ಬೆಂಗಳೂರು: ಬಿಜೆಪಿ, ಜೆಡಿಎಸ್ ಪಾದಯಾತ್ರೆಗೆ (BJP-JDS Padayatra) ನಾವು ಅನುಮತಿ ಕೊಡುವುದಿಲ್ಲ, ಬೇಕಿದ್ದರೆ ಪ್ರತಿಭಟನೆ ಮಾಡಿಕೊಳ್ಳಲಿ. ಈ ಹಿಂದೆ ನಮಗೂ ಅನುಮತಿ ಕೊಟ್ಟಿರಲಿಲ್ಲ, ಆದರೂ ನಾವು ಪಾದಯಾತ್ರೆ ಮಾಡಿದ್ದೆವು. ಅವರು ಪ್ರತಿಭಟನೆ ಮಾಡಲಿ, ತಡೆ ಹಾಕಲು ಹೋಗುವುದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಪಕ್ಷದ ವತಿಯಿಂದ ರಾಜಕೀಯ ಮಾಡುತ್ತೇವೆ. ಆದರೆ ಸರ್ಕಾರ ಉಪಯೋಗಿಸಿ ರಾಜಕೀಯ ಮಾಡಲ್ಲ. ಅವರು ರಾಜಕೀಯ ಮಾಡುತ್ತಿದ್ದಾರೆ, ನಾವೂ ರಾಜಕೀಯ ಮಾಡಬೇಕಾಗುತ್ತದೆ. ಮುಡಾ ಹಗರಣ ತನಿಖೆಗೆ ಆಯೋಗ ರಚನೆ ಮಾಡಿದ್ದೇವೆ. ವರದಿಯಲ್ಲಿ ತಪ್ಪು ಅಂತ ಬಂದರೆ ಕ್ರಮ ತೆಗೆದುಕೊಳ್ಳುತ್ತೇವೆ. ಬಿಜೆಪಿ, ಜೆಡಿಎಸ್ ಪಾದಯಾತ್ರೆಗೆ ಮಾತ್ರ ಅನುಮತಿ ಕೊಡುವುದಿಲ್ಲ, ಆದರೂ ಪಾದಯಾತ್ರೆ ಮಾಡಲು ಮುಂದಾದರೆ ತಡೆಯಲು ಹೋಗಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್‌ನಿಂದ ಕೌಂಟರ್ ಪಾದಯಾತ್ರೆ ಬಗ್ಗೆ ಪ್ರತಿಕ್ರಿಯಿಸಿ, ಆ ಬಗ್ಗೆ ಪಕ್ಷದ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ರಣನೀತಿ ಮಾಡುತ್ತಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ | OBC Reservation: ಒಬಿಸಿ ಮೀಸಲಾತಿ ಹೆಚ್ಚಳಕ್ಕೆ ಸುಪ್ರೀಂ ಕೋರ್ಟ್ ತಡೆ; ನಿತೀಶ್ ಕುಮಾರ್‌ಗೆ ಮುಖಭಂಗ!ಇದನ್ನೂ ಓದಿ |
ರಾಜ್ಯದಲ್ಲಿ ಭಯದ ವಾತವರಣದ ಕಾರಣ ಬಂಡವಾಳ ಬರುತ್ತಿಲ್ಲ ಎಂಬ ನಿರ್ಮಲಾ ಸೀತಾರಾಮನ್ ಹೇಳಿಕೆಗೆ ಪ್ರತಿಕ್ರಿಯಿಸಿ, ಅನೇಕ ಕಾರಣಗಳಿಂದ ಕಂಪನಿಗಳು, ಆಯ್ಕೆಗಳನ್ನು ಇಟ್ಟುಕೊಂಡೇ ಬರುತ್ತವೆ. ಚೆನ್ನೈ, ಕರ್ನಾಟಕ, ಮಹಾರಾಷ್ಟ್ರ ಅಂತ ಆಯ್ಕೆ ಇರುತ್ತವೆ. ಅವರಿಗೆ ಎಲ್ಲಿ ಹೆಚ್ಚು ಸೌಲಭ್ಯಗಳು ಸಿಗುತ್ತವೋ ಅದರ ಪ್ರಕಾರ ತೀರ್ಮಾನ ಮಾಡುತ್ತಾರೆ. ಇಲ್ಲಿಯವರೆಗೆ ಯಾರು ಬಂದು ಹೊರಗೆ ಹೋಗುತ್ತೇವೆ ಎಂದು ಹೇಳಿಲ್ಲ. ಸುಮ್ಮನೆ ಇಲ್ಲಸಲ್ಲದ ಆಪಾದನೆ ಮಾಡುವುದು ಸರಿಯಲ್ಲ ಎಂದರು.
ಬಜೆಟ್‌ನಲ್ಲಿ ಆಂಧ್ರ ಸಿಎಂ ಚಂದ್ರಬಾಬು ನಾಯ್ಡುಗೆ 15 ಸಾವಿರ ಕೋಟಿ ಕೊಟ್ಟಿದ್ದಾರೆ. ಕೊಡಬೇಡಿ ಎನ್ನಲ್ಲ, ಆದರೆ ಎಲ್ಲರಿಗೂ ಸರಿ ಸಮಾನವಾಗಿ ಕೊಡಬೇಕು. ನಮ್ಮ ಪಾಲನ್ನು ನಮಗೆ ಕೊಡಿ ಅಂತ ದೆಹಲಿ, ಸುಪ್ರೀಂ ಕೋರ್ಟ್‌ವರೆಗೆ ತಲುಪಿದ್ದೇವೆ. ಕೊಟ್ಟಿದ್ದೀವಿ, ಕೊಟ್ಟಿದ್ದೀವಿ ಎನ್ನುತ್ತಾರೆ. ಏನು ಕೊಟ್ಟಿದ್ದೀವಿ ಅಂತ ಹೇಳಬೇಕಲ್ಲವೇ? ಭದ್ರಾ ಯೋಜನೆಗೆ ಹಣಕೊಡಬೇಕಿತ್ತು, ಕೊಟ್ಟಿಲ್ಲ. ಈ ರೀತಿ ಮಲತಾಯಿ ದೋರಣೆ ತೋರಿಸಿ, ಬೆಂಗಳೂರಿಗೆ ಬಂದು ಎಲ್ಲಾ ಕೊಟ್ಟಿದ್ದೀವಿ ಎಂದರೆ ಹೇಗೆ ಎಂದು ಪ್ರಶ್ನಿಸಿದರು.
ಬೆಂಗಳೂರು ದೇಶದ ಪ್ರತಿಷ್ಠಿತ ನಗರ, ಇದನ್ನ ಪ್ರಪಂಚಕ್ಕೆ ತೋರಿಸಬೇಕಲ್ವಾ? ನೀತಿ ಆಯೋಗಕ್ಕೆ ಮಮತಾ ಹೋಗಿ ವಾಕ್ ಔಟ್ ಮಾಡಿ ಬಂದಿದ್ದಾರೆ. ನಾವು ಹೋಗಿ ವಾಕ್ ಔಟ್ ಮಾಡಬೇಕಿತ್ತಾ? ರಾಜ್ಯ-ಕೇಂದ್ರದ ನಡುವಿನ ಸಂಬಂಧ ಚೆನ್ನಾಗಿರಬೇಕು. ಅದಕ್ಕೆ ರಾಜ್ಯವನ್ನು ಚೆನ್ನಾಗಿ ನಡೆಸಿಕೊಳ್ಳಬೇಕಲ್ವಾ ಎಂದರು.
ಬೆಂಗಳೂರಿನಲ್ಲಿ ನಾಯಿ ಮಾಂಸ ದಂಧೆ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ರೈಲ್ವೆ ನಿಲ್ದಾಣದಲ್ಲಿ ಗಲಾಟೆ ಆಗಿದೆ. ಇದಾದ ಮೇಲೆ ಆರೋಗ್ಯ ಇಲಾಖೆಯವರು, ಪೊಲೀಸರು ಸ್ಯಾಂಪಲ್ ಅನ್ನು ಲ್ಯಾಬ್‌ಗೆ ಕಳುಹಿಸಿದ್ದರು. ವರದಿಯಲ್ಲಿ ಮೇಕೆ ಮಾಂಸ ಎಂದು ಬಂದಿದೆ. ಸುಳ್ಳು ಆರೋಪ ಮಾಡಿದ್ದ ಪುನೀತ್ ಕೆರೆಹಳ್ಳಿ ಮತ್ತು ತಂಡದ ಮೇಲೆ ಕ್ರಮ ತೆಗೆದುಕೊಂಡಿದ್ದೇವೆ. ಗೊಂದಲ ಸೃಷ್ಟಿ ಮಾಡಬಾರದು ಎಂದು ಕ್ರಮ ಆಗಿದೆ. ಹೊರ ರಾಜ್ಯದಿಂದ ಮಾಂಸ ತಂದು ಮಾರೋದು ಹೊಸದಲ್ಲ, ಜನರಿಗೆ ಗೊಂದಲ ಬೇಡ, ಬಂದಿದ್ದು ಮೇಕೆ ಮಾಂಸ ಎಂದು ಸ್ಪಷ್ಟನೆ ನೀಡಿದರು.