ಬೆಂಗಳೂರು: ಬಿಜೆಪಿ-ಜೆಡಿಎಸ್ ಪಾದಯಾತ್ರೆಗೆ ಅನುಮತಿ ಕೊಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. “ಭ್ರಷ್ಟ ಕಾಂಗ್ರೆಸ್ ತೊಲಗಿಸಿ” ಎಂಬ ಘೋಷಣೆಯಡಿ ಹಮ್ಮಿಕೊಂಡಿರುವ ಬಿಜೆಪಿ-ಜೆಡಿಎಸ್ ಮೈಸೂರು ಚಲೋ ಪಾದಯಾತ್ರೆಗೆ (BJP-JDS Padayatra) ಶನಿವಾರ ಬೆಳಗ್ಗೆ 9.30ಕ್ಕೆ ಕೆಂಗೇರಿಯ ಕೆಂಪಮ್ಮ ದೇವಸ್ಥಾನದ ಬಳಿ ಚಾಲನೆ ನೀಡಲಾಗುತ್ತದೆ. ಏಳು ದಿನಗಳ ಪಾದಯಾತ್ರೆ ಸಾಗುವ ಮಾರ್ಗದ ವಿವರವನ್ನು ಇಲ್ಲಿ ನೀಡಲಾಗಿದೆ.
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ ಅವರು ಚಾಲನೆ ನೀಡಲಿದ್ದಾರೆ. ಒಟ್ಟು 124 ಕಿ.ಮೀ ಪಾದಯಾತ್ರೆ ಸಾಗಲಿದ್ದು, ಸಮಾರೋಪ ಸಮಾರಂಭ ಸೇರಿ ಒಟ್ಟು ಎಂಟು ದಿನಗಳ ಕಾರ್ಯಕ್ರಮದ ಮಾಹಿತಿ ಇಲ್ಲಿದೆ.
ಪಾದಯಾತ್ರೆ ಸಾಗುವ ವಿವರ
- ಆ.3- ಕೆಂಗೇರಿಯಿಂದ ಹೊರಟು ಬಿಡದಿಯಲ್ಲಿ ವಾಸ್ತವ್ಯ
- ಆ.4- ಬಿಡದಿಯಿಂದ ಹೊರಟು ಕೆಂಗಲ್ನಲ್ಲಿ ಹಾಲ್ಟ್
- ಆ.5- ಕೆಂಗಲ್ ನಿಂದ ಹೊರಟು ನಿಡಘಟ್ಟದಲ್ಲಿ ವಾಸ್ತವ್ಯ
- ಆ.6- ನಿಡಘಟ್ಟದಿಂದ ಹೊರಟು ಮಂಡ್ಯ
- ಆ.7- ಮಂಡ್ಯದಿಂದ ಹೊರಟು ತೂಬಿನಕೆರೆಯಲ್ಲಿ ವಾಸ್ತವ್ಯ
- ಆ.8- ತೂಬಿನ ಕೆರೆಯಿಂದ ಹೊರಟು ಶ್ರೀರಂಗಪಟ್ಟಣದಲ್ಲಿ ಹಾಲ್ಟ್
- ಆ.9- ಶ್ರೀರಂಗಪಟ್ಟಣದಿಂದ ಹೊರಟು ಮೈಸೂರು ಹೊರವಲಯದಲ್ಲಿ ವಾಸ್ತವ್ಯ
- ಆ.10- ಮೈಸೂರು ಹೊರವಲಯದಿಂದ ಕೇಂದ್ರ ನಾಯಕರ ಜತೆ ಪಾದಯಾತ್ರೆ ಹೊರಟು ಸಮಾರೋಪ ಸಮಾರಂಭದ ವೇದಿಕೆ ತಲುಪುವುದು.
ಶಾಂತಿಯುತವಾಗಿ ಪಾದಯಾತ್ರೆ ನಡೆಸಲು ಅನುಮತಿ: ಪರಮೇಶ್ವರ್
ಬೆಂಗಳೂರು: ಬಿಜೆಪಿ ಜೆಡಿಎಸ್ ಪಾದಯಾತ್ರೆಗೆ ಅನುಮತಿ ಕೊಡಲು ಸರ್ಕಾರ ನಿರ್ಧರಿಸಿದೆ. ಶಾಂತಿಯುತವಾಗಿ ಅವರು ಪಾದಯಾತ್ರೆ ನಡೆಸುತ್ತೇವೆ ಎಂದಿದ್ದಾರೆ. ಹೀಗಾಗಿ ಅನುಮತಿ ಕೊಡಲು ನಾವು ನಿರ್ಧರಿಸಿದ್ದೇವೆ ಎಂಧೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಇದನ್ನೂ ಓದಿ | Rakshit Shetty: ಯಶವಂತಪುರ ಪೊಲೀಸರ ಮುಂದೆ ಹಾಜರಾದ ನಟ ರಕ್ಷಿತ್ ಶೆಟ್ಟಿ, ಕಾಪಿರೈಟ್ ಉಲ್ಲಂಘನೆ ವಿಚಾರಣೆ
ನಗರದಲ್ಲಿ ಪ್ರತಿಭಟನೆಗೆ ಅವಕಾಶವಿಲ್ಲ ಎಂದ ಕಮಿಷನರ್
ನಾಳೆ ಬಿಜೆಪಿ-ಜೆಡಿಎಸ್ ಪಾದಯಾತ್ರೆ ಹಿನ್ನೆಲೆ ನಗರ ಪೊಲೀಸ್ ಆಯುಕ್ತ ದಯಾನಂದ್ ಪ್ರತಿಕ್ರಿಯಿಸಿ, ಎಲ್ಲಿಂದ ಯಾವ ರೀತಿ ಪಾದಯಾತ್ರೆ ಮಾಡುತ್ತಾರೋ ಅಂತ ಇನ್ನೂ ಗೊತ್ತಿಲ್ಲ. ನಗರದಲ್ಲಿ ಪ್ರತಿಭಟನೆ, ರ‍್ಯಾಲಿ, ಪಾದಯಾತ್ರೆಗೆ ಅನುಮತಿ ಇಲ್ಲ. ಹೈಕೋರ್ಟ್ ಆದೇಶದ ಅನ್ವಯ ಅನುಮತಿ ಇಲ್ಲ. ಆದರೂ ಪೂರಕವಾಗಿ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳುತ್ತೇವೆ. ನನ್ನ ಮಟ್ಟದಲ್ಲಿ ಯಾರು ಬಂದು ಇದುವರೆಗೂ ಅನುಮತಿ ಕೇಳಿಲ್ಲ. ಪ್ರತಿಭಟನೆಗೆ ಬೆಂಗಳೂರಿನಲ್ಲಿ ಯಾವುದೇ ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.
ಕುಮಾರಸ್ವಾಮಿ ಮುನಿಸು ಶಮನ, ಬಿಜೆಪಿ, ಜೆಡಿಎಸ್ ಒಗ್ಗೂಡಿ ಪಾದಯಾತ್ರೆ
ನವದೆಹಲಿ/ಬೆಂಗಳೂರು: ಮುಡಾ ಹಗರಣ ಸೇರಿ ಹಲವು ಭ್ರಷ್ಟಾಚಾರ ಆರೋಪ ಹೊತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಕೈಗೊಳ್ಳಲು ತೀರ್ಮಾನಿಸಿರುವ ಪಾದಯಾತ್ರೆಗೆ (BJP Padayatra) ಸಹಕಾರ ನೀಡುವುದಿಲ್ಲ ಎಂದು ಬಂಡಾಯದ ಬಾವುಟ ಹಾರಿಸಿದ್ದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಅವರ ಮುನಿಸು ಈಗ ಶಮನವಾಗಿದೆ. ದೆಹಲಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿ ಹಲವರು ಮಾತುಕತೆ ನಡೆಸಿದ್ದು, “ಬಿಜೆಪಿ ಹಾಗೂ ಜೆಡಿಎಸ್ ಒಗ್ಗೂಡಿ ಶನಿವಾರದಿಂದ (ಆಗಸ್ಟ್ 3) ಪಾದಯಾತ್ರೆ ಆರಂಭಿಸಲಾಗುತ್ತದೆ” ಎಂದು ಪ್ರಲ್ಹಾದ್ ಜೋಶಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ | DK Shivakumar: ಬಿಜೆಪಿ ಪಾದಯಾತ್ರೆಗೆ ಕಾಂಗ್ರೆಸ್ ಪ್ರಶ್ನೆಗಳ ಸವಾಲು, ಹೆಜ್ಜೆಗೆ ಒಂದು ಪ್ರಶ್ನೆ ಎಂದ ಡಿಕೆಶಿ
ದೆಹಲಿಯಲ್ಲಿ ಪ್ರಲ್ಹಾದ್ ಜೋಶಿ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರು ಮಾತುಕತೆ ನಡೆಸಿದ ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಿದರು. “ಶನಿವಾರದಿಂದ ನಮ್ಮ ಪಾದಯಾತ್ರೆ ಪ್ರಾರಂಭ ಆಗಲಿದೆ. ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ತೊಡಗಿದೆ. ಮೂಡಾ ಹಾಗೂ ವಾಲ್ಮೀಕಿ ಹಗರಣಗಳು ಇದಕ್ಕೆ ಜ್ವಲoತ ಉದಾಹರಣೆಗಳಾಗಿವೆ. ಕಾಂಗ್ರೆಸ್‌ನವರು ಕೂಡ ಮೂಡಾ ಹಗರಣದ ಬಗ್ಗೆ ಮಾತನಾಡುತ್ತಿದ್ದಾರೆ. ಜೆಡಿಎಸ್ ಹಾಗೂ ಬಿಜೆಪಿ ಒಟ್ಟಿಗೆ ಪಾದಯಾತ್ರೆ ಕೈಗೊಳ್ಳುತ್ತವೆ. ಕುಮಾರಸ್ವಾಮಿ ಅವರ ಜತೆ ಇದ್ದ ಸಣ್ಣ ಕಮ್ಯುನಿಕೇಷನ್ ಗ್ಯಾಪ್ ಸರಿ ಆಗಿದೆ. ನಾವು ಕುಮಾರಸ್ವಾಮಿ ಅವರ ಹತ್ತಿರ ಮಾತಾಡಿದ್ದೇವೆ. 7 ದಿನಗಳ ಪಾದಯಾತ್ರೆ ಪೂರ್ಣಗೊಳ್ಳಲಿದೆ” ಎಂದು ಪ್ರಲ್ಹಾದ್ ಜೋಶಿ ತಿಳಿಸಿದರು.