ದೊಡ್ಡಬಳ್ಳಾಪುರ: ಯಾವ ದೊಡ್ಡಬಳ್ಳಾಪುರದಲ್ಲಿ ಬಿಜೆಪಿಗೆ ನೆಲೆಯೇ ಇಲ್ಲ ಎಂದು ಹೇಳಲಾಗುತ್ತಿತ್ತೋ ಅಂತಹ ನೆಲದಿಂದಲೇ ಬಿಜೆಪಿಯ ಈ ಬಾರಿಯ ದಿಗ್ವಿಜಯ ಯಾತ್ರೆ ಆರಂಭವಾಗಿದೆ. ಇದರಲ್ಲಿ ಕೃಷ್ಣನಾಗಿ ಬಿ.ಎಸ್. ಯಡಿಯೂರಪ್ಪ ಮತ್ತು ಅರ್ಜುನನಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ರಥವೇರಿ ಹೊರಟಿದ್ದಾರೆ. ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ೧೫೦ ಸ್ಥಾನ ಗೆದ್ದುಕೊಂಡೇ ಬರುತ್ತೇವೆ ಎಂದು ಘೋಷಿಸಿದ್ದಾರೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್.
ದೊಡ್ಡಬಳ್ಳಾಪುರದ ರಘುನಾಥಪುರದಲ್ಲಿ ನಡೆಯುತ್ತಿರುವ ಬಿಜೆಪಿ ಸರಕಾರದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೃಷ್ಣಾರ್ಜುನರಾಗಿ ರಥವೇರಿ ಹೊರಟಿರುವ ಯಡಿಯೂರಪ್ಪ-ಬೊಮ್ಮಾಯಿ ಅವರ ಶಕ್ತಿಯನ್ನು ತಡೆಯುವ ಸಾಮರ್ಥ್ಯ ಯಾರಿಗಿದೆ ಎಂದು ಸವಾಲು ಹಾಕಿದರು. ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಹಳ್ಳಿ ಹಳ್ಳಿಗೆ ಹೋಗುತ್ತೇವೆ, ಗಲ್ಲಿ ಗಲ್ಲಿಗೆ ಹೋಗುತ್ತೇವೆ. ನಮ್ಮ ಸಾಧನೆಯನ್ನು ಹೇಳಿ ಮತ ಕೇಳುತ್ತೇವೆ. ೧೫೦ ಸೀಟುಗಳನ್ನು ಗೆದ್ದುಕೊಂಡೇ ಬರುತ್ತೇವೆ ಎಂದರು.
ನಾರಾಯಣ ಗುರು ಸ್ಮರಣೆ
ʻಒಂದೇ ಜಾತಿ ಒಂದೇ ಮತ ಒಂದೇ ದೇವರು ಒಂದು ಜಗತ್ತಿಗೆ ಸಾರಿದ ಮಹಾನ್ ಸಂತ ನಾರಾಯಣಗುರು ಅವರ ಜನ್ಮ ದಿನ ಇಂದು. ಸಂಘಟನೆಯಿಂದ ಬಲಿಷ್ಠರಾಗಿರಿ, ಶಿಕ್ಷಣದಿಂದ ಸಮರ್ಥರಾಗಿರಿ ಎಂದು ಅವರು ಹೇಳಿದ್ದರು. ಬಿಜೆಪಿಯ ಧ್ಯೇಯ ಕೂಡಾ ಇದೇ ಆಗಿದೆʼʼ ಎಂದು ನೆನಪು ಮಾಡಿಕೊಂಡರು.
ದೊಡ್ಡಬಳ್ಳಾಪುರದಲ್ಲಿ ಕೇಸರಿ ಅಲೆ
ʻʻನಾನು ಕರಾವಳಿ ಜಿಲ್ಲೆಯವನು. ನಮ್ಮಲ್ಲಿ ಸಮುದ್ರದಲ್ಲಿ ದೊಡ್ಡ ದೊಡ್ಡ ಅಲೆಗಳು ಬರುತ್ತವೆ. ಆದರೆ, ದೊಡ್ಡಬಳ್ಳಾಪುರದಲ್ಲಿ ಅದನ್ನೂ ಮೀರಿಸುವ ದೊಡ್ಡ ಅಲೆ ಇಲ್ಲಿ ಬಂದಿದೆ. ಇಲ್ಲಿ ಕೇಸರಿ ಅಲೆ ಎದ್ದಿದೆ. ಈ ಅಲೆಯಲ್ಲಿ ಕಾಂಗ್ರೆಸ್ ದಳಗಳು ಮುಳುಗಲಿವೆʼʼ ಎಂದ ನಳಿನ್ ಕುಮಾರ್ ಕಟೀಲ್ ಅವರು, ದೊಡ್ಡ ಬಳ್ಳಾಪುರದಲ್ಲಿ ಕಮಲ ಅರಳಿದೆ, ಕಾಂಗ್ರೆಸ್ ನೆಲಕಚ್ಚುತ್ತದೆ ಎಂದರು.
ರಾಹುಲ್ ಹೋದಲೆಲ್ಲ ಸೋಲು, ಈ ಬಾರಿ ಕನ್ಯಾಕುಮಾರಿಯಿಂದ ಕಾಶ್ಮೀರ!
ಬಿಜೆಪಿ ನಾಯಕಿ ಸ್ಮೃತಿ ಇರಾನಿ ಅವರನ್ನು ಸ್ವಾಗತಿಸುವಾಗ ʻರಾಹುಲ್ ಗಾಂಧಿ ಅವರನ್ನು ಯಾತ್ರೆಗೆ ಕಳುಹಿಸಿದ ಸ್ಮೃತಿ ಇರಾನಿಜಿʼ ಎಂದು ನಳಿನ್ ಕುಮಾರ್ ಪರಿಚಯಿಸಿದರು. ಬಳಿಕ ರಾಹುಲ್ ಗಾಂಧಿ ಅವರ ಯಾತ್ರೆಯನ್ನು ಉಲ್ಲೇಖಿಸಿ ʻʻರಾಹುಲ್ ಗಾಂಧಿ ಅವರು ಹೋದಲ್ಲೆಲ್ಲ ಕಾಂಗ್ರೆಸ್ ಪಕ್ಷ ಸೋತಿದೆ. ಈಗ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಯಾತ್ರೆ ಹೊರಟಿದ್ದಾರೆ. ಇಡೀ ದೇಶದಲ್ಲಿ ಕಾಂಗ್ರೆಸ್ ಸೋತು ನೆಲ ಕಚ್ಚುವುದು ಖಚಿತʼ ಎಂದು ಹೇಳಿದರು.
ನುಡಿದಂತೆ ನಡೆದರು ಬೊಮ್ಮಾಯಿ
ʻನುಡಿದಂತೆ ನಡೆದವನ ಅಡಿಗೆನ್ನ ಅಡಿಗೆನ್ನ ನಮನʼ ಎಂಬ ಕವಿ ಮಾತು ನೆನಪಿಸಿದ ಅವರು, ನಮ್ಮ ಸರಕಾರ ಕೊಟ್ಟ ಮಾತು ಉಳಿಸಿಕೊಂಡಿದೆ ಎಂದು ಎದೆ ತಟ್ಟಿಕೊಂಡರು. ಬೊಮ್ಮಾಯಿ ಕಾಲದಲ್ಲಿ ಪರಿವರ್ತನೆಗಳ ಯುಗ ಆರಂಭವಾಯಿತು. ಕೃಷಿಕರ ಮಕ್ಕಳು ಒಳ್ಳೆಯ ಶಿಕ್ಷಣ ಪಡೆಯಬೇಕು ಎಂಬ ಕಾರಣಕ್ಕೆ ರೈತ ವಿದ್ಯಾನಿಧಿಯನ್ನು ಸ್ಥಾಪಿಸಿದ ದೇಶದ ಮೊದಲ ಮುಖ್ಯಮಂತ್ರಿ ಬೊಮ್ಮಾಯಿ ಎಂದರು ಕಟೀಲ್. ಯಡಿಯೂರಪ್ಪ ಅವರ ಸಾಧನೆಯನ್ನೂ ಹೊಗಳಿದರು.
ಭ್ರಷ್ಟಾಚಾರದ ಗಂಗೋತ್ರಿ ಕಾಂಗ್ರೆಸ್
ʻʻಕೊರೊನಾ ಕಾಲದಲ್ಲಿ ಕಾಂಗ್ರೆಸ್ ಆಸ್ಪತ್ರೆಯಿಲ್ಲ, ವೆಂಟಿಲೇಟರ್ ಇಲ್ಲ ಎಂದು ಬೊಬ್ಬೆ ಹೊಡೆಯಿತು. ಆದರೆ, ದೇಶವನ್ನು ೬೦ ವರ್ಷ ಆಳಿದ್ದು ಕಾಂಗ್ರೆಸ್. ಅಷ್ಟೂ ವರ್ಷ ದೇಶಕ್ಕೆ ಆಸ್ಪತ್ರೆಗೆ ಕೊಡದೆ ಇದ್ದದ್ದು ಕಾಂಗ್ರೆಸ್, ವೆಂಟಿಲೇಟರ್ ಇಲ್ಲದಂತೆ ಮಾಡಿದ್ದು ಕಾಂಗ್ರೆಸ್ʼʼ ಎಂದು ಹೇಳಿದರು ನಳಿನ್. ಆದರೆ, ಕೊರೊನಾದ ಸವಾಲನ್ನು ಮೆಟ್ಟಿ ನಿಂತು ಕೇವಲ ಒಂದು ವರ್ಷದಲ್ಲಿ ಇಡೀ ದೇಶಕ್ಕೆ ಬೇಕಾದ ಎಲ್ಲ ರೀತಿಯ ಆಸ್ಪತ್ರೆ, ಬೇಕಾದಷ್ಟು ವೆಂಟಿಲೇಟರ್‌ಗಳನ್ನು ಒದಗಿಸಿಕೊಟ್ಟಿದ್ದು ನರೇಂದ್ರ ಮೋದಿ ಅವರ ಸಾಧನೆ ಎಂದು ನಳಿನ್ ಉಲ್ಲೇಖಿಸಿದರು.
ʻʻಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ. ನೆಹರೂ ಅವರಿಂದ ಹಿಡಿದು ಮನಮೋಹನ್ ಸಿಂಗ್‌ವರೆಗೆ ಎಲ್ಲರೂ ಭ್ರಷ್ಟಾಚಾರ ಮಾಡಿದವರೇ ಒಬ್ಬ ಲಾಲ್ ಬಹಾದೂರ್ ಶಾಸ್ತ್ರಿಗಳನ್ನು ಬಿಟ್ಟುʼʼ ಎಂದು ಹೇಳಿದರು ನಳಿನ್.
ಹಿಂದೆ ಕೋರ್ಟ್‌ನಲ್ಲಿ ನ್ಯಾಯಾಧೀಶರು ಆರೋಪಿಗಳನ್ನು ಕರೆಯುವಾಗ ಕೋಳಿ ಚಿಕ್ಕಣ್ಣ, ಬಿಸತ್ತಿ ಬಾಬು ಎನ್ನುತ್ತಿದ್ದರು. ಆದರೆ, ಈಗ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಡಿಕೆಶಿವಕುಮಾರ್, ಚಿದಂಬರಂ ಎಂದು ಕರೆಯುತ್ತಾರೆ. ಹೆಚ್ಚಿನ ಕಾಂಗ್ರೆಸ್ ನಾಯಕರೆಲ್ಲರೂ ಜಾಮೀನಿನಲ್ಲಿದ್ದಾರೆ ಎಂದರು.
ಅರ್ಕಾವತಿ ಹೊರಗೆ ಬಂದರೆ ಸಿದ್ರಾಮಣ್ಣ ಒಳಗೆ!
ರಾಜ್ಯದಲ್ಲಿ ಅರ್ಕಾವತಿ ಹಗರಣ ಹೊರಗೆ ಬಂದರೆ ಸಿದ್ದರಾಮಯ್ಯ ಅವರು ಎಲ್ಲಿರುತ್ತಾರೆ ನೋಡ್ತಾ ಇರಿ ಎಂದು ಕೆಣಕಿದ ಕಟೀಲ್ ಅವರು ಹಗರಣ ಹೊರಹಾಕಿ ಎಂದು ಬೊಮ್ಮಾಯಿ ಅವರಿಗೆ ಹೇಳಿದರು. ಅದು ಹೊರಗೆ ಬಂದೇ ಬರುತ್ತದೆ ಎಂದೂ ಹೇಳಿದರು.
ʻʻಸಿದ್ದರಾಮಯ್ಯ ಅವರ ಆಡಳಿತ ಕಾಲದಲ್ಲಿ ೩೦೦೦ ಜನ ರೈತರ ಸಾವು ಸಂಭವಿಸಿತು. ೨೪ ಹಿಂದೂ ಕಾರ್ಯಕರ್ತರ ಕೊಲೆ ಸಂಭವಿಸಿತು. ಅತಿ ಹೆಚ್ಚು ಗೋಹತ್ಯೆ ಆಗಿದ್ದು ಅವರ ಕಾಲದಲ್ಲಿʼʼ ಎಂದು ನೆನಪಿಸಿದ ಕಟೀಲ್, ಗೋಹತ್ಯೆ ನಿಷೇಧ, ಮತಾಂತರ ನಿಷೇಧ ಕಾಯಿದೆ ಜಾರಿಗೆ ಬಂದಿದ್ದು ಬಿಜೆಪಿ ಕಾಲದಲ್ಲಿ ಎಂದು ನೆನಪಿಸಿದರು.
ಯಾರ ಪರ ನಿಂತ್ರಿ ಸಿದ್ದರಾಮಣ್ಣ?
ಯಾವ ಯಾವ ಕಾಲದಲ್ಲಿ ನೀವು ಯಾರ ಪರವಾಗಿ ನಿಂತಿರಿ ಎಂದು ನೆನಪಿಸಿಕೊಳ್ಳಿ ಎಂದು ಹೇಳಿದ ಕಟೀಲ್, ಹಿಜಾಬ್ ವಿಷಯ ಬಂದಾಗ ಯಾರ ಪರ ನಿಂತ್ರಿ ಸಿದ್ದರಾಮಯ್ಯ ಅವರೇ, ಹಿಂದು ಕಾರ್ಯಕರ್ತರ ಸಾವು ಸಂಭವಿಸಿದಾಗ ಯಾರ ಪರವಾಗಿ ನಿಂತ್ರಿ ಎಂದು ಕೇಳಿದರು. ಮುಸ್ಲಿಮರಿಗೂ ಬೇಡವಾದ ಟಿಪ್ಪು ಜಯಂತಿಯನ್ನು ಮಾಡಿದ್ದು ನೀವಲ್ಲವೇ ಎಂದು ಕೇಳಿದರು.
ಇದನ್ನೂ ಓದಿ| BJP ಜನಸ್ಪಂದನ | ಸಿದ್ದರಾಮಯ್ಯ ಅವರದ್ದು 100% ಸರ್ಕಾರ: ಸಿಎಂ ಬೊಮ್ಮಾಯಿ ʼದಮ್ʼದಾರ್ ಭಾಷಣ