Site icon Vistara News

BJP ಜನಸ್ಪಂದನ | ಇದು ವ್ಯಕ್ತಿಯ ವೈಭವೀಕರಣವಲ್ಲ, ಆಸೆಯೆಂಬ ಬಿಸಿಲುಗುದುರೆ ಏಕೆ ಏರುವೆ? ಸಿದ್ದು ಕಾಲೆಳೆದ ಸುಧಾಕರ್‌

k sudhakar

ದೊಡ್ಡಬಳ್ಳಾಪುರ: ಜನಸ್ಪಂದನ ಕಾರ್ಯಕ್ರಮ ಯಾವುದೇ ವ್ಯಕ್ತಿಯ ವೈಭವೀಕರಣದ ಕಾರ್ಯಕ್ರಮವಲ್ಲ. ಇದು ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಬಿಎಸ್‌ ಯಡಿಯೂರಪ್ಪ ಅವರ ನೇತೃತ್ವದ ಮೂರು ವರ್ಷಗಳ ಸರ್ಕಾರದ ಸಾಧನೆಯನ್ನು ಜನರ ಮುಂದಿಡುವ ಸಮಾವೇಶ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ಅವರು ಪರೋಕ್ಷವಾಗಿ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರಿಗೆ ಟಾಂಗ್‌ ನೀಡಿದರು.

ಡಾ. ರಾಜ್‌ಕುಮಾರ್‌ ಅವರ ಪ್ರೇಮದ ಕಾಣಿಕೆ ಸಿನೆಮಾದ ʼಬಾನಿಗೊಂದು ಎಲ್ಲೆ ಎಲ್ಲಿದೆʼ ಹಾಡನ್ನು ಅವರು ನೆನಪಿಸಿದರು. ʼಆಸೆಯೆಂಬ ಬಿಸಿಲುಗುದುರೆ ಏಕೆ ಏರುವೆ, ಮರಳುಗಾಡಿನಲ್ಲಿ ಸುಮ್ಮನೇಕೆ ಅಲೆಯುವೆ, ಸಿದ್ರಾಮಣ್ಣ ನೀವು ಎಣಿಸಿದಂತೆ ಇಲ್ಲಿ ಏನೂ ನಡೆಯದುʼʼ ಎಂದು ಹಾಡುವ ಮೂಲಕ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದು ಮುಖ್ಯಮಂತ್ರಿಯಾಗುವ ಸಿದ್ದರಾಮಯ್ಯ ಅವರ ಕನಸು ಕನಸಾಗಿಯೇ ಉಳಿಯಲಿದೆ ಎಂದು ಕಾಲೆಳೆದರು. ಕುರ್ಚಿಯೇ ಖಾಲಿ ಇಲ್ಲ. ಆಗಲೇ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನಲ್ಲಿ ಎಲ್ಲ ನಾಯಕರೂ ಕುರ್ಚಿ ಏರಲು ಕಾತರರಾಗಿದ್ದಾರೆ ಎಂದು ಛೇಡಿಸಿದರು.

ಬೊಮ್ಮಾಯಿ ಸರ್ಕಾರದ ಸಾಧನೆಗಳ ಪಟ್ಟಿಯನ್ನು ಅವರು ಜನತೆಯ ಮುಂದಿಟ್ಟರು. ದೇಶಕ್ಕೆ ಬಂದ ೬.೩೫ ಲಕ್ಷ ಕೋಟಿ ರೂ. ಹೂಡಿಕೆಯಲ್ಲಿ ೩೮% ರಾಜ್ಯಕ್ಕೇ ಬಂದಿದೆ. ಅಂದರೆ ಅತಿ ಹೆಚ್ಚು ಹೂಡಿಕೆ ನಮ್ಮ ರಾಜ್ಯಕ್ಕೆ ಬಂದಿದ್ದು, ಇಲ್ಲಿನ ಆಡಳಿತದಲ್ಲಿ ದೃಢ ನಂಬಿಕೆ, ವಿಶ್ವಾಸ ಇಲ್ಲದೆ ಹೋದರೆ ಯಾರೂ ಹೂಡಿಕೆ ಮಾಡಬಯಸುವುದಿಲ್ಲ. ಅಷ್ಟು ವಿಶ್ವಾಸಾರ್ಹತೆ ನಮ್ಮದಾಗಿದೆ. ನಮ್ಮ ಸಿಎಂ ಬೊಮ್ಮಾಯಿಯವರು ಹುದ್ದೆ ಏರಿ ಮಾಡಿದ ಮೊದಲ ಕೆಲಸವೇ ರೈತಾಪಿ ಜನತೆಯ ಸಬಲೀಕರಣಕ್ಕಾಗಿ ಹತ್ತು ಲಕ್ಷ ರೈತರ ಮಕ್ಕಳಿಗೆ ವಿದ್ಯಾನಿಧಿ ನೀಡಿದ್ದು. ೧೨ ಕೋಟಿ ಮಂದಿಗೆ ಕೋವಿಡ್‌ ಲಸಿಕೆ ಒದಗಿಸಿದೆವು. ೭೫೦ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲಾಯಿತು. ಗ್ರಾಮ ವನ್‌ ವ್ಯವಸ್ಥೆ ತಂದರು. ೭೫ ಇಲಾಖೆಗಳ ಫಲಾನುಭವಿಗಳು ಅಧಿಕಾರಿಗಳ ಬಳಿಗೆ ಹೋಗಬೇಕಾದ ಅನಿವಾರ್ಯತೆ ತಪ್ಪಿಸಿದರು. ಈಗ ಜನರ ಮುಂದಿರುವ ಆಯ್ಕೆ ಎಂದರೆ ಡಬಲ್‌ ಇಂಜಿನ್‌ನ ಅಭಿವೃದ್ಧಿ ಸರ್ಕಾರವೋ ಅಥವಾ ಡಬಲ್‌ ಸ್ಟೀಯರಿಂಗ್‌ ಇರುವ ಕಾಂಗ್ರೆಸ್‌ ಬಸ್ಸೋ ಎಂಬುದು. ದೊಡ್ಡಬಳ್ಳಾಪುರ ಸೇರಿದಂತೆ ಬಯಲುಸೀಮೆಯ ಜನರ ಅಭ್ಯುದಯಕ್ಕಾಗಿ ಎತ್ತಿನಹೊಳೆ ಮುಂತಾದ ಯೋಜನೆಗಳನ್ನು ಪೂರ್ತಿಗೊಳಿಸಲು ಸಿಎಂ ಬೊಮ್ಮಾಯಿ ಕಟಿಬದ್ಧರಾಗಿದ್ದಾರೆ. ಪ್ರಧಾನಿ ಮೋದಿಯವರು ಸರ್ದಾರ್‌ ಪಟೇಲ್‌ ಅವರ ಭವ್ಯ ಪ್ರತಿಮೆ ಅನಾವರಣ ಮಾಡಿದಂತೆ ಸಿಎಂ ಬೊಮ್ಮಾಯಿಯವರೂ ಕೆಂಪೇಗೌಡರ ಬೃಹತ್‌ ಪ್ರತಿಮೆ ಅನಾವರಣ ಮಾಡುತ್ತಿದ್ದಾರೆ ಎಂದರು.

ಜನೋತ್ಸವ ಎಂಬುದು ಜನರ ಉತ್ಸವ. ಪ್ರಜಾಪ್ರಭುತ್ವವೇ ಒಂದು ಜನರ ಉತ್ಸವ. ಇದು ಯಾವುದೇ ವ್ಯಕ್ತಿಯ ಉತ್ಸವ ಅಲ್ಲ. ಇದು ಜನತೆಯ ಉತ್ಸವ. ಸರ್ಕಾರದ ರಿಪೋರ್ಟ್‌ ಕಾರ್ಡ್‌ ನಿಮ್ಮ ಮುಂದಿಡುತ್ತಿದ್ದೇವೆ. ಸರ್ಕಾರದ ಮೂರು ವರ್ಷದ ಸಾರ್ಥಕ ಸೇವೆ, ಸಾಮಾಜಿಕ ಸಬಲೀಕರಣದ ಅನೇಕ ಕಾರ್ಯಕ್ರಮಗಳ ಅನಾವರಣವನ್ನು ಸಿಎಂ ಮಾಡುತ್ತಿದ್ದಾರೆ. ಸಾಧನೆಯ ಸಂತೋಷ ಇದ್ದರೂ, ಪ್ರವೀಣ್‌ ನೆಟ್ಟಾರು ಅವರಂಥ ಕಾರ್ಯಕರ್ತರ ಕೊಲೆಯಾದಾಗ ನಮ್ಮ ಕಾರ್ಯಕರ್ತರ ಸಾವಿಗೆ ಕಂಬನಿ ಮಿಡಿಯುವುದು, ಅವರ ಕುಟುಂಬಕ್ಕೆ ನೈತಿಕ ಸ್ಫೂರ್ತಿ ನೀಡುವುದು ನಮ್ಮ ಕರ್ತವ್ಯ, ಅದನ್ನು ಮಾಡಿದ್ದೇವೆ.

ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ಮುಖಂಡರಾದ ಬಿಎಸ್‌ ಯಡಿಯೂರಪ್ಪ, ನಳಿನ್‌ಕುಮಾರ್‌ ಕಟೀಲ್‌, ಶೋಭಾ ಕರಂದ್ಲಾಜೆ, ಸದಾನಂದ ಹೆಗಡೆ, ಗೋವಿಂದ ಕಾರಜೋಳ ಮುಂತಾದವರು ವೇದಿಕೆಯಲ್ಲಿದ್ದರು.

Exit mobile version