ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಹಾಗೂ ಮುಡಾ ಹಗರಣದ (MUDA Scam) ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿ ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ವಿಧಾನಸೌಧದಲ್ಲಿ ಅಹೋರಾತ್ರಿ ಧರಣಿ (BJP Protest) ಆರಂಭಿಸಿದ್ದಾರೆ. ಸದನದ ಬಾವಿಯೊಳಗೇ ಹಾಡು, ಭಜನೆಯ ಮಾಡಿದ ಬಿಜೆಪಿ ಹಾಗೂ ಜೆಡಿಎಸ್ ನಾಯಕರು, ಸ್ವಂತ ಖರ್ಚಿನಲ್ಲಿಯೇ ಊಟ ತರಿಸಿಕೊಂಡು ಊಟ ಮಾಡಿದರು. ಬಳಿಕ ಸೋಫಾ, ನೆಲದ ಮೇಲೆ ಮಲಗಿದರು.
ಸ್ವಂತ ಖರ್ಚಿನಲ್ಲೇ ಊಟ ತರಿಸಿಕೊಂಡ ನಾಯಕರು
ವಿಧಾನಸೌಧದಲ್ಲಿ ಸ್ಪೀಕರ್ ಊಟೋಪಚಾರವನ್ನು ತಿರಸ್ಕರಿಸಿದ ಪ್ರತಿಪಕ್ಷ ನಾಯಕರು, ಸ್ವಂತ ಖರ್ಚಿನಲ್ಲೇ ವಿಧಾನಸೌಧಕ್ಕೆ ಊಟ ತರಿಸಿಕೊಂಡು ಊಟ ಮಾಡಿದರು. ಭ್ರಷ್ಟಾಚಾರದ ಹಣದಲ್ಲಿ ನಾವು ಊಟ ಮಾಡುವುದಿಲ್ಲ ಎಂದು ಅವರು ಹೇಳಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್.ಅಶೋಕ್, ಶಾಸಕರಾದ ಸುರೇಶ್ ಕುಮಾರ್, ಬಸನಗೌಡ ಪಾಟೀಲ್ ಯತ್ನಾಳ್ ಸೇರಿ ಹಲವು ನಾಯಕರು ಅಹೋರಾತ್ರಿ ಧರಣಿ ನಡೆಸಿದರು. ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೂ ಧರಣಿ ನಿಲ್ಲುವುದಿಲ್ಲ ಎಂದು ಆರ್.ಅಶೋಕ್ ತಿಳಿಸಿದ್ದಾರೆ.
ಒಳಗೆ ಬಿಡದ ಮಾರ್ಶಲ್‌ಗಳು
ಧರಣಿಗೂ ಮೊದಲು ಶಾಸಕರನ್ನ ಹೊರಗೆ ಬಿಟ್ಟು ಮಾರ್ಶಲ್‌ಗಳು ಬಾಗಿಲು ಹಾಕಿಕೊಂಡರು. ವಿಧಾನಸೌಧದ ಪೂರ್ವದ ಬಾಗಿಲನ್ನು ಮಾರ್ಶಲ್‌ಗಳು ಬಂದ್ ಮಾಡಿದ್ದರು. ಬಾಗಿಲು ತೆಗೆಯುವವರೆಗೂ ಶಾಸಕರು ಕಾದು ನಿಂತರು. ಬಾಗಿಲಲ್ಲೇ ಜೆಡಿಎಲ್‌ಪಿ ನಾಯಕ ಸುರೇಶ್ ಬಾಬು, ಬಿಜೆಪಿ ಉಪನಾಯಕ ಅರವಿಂದ್ ಬೆಲ್ಲದ್ ಸೇರಿದಂತೆ ಹಲವು ಶಾಸಕರು ನಿಂತರು. ಸ್ಥಳಕ್ಕೆ ಬಂದ ಡಿಸಿಪಿ, ಬಾಗಿಲು ತೆಗೆಸಿ ಒಳಗೆ ಬಿಡಿಸಿದರು. ಇದೇ ವೇಳೆ, ಆರ್.ಅಶೋಕ್ ಅವರು ಪೊಲೀಸರ ಜತೆ ವಾಗ್ವಾದ ನಡೆಸಿದರು.
ವಿಧಾನಸೌಧದಲ್ಲೇ ಭಜನೆ, ಹಾಡು
ರಾಜ್ಯಸಭೆಯಲ್ಲೂ ಹಗರಣದ ಪ್ರಸ್ತಾಪ
ಕರ್ನಾಟಕದ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಕುರಿತು ಬಿಜೆಪಿ ಸಂಸದ ಈರಣ್ಣ ಕಡಾಡಿ ಅವರು ರಾಜ್ಯಸಭೆಯಲ್ಲೂ ಪ್ರಸ್ತಾಪಿಸಿದರು. “ನಿಗಮದಲ್ಲಿ ಒಂದು ವರ್ಷದಿಂದ ಫಲಾನುಭವಿಗಳ ಆಯ್ಕೆ ನಡೆದಿಲ್ಲ. ಹಾಸ್ಟೆಲ್ ಗಳಲ್ಲಿ ಮೂಲಭೂತ ಸೌಕರ್ಯ ನೀಡಿಲ್ಲ. ವಾಲ್ಮೀಕಿ ಸಮುದಾಯದ ರೈತರ ಜಮೀನಿಗೆ ಕೊಳವೆ ಬಾವಿ ಕೊರೆದಿಲ್ಲ. ನಿಗಮದ ಹಣವನ್ನು ಸಂಪೂರ್ಣ ಲೂಟಿ ಮಾಡಲಾಗಿದೆ. ಹಗರಣಕ್ಕೆ ಸಂಬಂಧಿಸಿದಂತೆ ಸಚಿವರು ರಾಜೀನಾಮೆ ನೀಡಿದ್ದಾರೆ. ದಲಿತರ ಉದ್ದಾರ ಮಾಡುತ್ತೇವೆ ಎಂದು ಹೇಳುವವರೇ ದಲಿತರ ಹಣ ಲೂಟಿ ಮಾಡಿದ್ದಾರೆ. ಹಗರಣದ ಬಗ್ಗೆ ಸಿಬಿಐ ತನಿಖೆಯಾಗಬೇಕು” ಎಂದು ಹೇಳಿದರು.
ಇದನ್ನೂ ಓದಿ: Karnataka Assembly Session: ಮೂಡಾ ಹಗರಣದ ಚರ್ಚೆಗೆ ವಿಧಾನಸಭೆಯಲ್ಲಿ ಬಿಜೆಪಿ ಆಗ್ರಹ; Live ಇಲ್ಲಿ ನೋಡಿ