿಸಲಾಗಿದ್ದು, 2000 ಜನ‌ ಪೊಲೀಸರ ನಿಯೋಜನೆ ಮಾಡಲಾಗಿದೆ.

ಇದನ್ನೂ ಓದಿ | BJP ಜನಸ್ಪಂದನ | ಅಣ್ಣಾವ್ರ ಹಾಡಿಗೆ ಭರ್ಜರಿ ಸ್ಟೆಪ್‌ ಹಾಕಿದ MTB, ವಿಶ್ವನಾಥ್‌ !

Exit mobile version