ಬೆಂಗಳೂರು: ಭಾರತೀಯ ಜನತಾ ಪಕ್ಷದ ಜೊತೆಗಿನ ಮೈತ್ರಿ (BJP-JDS Alliance) ಬೆನ್ನಲ್ಲೇ ಜಾತ್ಯತೀತ ಜನತಾ ದಳದ ಹಲವಾರು ಮುಸ್ಲಿಂ ನಾಯಕರು ಪಕ್ಷಕ್ಕೆ ಗುಡ್ ಬೈ ಹೇಳಲು ಮುಂದಾಗಿದ್ದಾರೆ.
ಕೇಸರಿ ಪಡೆ ಜೊತೆಗಿನ ಮೈತ್ರಿಗೆ ಜೆಡಿಎಸ್‌ನ ಅನೇಕ ಅಲ್ಪಸಂಖ್ಯಾತ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದಳಪತಿಗಳ ನಡೆಗೆ ಮುಸ್ಲಿಂ ನಾಯಕರು ಬೇಸರ ವ್ಯಕ್ತಪಡಿಸಿದ್ದು, ಪಕ್ಷ ಬಿಡುವ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಕಂಡುಬಂದಿದೆ.
ಜೆಡಿಎಸ್‌ನ ಮುಸ್ಲಿಂ ವಿಂಗ್, ಈ ಮೈತ್ರಿಯನ್ನು ಬಲವಾಗಿ ವಿರೋಧಿಸಿಸುತ್ತಿದೆ. ಈ ಹಿಂದೆ ಜೆಡಿಎಸ್‌ನ ಎಲ್ಲ ಮುಸ್ಲಿಂ ನಾಯಕರು ಬಿಜೆಪಿಯನ್ನು ಸೈದ್ಧಾಂತಿಕವಾಗಿ ಉಗ್ರವಾಗಿ ವಿರೋಧಿಸಿದ್ದರಲ್ಲದೆ, ಚುನಾವಣೆಯಲ್ಲೂ ಎದುರಿಸಿದ್ದರು. ಇದೀಗ ದಳ ವರಿಷ್ಠರು ಬಿಜೆಪಿ ಜತೆಗೆ ಹೋದರೆ ಇಲ್ಲಿನ ಮುಸ್ಲಿಂ ನಾಯಕರು ನೆಲೆ ಕಳೆದುಕೊಂಡು ಅತಂತ್ರರಾಗಲಿದ್ದಾರೆ.
ಮೈತ್ರಿ ಮಾಡಿಕೊಂಡರೆ ನಮ್ಮ ಪಾಡೇನು ಎಂದು ಮುಸ್ಲಿಂ ನಾಯಕರು ಚಿಂತಿತರಾಗಿದ್ದಾರೆ. ಮೈತ್ರಿಯಿಂದ ನಮ್ಮ ರಾಜಕೀಯ ಭವಿಷ್ಯಕ್ಕೆ ಪೆಟ್ಟು ಬೀಳಲಿದೆ. ಸೈದ್ಧಾಂತಿಕ ಕಾರಣಗಳಿಗಾಗಿ ಬಿಜೆಪಿಯನ್ನು ವಿರೋಧಿಸುತ್ತಿರುವ ಬೆಂಬಲಿಗರು ಹಾಗೂ ಮತದಾರರು, ಜೆಡಿಎಸ್ ಜೊತೆಗಿದ್ದಾರೆ. ಇದೀಗ ನಾವು ಬಿಜೆಪಿ ಜತೆಗೆ ಹೋದರೆ ಅವರು ಕಾಂಗ್ರೆಸ್ ಪಾಲಾಗುವ ಸಾಧ್ಯತೆ ಇದೆ. ಇದು ಪಕ್ಷವನ್ನು ರಾಜಕೀಯವಾಗಿ ಮುಗಿಸಲಿದೆ ಎಂದು ಆತಂಕಿತರಾಗಿದ್ದಾರೆ. ಜತೆಗೆ, ಸೀಟ್ ಹಂಚಿಕೆ ಸೂತ್ರ ಕೂಡ ತೃಪ್ತಿಕರವಾಗಿಲ್ಲ. ರಾಜ್ಯದಲ್ಲಿ ನಾಲ್ಕು ಲೋಕಸಭೆ ಸ್ಥಾನ ಎಂದರೆ ಪಕ್ಷದ ಮೌಲ್ಯ ಇಳಿದಂತೆ ಎಂದಿದ್ದಾರೆ.
ಹೆಚ್‌ಡಿ ದೇವೇಗೌಡ ಮತ್ತು ಹೆಚ್‌ಡಿ ಕುಮಾರಸ್ವಾಮಿ ಜತೆಗೆ ಜೊತೆಗೆ ತಾವು ಇರುವುದಿಲ್ಲ ಎಂದು ಹಲವು ಮುಸ್ಲಿಂ ಮುಖಂಡರು ಹೇಳಿದ್ದಾರೆ. ಕೆಲವು ಮುಸ್ಲಿಂ ಲೀಡರ್‌ಗಳು ಈಗಾಗಲೇ ಪಕ್ಷಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಮುಂದಿನ ವಾರದಲ್ಲಿ ಬಹುತೇಕ ನಾಯಕರು ಜೆಡಿಎಸ್‌ಗೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಆದರೆ ಜೆಡಿಎಸ್ ಬಿಡುವ ಮುಸ್ಲಿಂ ನಾಯಕರ ಮುಂದಿನ ದಾರಿ ಯಾವುದು ಎಂಬುದು ಖಚಿತವಾಗಿಲ್ಲ. ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರು ಈ ಮೈತ್ರಿ ಕುರಿತು ಈತನಕ ತುಟಿ ಬಿಚ್ಚಿಲ್ಲ. ಮೈತ್ರಿ ವಿರೋಧಿಸುತ್ತಿರುವ ಮುಸ್ಲಿಂ ನಾಯಕರು ಕಾಂಗ್ರೆಸ್ ಸೇರೋದು ಅಷ್ಟು ಸುಲಭವಲ್ಲ. ಈ ಹಿಂದೆ ಸಿಎಂ ಸಿದ್ದರಾಮಯ್ಯನವರನ್ನು ಇಬ್ರಾಹಿಂ ಮನಬಂದಂತೆ ಟೀಕಿಸಿದ್ದರು. ಕಾಂಗ್ರೆಸ್ ಬಿಟ್ಟರೆ ರಾಜ್ಯದಲ್ಲಿ ಇರುವುದು AAP ಮತ್ತು SDPI ಮಾತ್ರ.
ಹೀಗಾಗಿ ಜೆಡಿಎಸ್ ಮುಸ್ಲಿಂ ನಾಯಕರ ಮುಂದಿನ ನಡೆ ತೀವ್ರ ಕುತೂಹಲ ಮೂಡಿಸಿದೆ. ತಮ್ಮ ಮುಂದಿನ ನಡೆ ಕುರಿತು ಚರ್ಚಿಸಲು ಜೆಡಿಎಸ್ ಜಿಲ್ಲಾ ಅಲ್ಪಸಂಖ್ಯಾತ ಘಟಕಗಳ ಸಭೆಯನ್ನು ಮುಂದಿನ ವಾರ ಕರೆಯಲಾಗಿದೆ. ಬೆಂಗಳೂರಿನಲ್ಲಿ ನಡೆಯಲಿರುವ ಮುಸ್ಲಿಂ ನಾಯಕರ ಸಭೆಯ ಬಳಿಕ ನಮ್ಮ ನಡೆ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಜೆಡಿಎಸ್ ಮುಸ್ಲಿಂ ಮುಖಂಡ ಇಮ್ರಾನ್ ಪಾಷ ವಿಸ್ತಾರ ನ್ಯೂಸ್‌ಗೆ ತಿಳಿಸಿದ್ದಾರೆ.
ಇದನ್ನೂ ಓದಿ: BJP-JDS Alliance: ಬಿಜೆಪಿ ಜತೆ ಮೈತ್ರಿಗೆ ಬೇಸರ; ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಆಪ್ತ ರಾಜೀನಾಮೆ