ದೊಡ್ಡಬಳ್ಳಾಪುರ: ಕಾಂಗ್ರೆಸ್ ಪಕ್ಷದ ನೇತೃತ್ವ ವಹಿಸಿರುವ ಗಾಂಧಿ ಮನೆತನದವರು ಆಡುತ್ತಿರುವ ಹೊಸ ನಾಟಕ ಎಲ್ಲರಿಗೂ ಕಾಣುತ್ತಿದೆ. ರಾಷ್ಟ್ರಕ್ಕೆ ಮೋಸ ಮಾಡಿದವರು, ದೇಶವನ್ನು ಒಡೆಯಬೇಕೆಂದು ಸಂಚು ಹೂಡುತ್ತಿರುವವರ ಜತೆ ಕೈ ಜೋಡಿಸಿರುವ ಪಕ್ಷ ಈಗ ಭಾರತ್ ಜೋಡೊ ನಾಟಕವಾಡುತ್ತಿದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ದೊಡ್ಡಬಳ್ಳಾಪುರದಲ್ಲಿ ನಡೆದ ಬಿಜೆಪಿ ಜನಸ್ಪಂದನ ಕಾರ್ಯಕ್ರಮದಲ್ಲಿ ಅವರು ಲಕ್ಷಾಂತರ ಜನ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಭಾರತವನ್ನು ಒಡೆಯಲು ಹೊರಟಿರುವವರ ಜತೆ ಕೈಜೋಡಿಸಿರುವ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ಇಂದು ʼಭಾರತ್ ಜೋಡೋʼದ ಮಾತು ಆಡುತ್ತಿದ್ದಾರೆ ಎಂದು ಕಟುವಾಗಿ ಟೀಕಿಸಿದ್ದಲ್ಲದೆ, ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತನೂ ಕಾಂಗ್ರೆಸಿಗರನ್ನು ಈ ಕುರಿತು ನಿಲ್ಲಿಸಿ ಪ್ರಶ್ನಿಸಬೇಕು ಎಂದರು.
ʻʻಅವರು ತಮ್ಮ ದುರುದ್ದೇಶಗಳು ಯಾರಿಗೂ ಗೊತ್ತಾಗಲ್ಲ ಅಂದುಕೊಂಡಿದ್ದಾರೆ. ಆದರೆ, ಅದೆಲ್ಲವೂ ಬಯಲಾಗಿದೆ. ದೇಶವನ್ನು ಒಡೆಯುವ ಪ್ರಯತ್ನ ಮಾಡಿದ ಯಾಕೂಬ್ ಮೆಮನ್‌ನಂಥ ಉಗ್ರಗಾಮಿಯ ಸಮಾಧಿಯನ್ನು ಮುಂಬಯಿಯಲ್ಲಿ ಕಾಂಗ್ರೆಸ್ ಆಡಳಿತದಲ್ಲಿದ್ದ ಸಮಯದಲ್ಲಿ ಶೃಂಗರಿಸುವ ಕಾರ್ಯವನ್ನು ಮಾಡಿದವರು ಯಾರು? ಜೆಎನ್‌ಯುದಲ್ಲಿ ದೇಶ ಒಡೆಯುವ ಘೋಷಣೆ ಕೂಗಿದವರನ್ನು ಪಕ್ಷಕ್ಕೆ ಸೇರಿಸಿಕೊಂಡು ಪಕ್ಕದಲ್ಲಿ ನಿಲ್ಲಿಸಿಕೊಂಡವರು ಯಾರು? ತಮಿಳುನಾಡಿನಲ್ಲಿ ಭಾರತಮಾತೆಯನ್ನು ಅಪಮಾನಿಸುವ ಹೇಳಿಕೆ ನೀಡಿದ ವ್ಯಕ್ತಿಯನ್ನು ಜತೆಯಲ್ಲಿ ಇಟ್ಟುಕೊಂಡಿದ್ದು ಯಾರು?ʼ ಎಂದು ಸ್ಮೃತಿ ಇರಾನಿ ಪ್ರಶ್ನಿಸಿದರು.
ಕಾಂಗ್ರೆಸ್ ಅಧಿಕಾರದ ದಾಹದಿಂದ ವರ್ತಿಸುತ್ತಿದೆ. ಆದರೆ ದೇಶದ್ರೋಹಿಗಳೊಂದಿಗೆ ಕೈ ಜೋಡಿಸಿರುವ ಕಾಂಗ್ರೆಸ್‌ನ ದುರುದ್ದೇಶ ಪೂರ್ಣಗೊಳ್ಳಲು ಹಿಂದೂಸ್ತಾನದ ಪ್ರತಿ ಪ್ರಜೆಯಲ್ಲಿ ಜೀವ ಇರುವವರೆಗೂ ಬಿಡುವುದಿಲ್ಲ. ಅವರನ್ನು ಬಿಜೆಪಿ ಎದುರಿಸಿ ಧೂಳೀಪಟ ಮಾಡಲಿದೆ. ಆ ಸಂಗ್ರಾಮದ ಸಂಕಲ್ಪಕ್ಕೆ ಇದು ವೇದಿಕೆಯಾಗಲಿ ಎಂದು ಸ್ಮೃತಿ ಇರಾನಿ ಹೇಳಿದರು.
ಉಚಿತ ಲಸಿಕೆ ಕೊಟ್ಟರೂ ಅಪಪ್ರಚಾರ
ಕಾಂಗ್ರೆಸ್‌ನ ನಡವಳಿಕೆಯಲ್ಲಿ ರಾಷ್ಟ್ರಹಿತವೇ ಇರಲಿಲ್ಲ. ಕೋವಿಡ್ ಲಸಿಕೆಯನ್ನು ಉಚಿತವಾಗಿ ಮೋದಿ ಸರ್ಕಾರ ನೀಡಹೊರಟಾಗ, ಸ್ವತಃ ಮೋದಿಯವರೇ ಲಸಿಕೆ ಮೊದಲು ತೆಗೆದುಕೊಂಡು ಅದು ಸುರಕ್ಷಿತ ಎಂದು ಸಾರಿದರೂ, ಲಸಿಕೆ ತೆಗೆದುಕೊಳ್ಳಬೇಡಿ ಎಂದು ಕಾಂಗ್ರೆಸ್ ಅಪಪ್ರಚಾರ ನಡೆಸಿತು. ದೇಶದ ಜನರನ್ನು ಮೋಸಗೊಳಿಸುವ ಈ ದುಷ್ಟ ವರ್ತನೆ ಯಾಕೆ? ಉಕ್ಕಿನ ಮನುಷ್ಯ ಸರ್ದಾರ್ ಪಟೇಲ್ ಅವರ ಪ್ರತಿಮೆಯನ್ನು ನಿಲ್ಲಿಸುವ ಸಾಧನೆ ಬಿಜೆಪಿಯಿಂದ ಆಯಿತು. ಆದರೆ ಕಾಂಗ್ರೆಸ್ ಪಟೇಲ್ ಅವರನ್ನು ತನ್ನ ಪಕ್ಷದ ಬ್ಯಾನರ್‌ನಿಂದಲೂ ತೆಗೆಯಿತು. ಕರ್ತವ್ಯಪಥದಲ್ಲಿ ನೇತಾಜಿ ಸುಭಾಶ್ಚಂದ್ರ ಬೋಸ್ ಅವರ ಪ್ರತಿಮೆಯನ್ನು ನಿಲ್ಲಿಸಿತು. ಕಾಂಗ್ರೆಸ್‌ನ ಒಬ್ಬನೇ ಒಬ್ಬ ಸದಸ್ಯ ಅಲ್ಲಿಗೆ ಹೋಗಿ ಗೌರವ ಸಲ್ಲಿಸಲಿಲ್ಲ. ಗೌರವದ ಒಂದು ಮಾತನ್ನೂ ಆಡಲಿಲ್ಲ. ನಿಮ್ಮ ಮನೆತನದ ಎಲ್ಲರ ಪ್ರತಿಮೆಯನ್ನೂ ನಿಲ್ಲಿಸುತ್ತೀರಿ, ಬೋಸ್ ಪ್ರತಿಮೆಗೆ ಗೌರವವಿಲ್ಲವೇ ಎಂದು ಸ್ಮೃತಿ ಟೀಕಿಸಿದರು.
ಆದಿವಾಸಿಗಳ ಮೇಲೂ ಕಾಂಗ್ರೆಸ್‌ಗೆ ಗೌರವವಿಲ್ಲ
ಬಿಜೆಪಿ ದೇಶದಲ್ಲಿ ಮೊತ್ತಮೊದಲ ಬಾರಿಗೆ ಆದಿವಾಸಿ ಮಹಿಳೆಯನ್ನು ರಾಷ್ಟ್ರಪತಿಯಾಗಿ ಮಾಡಿತು. ಆದರೆ ಕಾಂಗ್ರೆಸ್ ಅದನ್ನು ವಿರೋಧಿಸಿತು. ಕಾಂಗ್ರೆಸ್‌ಗೆ ಆದಿವಾಸಿಗಳ ಮೇಲೂ, ಮಹಿಳೆಯರ ಮೇಲೂ ಗೌರವವಿಲ್ಲ ಎಂಬುದು ರುಜುವಾತಾಗಿದೆ ಎಂದರು.
ಕಾಂಗ್ರೆಸ್‌ನಿಂದಲೇ ಕರ್ನಾಟಕಕ್ಕೆ ಅನ್ಯಾಯ
ʻʻಕಾಂಗ್ರೆಸ್ ಸರ್ಕಾರ ಕೇಂದ್ರದಲ್ಲಿ ಆಡಳಿತದಲ್ಲಿದ್ದಾಗ ಕರ್ನಾಟಕಕ್ಕೆ ಮಾಡಿದ ಅನ್ಯಾಯವನ್ನು ಸರಿಪಡಿಸುವ ಕಾರ್ಯವನ್ನು ಮೋದಿ ಮಾಡುತ್ತಿದ್ದಾರೆ. ಇಂದು ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತನೂ ಕಾಂಗ್ರೆಸ್ ಇಲ್ಲಿಗೆ ಯಾಕೆ ಭೇದಭಾವ ಮಾಡಿದೆ ಎಂಬುದನ್ನು ಪ್ರಶ್ನಿಸಬೇಕುʼʼ ಎಂದು ಸ್ಮೃತಿ ಇರಾನಿ ಹೇಳಿದರು.
ʻʻಬಿಜೆಪಿ ಸರ್ಕಾರ ಬಂದಾಗ ಮೋದಿಯವರು ಭರವಸೆ ನೀಡಿದಂತೆ, ರಾಜ್ಯಕ್ಕೆ ಆಡಳಿತದಲ್ಲಿ ಹಿಂದಿನಂತೆ ಯಾವುದೇ ಪಕ್ಷಪಾತ ಆಗುವುದಿಲ್ಲ ಎಂದಂತೆ ನಡೆದುಕೊಂಡಿದ್ದಾರೆ. ಡಬಲ್ ಎಂಜಿನ್ ಫಲ ತಲುಪಿದೆ. 2009-10ರಲ್ಲಿ ಕಾಂಗ್ರೆಸ್ ಸರ್ಕಾರ ರಾಜ್ಯಕ್ಕೆ ಕೇವಲ 2000 ಕೋಟಿ ರೂ. ಕೊಟ್ಟಿತ್ತು. ಮೋದಿ ಸರ್ಕಾರ ಬಂದ ಮೇಲೆ ಫೈನಾನ್ಸ್ ಕಮಿಷನ್ ಮೂಲಕ ರಾಜ್ಯಕ್ಕೆ ಒಂದು ವರ್ಷದಲ್ಲಿ 5000 ಕೋಟಿ ರೂ. ನೀಡಿದೆ. ಹೈವೇ ಹಾಗೂ ರಸ್ತೆಗಳ ಅಭಿವೃದ್ಧಿಗೆ 9700 ಕೋಟಿ ರೂ. ಕೊಟ್ಟಿದೆ. ಇಪ್ಪತ್ತು ಹೊಸ ರಸ್ತೆ ಯೋಜನೆಗಳು ಬಂದಿವೆʼʼ ಎಂದರು.
ಮೋದಿ ಸರ್ಕಾರ ರೂಪಿಸಿರುವ ನೂತನ ಶಿಕ್ಷಣ ನೀತಿಯನ್ನು ಮೊತ್ತ ಮೊದಲ ಬಾರಿಗೆ ಜಾರಿಗೆ ತಂದಿರುವ ರಾಜ್ಯ ಕರ್ನಾಟಕ ಎನಿಸಿಕೊಂಡಿದ್ದು, ಇದಕ್ಕಾಗಿ ಸಿಎಂ ಬೊಮ್ಮಾಯಿಯವರನ್ನು ಅಭಿನಂದಿಸುತ್ತೇನೆ. ದೇಶದಲ್ಲಿ ಅತಿ ಹೆಚ್ಚಿನ ಎಫ್‌ಡಿಐ ರಾಜ್ಯಕ್ಕೆ ಬಂದಿದೆ. ಕರ್ನಾಟಕ ಇಂದು ಸೆಮಿ ಕಂಡಕ್ಟರ್ ಹಬ್ ಆಗುತ್ತಿದೆ. ರೇಷ್ಮೆ ವಲಯದಲ್ಲಿ ದೇಶ ಆತ್ಮನಿರ್ಭರ ಆಗುತ್ತಿದ್ದು, ಅದರಲ್ಲಿ ಕರ್ನಾಟಕದ ಕೊಡುಗೆ ವಿಶೇಷವಾಗಿದೆ. ಇದು ಡಬಲ್ ಎಂಜಿನ್ ಸರ್ಕಾರದಿಂದ ಆಗಿದೆ. ಇದಕ್ಕಾಗಿ ಸಿಎಂಗೆ ಅಭಿನಂದನೆ ಹೇಳುತ್ತೇನೆ ಎಂದರು.
ಇದನ್ನೂ ಓದಿ | BJP ಜನಸ್ಪಂದನ| ಯಡಿಯೂರಪ್ಪ ಕೃಷ್ಣ, ಬೊಮ್ಮಾಯಿ ಅರ್ಜುನ: ದಿಗ್ವಿಜಯ ಯಾತ್ರೆ ಹೊರಟಿದೆ, ಸಾಧ್ಯವಿದ್ದರೆ ತಡೆಯಿರಿ: ನಳಿನ್