Site icon Vistara News

BJP ಜನಸ್ಪಂದನ | ಅದ್ಧೂರಿ ಸಮಾವೇಶಕ್ಕೆ 6 ರಾಜ್ಯ ಸಚಿವರೇ ಗೈರು, ‌ ನಡ್ಡಾ, ಪ್ರಹ್ಲಾದ್‌ ಜೋಶಿ, ಅರುಣ್‌ ಸಿಂಗ್‌ ಕೂಡಾ ಇಲ್ಲ

BJP Janaspandana meravanige

ದೊಡ್ಡಬಳ್ಳಾಪುರ: ಬಿಜೆಪಿ ಸರಕಾರದ ಮೂರನೇ ವರ್ಷಾಚರಣೆ ಮತ್ತು ಬಸವರಾಜ ಬೊಮ್ಮಾಯಿ ನೇತೃತ್ವದ ಒಂದು ವರ್ಷದ ಅವಧಿಯ ಸಾಧನೆಯ ಸಮಾವೇಶವೆಂಬಂತೆ ದೊಡ್ಡ ಬಳ್ಳಾಪುರದಲ್ಲಿ ಆಯೋಜಿಸಿರುವ ಜನಸ್ಪಂದನ ಕಾರ್ಯಕ್ರಮ ಅದ್ಧೂರಿಯಾಗಿ ಆರಂಭಗೊಂಡಿದೆ. ಆದರೆ, ರಾಜ್ಯದ ಆರು ಮಂದಿ ಸಚಿವರು, ಕೇಂದ್ರದ ಹಿರಿಯ ನಾಯಕರು ಈ ಕಾರ್ಯಕ್ರಮವನ್ನು ಮಿಸ್‌ ಮಾಡಿಕೊಳ್ಳಲಿದ್ದಾರೆ. ಈ ಕಾರ್ಯಕ್ರಮದ ಪ್ರಧಾನ ಅತಿಥಿ ಆಗಬೇಕಾಗಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಕೂಡಾ ಬರುತ್ತಿಲ್ಲ.

ಗೈರಾಗಲಿರುವ ರಾಜ್ಯದ ಸಚಿವರು
ಸಚಿವರಾದ ವಿ. ಸೋಮಣ್ಣ, ಮುರುಗೇಶ್ ನಿರಾಣಿ, ಸುನೀಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಹಾಲಪ್ಪ ಆಚಾರ್ ಮತ್ತು ಶಂಕರ ಪಾಟೀಲ್ ಮುನೇನಕೊಪ್ಪ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ. ಸಚಿವ ಸೋಮಣ್ಣ ಅವರು ಚಾಮರಾಜನಗರ ಜಿಲ್ಲಾ ಪ್ರವಾಸದಲ್ಲಿದ್ದರೆ, ಮುರುಗೇಶ ನಿರಾಣಿ ಅವರು ಅಮೆರಿಕ ಹೂಡಿಕೆ ಸಮಾವೇಶದ ರೋಡ್‌ ಶೋನಲ್ಲಿ ಭಾಗವಹಿಸಿದ್ದಾರೆ.
ಇಂದು ಮಂಗಳೂರಿನಲ್ಲಿ ನಾರಾಯಣ ಗುರು ಜಯಂತಿ ನಡೆಯಲಿದ್ದು, ಅದರಲ್ಲಿ ಪಾಲ್ಗೊಳ್ಳುತ್ತಿರುವ ಸುನೀಲ್ ಕುಮಾರ್ ಮತ್ತು ಕೋಟ ಶ್ರೀನಿವಾಸ ಪೂಜಾರಿ ಅವರು ಕೂಡಾ ಸಮಾವೇಶಕ್ಕೆ ಬರುತ್ತಿಲ್ಲ.

ಹಾಲಪ್ಪ ಆಚಾರ್‌ ಅವರು ಹೈದರಾಬಾದ್‌ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಗಣಿ ಸಚಿವರ ಸಮ್ಮೇಳನದಲ್ಲಿ ಭಾಗವಹಿಸಿದ್ದರೆ ಶಂಕರ ಪಾಟೀಲ್ ಮುನೇನಕೊಪ್ಪ ಅವರು ಪೂರ್ವ ನಿಗದಿತ ಕಾರ್ಯಕ್ರಮದ ಕಾರಣ ಬರಲಾಗುತ್ತಿಲ್ಲ.
ಈ ನಡುವೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಹೈದರಾಬಾದ್‌ಲ್ಲಿರುವ ರಾಷ್ಟ್ರೀಯ ಗಣಿ ಸಚಿವರ ಸಮ್ಮೇಳನದಲ್ಲಿ ಭಾಗವಹಿಸಲು ಇರುವುದರಿಂದ ಸಮಾರಂಭಕ್ಕೆ ಬರುತ್ತಿಲ್ಲ. ಬಿಜೆಪಿ ರಾಜ್ಯ ಉಸ್ತುವಾರಿಯಾಗಿರುವ ಅರುಣ್‌ ಸಿಂಗ್‌ ಅವರು ಕೂಡಾ ಸಭೆಗೆ ಬರುತ್ತಿಲ್ಲ.

ಇದು ರಾಜ್ಯ ಸರಕಾರದ ಸಾಧನೆಯನ್ನು ಬಿಂಬಿಸುವ ಜನಸ್ಪಂದನ ಕಾರ್ಯಕ್ರಮದ ಮೊದಲ ಅವತರಣಿಕೆಯಾಗಿದೆ. ಮುಂದೆ ಬೇರೆ ಬೇರೆ ಕಡೆಗಳಲ್ಲಿ ಇಂಥಹುದೇ ಸಮಾವೇಶಗಳು ನಡೆಯಲಿವೆ. ಇಲ್ಲಿ ಐದು ಜಿಲ್ಲೆಗಳ ಬಿಜೆಪಿ ಕಾರ್ಯಕರ್ತರಷ್ಟೇ ಭಾಗವಹಿಸುತ್ತಿದ್ದಾರೆ.

ಇದನ್ನೂ ಓದಿ | ಇಂದಿನ ಬಿಜೆಪಿ ಜನಸ್ಪಂದನ ಕಾರ್ಯಕ್ರಮದ ಹೈಲೈಟ್‌ ಇದು

Exit mobile version